ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಮೊದಲ ಕಾದಂಬರಿಯೇ ಸೂರ್ಯನ್ ಪ್ರಪಂಚ. ಈ ಕೃತಿಯ ಕುರಿತು ಲೇಖಕರಾದ ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸೂರ್ಯನ್ ಪ್ರಪಂಚ
ಲೇಖಕರು : ಸೂರ್ಯಸಖ ಪ್ರಸಾದ್ ಕುಲಕರ್ಣಿ
ಬೆಲೆ : ೨೫೦
ಪುಟ : ೨೩೨+೪
ಪ್ರಕಾಶನ : ಹೆಚ್.ಎಸ್.ಆರ್.ಎ.ಪ್ರಕಾಶನ
ಪ್ರಪಂಚದಲ್ಲಿ ನೂರಾರು ಕುಟುಂಬಗಳಿವೆ. ನೂರಾರು ಜನರಿರುವರು. ಆದರೆ ನಾವು, ನಮ್ಮ ಸುತ್ತಮುತ್ತಲಿನ ಪುಟ್ಟ ಪ್ರಪಂಚದ ಜನರ ಸುತ್ತ ನಡೆಯುತ್ತಿರುವ ಕಥೆ, ಬದುಕಿನಲ್ಲಿ ಅತಿ ಆಸಕ್ತರಾಗಿರುತ್ತೇವೆ. ಸೂರ್ಯನೆಂಬ ನಾಯಕ, ಅವನ ಬದುಕಿನಲ್ಲಿ ಸ್ನೇಹಿತೆಯಾಗಿ ಬರುವ ವಕೀಲೆ ವೃಶಾಲೀಯ ಸುತ್ತಲಿನ ಪ್ರಪಂಚವನ್ನು ಬಣ್ಣಿಸುತ್ತ ಬರೆದಿರುವ ‘ಸೂರ್ಯನ್ ಪ್ರಪಂಚ’ ಈ ಸದ್ಯ ಓದಿದೆ. ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಮೊದಲ ಕಾದಂಬರಿ ಇದಾಗಿದ್ದು ಮೊದಲ ಸಾಹಿತ್ಯಕೃಷಿಯಲ್ಲೇ ಉತ್ತಮ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ.
ವೃಶಾಲಿಯ ಕಾಲು ಸ್ವಲ್ಪ ಕುಂಟು,ಆದರೆ ಆ ಒಂದು ಸಣ್ಣ ದೋಷ ಅವಳಿಗೆ ದೋಷವಾಗೇ ಕಾಣದೇ,ಅದನ್ನು ಮೆಟ್ಟಿ ನಿಂತು ಓದಿ ಸಾಧನೆ ಮಾಡಿ ಆಕೆ ವಕೀಲೆಯಾಗಿ ಮಾಡುವ ಉಪಕಾರಗಳು,ಗಂಡ ಸ್ವಲ್ಪ ಮಾನಸಿಕ ರೋಗಿಯಾಗಿದ್ದರೂ ಅವನನ್ನು ಅರ್ಥಮಾಡಿಕೊಂಡು ಚಿಕಿತ್ಸೆಕೊಡಿಸಿ ಅವನನ್ನು ತಾನು ಹೋದಲೆಲ್ಲ ಕರೆದುಕೊಂಡು ಹೋಗಿ ಉಪಚರಿಸುವ ಅವಳ ಪ್ರೀತಿ,ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮಳೊಂದಿಗೆ ಎಲ್ಲರ ಅಸಡ್ಡೆಗೆ ಒಳಗಾದರೂ ಸಹಿಸಿಕೊಂಡು ಬಾಳ್ವೆ ನಡೆಸಿದ ಅವಳ ಜೀವನಪ್ರೀತಿ ಮಾದರೀಯವಾದುದು.

ಶ್ರೀವತ್ಸ, ಶ್ರೀನಿವಾಸರು ಮದುವೆ ಮಾಡಿಕೊಳ್ಳಲು ತಾವು ಇಷ್ಟಪಟ್ಟ ಹೆಣ್ಣನ್ನು ಮದುವೆಯಾಗುವ ಸುಯೋಗ ಹೊಂದಿದವರಾದರೂ ಮುಂದೆ ಶ್ರೀನಿವಾಸನಿಗೆ ಸಹಬಾಳ್ವೆ ನಡೆಸುವ, ಅವನ ತಪ್ಪನ್ನು ಮನ್ನಿಸುವ, ಮಕ್ಕಳಾಗದಿದ್ದರೆ ವೈದ್ಯರ ಬಳಿ ಹೋಗಿ ಸಲಹೆ ಕೇಳುವ ಎಂದು ಸಮಾಧಾನ ಮಾಡುವ ಹೆಣ್ಣು ಸಿಕ್ಕರೆ,ಶ್ರೀವತ್ಸನಿಗೆ ಮದುವೆಯ ನಂತರದ ಬದುಕು ನರಕಸದೃಶ. ಅವನ ಮೇಲೆ ಸಂಶಯಪಟ್ಟು, ಮನೆಯವರೊಂದಿಗೆ ಹೊಂದಿಕೊಂಡು ಹೋಗದೇ, ಮೈದುನನಿಗೆ ಸೋದರ ಪ್ರೀತಿ ತೋರಿಸದೇ ಅಸಡ್ಡೆಯಾಗಿ ಕಂಡು ಹೀಗೆ ಅವರ ಬಾಳಿನಲ್ಲಿ ಏಕಾದರೂ ಅವಳನ್ನು ಮದುವೆಯಾದೇನೋ ಎಂದು ಭಾವಿಸುವಂತೆ ಮಾಡುವ ಪ್ರಸಂಗಗಳು ನಮ್ಮನ್ನು ಕಾಡುತ್ತವೆ.
