ನಮ್ಮ ಪಾಪ ಪುಣ್ಯ ಹರಣ ಮಾಡುವುದಕ್ಕೆ ರುದ್ರ ದೇವರಿಗೆ ‘ಹರ’ ಎಂದು ಕರೆಯುವರು. ಸಾಮಾನ್ಯ ಜೀವಿಗಳು ಪರಮಾತ್ಮನ ಗುಣ ಮಹಿಮೆಯನ್ನು ನಿರಂತರ ಮನನ ಮಾಡುತ್ತಿದ್ದರೆ ಆತ್ಮ ಮನಸ್ಸಿಗೆ ಸಾಕ್ಷಿಯಾಗುವುದು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಿಂದಿನ ಸಂಚಿಕೆಯಲ್ಲಿ ಅಗೋಚರನಾದ ಪರಮಾತ್ಮನು ಎಲ್ಲರೊಳಗೆ ತಾನಿದ್ದು ಎಲ್ಲರನ್ನೂ ತನ್ನೊಳಗೆ ಧರಿಸಿ ಅವರವರ ಯೋಗ್ಯತೆಗೆ ತಕ್ಕಂತೆ ಫಲವನ್ನು ಕೊಟ್ಟು ಸಲಹುವನು ಎಂದು ಹೇಳಿದೆ. ಯಾವದಕ್ಕೂ ಸಮಯ ಮಾತ್ರ ನಿಲ್ಲದು, ಅಲ್ಲದೆ ಹೋದ ಸಮಯ ಮತ್ತೆ ಸಿಗಲಾರದು. ಅದಕ್ಕೆ ಕಾಲ ನಿಯಾಮಕನಾದ “ಶ್ರೀ ಹರಿಯು ನಿತ್ಯ ನೂತನ ಎನ್ನುವರು ಜ್ಞಾನಿಗಳು’. ಇನ್ನು ರವಿವಾರ, ಸೋಮವಾರ, ಒಂದು, ಎರಡು ಹೀಗೆ ದಿನಾಂಕ, ತಿಂಗಳು ಮುಂತಾದವುಗಳನ್ನು ಅದೆ ಹೆಸರಿನಿಂದ ಉಚ್ಚರಿಸುತ್ತೇವೆ. ಅವು ಎಲ್ಲವೂ ನಿತ್ಯ ನೂತನ. ಅದರಂತೆ ನಮ್ಮ ಆತ್ಮವು ನಿತ್ಯ ನೂತನ. ನಮ್ಮ ದೇಹ ಮಾತ್ರ ತನ್ನ ಆಯುಷ್ಯದಲ್ಲಿಯ ಸಮಯವನ್ನು ಕಳೆದುಕೊಂಡು ಹಳೆಯದಾಗುತ್ತದೆ. ಕಾರಣ ಈ ಶರೀರವನ್ನು ಸಾತ್ವಿಕ ಸಾಧನೆಗೆ ಉಪಯೋಗಿಸಿ ಸಾರ್ಥಕ ಪಡೆಸಿಕೊಳ್ಳಬೇಕೆಂಬುವುದೆ ಜೀವನದ ಸಾರ. ಈ ಶರೀರವೆಂಬ ಕವಚವು ನಮ್ಮ ಕರ್ಮಕ್ಕನುಸಾರವಾಗಿ ಪರಮಾತ್ಮನು ಕೊಟ್ಟ ಉಡುಗೊರೆ.
