ಸನ್ಮಾರ್ಗವನ್ನು ವಿರೋಧಿಸಿದವರಿಗೆ ಅವರ ಯೋಗ್ಯತೆಗೆ ತಕ್ಕ ಫಲ ಕೊಡುವ ಆಹ೯ತೆ ಇದೆ. ಯಾರ ಲೋಪದೋಷವು ಇವರಿಗಿಲ್ಲ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
//ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ//
ಇದು ಜೀವನಕ್ಕೆ ಮುಖ್ಯವಾದ ಸಾಧನ. ಜ್ಞಾನಿಗಳಿಂದ ಬಂದ ನುಡಿ. ಅಲೌಕಿಕನಾದ ಶ್ರೀ ಹರಿಯು ಸರ್ವೋತ್ತಮ ಎಂಬುದು ನಿಶ್ಚಿತ. ದೇಹದ ಒಳಗೂ ಹೊರಗೂ ಬ್ರಹ್ಮಾಂಡದ ಒಳಗೂ ಹೊರಗೂ ವ್ಯಾಪ್ತನು. ಕಾರ್ಯವನ್ನು ತಾನೆ ಮಾಡಿಸುವನು ಶ್ರೀಹರಿಗೆ ಸಮರೂ ಇಲ್ಲ.ಉತ್ತಮರೂ ಇಲ್ಲ. ಎಲ್ಲವೂ ಅವನ ಅಧೀನ. ವಾಯು ಜೀವೋತ್ತಮ ಏಕೆಂದರೆ ಎಲ್ಲ ಜೀವಿಗಳಲ್ಲಿ ನೆಲೆಸಿದ್ದು ಪಕ್ಷ ಪಾತವಿಲ್ಲದೆ ಶ್ವಾಸಜಪಗಳನ್ನು ಮಾಡಿಸುವರು. ಅವರನ್ನು ಸ್ಮರಿಸಲಿ ಬಿಡಲಿ ಹರಿಯ ಆಜ್ಞೆ ಎಂದು ಎಲ್ಲರಲ್ಲಿ ಸಮನಾಗಿ ತಮ್ಮ ಕಾರ್ಯ ಮಾಡುವರು.
ಸನ್ಮಾರ್ಗವನ್ನು ವಿರೋಧಿಸಿದವರಿಗೆ ಅವರ ಯೋಗ್ಯತೆಗೆ ತಕ್ಕ ಫಲ ಕೊಡುವ ಆಹ೯ತೆ ಇದೆ. ಯಾರ ಲೋಪದೋಷವು ಇವರಿಗಿಲ್ಲ. ಅದಕ್ಕೆ ಜೀವೋತ್ತಮರು. ಮಂಗಳಮಯನಾದ ಹರನನ್ನು ಮನಸ್ಸಿನಲ್ಲಿ, ಸ್ಮರಿಸಿ ಆತ್ಮ ಶುದ್ಧಿ ಮಾಡಿಕೊಂಡು ಅಕ್ಷರ ಪ್ರತಿ ಪಾದ್ಯನಾದ ಜ್ಞಾನ ಸಂಪತ್ತನ್ನೆ ಮನೆ ಮಾಡಿಕೊಂಡವನು ಶ್ರೀನಿವಾಸನು. ಅಕ್ಷರ ಜ್ಞಾನದಿಂದ ಹರಿಹರರ ಸಂಹಿತೆಯನ್ನು ಬ್ರಹ್ಮ ವಾಯು ಇವರ ಸಾಧನೆ ತಿಳಿದರೆ ಸ್ವಲ್ಪ ಮಟ್ಟಿಗೆ ಜೀವನದ ಅರ್ಥ ತಿಳಿಯಲು ಸಾಧ್ಯ. ಈ ಸಾಧನ ಶರೀರದಲ್ಲಿ ಎಡಭಾಗದಲ್ಲಿ ಮೂವತ್ತಾರು ಸಾವಿರ ಬಲಭಾಗದಲ್ಲಿ ಮೂವತ್ತಾರು ಸಾವಿರ ಒಟ್ಟು ಎಪ್ಪತ್ತೆರಡು ಸಾವಿರನಾಡಿಗಳಲ್ಲಿ ಇಪ್ಪತ್ನಾಲ್ಕು ತತ್ವಗಳ ಹಾಗೂ ತತ್ವಗಳಭಿಮಾನಿಗಳಲ್ಲಿರುವ ಒಟ್ಟು ನಾಲ್ವತ್ತೆಂಟು ರೂಪಗಳು ಹಾಗೂ ಹಗಲಿನ ಮತ್ತು ರಾತ್ರಿಯ ಅಭಿಮಾನಿ ದೇವತೆಗಳು ಹೀಗೆ ಒಟ್ಟು ಶ್ರೀ ಹರಿಯ ಮೂವತ್ನಾಲ್ಕು ಲಕ್ಷ ಐವತ್ತಾರು ಸಾವಿರ ರೂಪಗಳು ಇರುವವು.
ಇನ್ನು ದೇಹದ ಒಂದು ಭಾಗದ ಕಾಲಿನಲ್ಲಿ ಹನ್ನೆರಡು ಸಾವಿರ,ತಲೆಯ ಅರ್ಧ ಭಾಗದಲ್ಲಿ ಆರು ಸಾವಿರ, ದೇಹದ ಮಧ್ಯಭಾಗದಲ್ಲಿ ಹದಿನಾಲ್ಕು ಸಾವಿರ, ತೋಳಿನಲ್ಲಿ ನಾಲ್ಕು ಸಾವಿರ ಹೀಗೆ ದೇಹದ ಅರ್ಧ ಭಾಗದಲ್ಲಿ ಮೂವತ್ತಾರು ಸಾವಿರ ಇನ್ನರ್ಧ ಭಾಗದಲ್ಲಿ ಮೂವತ್ತಾರು ಸಾವಿರ ಒಟ್ಟು ಎಪ್ಪತ್ತೆರಡು ಸಾವಿನಾಡಿಗಳಲ್ಲಿ ಲಕ್ಷ್ಮೀ ಸಹಿತ ತನ್ನಪರಿವಾರದೊಂದಿಗೆ ನೆಲೆಸಿ ನಮ್ಮನ್ನು ಪಾಲಿಸುವನು. ಶ್ರೀ ಹರಿಗೆ ಹುಟ್ಟು ಸಾವಿನ ಭಯ ಇಲ್ಲ. ಅದರಂತೆ ಮಹಾಲಕ್ಷ್ಮೀಯು ನಿತ್ಯ ಮುಕ್ತಳು.ಇಬ್ಬರೂ ಈ ಸಾಧನ ಶರೀರದ ಒಳಗೂ ಹೊರಗೂ ಓತಪ್ರೋತವಾಗಿ ನೆಲೆಸಿ ಸಾಧನೆ ಮಾಡಿಸುವರು.

ನಂತರ ಬ್ರಹ್ಮ ದೇವರು ವಾಯು ದೇವರು ಇಬ್ಬರು ಗುಣದಲ್ಲಿ ಹೆಚ್ಚು ಕಡಿಮೆ ಯಾದರೂ ಸಮನಾದ ಕಕ್ಷೆಯಲ್ಲಿರುವರು.ಯಾವ ಸೃಷ್ಟಿಗೆ ಬ್ರಹ್ಮ ದೇವರು ಬೇಕು.ವಾಯುದೇವರು ಶ್ವಾಸಕ್ಕಾಗಿ ಬೇಕೇ ಬೇಕು.ಇವರ ಜೊತೆಗೆ ಪತ್ನಿಯರಾದ ಸರಸ್ವತಿ ಭಾರತೀ ಇಬ್ಬರು ನೆಲೆಸಿರುವರು.ವಿದ್ಯೆ,ವಿನಯ ಪ್ರೀತಿ ಭಕ್ತಿಗೆ ಅಭಿಮಾನಿ ದೇವತೆಗಳು.ಹೊಕ್ಕಳಿಂದ ಶಿರದ ವರೆಗೆ ಇರುವ ಮಧ್ಯದ ನಾಡಿಗೆ ಸುಷುಮ್ನಾ ಎಂದು ಹೆಸರು.ಇದಕ್ಕೆ ಬ್ರಹ್ಮ ನಾಡಿ ಎಂದು ಕರೆವರು.ಈ ನಾಡಿಯು ಒಣಗದಂತೆ ಮತ್ತು ದುರ್ವಿಚಾರದ ರಕ್ಕಸರು ಬರದಂತೆ ಅಲ್ಲಿ ವಾಯುದೇವರು ನೆಲೆಸಿ ಕಾರ್ಯ ಸುಗಮವಾಗಿ ನಡೆಯುವಂತೆ ಮಾಡುವರು.ಸುಷುಮ್ನ ನಾಡಿಯ ಬಲಕ್ಕೆ ಪಿಂಗಳಾ ನಾಡಿಯು ಇರುವುದು.ಆ ನಾಡಿಯಲ್ಲಿ ಬ್ರಹ್ಮ, ವಾಯು ವಾಣಿ ಭಾರತೀ ಸಹಿತ ನೆಲೆಸಿರುವರು.ಎಡಗಡೆಗೆ ಒಂದು ನಾಡಿ ಇರುವುದು.ಆ ನಾಡಿಗೆ ಇಡಾ ಎಂದು ಹೆಸರು.
