‘ನಮಗೊಂದು ಸೊಸೆ ಬೇಕು!’ಕೃತಿ ಪರಿಚಯ

ಕಾದಂಬರಿಕಾರರಾದ ಕೆ. ಸತ್ಯನಾರಾಯಣ ಅವರ “ನಮಗೊಂದು ಸೊಸೆ ಬೇಕು” ಕಾದಂಬರಿಯ ಕಥಾವಸ್ತು ನಮ್ಮ ನಿಮ್ಮ ಊಹೆಗೆ ಮೀರಿದ್ದು. ಕತೆ ನಾಲ್ಕು ವ್ಯಕ್ತಿಗಳದ್ದಾದರೂ, ಅವರ ಸುತ್ತ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ೭೫ ಮಂದಿ ಬಂದು ಹೋಗುತ್ತಾರೆ. ಈ ಕೃತಿಯ ಕುರಿತು ಹಿರಿಯ ಮನಶ್ಯಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ. ಬಸವಣ್ಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನಮಗೊಂದು ಸೊಸೆ ಬೇಕು!
ಲೇಖಕರು : ಕೆ. ಸತ್ಯನಾರಾಯಣ
ಪ್ರಕಾಶನ : ಅಮೂಲ್ಯ ಪ್ರಕಾಶನ
ಬೆಲೆ : 200.00

ಆಶ್ಚರ್ಯ ಪಡಬೇಡಿ, ಇದೊಂದು ಪತ್ರಿಕಾ ಪ್ರಕಟಣೆಯಲ್ಲ. ಇದು ಕನ್ನಡದ ವಿಶಿಷ್ಟ ಬರಹಗಾರ ಕೆ. ಸತ್ಯನಾರಾಯಣ ಅವರು ಬರೆದು, ಅಮೂಲ್ಯ ಪುಸ್ತಕ ಪ್ರಕಟಿಸಿರುವ ಒಂದು ಸಮಕಾಲೀನ ಕುಟುಂಬದ ಅರೆವಾಸ್ತವ ಜೀವನವನ್ನು ವಿವರಿಸುವ ವಿನೂತನ ಕಾದಂಬರಿ. ಕಾದಂಬರಿಯ ವಸ್ತು, ವಿನ್ಯಾಸ, ಭಾಷೆ ಎಲ್ಲವೂ ಅನನ್ಯ, ಅಪೂರ್ವ, ವಿನೂತನ. ಹಾಗಾಗಿ. ಸತ್ಯನಾರಾಯಣ ಅವರ ವಿಷಯವಾಗಿ ಬರೆಯುವಾಗ ನಾನು “ಎಲ್ಲರಂತಲ್ಲ ನಮ್ಮ ಸತ್ಯನಾರಾಯಣ” ಎಂದು ಹೇಳಿದ್ದಿದೆ.

“ನಮಗೊಂದು ಸೊಸೆ ಬೇಕು!” ಕಾದಂಬರಿಯ ವಸ್ತು ನಮ್ಮ ನಿಮ್ಮ ಊಹೆಗೆ ಮೀರಿದ್ದು. ಕತೆ ನಾಲ್ಕು ವ್ಯಕ್ತಿಗಳದ್ದಾದರೂ, ಅವರ ಸುತ್ತ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ೭೫ ಮಂದಿ ಬಂದು ಹೋಗುತ್ತಾರೆ, ಕಾದಂಬರಿಯ ಪ್ರಮುಖ ಪಾತ್ರಗಳು ಒಂದು ಕುಟುಂಬದ ನಾಲ್ಕು ವ್ಯಕ್ತಿಗಳು: ಒಬ್ಬಳು ನವ ಯುವತಿ ಮಾಲಿನಿ, ಅವಳ ಪತಿ ಸುಶಿಕ್ಷಿತ ಯುವಕ ಸತೀಶ, ಸತೀಶನ ತಂದೆ ಶ್ರೀಕಂಠ ಮೂರ್ತಿ ಮತ್ತು ತಾಯಿ ಅನಿತಾ ಮೂರ್ತಿ. ಮಾಲಿನಿ ರೂಪವತಿ, ಬುದ್ಧಿವಂತೆ; ಸತೀಶನ ಪ್ರೀತಿಯ ಮಡದಿ; ಅನಿತಾ ಮತ್ತು ಮೂರ್ತಿಯವರ ಮುದ್ದಿನ ಸೊಸೆ. ಮಾಲಿನಿ ಮತ್ತು ಸತೀಶ ಇಬ್ಬರೂ ನೌಕರಿಯಲ್ಲಿದ್ದಾರೆ. ಶ್ರೀಕಂಠ ಮೂರ್ತಿ ನಿವೃತ್ತ ಸೂಪರಿಂಟೆಂಡೆಂಟ್‌ ಇಂಜಿನಿಯರ್.‌ ಹಾಗಾಗಿ ಅವರದು ಶ್ರೀಮಂತ ಕುಟುಂಬ. ಮದುವೆಯಾಗಿ ಗಂಡನ ಮನೆಗೆ ಬರುವ ಒಂದು ಹೆಣ್ಣು ಜೀವನದಲ್ಲಿ ಏನೇನು ಅಪೇಕ್ಷಿಸಬಹುದೋ ಆ ಎಲ್ಲ ಸೌಕರ್ಯಗಳು ಮಾಲಿನಿಗೆ ದೊರಕಿವೆ.