ಶ್ರೀ ಎಂದಲ್ಲಿ ಸತ್ಯಲೋಕದ ಬ್ರಹ್ಮ, ಸರ್ವತ್ರ ತುಂಬಿದ ಶುದ್ಧ ವಾಯು, ಮಂಗಳಕರನಾದ ಮನೋಭಿಮಾನಿಯಾದ ಶಿವ, ಈ ಎಲ್ಲ ಅಕ್ಷರ ಶಬ್ದಗಳಲ್ಲಿ ಜ್ಞಾನ ಶಕ್ತಿಯಾಗಿ ಅಕ್ಷರ ಒಡೆಯಳಾದ ಮಹಾಲಕ್ಷ್ಮೀಯು ನೆಲಸಿ ಸರ್ವ ಸ್ಟತಂತ್ರನಾದ ಅಪರಿಮಿತವಾದ ಪರಿಪೂರ್ಣ ಗುಣ ತುಂಬಿದ ಪರಮಾತ್ಮನನ್ನು ಸಾಕ್ಷಾತ್ಕರಿಸುತ್ತಾಳೆ. ಈ ಅನು ಸಂಧಾನದಿಂದ ಎಲ್ಲರಲ್ಲಿ ಬಿಂಬನಾಗಿರುವ ಪರಮಾತ್ಮನು ಶ್ರೀಹರಿ ನಾಮದಿಂದ ಶಾಂತಿ, ಸಮೃದ್ಧಿಯನ್ನು ಹರಿಸುವನೆಂದು ಜ್ಞಾನಿಗಳು ತಿಳಿಸುವ ಮಾತು ಬದುಕಿಗೆ ಸಾಧನವಾಗಿದೆ.
ಪರಮಾತ್ಮನು ಲಕ್ಷ್ಮೀಯಿಂದ ಹಿಡಿದು ಎಲ್ಲ ಜೀವಿಗಳಿಗೂ ಸ್ವತಂತ್ರವಾದ ತನ್ನ ಗುಣಗಳಲ್ಲಿ ಸ್ವಲ್ಪ ಭಾಗವನ್ನು ತೆಗೆದು ಅಂದರೆ ನಮಗೆ ತಿಳಿಯಲೆಂದು ಸುಮಾರು ನಾಲ್ಕ್ನೂರು. ಗುಣಗಳೆಂದು ಲೆಕ್ಕಕ್ಕೆ ಇಟ್ಟುಕೊಂಡರೆ ಅದರಲ್ಲಿ ಎರಡು ಭಾಗ ಮಾಡಿದರೆ ಎರಡನೂರರ ಒಂದು ಭಾಗದಲ್ಲಿ ಬ್ರಹ್ಮ ದೇವರಿಗೆ ಐವತ್ತೆರಡು, ವಾಯು ದೇವರಿಗೆ ನಲವತ್ತೆಂಟು, ಶಿವನಿಗೆ ಇಪ್ಪತ್ತು, ಇಂದ್ರ ಕಾಮರಿಗೆ ಹದಿನೈದು, ತತ್ವಾಭಿಮಾನಿ ದೇವತೆಗಳಿಗೆ ಹತ್ತು ಮನುಷ್ಯರಿಗೆ ಹತ್ತು. ಉಳಿದ ನಲವತ್ತೈದು ಗುಣಗಳನ್ನು ದೈತ್ಯರಿಗೆ ಕೊಟ್ಟಿರುವನು.
ಇನ್ನುಳಿದ ಎರಡುನೂರುಗಳಲ್ಲಿ ಅರವತ್ತೇಳು ಕಾಲು, ಲಕ್ಷ್ಮೀಗೆ ಕೊಟ್ಟು ಉಳಿದ ಒಂದನೂರಾಮೂವತ್ತೇಳು ಮುಕ್ಕಾಲು ತನ್ನಲಿರಿಸಿಕೊಂಡು ಸರ್ವರ ಕ್ರಿಯೆಗಳಲ್ಲಿ ವ್ಯಕ್ತನಾಗುತ್ತಾನೆ. ಹೀಗೆ ಎಲ್ಲರಿಗೂ ಕೆಲವು ಸ್ವತಂತ್ರ ಗುಣಗಳನ್ನು ದತ್ತುವಾಗಿ ಕೊಟ್ಟಿದ್ದಾನೆ ಬ್ರಹ್ಮ ದೇವರು ಸೃಷ್ಟಿಯಿಂದ, ವಾಯು ದೇವರು ತಮ್ಮ ಸಾತ್ವಿಕ ತತ್ವದಿಂದ ಯಾರ ಪಾಪ ಪುಣ್ಯಗಳನ್ನು ಲೇಪಿಸಿಕೊಳ್ಳದೆ ಎಲ್ಲರಲ್ಲಿ ನೆಲೆಸಿ ಶ್ವಾಸೋಚ್ವಾಸ ಮಾಡಿಸುವರು. ರುದ್ರ ದೇವರನ್ನು ಭಕ್ತಿಯಿಂದ ಭಜಿಸಿದರೆ ನಮ್ಮಲ್ಲಿಯ ಕಾಮ ಕ್ರೋಧ ದ್ವೇಷ ಮುಂತಾದ ದೈತ್ಯ ಗುಣಗನ್ನು ಹರಣ ಮಾಡಿ ಮನಸ್ಸನ್ನು ಶುದ್ಧ ಮಾಡಿ ಇಂದ್ರಿಯಗಳಿಂದ ಸಾತ್ವಿಕ ಕಾರ್ಯಗಳನ್ನು ಮಾಡಲು ಪ್ರೇರೇಪಿಸಿ ಹರಿಯಲ್ಲಿ ಭಕ್ತಿಯನ್ನು ಕೊಡುವನು. ಹೀಗೆ ನಮ್ಮ ಪಾಪ ಪುಣ್ಯ ಹರಣ ಮಾಡುವದರಿಂದ ರುದ್ರ ದೇವರಿಗೆ ಹರ ಎಂದು ಕರೆಯುವರು. ಅಹಿತ ವಿಚಾರದಿಂದ ಅಹಿತ ಕಾರ್ಯ ಮಾಡಿದರೆ ಪುಣ್ಯ ಹರಣ ಮಾಡುವನು. ದೇವತೆಗಳೆಲ್ಲರೂ ಸಾಂಶರು ಅವರಲ್ಲಿ ಭಕ್ತಿ ಜ್ಞಾನ ಹೆಚ್ಚಿರುವದು. ಅವರು ಒಂದಂಶದಲ್ಲಿ ಭೂಮಿಯಲ್ಲಿ ಜನಿಸಿ ವಿಹಿತ ಕರ್ಮಗಳಿಂದ ಜನಸಾಮಾನ್ಯರಿಗೆ ಸಾತ್ವಿಕ ತತ್ವದ ಮಹತ್ವವನ್ನು ತಿಳಿಸುವರು. ಅದು ಮನುಷ್ಯರಿಂದ ಸಾಧ್ಯವಿಲ್ಲ.

ಸಾಮಾನ್ಯ ಜೀವಿಗಳು ಪರಮಾತ್ಮನ ಗುಣ ಮಹಿಮೆಯನ್ನು ನಿರಂತರ ಶ್ರವಣ ಮನನ ಮಾಡುತ್ತಿದ್ದರೆ ಆತ್ಮ ಮನಸ್ಸಿಗೆ ಸಾಕ್ಷಿಯಾಗುವದು. ಇದರಿಂದ ನಡೆ ನುಡಿಯ ಸಿದ್ಧಾಂತ ಒಂದೇ ಆಗವದು. ಆಗ ಅಪರೋಕ್ಷ ಜ್ಞಾನ ಸಿಗುವುದು. ಅದು ದೇಹದ ತುಂಬಾ ಆವರಿಸುತ್ತದೆ. ಆಗ ದೇಹ ನಾನಲ್ಲ. ಮನಸ್ಸಿನಿಂದ ಆಗುವ ಕ್ರಿಯೆಯಲ್ಲಿ ನಾನು ಕೃರ್ತುತ್ವನು ಬೇರೆ. ಹೀಗೆ ಹರಿ ಹರರು ಪ್ರಕೃತಿಯಲ್ಲಿ ನೆಲೆಸಿ ನಮ್ಮ ಯೋಗ್ಯತೆಗನುಸಾರವಾಗಿ ಕಾರ್ಯ ಮಾಡಿ ಮಾಡಿಸಿ ಫಲ ನೀಡುವರು. ಅದಕ್ಕೆ ಪರಮಾತ್ಮನು