ಈ ಪದ್ಯದಲ್ಲಿ ಹುಟ್ಟು ಸಾವಿನ ನಿರಂತರತೆಯ ಬಗ್ಗೆ ಹೇಳಲಾಗಿದೆ. ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನೋಡು, ಬೆಳಗೇಳೆ ಸಾವಿರ ಸುಮಗಳರಳಿದವು ;
ಮಣ್ಣೊಳಿನ್ನೊಂದು ಸಾವಿರ ಚೆದರಿ ಬಿತ್ತು.
ಚೆಲು ಗುಲಾಬಿಯ ತರುವ ಬೇಸಗೆಯ ತಿಂಗಳಿದು
ಕೈಕೊಬಾದ್ ಜಾಮ್ ಷೆದರ ಕೊಂಡೊಯ್ದದೇನೋ !
ಮೃತ್ಯುವು ಮನುಷ್ಯರಲ್ಲಿ ಯಾವ ಭೇಧವನ್ನೂ ಎಣಿಸದೆ ತನ್ನ ಕರ್ತವ್ಯವನ್ನು ತಾನು ಮಾಡುತ್ತಾನೆ ಎಂಬುದನ್ನೂ ಸೂಚಿಸಲಾಗಿದೆ.
ಆ ಭಗವಂತನ ಈ ತೋಟದಲ್ಲಿ ದಿನ ಬೆಳಗಾದರೆ ಸಾವಿರ ಹೂವುಗಳು ಅರಳಿದರೆ, ಸಾವಿರ ಹೂವುಗಳು ಮುದುಡಿ ಮಣ್ಣಿನಲ್ಲಿ ಸೇರುತ್ತವೆ. ಹೂವು ಅರಳುವುದು ಹುಟ್ಟಾದರೆ, ಆ ಹೂವುಗಳು ಮಣ್ಣು ಸೇರುವುದು ಸಾವು. ಹೂವು ಅರಳುವುದೂ ಮಣ್ಣಿಂದಲೇ ಸೇರುವುದೂ ಮಣ್ಣಿಗೇ.
ಮಣ್ಣು ಇಲ್ಲಿ ಪಂಚ ಭೂತಗಳ ಸಂಕೇತ. ಮಾನವ ಶರೀರವು ಮಣ್ಣು, ನೀರು, ಆಗ್ನಿ, ವಾಯು, ಆಕಾಶ ಗಳಿಂದ ಆಗಿದ್ದು, ಪರಮಾತ್ಮನ ಅಂಶವಾದ ಜೀವಾತ್ಮನು ಈ ಶರೀರದಲ್ಲಿ ಇರುವವರೆಗೆ ಜೀವಿ ಎನಿಸಿಕೊಳ್ಳುತ್ತಾನೆ. ಆ ಜೀವಾತ್ಮನು ಈ ಶರೀರವನ್ನು ಬಿಟ್ಟೊಡನೆಯೇ ಶರೀರವು ಮರಳಿ ಮಣ್ಣಿಗೇ ಸೇರುತ್ತದೆ.

ಬೇಸಗೆಯ ತಿಂಗಳು ಚಂದದ ಗುಲಾಬಿ ಹೂಗಳನ್ನು ತಂದಂತೆಯೇ ರಾಜ, ಮಹಾರಾಜರನ್ನು ಕರೆದುಕೊಂಡೂ ಹೋಗುವುದು. ಕವಿಯು ಕೈಕೊಬಾದ್ ಮತ್ತು ಜಾಮ್ ಷೆದ ಎಂಬ ರಾಜ ಮಹಾರಾಜರು ಈ ಪ್ರಪಂಚದಿಂದ ನಿರ್ಗಮಿಸಿದ ಬಗ್ಗೆ ಉಲ್ಲೇಖಿಸುತ್ತಾನೆ.
