ಪರಮಾತ್ಮನ ಪರಿವಾರ ವಿಶಾಲವಾಗಿದೆ. ಕಾರಣ ಪರಿವಾರವನ್ನು ಸ್ಮರಣೆಯಲ್ಲಿ ತಂದುಕೊಂಡು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ ವಾಯು ದೇವರ ಮುಖಾಂತರ ಹರಿಗೆ ಅರ್ಪಿಸಿದರೆ ಎಲ್ಲ ದೇವತೆಗಳ ಸಂಪ್ರೀತೀಯಿಂದ ದೇವರ ಅನುಗ್ರಹ ಖಂಡಿತ ಸಿಗುತ್ತದೆ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಾಹಂ ಕರ್ತಾ”ಹರಿ: ಕರ್ತಾ “
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ
ಶ್ರೀಹರಿಗೆ ವಿಷ್ಣುಸಹಸ್ರನಾಮದಲ್ಲಿ “ಸಂಧಾತಾ ಸಂಧಿಮಾನ ಸ್ಥಿರಃ ” ಎಂದು ಪ್ರಾರ್ಥಿಸಿ ಸಂಧಾತಾ ಎಂಬ ನಾಮದಿಂದ ಕರೆದಿದ್ದಾರೆ. ಶ್ರೀಹರಿಯನ್ನು ಬ್ರಹ್ಮಾದಿದೇವತೆಗಳು ಸಂಧಾತಾ ಎಂದು ಪ್ರಾರ್ಥಿಸುವರು. ಅವರ ಮೂಲಕ ಈ ಸಾಧನ ಶರೀರವನ್ನು ಸಂಧಿಸಿ ಪೋಷಣೆ ಮಾಡುವನು. ಮಳೆಗಾಲದಲ್ಲಿ ಮಳೆಯ ಮೂಲಕ ಭೂಮಿ ಆಕಾಶಗಳನ್ನು ಶ್ರೀ ಹರಿಯು ಹೇಗೆ ಸಂಧಿಸುವನೋ, ಅದರಂತೆ ಜೀವಿಗಳಲ್ಲಿ ನೆಲೆಸಿ ದೇವತೆಗಳಿಂದ ಸಕಲ ಕರ್ಮಗಳನ್ನು ಮಾಡಿಸಿ ನೀರನಲ್ಲಿದ್ದ ಕಮಲವು ನೀರನ್ನು ಅಂಟಿಸಿಕೊಳ್ಳದಂತೆ ಹೇಗೆ ಇರುತ್ತದೆಯೋ, ಅದರಂತೆ ಪರಮಾತ್ಮನಿಗೆ ಲೇಪವಿಲ್ಲೆಂದು ಜಲರುಹೇಕ್ಷಣ ಎಂದು ಕರೆದಿದ್ದಾರೆ. ಹೀಗೆ ಪರಮಾತ್ಮನಿಗೆ ಯಾವ ಕೊರತೆಯೂ ಇಲ್ಲ, ಅಂದಮೇಲೆ ಅವನಿಗೆ ಸುಖದ ಬಯಕೆ ಏಕೆ ? ಅವನು ಸುಖ ಪೂರ್ಣ ಅಲ್ವಾ? ಕಾರಣ ಕಮಲದಲ್ಲಿ ಲಕ್ಷ್ಮೀ ನಾರಾಯಣರನ್ನು ಜ್ಞಾನಿಗಳು ಕಂಡರು. ಅದರಂತೆ ಬ್ರಹ್ಮಾದಿ ದೇವತೆಗಳಲ್ಲಿ ಶ್ರೀ ಹರಿಯ ಸನ್ನಿಧಾನ ಹೆಚ್ಚು ಇರುವುದರಿಂದ ಅವರನ್ನು ಕಮಲಗಳಲ್ಲಿ ಕಾಣುವರು. ಉಪಾಸನೆಯು ಒತ್ತಾಯದಿಂದ, ಬೇಸರದಿಂದ ಆಗಬಾರದು. ಆನಂದ ನೀಡುವಂತಿರಬೇಕು. ಇದಕ್ಕೆ ಕಮಲವು ಸಂಪ್ರೀತೀಯ ಪ್ರತೀಕವೆನಿಸಿದೆ.