ಕೊಟ್ಟ ದತ್ತು ಸ್ವಾತಂತ್ರ್ಯವನ್ನು ಉಪಯೋಗಿಸುವ ವಿಧಾನ ಪ್ರಯತ್ನ ನಮ್ಮಿಂದ ಆಗಬೇಕು. ಯಾವದೇ ವಸ್ತು ನೋಡಿದರೂ ಯಾವುದೇ ಕ್ರಿಯೆ ಮಾಡಿದರೂ ಅಕ್ಷರಗಳ ಸಹಾಯ ಬೇಕು. ಅವು ತತ್ವಬದ್ಧವಾಗಿದ್ದರೆ ಹರಿ ಪೂಜೆ ಎನಿಸುವುದು. ಈ ರೀತಿ ಲಕ್ಷ್ಮೀ, ಬ್ರಹ್ಮ, ವಾಯು ರುದ್ರರಲ್ಲಿ ಹರಿಯ ಸನ್ನಿಧಾನವನ್ನು ಅನುಸಂಧಾನ ಮಾಡಿದರೆ ಇಂದ್ರಿಯಗಳ ಆರೋಗ್ಯ ಸಂಪತ್ತು ಹೆಚ್ಚಿಸುವುದೆ ಹರಿಹರರ ಅದ್ಭುತ ಸಂಹಿತೆ ಇದು ಅಲೌಕಿಕವಾದ ಕಾರ್ಯ. ಇದನ್ನು ಪೂರ್ತಿ ಲೌಕಿಕದಲ್ಲಿ ನೋಡಿದರೆ ಮುಖ್ಯವಾದ ಸಂಹಿತೆ ಮರೆಯಾಗಿ ಅಹಿತ ಉಂಟಾಗುವ ಸಂಭವ ಹೆಚ್ಚು. ಆಗ ಮಣ್ಣಿನಿಂದ ಮಾಡಿದ ಮಡಿಕೆಯನ್ನು ಅಗ್ನಿಯಲ್ಲಿ ಸುಡದೆ ಬಿಸಿಲನಲ್ಲಿ ಒಣಗಿಸಿದರೆ ಅದರಲ್ಲಿ ನೀರು, ಹಾಲು ಹಾಕಿದಾಗ ಸೋರಿ ಹೋಗುತ್ತದೆ. ಅದರಂತೆ ಪುಣ್ಯವು ಸೋರಿ ಹೋಗುವುದು. ಕಾರಣ ಹರಿಯ ಪರಿವಾರವನ್ನು ಗುಣ ಮಹಿಮೆಯನ್ನು ಸ್ಮರಿಸುವುದು ಹರಿ ಕಥಾಮೃತದ ಸಾರ.ಇದನ್ನು ನಿತ್ಯ ಮನನ ಮಾಡುವುದು ಜೀವನದ ಸಾರ.
ಅಕ್ಷರ
ಹರಿ ಎಂಬೆರಡಕ್ಷರಗಳ ಮಹಿಮೆ
ಜೀವನ ಸಾರದ ಅಮೃತ ಚಿಲುಮೆ
ಸಿರಿ ಎಂಬೆರಡಕ್ಷರಗಳ ಜ್ಞಾನ
ಸೃಷ್ಟಿಸುವುದೆ ಬ್ರಹ್ಮನ ವಿಜ್ಞಾನ
ವಾಯುವೆ ಸೌರಭದ ಸುಳಿಗಾಳಿ
ಹರನೆ ಮಾನಸಸರೋವರ ಸುಳಿ
ಹರಿಯಲಿ ಇದುವೆ ಇಂದ್ರಿಯಗಳಲಿ
ಈ ಮಂತ್ರ ದೇಹ ಕವಚವಾಗಿರಲಿ
ಹರಿ ಹರರ ಸಂಹಿತೆಯಲಿರಿಸೆನ್ನನು
ಮಾತರಿಶ್ವಾಂತರ್ಗತ ಶ್ರೀ ಹರಿ ನೀನು
ಶ್ರೀ ಕೃಷ್ಣಾರ್ಪಣ ಮಸ್ತು
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