ಶಾಲ್ಮಲಾಳಿಗೆ ಮದುವೆಯ ಮುಂಚೆ ಅತ್ತೆಯ ಮಗನನ್ನು ಮದುವೆಯಾಗಬೇಕೆ? ಬೇಡವೇ ಎಂಬ ಗೊಂದಲದ ನಡುವೆ ಅವನು ಮಾಡಿದ ಮೋಸಕ್ಕೆ ತಕ್ಕ ಶಾಸ್ತಿಯಾಗುವಂತೆ ಅವಳನ್ನು ಅರ್ಥಮಾಡಿಕೊಳ್ಳುವ ಅವಳ ಅತ್ತೆ ಅವಳಿಗೆ ಬೇರೆ ವರನನ್ನು ಹುಡುಕಿ ಮದುವೆ ಮಾಡಿಸಿದರೆ ಅವಳಿಗೆ ಉತ್ತಮ ಕುಟುಂಬ ದೊರಕಿತು. ಸುಖಿಯಾಗಿರುವಳು ಎನ್ನುವಷ್ಟರಲ್ಲಿ ಮೈದುನನ ಕಿರುಕುಳ.ಅವನ ಕೊಲೆಯಾಗಲು, ಅವಳೇ ಕೊಲೆ ಮಾಡಿರಬಹುದು ಎಂಬ ಗುಮಾನಿ.ಕೊನೆಗೂ ಕೊಲೆಗಾರ ಸಿಕ್ಕಿ ಬಿದ್ದನೇ? ಕೊಲೆ ಏಕಾಯಿತು?ಮನೆಬಿಟ್ಟು ಹೋಗಿ ಮತ್ತೆ ವಾಪಸು ಬಂದ ಅವಳ ಅಣ್ಣ ಮಧುಕೇಶ್ವರನೇ ಕೊಲೆಗಾರನೇ? ಹೀಗೆ ನಾನಾ ಪ್ರಶ್ನೆಗಳಿಗೆ ಕಾದಂಬರಿ ಓದಿಯೇ ನೀವು ಉತ್ತರ ಪಡೆಯಬೇಕು.

೨-೩ ಕುಟುಂಬಗಳ ಸುತ್ತ ಹೆಣೆದಿರುವ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿರುವುದರಲ್ಲಿ ಎರಡು ಮಾತಿಲ್ಲ. ಸೂರ್ಯ, ಪ್ರಕಾಶ, ಅರುಣ, ವೃಶಾಲಿ (ಸೂರ್ಯನ ಮಗ ಕರ್ಣನ ಹೆಂಡತಿ), ಹೀಗೆ ಸೂರ್ಯ ಮತ್ತು ಅವನಿಗೆ ಸಂಬಂಧಿಸಿದವರ ಹೆಸರನ್ನೇ ಇಟ್ಟುಕೊಂಡು ಪಾತ್ರಗಳನ್ನು ಪೋಣಿಸಿ ಸೂರ್ಯನಪ್ರಪಂಚ ಎಂದು ಕೃತಿಗೆ ಹೆಸರಿಟ್ಟಿದ್ದು ಹೆಸರಿಗೆ ತಕ್ಕುದಾಗಿದೆ.
ಪತ್ರಕರ್ತನಾಗಿ ಕತೆಯ ತುಂಬೆಲ್ಲ ಸುತ್ತಾಡುತ್ತ, ಜಗವೆಲ್ಲ ಸುತ್ತುವ ಸೂರ್ಯನಂತೆ ಸೂರ್ಯ ಪಾತ್ರಧಾರಿಯಾಗಿ ಅವನೇ ಎಲ್ಲರ ಕಥೆಗಳನ್ನು ಬರೆದು ಪತ್ರಕೆಯಲ್ಲಿ ಕಾದಂಬರಿಯಾಗಿ ಪ್ರಕಟಿಸುವ ಕಾದಂಬರಿಯನ್ನು ಓದುವ ಅವಕಾಶ ನಮ್ಮದು.
- ಸಾವಿತ್ರಿ ಶ್ಯಾನುಭಾಗ
