ನನ್ನ ಹುಟ್ಟು ನನ್ನಿಂದ ಸಾಧ್ಯವಿಲ್ಲ, ಸಾವು ನನ್ನಿಂದ ಸಾಧ್ಯವಿಲ್ಲ. ಆದರೆ ಮಧ್ಯದಲ್ಲಿ ಮಾಡಿದ ಕರ್ಮಶೇಷವು ಮಾತ್ರ ನಮ್ಮನ್ನು ಬಿಡುವುದಿಲ್ಲ. ಇದು ಪರಮಾತ್ಮನಿಗೆ ಕ್ರೀಡೆಯಿದ್ದಂತೆ. ಇದು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಾಹಂ ಕರ್ತಾ ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ
ಇದು ಒಂದು ಮಾನವನ ಬದುಕಿನ ಸಾರಕ್ಕೆ ಬೇಕಾಗುವ ಸಿದ್ಧಾಂತದ ಮೊದಲಿನ ಮೆಟ್ಟಲು. ಜೀವನ ಒಂದು ಮಾನವನ ಅಧ್ಯಾಯ.ಜೀವಿಯು ಪರಮಾತ್ಮನಷ್ಟು ಎತ್ತರ ಹೋಗಲು ಸಾಧ್ಯವಿಲ್ಲ. ಆದರೆ ಪರಮಾತ್ಮನನ್ನು ಹತ್ತಿರ ಮಾಡಿಕೊಳ್ಳಲು ಪ್ರಯತ್ನ ಪಟ್ಟರೆ ಸಾಧ್ಯವಾಗುವದೆಂದು ಜ್ಞಾನಿಗಳ ಉಪದೇಶ. ಕಾರಣ ಮಾನವ ಜೀವಿಯು ತನ್ನ ಜನ್ಮ ಸಾರ್ಥಕವಾಗಲು ಒಂದು ಮಾನವೀಯತೆಯ ಸಿದ್ಧಾಂತವನ್ನು ಪಾಲಿಸಿ ಪರಮಾತ್ಮನು ಕೊಟ್ಟ ಉಡುಗೊರೆ ಸಾಧನಗಳನ್ನು ಉಪಯೋಗಿಸಿ ಪರಮಾತ್ಮನ ಪರಿವಾರದ ಸನ್ನಿಧಾನವನ್ನು ಪಡೆದು ಪರಮಾತ್ಮನಿಗೆ ಕೃತಜ್ಞತೆ ಸಮರ್ಪಿಸುವ ಸಿದ್ಧಾಂತವೇ ಶ್ರೇಷ್ಠ.
ನನ್ನ ಹುಟ್ಟು ನನ್ನಿಂದ ಸಾಧ್ಯವಿಲ್ಲ, ಸಾವು ನನ್ನಿಂದ ಸಾಧ್ಯವಿಲ್ಲ. ಆದರೆ ಮಧ್ಯದಲ್ಲಿ ಮಾಡಿದ ಕರ್ಮಶೇಷವು ಮಾತ್ರ ನಮ್ಮನ್ನು ಬಿಡುವುದಿಲ್ಲ. ಇದು ಪರಮಾತ್ಮನಿಗೆ ಕ್ರೀಡೆಯಿದ್ದಂತೆ. ಆದರೆ ಅವನು ಸುಮ್ಮನೆ ಕ್ರೀಡೆಯಾಡುವದಿಲ್ಲ. ಜೀವಿಗೆ ಏನೇನು ಬೇಕು ಎಲ್ಲವನ್ನು ಕೊಟ್ಟು ಶ್ರೇಷ್ಠವಾದ ಮಾನವ ಜನ್ಮದಲ್ಲಿ ಕಳಿಸಿರುವನು. ಅಷ್ಟೇ ಅಲ್ಲ ತಾನು ತನ್ನ ಭಕ್ತರೆನಿಸಿದ ಕೋವಿದರಲ್ಲಿ ಆವೇಶದಿಂದೊ ಅಂಶದಿಂದೊ ನೆಲೆಸಿ ಗುರುಗಳೆನಿಸಿ ಅಥವಾ ದಾಸರೆಂದೆನಿಸಿ ಪಾಮರರನ್ನು ಎಚ್ಚರಗೊಳಿಸಲು ಕಾರ್ಯಗಳಿಂದೊಡಗೂಡಿ ಅಕ್ಷರಗಳ ಸಮೇತರಾಗಿ ಸಂದೇಶಕೊಡಲು ಕಳಿಸುತ್ತಾನೆ.ಅದರಂತೆ ಪುರಂದರದಾಸರು (ಮಾನವ ಜನ್ಮ ದೊಡ್ಡದು ಅದ ಹಾನಿಮಾಡಿಕೊಳ್ಳ ಬೇಡಿರೋ ಹುಚ್ಚಪ್ಪಗಳಿರಾ) ಎಂದು ಹೇಳಿರುವರು. ಸುಮ್ಮನೆ ಅದನ್ನು ಹೇಳಿಲ್ಲ ಕಾರ್ಯದಲ್ಲಿ ಮಾಡಿ ತೋರಿಸಿದ್ದಾರೆ. (ಆರೂ ಸಂಗಡ ಬಾಹೋರಿಲ್ಲ ನಾರಾಯಣನ ನಾಮ ನೆರೆ ಬಾಹೋದಲ್ಲದೇ) ಕನಕದಾಸರು ತಮ್ಮ ಅನುಭವದಿಂದ ಸಾಧಿಸಿ ಹೇಳಿರುವ ನುಡಿಗಳು.
ಜನ್ಮ ಕೊಟ್ಟ ತಾಯಿಯು ತನ್ನ ಚಿಕ್ಕ ಮಗುವಿನ ಮುಖವನ್ನು ನೋಡುತ್ತಾ ಎಲ್ಲ ನೋವನ್ನು ಮರೆತು ತುಂಬಾ ಪ್ರೀತಿಯಿಂದ ಸ್ತನ್ಯಪಾನ ನೀಡಿ ಮಗುವಿಗೂ ಸುಖಪಡಿಸಿ ತಾನೂ ಸಂತೋಷಪಡುವಳು. ಕೆಲವು ದಿನ ಮಾತ್ರ.ಆದರೆ ಅನಾದಿ ಕಾಲದಿಂದಲೂ ಅನಂತ ಕಾಲದವರೆಗೂ ಜಗತ್ತಿಗೆ ತಾಯಿಯಾಗಿ ಅನಂತ ಜೀವರಿಗೆ ಏಕ ಕಾಲಕ್ಕೆ ಎಲ್ಲ ರೀತಿಯ ಆಶ್ರಯ ಕೊಟ್ಟು ತಾಯಿಯಂತೆ ಸಲಹುವ ಪರಮಾತ್ಮನ ರೂಪ ಅಗಣಿತಾತ್ಮವನ್ನು ಹರಿಕಥಾಮೃತಸಾರದಲ್ಲಿ ದಾಸರು ತುಂಬಾ ಸುಂದರವಾಗಿ ತಿಳಿಸಿದ್ದಾರೆ.

ಕೆಲವರು ಇದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಹೇಳುವರು. ಅವರಿಗೆ ನಿನ್ನ ಜನನ ಮರಣ ನಿನ್ನಿಂದ ಸಾಧ್ಯನಾ ಎಂದು ಕೇಳಿದರೆ ಅದು ಪ್ರಕೃತಿ ನಿಯಮ ಎಂದು ಹಾರಿಕೆಯ ಉತ್ತರ ಸಿಗುವುದು. ಆ ಪ್ರಕೃತಿಯ ಒಳಗೂ ಹೊರಗೂ ಪರಮಾತ್ಮನು ಓತಪ್ರೋತವಾಗಿ ನೆಲಸಿರುವನು ಎಂಬ ಶ್ರುತಿಯನ್ನು ನಂಬದೆ ಸ್ಮೃತಿ ವಿಸ್ಮರಣೆಯಲ್ಲಿ ತೇಲಾಡುತ್ತಾರೆ. ಅವರಿಗೆ ಸಿದ್ಧಾಂತ ಎನ್ನುವುದು ಇರುವುದಿಲ್ಲ. ಅಂದಮೇಲೆ ಅವರಿಗೆ “ಅಂತ ಕಂತ”ಧರ್ಮ ಇರುವುದಿಲ್ಲ. ಅಕ್ಷರ ಪ್ರಕೃತಿ ಮನಸ್ಸು ಇವುಗಳ ಮೇಲೆ ನಂಬಿಕೆ ಹೋಗಿರುತ್ತದೆ. ಅವುಗಳ ಶಕ್ತಿಯನ್ನು ತಿಳಿಯಲು ಹೆಚ್ಚು ಪ್ರಯತ್ನ ಆಗಿರುವದಿಲ್ಲ.ಅಂತ ಎಂದರೆ ಮಾನವೀಯತೆಯ ಸಿದ್ಧಾಂತ.
ಕಂತ ಎಂದರೆ ಧಾರಣೆ ಮಾಡುವ ಪ್ರಕೃತಿಯ ನಿಯತ ನಿಯಮ. ಪೂರ್ವಿಕರ ವಿಶೇಷ ಶಕ್ತಿ ಗುಣ ಇವುಗಳನ್ನು ತಿಳಿದು ನಾನು ಯಾವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದೇನೆ?. ಆದನ್ನು ಕಾಯಾ, ವಾಚಾ ಮನಸಾ ಪೂರ್ಣವಾದ ಸಿದ್ಧಾಂತವನ್ನು ಧಾರಣೆ ಮಾಡಬೇಕು. ಅಂದರೆ ಪರಮಾತ್ಮ ಎಂಬ ಶಕ್ತಿಯ ಸಹಾಯ ಸಿಗುವದು. ಕೇವಲ ಅಧಿಕಾರ, ವಂಶ, ದರ್ಪ ಇವುಗಳಿಂದ ಮಾಡಿದ ಸಿದ್ಧಾಂತವು ಮನ್ನಣೆ ಆಗದೆ ಗೊಂದಲದಲ್ಲಿ ಬೀಳುವುದು. ವಿಷ್ಣು ಸಹಸ್ರನಾಮದಲ್ಲಿ ಬಂದಂತಹ “ಲೋಕಬಂಧು ಲೋಕನಾಥ ವಿಶೋಕ ಶೋಕನಾಶನ:” ಎಂಬ ಪರಮಾತ್ಮನ ನಾಮಗಳ ತತ್ವಕ್ಕೆ ಅನುಗುಣವಾಗಿರಬೇಕು ಹರಿಯು ಆಕಾಶದಂತೆ ಸರ್ವತ್ರ ವ್ಯಾಪ್ತನಾದರೂ ಮತ್ತೊಬ್ಬರಿಗೆ ಅವಕಾಶ ಕೊಡುವನು.
ಇನ್ನೊಂದು ವಿಶೇಷ ಏನೆಂದರೆ ಆಕಾಶಕ್ಕೂ ಅವಕಾಶ ಮತ್ತು ಶಕ್ತಿಯನ್ನು ಕೊಡುವನು. ಹೇಗೆಂದರೆ ಈ ನಮ್ಮ ಸ್ಥೂಲ ಶರೀರವೆ ಒಂದು ಬ್ರಹ್ಮಾಂಡ ಎಂದು ಯೋಚಿಸಿದರೆ ಅಲ್ಲಿ ಪರಮಾತ್ಮನ ಬಿಂಬ ರೂಪ ಜೀವಿಗೆ ಸ್ವರೂಪ ಕೊಡಲು ನೆಲೆಸಿರುವ ರೂಪ. ಅಲ್ಲಿ ವಾಯು ದೇವರಿಗೆ ಶ್ವಾಸ ರೂಪ ಹೀಗೆ ಹಸ್ತ ಪಾದ ಮುಂತಾದ ಇಂದ್ರಿಯಗಳಿಗೆ ಆ ಆ ಕಾರ್ಯಕ್ಕಾಗಿ ನಿಯಮಿಸಿರುವನು. ಹಾಗೆಯೆ ಲೋಕಕ್ಕೂ ನಿಯಮವಿರುವದು. ವಾಯುದೇವರು ನಮ್ಮ ಶರೀರದಿಂದ ಹೊರಕ್ಕೆ ಹೋದ ಕ್ಷಣದಲ್ಲೇ ಶವವೆಂದು ಪರಿಗಣಿಸುವರು. ಅದರಂತೆ ಸಿದ್ಧಾಂತವಿರದೆ ಕ್ಷಣ ಕ್ಷಣಕ್ಕೂ ಮಾತುಗಳನ್ನು ಬದಲಿಸುವದು ಸಾತ್ವಿಕ ಕ್ರಿಯೆಗಳನ್ನು ಬದಲಿಸುವದು ಲೋಕಕ್ಕೆ ಗಂಡಾಂತರ. ಕಾರಣ ಜೀವಿಯು ಸಹನೆ ತಾಳ್ಮೆ ವಿನಯ ಸತ್ಯ ಈ ಸಂಕಲ್ಪದಿಂದ ಆಚರಿಸುವುದೆ ಧರ್ಮ ಕಾರ್ಯ ಸಾಧನೆಗೆ ಇದೆ ಸಿದ್ಧಾಂತ. ಈ ಅಕ್ಷರಗಳ ಶಕ್ತಿಯನ್ನು ಮನಸ್ಸಾಕ್ಷಿಯಾಗಿ ಇಟ್ಟುಕೊಂಡು ಮುನ್ನಡೆಯುವ ಬಲ ಸಿದ್ಧಿಸಲಿಯೆಂದು ಪ್ರಕೃತಿ ನಿಯಮಕ್ಕೆ ಶಿರಸ್ಸು ಬಾಗಲಿ.
“ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ”.
ಮುಖ್ಯ ಕಾರಣ ವಿಷ್ಣು ಇದು ಮಾತ್ರ ಸತ್ಯ
ಕಾರ್ಯಕ್ಕೆ ಅಧಿಷ್ಠಾನ ಸೃಷ್ಟಿಸಿದ ನಿತ್ಯ
ತಿಳಿದುದಕೆ ಫಲ ನೀನೆ ಸರ್ವಗ
ತಿಳಿಯುವಂತೆ ಸಲಹು ನೀ ಸರ್ವತ್ರ
ಅಚ್ಯುತಾನಂತ ಜೀವನಕೆ ನೀ ಸಿದ್ಧಾಂತ
ಚ್ಯುತಿವುಳ್ಳವ ನಾ ತಿಳಿಸು ನೀ ಗತಿಅಂತ
ಮತಿಗೆಟ್ಟು ದರ್ಪದಲಿ ಮುಳುಗಿಸದೆ ನನ್ನೆತ್ತು
ಅತಿ ಆಸೆ ಕೊಡಬೇಡ ಮೋಹವ ನೀನಿತ್ತು
ಮಾತರಿಶ್ವಾಂತರ್ಗತ ಶ್ರೀಹರಿ ಪರಮಾತ್ಮ
ಅಂತರಂಗದಿ ನೀ ನಿಂತು ಚೇತರಿಸು ನನ್ನಾತ್ಮ
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಹರಿ ಕಥಾಮೃತಸಾರ (ಭಾಗ – ೯)
- ಹರಿ ಕಥಾಮೃತಸಾರ (ಭಾಗ – ೧೦)
- ಹರಿ ಕಥಾಮೃತಸಾರ (ಭಾಗ – ೧೧)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