ಹೀಗಿರುವಾಗ, ಒಂದು ದಿನ ಶುಕ್ರವಾರ ಮನೆಯವರೆಲ್ಲರೂ ಒಟ್ಟಿಗೆ ಥಿಯೇಟರ್‌ನಲ್ಲಿ ಸಿನೆಮಾ ನೋಡಿ, ಒಂದು ಒಳ್ಳೆ ಹೋಟಲಲ್ಲಿ ಊಟ ಮಾಡಿ, ಮನೆಗೆ ಬರುತ್ತಾರೆ. ಬಂದಮೇಲೆ ಅಪ್ಸರೆಯಂತೆ ಕಾಣುತ್ತಿದ್ದ ಮಾಲಿನಿ, ತನ್ನ ಗಂಡ ಮತ್ತು ಅತ್ತೆ ಮಾವಂದಿರನ್ನು ಹಾಲಿಗೆ ಬಂದು ಕೂರುವಂತೆ ಆಹ್ವಾನಿಸುತ್ತಾಳೆ, ಬಂದ ಮೇಲೆ ಎಲ್ಲರಿಗೂ ಸೇಬಿನಹಣ್ಣನ್ನು ಹೆಚ್ಚಿಕೊಟ್ಟು, ಯಾವುದೆ ಮುನ್ಸೂಚನೆ ಕೊಡದೆ, ತಾನು ವಿವಾಹ ಬಂಧನದಿಂದ ಹೊರಹೋಗುವುದಾಗಿ ಘೋಷಿಸಿ ಬಿಡುತ್ತಾಳೆ. ಇದನ್ನು ಕೇಳಿದ ಎಲ್ಲರೂ ಆಘಾತಕ್ಕೊಳಗಾಗಿರುವಾಗಲೇ ಅದಕ್ಕೆ ಕಾರಣವನ್ನು ಹೇಳಿಬಿಡುತ್ತಾಳೆ:

”ವೈವಾಹಿಕ ಜೀವನ ನನಗೆ ಸಾಕಾಗಿದೆ. ಇನ್ನು ಮುಂದೆ ಕೂಡ ವೈವಾಹಿಕ ಬಂಧನದೊಳಗಿರುವುದು ಸರಿ ಎನಿಸುವುದಿಲ್ಲ. ಇಲ್ಲಿ ಹೊಸದಾಗಿ ಏನೂ ಜರಗುವುದಿಲ್ಲ, ಎಲ್ಲವು ಮತ್ತೆ ಪುನರಾವರ್ತನೆಯಗುತ್ತಿರುತ್ತದೆ. ಹಾಗಾಗಿ, ಎಲ್ಲರೂ ಸಂತೋಷವಾಗಿರುವಾಗ, ಗಂಡ-ಹೆಂಡತಿ ಇನ್ನೂ ಅನ್ಯೋನ್ಯವಾಗಿರುವಾಗಲೇ ಬೇರೆಯಾಗುವುದು ಒಳ್ಳೆಯದು. ಹಾಗೆಂದು ಇಬ್ಬರೂ ಒಂದು ಒಪ್ಪಂದಕ್ಕೆ ಬಂದು, ಪ್ರಮಾಣ ಪತ್ರ ತಯಾರುಮಾಡಿ,ನೋಂದಣಿ ಮಾಡಿಸಿ ಬಿಡೋಣ. ನ್ಯಾಯಾಲಕ್ಕೆ ಹೋಗುವುದು ಬೇಡ. ನನಗೆ ನಿಮ್ಮ ಯಾರ ಬಗ್ಗೆಯೂ ಬೇಸರವಿಲ್ಲ, ಸಿಟ್ಟೂ ಇಲ್ಲ, ಮದುವೆ ಜೀವನ ಸಾಕು ಅನಿಸಿದೆ, ಅಷ್ಟೆ,” ಇಷ್ಟು ಹೇಳಿ ಮಲಗಲು ಹೋಗುತ್ತಾಳೆ.