ಹೀಗೆ ಪರಮಾತ್ಮನ ಪರಿವಾರ ವಿಶಾಲವಾಗಿದೆ. ಕಾರಣ ಪರಿವಾರವನ್ನು ಸ್ಮರಣೆಯಲ್ಲಿ ತಂದುಕೊಂಡು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ ವಾಯು ದೇವರ ಮುಖಾಂತರ ಹರಿಗೆ ಅರ್ಪಿಸಿದರೆ ಎಲ್ಲ ದೇವತೆಗಳ ಸಂಪ್ರೀತೀಯಿಂದ ದೇವರ ಅನುಗ್ರಹ ಖಂಡಿತ ಸಿಗುತ್ತದೆ. ನಿತ್ಯ ಪರಿವಾರದ ನಾಮಗಳನ್ನು ಉಚ್ಚರಿಸಲು ಆಗುವುದಿಲ್ಲ.
ಹಿಂದಿನ ಸಂಚಿಕೆಯಲ್ಲಿ ಹದಿನಾರನೆಯ ಕಕ್ಷೆಯವರೆಗೆ ತಿಳಿದಿದೆ. ಹದಿನೇಳನೆಯ ಕಕ್ಷೆಯಲ್ಲಿ ಮಿತ್ರನಾಮಕ ಸೂರ್ಯ, ಪ್ರಾವಹಿ, ತಾರೆ ನಿಋ೯ತಿ ಬರುವರು. (ಮಿತ್ರ, ವರುಣ, ಪರ್ಜನ್ಯ, ವಿಷ್ಣು, ಇಂದ್ರ, ರವಿ, ಧಾತೃ, ಪೂಷನ್, ತ್ವಷ್ಟ್ರ, ಆರ್ಯಮಾ , ಭಗ ಮತ್ತು ಸವಿತೃ.) ಇವರು ದ್ವಾದಶಾದಿತ್ಯರು. ತಾರತಮ್ಯದಲ್ಲಿ ವಿಷ್ಣು ಎಂಬ ಸೂರ್ಯನು ಉರುಕ್ರಮನಾಮಕ ಮಹಾವಿಷ್ಣು,ಇಂದ್ರ ಎಂಬ ಸೂರ್ಯನು ಶಕ್ರನಾಮಕ ಇಂದ್ರ,ನಂತರ ರವಿ ಎಂಬಲ್ಲಿ ವಿವಸ್ವಾನ ನಾಮಕ ಸೂರ್ಯನು.ಮೊದಲಿಗೆ ಈ ಮೂವರು ಸೂರ್ಯರು ಬರುವರು.

ನಿರೂಪಣೆಯಲ್ಲಿ ಮೊದಲಿಗೆ ಮಿತ್ರ ನಾಮಕ ಸೂರ್ಯನು. ಪ್ರವಹವಾಯು ವಾಯುವ್ಯ ದಿಕ್ಕಿನ ಅಧಿಪತಿ, ಅವನ ಪತ್ನಿ ಪ್ರಾವಹಿ. ನಿಋ೯ತಿ ನೈಋತ್ಯ ದಿಕ್ಕಿಗೆ ಅಧಿಪತಿ. ತಾರೆ ಬ್ರಹಸ್ಪತಿ ಗುರುವಿನ ಪತ್ನಿ. ಇವಳು ಪಂಚ ಕನ್ಯೆ ಸ್ಮರಣೆಯಲ್ಲಿ ಬರುವಳು. ಇವರೆಲ್ಲ ಆಧಿ ಮನೋರೋಗ, ವ್ಯಾಧಿಗಳೆನಿಸಿದ ಶಾರೀರಿಕ ರೋಗಗಳನ್ನು ಪರಿಹರಿಸಿ ಮಂಗಳ ನೀಡುವರು.