ಇದರಲ್ಲಿ ಗರುಡ, ಶೇಷ, ಶಿವ ಇಂದ್ರಾದಿಗಳಿರುವರು. ಜೊತೆಗೆ ಗರುಡನ ಪತ್ನಿ ಸೌಪರ್ಣಿ, ಶೇಷ ದೇವರ ಪತ್ನಿ ವಾರುಣಿ ಹಾಗೂ ಶಿವ ಪಾರ್ವತಿ, ಇಂದ್ರ ಶಚಿ ಇರುವರು. ಪಾದ ಹಸ್ತಗಳ ಬೆರಳುಗಳ ಸಂಧಿಗಳಲ್ಲಿ ವ್ಯಂಜನಾಕ್ಷರನಾಮದಿಂದ ಭಗವಂತನಿದ್ದಾನೆ ಎಂದು ಹರಿಕಥಯಲ್ಲಿ ಬಂದಿದೆ. ಬಲಪಾದದ ಬೆರಳುಗಳ ಸಂಧಿಗಳಲ್ಲಿ ಟಂಕಿ, ಠಳಕ, ಡರಕ, ಢರಿಣಾತ್ಮ ಎಂದು ಎಡ ಪಾದದ ಬೆರಳುಗಳ ಸಂಧಿಗಳಲ್ಲಿ ತಾರ, ಥಬ, ದಂಡಿ, ಧನ್ವಿ ನಮ್ಯ.
ಬಲ ಹಸ್ತದ ಬೆರಳುಗಳ ಸಂಧಿಗಳಲ್ಲಿ ಕಪಿಲ, ಖಪತಿ, ಗರುಡ, ಘರ್ಮ, ಙಸಾರ. ಎಡಭಾಗದಲ್ಲಿ ಚಾರ್ವಾಂಗ, ಛಂದೋಗಮ್ಯ, ಜನಾರ್ಧನ, ಝಟತಾರ ಞಮ ಈ ರೂಪಗಳಿಂದ ನೆಲೆಸಿರುವನು. ಇದರಂತೆ ಧರಣಿಯಲ್ಲಿ ನಾರಾಯಣ, ನೀರಿನಲ್ಲಿ ವಾಸುದೇವ, ಅಗ್ನಿಯಲ್ಲಿ ಸಂಕರ್ಷಣ, ವಾಯುವಿನಲ್ಲಿ ಪ್ರದ್ಯುಮ್ನ, ಆಕಾಶದಲ್ಲಿ ಅನಿರುದ್ಧ. ಅಲ್ಲದೆ ಬ್ರಹ್ಮ, ಗರುಡ, ಶೇಷ, ರುದ್ರರ ಸಹಿತ ಭೂಮಿಯಲ್ಲಿರುವ ಪ್ರಾಣಿಗಳಲ್ಲಿ “ಗೋಜ”ನಾಮದಿಂದ ಪರ್ವತದಲ್ಲಿಯ ಜೀವಿಗಳಲ್ಲಿ “ಅದ್ರಿಜ”ನಾಮದಿಂದ ನೆಲೆಸಿರುವನು.
ವೃಕ್ಷಗಳಲ್ಲಿ ಹರಿ ವಾಯು ನೆಲೆಸಿರುವರು. ಬ್ರಹ್ಮ , ವಾಯು, ಶಿವ, ಸೂರ್ಯ, ಚಂದ್ರ, ಇಂದ್ರ, ತಾರಾ ಭೂಮಿ, ದೇವನದಿಯಾದ ಗಂಗಾ ಮೊದಲಾದ ದೇವತೆಗಳನ್ನು ಹರಿಯನ್ನು ಪೂಜಿಸದೆ ಇವರನ್ನು ಪೂಜಿಸಿದರೆ ಸರಿಯಾದ ಜ್ಞಾನವನ್ನು ಕೊಡದೆ ಮೋಹದಲ್ಲಿ ಬೀಳಿಸುವರು. ಅನ್ನ ಕೊಡುವರಲ್ಲಿ “ಅನ್ನದ” ಎನಿಸಿ ಅನಿರುದ್ಧ ನಾಮದಿಂದ ಅನ್ನ ಉಣ್ಣುವರಲ್ಲಿ “ಅನ್ನಾದ” ಎನಿಸಿ ಪ್ರದ್ಯುಮ್ನ ನಾಮದಿಂದ, ಅನ್ನದಲ್ಲಿ ಅನ್ನನೆನಿಸಿ ವಾಸುದೇವ ನಾಮದಿಂದ ಇದ್ದು ಆರೋಗ್ಯ ಬಲ ಕೊಡುವನು. ಇಲ್ಲಿ ಅನ್ನ ಎಂದರೆ ಉಣ್ಣುವ ಯಾವುದೇ ಪದಾರ್ಥವು ಅನ್ನ ಎನಿಸಿಕೊಳ್ಳುವದು.
ಹೀಗೆ ಶೃತಿ -ಸ್ಮೃತಿಗಳು ಹೇಳಿದಂತೆ ಕರ್ಮ ಮಾಡಿ,ದೇವ ಸ್ವತಂತ್ರ,ವಾರಿಜಾಸನಾದಿಗಳು ಆಜ್ಞಾಧಾರಕರಾಗಿ ಪ್ರೇರಿಸುರೆಂದು ತಿಳಿದು ಅಹಂ, ಮಮತೆ ಬಿಟ್ಟು ಕೃತಜ್ಞನಾಗಿ ಕರ್ಮಗಳನ್ನು ಮಾಡಿದರೆ ದೋಷಗಳು ಕಳೆಯುವವು.ನಮ್ಮಲ್ಲಿ ಅಂತರ್ಯಾಮಿ ನೆಲೆಸಿರುವ ಶ್ರೀ ಹರಿಯು ನಮ್ಮೆಲ್ಲರನ್ನು ಅನುಗ್ರಹಿಸಲೆಂದು ಪ್ರಾರ್ಥಿಸಿ ಇವತ್ತಿನ ಸಂಚಿಕೆಯನ್ನು ಮುಗಿಸುತ್ತೇನೆ.
ಶುಭ ಮಸ್ತು.
ಎಲ್ಲ ಬಲ್ಲಿದ ಹರಿ ನನ್ನ ತಿಳಿಯನೆ
ಅವನ ಆಧೀನ ನಾವೆಲ್ಲ ಇದ ನೀ ತಿಳಿ
ಅಂತರಂಗದಿ ಹರಿಯ ಕಾಣದವ ಅಲ್ಲ ಮಾನವ
ಸಂಶಯಾತ್ಮಕನಾದರೆ ಆಗುವೆ ನೀ ದಾನವ
ನನ್ನಿಂದ ಸೃಷ್ಟಿ ಇಲ್ಲಾ ಇದ ನೀ ತಿಳಿ
ಅಂತರ್ಯಾಮಿ ಸೃಷ್ಟಿಯಲ್ಲಿ ಕಾಣುವೆ ಹೊಸತಳಿ
ಹೊಸತನಕೆ ಬೇಕು ವ್ಯಾಪ್ತನ ಕರುಣೆಯು
ಸದ್ಭಾವನೆ ಸ್ಮರಣೆಯಲ್ಲಿರಲಿ ಸತ್ಕ್ರಿಯೆಯು
ಮಾತರಿಶ್ವಾಂತರ್ಗತ ಶ್ರೀ ಹರಿಯು ನಿಂತು
ಅನುಗ್ರಹಿಸುವನು ಆನಂದದಿ ಇನಿತು
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