ಮಾಲಿನಿ ಬೆಳಗ್ಗೆ ಎದ್ದು, ಸ್ನಾನ ಮಾಡಿ, ಬಟ್ಟೆ ಧರಿಸಿ, ಮದುವೆಯಲ್ಲಿ ತನಗೆ ಕೊಟ್ಟಿದ್ದ ಚಿನ್ನದ ಒಡವೆಗಳನ್ನು ನೀಟಾಗಿ ಜೋಡಿಸಿ, ಒಂದು ಪುಟ್ಟ ಪೆಟ್ಟಿಗೆಯಲ್ಲಿಟ್ಟು, ಅದನ್ನು ಅಲ್ಮೈರದಲ್ಲಿಟ್ಟು, ಮನೆ ಬಿಟ್ಟು ಹೊರಟುಬಿಡುತ್ತಾಳೆ. ನಂತರ ಒಬ್ಬ ವಕೀಲರ ಮೂಲಕ ಅವಳ ಗಂಡನಿಗೆ ಒಂದು ಸೂಚನಾ ಪತ್ರವನ್ನು ಕಳಿಸಿ, ತನ್ನ ತಂದೆ ಮನೆಯಲ್ಲಿ ಕೆಲವು ದಿನವಿದ್ದು, ಕೋರ್ಟು ಕಛೇರಿ ವ್ಯವಹಾರಗಳಲ್ಲಿ ಮುಳುಗಿದ್ದು, ಓಂದು ದಿನ ಯಾರದೋ ವೀರ್ಯಾಣುವಿನಿಂದ ಗರ್ಭಧರಿಸಿ, ಮಗುವನ್ನು ಪಡೆದು, ಮಗುವಿನ ಜತೆ ನೈನಿತಾಲಿಗೆ ಹೋಗಿ ಹೊಸ ಜೀವನ ಆರಂಭಿಸುತ್ತಾಳೆ. ಇದಿಷ್ಟು ಕತೆ.