ಹದಿನೆಂಟನೆಯ ಕಕ್ಷೆಯಲ್ಲಿ ವಿಶ್ವಕ್ಸೇನ, ಕುಬೇರ, ಗಣೇಶ ಮತ್ತು ಇವರ ಸಮಾನರೆನಿಸಿದ ಶೇಷಶತಸ್ಥರು ಎನ್ನುವ ಎಂಭತೈದು ದೇವತೆಗಳು ಬರುವರು. (ಏಳು ವಸುಗಳು, ಹತ್ತು ರುದ್ರರು, ಆರು ಆದತ್ಯರು, ನಾಲ್ವತ್ತೇಳು ಮರುತ್ತುಗಳು, ಹತ್ತು ವಿಶ್ವ ದೇವತೆಗಳು, ಋಭು ಎನ್ನುವ ದೇವತೆ, ಇಬ್ಬರು ಅಶ್ವಿನಿ ದೇವತೆಗಳು, ಅವರ ಹೆಸರು ನಾಸತ್ಯ ದಸ್ರ. ಮೂವರು ಚಿರಪಿತೃಗಳು (ಅಗ್ನಿಷ್ವಾತ್ತರು, ಬಹಿ೯ಷದರು ಮತ್ತು ಸೋಮಪರು.) ಇವರು ಚಿರಪಿತೃಗಳು. ಹಾಗೂ ಧರಣೀದೇವಿ. ವಿಶ್ವಕ್ಸೇನನು ವಾಯು ಪುತ್ರನು.ಕುಬೇರ ಧನಾಧಿಪತಿ, ಹಾಗೂ ಪುಣ್ಯ ಪಾಪಗಳನ್ನು ವಿಭಾಗ ಮಾಡಿ ದೈತ್ಯರಿಗೆ ಪಾಪಗಳನ್ನು ನೀಡುವ ಹರಿಯು ಕುಬೇರನಾಮದಿಂದ ಅವನಲ್ಲಿ ಇರುವನು.ವಿಘ್ನಗಳನ್ನು ಪರಿಹರಿಸುವನು.ಹಾಗೂ ಎಲ್ಲ ಗಣಗಳಿಗೆ ಈಶನೆನಿಸಿ ವಿಶ್ವಂಬರ ಎನಿಸಿದ್ದಾನೆ.ಅಲ್ಲದೆ ಕೃಷ್ಣ ರುಕ್ಮಿಣಿಯರ ಹತ್ತು ಮಕ್ಕಳಲ್ಲಿ ಚಾರುದೇಷ್ಣಾ ಎಂಬ ನಾಮದಿಂದ ಅವತಾರ ಮಾಡಿ ಉನ್ಮತ್ತರಾದ ದೈತ್ಯರನ್ನು ಸಂಹಾರ ಮಾಡಿರುವನು.
(ದ್ರೋಣ, ಧೃವ, ದೋಷ, ಅರ್ಕ, ಪ್ರಾಣದ್ಯು, ವಿಭಾವಸು) ಈ ಏಳು ವಸುಗಳು ಜ್ಞಾನಾದಿಗುಣಗಳಿಂದ ಪರಸ್ಪರ ಸಮಾನರು. ದ್ಯು ನಾಮಕ ವಸು ಭೀಷ್ಮರಾಗಿ ಬ್ರಹ್ಮ ದೇವರ ಅಂಶದಿಂದ ಭೂಮಿಯಲ್ಲಿ ಜನಿಸಿದರು. ದ್ರೋಣನಾಮಕ ವಸು ನಂದ ಗೋಪನಾಗಿ ಕೃಷ್ಣನನ್ನು ಬೆಳೆಸಲು ಕಾರಣನಾದನು. ಹನ್ನೊಂದು ರುದ್ರರಲ್ಲಿ ಭವಾನಿ ಪತಿ ಶಿವನು ಮುಖ್ಯ. ಉಳಿದ ಹತ್ತು ರುದ್ರರು ಅವತಾರ ಸಂಭೂತರು. (ಭೀಮ, ರೈವತ, ಓಜ, ಅಜೈಕಪಾತ, ಮಹಾನ್, ಭವರೂಪ ಭಾವ, ವಾಮ, ಉಗ್ರ, ವೃಷಾ ಕಪಿ ಅಹಿಬು೯ಧ್ನಿ) ಇವರು ಹತ್ತು ರುದ್ರರು. ಈ ಹತ್ತು ರುದ್ರರು ಶೇಷ ಶತಸ್ಥ ಗಣದಲ್ಲಿ ಸಮಾನ ಎನಿಸಿಕೊಂಡವರು. ಇವರು ಸಜ್ಜನರ ಸಮಯಕ್ಕನುಸಾರವಾಗಿ ಅನುಗ್ರಹಿಸುವರು. ಕಾರಣ ಶಿವನಿಗೆ ಪತ್ರತಾಪಕ ಎಂದು ಕರೆಯುವರು. ಮಹಾಭಾರತ ಸಮಯದಲ್ಲಿ ಪಾಂಡವ ಕೌರವರ ಎರಡೂ ಪಕ್ಷದೊಳು ಇದ್ದು ಸಾಧನೆ ಮಾಡಿ ಅನುಗ್ರಹಿಸಿದವರು.
ಧಾತೃ, ಪೂಷನ್, ತ್ವಷ್ಟ್ರ, ಆರ್ಯಮಾ, ಭಗ ಮತ್ತು ಸವಿತೃ ಈ ಆರು ಆದತ್ಯರು, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ಪ್ರತಿವಿಂದ್ಯ, ಶ್ರುತುಸೋಮ, ಶ್ರುತಕೀರ್ತಿ, ಶತಾನಿಕ ಹಾಗೂ ಶ್ರುತಕರ್ಮ ಇವರು ವಿಶ್ವದೇವತೆಗಳು. ಹೀಗೆ ಸಪ್ತೇಂದ್ರರು, ಕರ್ಮಜರು, ಮುನಿಗಳು, ಚಕ್ರವರ್ತಿಗಳು ಗಂಧರ್ವರು ಕಿನ್ನರು ಮುಂತಾದ ಮನುಷೋತ್ತಮರು ಎಲ್ಲರೂ ಅನುಕ್ರಮಣಿಕವಾಗಿ ಮೂವತ್ಮೂರು ಕಕ್ಷೆಗಳಿವೆ. ಇವರೆಲ್ಲರೂ ಅಂಶ ಮತ್ತು ದೇವತೆಗಳ ಆವೇಶದಿಂದ ಸಾಂಶರೆನಿಸಿಕೊಂಡವರು.
ಸಮಯಕ್ಕನುಸಾರವಾಗಿ ಭೂಮಿಯಲ್ಲಿ ಬಂದು ಲೋಕೋಪಕಾರ ಮಾಡುತ್ತಾರೆ.
(ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶ: /ತ್ರೀ ಲ್ಲೋಕಾನ್ವ್ಯಪ್ಯ ಭೂತಾತ್ಮಾ ಭುಂಕ್ತೇ ವಿಶ್ವ ಭುಗವ್ಯಯ: /) ವಿಷ್ಣುಸಹಸ್ರನಾಮ ಫಲಶ್ರುತಿಯಲ್ಲಿ ತಿಳಿಸಿದ್ದಾರೆ.(ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ/ಸರ್ವ ದೇವ ನಮಸ್ಕಾರಾ:ಕೇಶವಂ ಪ್ರತಿಗಚ್ಛತಿ)ಕೇಶವನೇ ಆಧಾರ ಎಂದು ಪ್ರಾರ್ಥಿಸಿದರೆ ಹರಿಯ ಅನುಗ್ರಹದ ಜ್ಞಾನ ಸಿಗುವುದು.
ಸಾಗರವು ಕಾಣುವುದು ಪ್ರಶಾಂತ ಹರಿವಿನಲಿ
ಗಾಳಿಯು ಬೀಸಲು ಕಾಣುವುದು ತೆರೆ ತೆರೆಯಲಿ
ನದಿ ವಾರಿಧಿ ಸೇರಲು ಪ್ರಶಾಂತವಾಗಿರುವಿ
ಅಗೋಚರ ಶಕ್ತಿ ಬಲದ ರಹಸ್ಯ ನೀನಾಗಿರುವಿ
ಎಲ್ಲೆಲ್ಲಿಯೂ ನಿನ್ನ ಮಹಿಮೆ ಅಕ್ಷಯವಾಗಿದೆ
ಎಲ್ಲಿ ಹುಡುಕಲಿ ನಾನಿನ್ನ ತಿಳಿಯದಾಗಿದೆ
ಸಮಯಾರಣ್ಯದೊಳು ಭಯವಾಗಿದೆ
ಮಾತರಿಶ್ವಾಂತರ್ಗತ ಶ್ರೀ ಹರಿ ಹರಸು
ಮಾತಾಪಿತರಾಗಿ ಜ್ಞಾನ ನೀಡೆನ್ನ ನಡೆಸು
ಶ್ರೀಕೃಷ್ಣಾರ್ಪಣ ಮಸ್ತು
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