ಕೈಕೋಬಾದ್ ಒಬ್ಬ ಪ್ರಸಿದ್ದ ರಾಜ. ಜಾಮಷೇಡ್ ಒಬ್ಬ ಪುರಾತನ ಚಕ್ರವರ್ತಿ. ಈತನು ಮೊದಲನೆಯ ಕಬ್ಬಿಣದ ಆಯುಧವನ್ನು ತಯಾರು ಮಾಡಿಸಿದ ಮಹಿಮ. ಒಂದು ಹೂ ಅರಳಿದಂತೆಯೇ ಮತ್ತೊಂದು ಮಣ್ಣ ಸೇರಬೇಕು, ಹೂವು ಅರಳಿದಾಗ ಕಬ್ಬಿಣದ ಖಡ್ಗದವನೂ ಸತ್ತ . ಅದು ರಾಜನೂ ಆಗಬಹುದು, ಚಕ್ರವರ್ತಿಯೂ ಆಗಬಹುದು. ಅದು ಕಾಲನ ನಿರ್ಣಯ.
ಕಾಲನ ಬಿಚ್ಚುಗತ್ತಿಯನ್ನು ನಮ್ಮ ಜೀವನದ ಪ್ರತಿಕ್ಷಣವೂ ತನ್ನೊಂದಿಗೇ ಇಟ್ಟು ಕೊಂಡಿರುತ್ತದೆ. ಯಾವಾಗ ಬೇಕಾದರೂ ಪ್ರಹಾರ ಮಾಡಬಹುದು. ಅಷ್ಟರ ಮಟ್ಟಿಗೆ ಈ ಜೀವನ ಅನಿಶ್ಚಿತ. ಕಾಲನ ಈ ಶಕ್ತಿಶಾಲೀ ಬಿಚ್ಚುಗತ್ತಿಯ ಪ್ರಹಾರದಿಂದ ಸಾಮ್ರಾಜ್ಯಗಳೂ ಬುಡ ಸಹಿತ ನಿರ್ಮೂಲವಾಗುತ್ತವೆ.
ನಮ್ಮ ಜಾನಪದ ಹಾಡೊಂದು ನೆನಪಿಗೆ ಬರುತ್ತದೆ;
“ಜವರಾಯ ಬಂದಾರೆ ! ಬರಿ ಕೈಲಿ ಬರಲಿಲ್ಲ,
ಕುಡುಗೋಲು ಕೊಡಲಿ ತಂದ್ಹೆಗಲೇರಿ,
ಒಳ್ಳೊಳ್ಳೆ ಮರನ ಕಡಿ ಬಂದ,
ಫಲ ಬಿಟ್ಟ ಮರನ ಕಡಿ ಬಂದ” !!!
(* ಜವರಾಯ = ಯಮರಾಯ (ಕಾಲ) )
ಹೀಗೆ ಬೊಮ್ಮನ ಸೃಷ್ಟಿಯು ಎಷ್ಟು ನಿರಂತರವೋ, ಕಾಲನ ಕುಯಿಲೂ ಅಷ್ಟೇ ನಿರಂತರ ಎಂಬ ಭಾವ ಈ ಪದ್ಯದ್ದು.

ಮುಂದುವರೆಯುವುದು.
ಹಿಂದಿನ ಸಂಚಿಕೆಗಳು :
- ಉಮರನ ಒಸಗೆ (ಪದ್ಯ – 0೧)
- ಉಮರನ ಒಸಗೆ (ಪದ್ಯ – ೦೨)
- ಉಮರನ ಒಸಗೆ (ಪದ್ಯ – ೦೩)
- ಉಮರನ ಒಸಗೆ (ಪದ್ಯ – ೦೪)
- ಉಮರನ ಒಸಗೆ (ಪದ್ಯ – ೦೫)
- ಉಮರನ ಒಸಗೆ (ಪದ್ಯ – ೦೬)
- ಉಮರನ ಒಸಗೆ (ಪದ್ಯ – ೦೭)
- ರವೀಂದ್ರ ಕುಮಾರ್ ಎಲ್ವಿ – ಮೈಸೂರು.