ಕತೆ ಇಷ್ಟೆ ಆದರೂ, ಈ ಕತೆಯ ಸುತ್ತ ಒಂದು ಹೊಸ ವಿಶ್ವವನ್ನು ಸೃಷ್ಟಿಸಿದ್ದಾರೆ ಕಾದಂಬರಿಕಾರರು. ಮಾಲಿನಿಯ ಮಾವ ತಮಗೊಂದು ಸೊಸೆ ಬೇಕೆಂದು ಮರುಕಲ್ಯಾಣಧಾಮಗಳಲ್ಲಿ ವಿಚಾರಿಸುವುದು, ಮಾಲಿನಿ ಕೋರ್ಟುಕಛೇರಿಗಳಿಗೆ ಅಲೆದಾಡುವುದು, ವೀರ್ಯಕ್ಕಾಗಿ ಡಾಕ್ಟರು ಬಳಿಗೆ ಹೋಗುವುದು, ಒಂದೇ ಎರಡೆ, ಅವುಗಳನ್ನು ಕುರಿತು ನಾನು ವಿವರಿಸಲಾರೆ. ಅವುಗಳನ್ನು ಕಾದಂಬರಿಕಾರರು ಎಷ್ಟು ಸ್ವಾರಸ್ಯಕರವಾಗಿ ನಿರೂಪಿಸಿರುವರೆಂಬುದನ್ನು ನೀವು ಓದಿಯೇ ಸವಿಯಬೇಕು. ನಾನು ಹೇಳಿದರೆ ಅದು ಸಪ್ಪೆಯಾಗುತ್ತದೆ. ಕಾದಂಬರಿಯನ್ನು ನೀವು ಒಂದೇ ಸಾರಿ ಓದಿ ಮುಗಿಸಲಾರಿರಿ. ಒಂದೊಂದು ಪುಟವನ್ನು, ಅಷ್ಟೇಕೆ, ಒಂದೊಂದು ವಾಕ್ಯವನ್ನು ನಿಧಾನವಾಗಿ ಓದಿ, ಅರ್ಥೈಸಿಕೊಂಡು, ಅನುಭವಿಸಬೇಕಾಗುತ್ತದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳನ್ನು ಸತ್ಯನಾರಾಯಣ ಅವರು ಚಿತ್ರಿಸಿರುವ ರೀತಿ ಅಪೂರ್ವ, ಅನನ್ಯ. ಅವರು ಪಾತ್ರಗಳ ಮತ್ತು ಸನ್ನಿವೇಶಗಳ ವಿವರಗಳನ್ನು ಹುಡುಕಿ ಹೇಳಿರುವ ಬಗೆಯನ್ನು ನಾನು ಬೇರೆಡೆ ಕಂಡಿಲ್ಲ. ಮರುಕಲ್ಯಾಣಧಾಮದ ಸಿಬ್ಬಂದಿ ಮತ್ತು ಅಲ್ಲಿನ ವ್ಯವಸ್ಥೆ; ಲಾಯರುಗಳು ಮತ್ತು ನ್ಯಾಯಾಧೀಶರುಗಳ ವೈಯಕ್ತಿಕ ಜೀವನಕ್ರಮ; ನ್ಯಾಯಾಧೀಶರ ಇಬ್ಬರು ಹೆಣ್ಣು ಮಕ್ಕಳು, ಜಾತಿ, ಭಾಷೆಯಿಂದ ಹೊರಗೆ ಮದುವೆಯಾಗಿರುವ ವಿವರ; ಡಾಕ್ಟರುಗಳು, ನರ್ಸ್‌ಗಳ ವೈಯಕ್ತಿಕ ಜೀವನ; ಕಾಲೇಜು ಲೆಕ್ಚರರು, ಮದುವೆಗೆ ಮುಂಚೆ ಮಾಲಿನಿಯನ್ನು ಮೆಚ್ಚಿದ್ದ ನಾಗಚಂದ್ರನ ಕತೆ, ಹೀಗೆ ಕಾದಂಬರಿಯಲ್ಲಿ ಬಂದುಹೋಗುವ ೭೫ಕ್ಕೂ ಮೀರಿದ ಪಾತ್ರಗಳನ್ನು ಓದುಗರಿಗೆ ಬೋರ್‌ ಆಗದ ರೀತಿಯಲ್ಲಿ ಹೇಳಲಾಗಿದೆ.
ಮರೆತಿದ್ದೆ, ಸತ್ಯನಾರಾಯಣ ಅವರು ಕಾದಂಬರಿಯಲ್ಲಿ, ಮನೆಗೆ ಹೂವು ಕೊಡುವ ಸಾವಿತ್ರಮ್ಮ ಮತ್ತು ಹಾಲು ಹಾಕುವ ಬಸರಾಳು ಸೀಮೆಯ ನಂಜೇಗೌಡ ಮುಂತಾದವರ ವಿವರಣೆಯನ್ನೂ ಕೈಬಿಟ್ಟಿಲ್ಲ.

ಹೀಗೆ, ಸತ್ಯನಾರಾಯಣ ಅವರು ಕನ್ನಡಿಗರಿಗೆ ಒಂದು ವಿಶಿಷ್ಟ ಕಾದಂಬರಿಯನ್ನು ಕೊಟ್ಟಿದ್ದಾರೆ. ಹಾಗೆ ನೋಡಿದರೆ, ಅವರು ಬರೆದಿರುವುವೆಲ್ಲಾ ವಿಶಿಷ್ಟವಾದವೆ. ಒಬ್ಬ ಉನ್ನತ ದರ್ಜೆಯ ಆದಾಯ ತೆರಿಗೆ ಅಧಿಕಾರಿ ಇಷ್ಟರಮಟ್ಟಿಗೆ ಕನ್ನಡ ಸಾಹಿತ್ಯ ಸೇವೆ ಮಾಡಿರುವುದು ಅಭಿನಂದನೀಯ, ಅವರಿಗೆ ದೇವರು ಆಯುರಾರೋಗ್ಯ ಕೊಡಲಿ, ಅವರು ಹೀಗೆ ಬರೆಯುತ್ತಿರಲಿ ಎಂದು ಆಶಿಸುವ,


  • ಡಾ. ಎಂ. ಬಸವಣ್ಣ – ಮನಶ್ಯಾಸ್ತ್ರ ಪ್ರಾಧ್ಯಾಪಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading