ಉಮರನ ಒಸಗೆ (ಪದ್ಯ – ೦೯)

ಜನರ ನಡುವೆ ಪ್ರೀತಿಯ ಅರ್ಥ ಕಾಣಲಾಗದ ಪ್ರೇಮಿಯೊಬ್ಬನು ತನ್ನ ಪ್ರೇಯಸಿಯೊಂದಿಗಿನ ಪ್ರೇಮಕ್ಕೆ ಏಕಾಂತ ಬಯಸಿದ್ದಾನೆ. ಅಂತಹ ಜಾಗವೆಂದರೆ, ನಾಡಗಡಿಯ ಅತ್ತ ಕಡೆ ಎಂದರೆ ಊರಾಚೆ. ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಏಳು, ಬಾರೆನ್ನೊಡನೆ ನಾಡಗಡಿಯತ್ತಲಿಗೆ 
ಹುಲುಸು ಹೊಲ ಮರಳಕಾಡೆರಡುಮೊಡವೆರೆದು,
ಸುಲ್ತಾನ್ ಗುಲಾಮರೆಂಬರ ಮರೆಯಿಪಾ ಬಳಿಗೆ 
ಅಲ್ಲಿ ದೊರೆತನದ ಕಿರಿತನವ ಕಾಣುವೆ ನೀಂ.

ಹುಲುಸು = ಸಮೃದ್ಧ, ಕಾಡೆರಡುಮೊಡವೆರೆದು
ಎರಡುಂ + ಒಡ + ವೆರೆದು
ಒಡ = ಜೊತೆಗೆ, ವೆರೆ = ಬೆರೆ, ವೆರೆದು = ಬೆರೆತು

ಉಮರನ ಒಸಗೆಯು ಪ್ರೀತಿಯ ಅಲೆ, ಒಲವಿನ ಕಡಲು, ಕಾಂತಾಸಂಹಿತೆಯ ಆಡುಂಬೊಲ. ಜೊತೆಗೇ ಜೀವನ ದರ್ಶನದ ದೀಪಿಕೆ. ಕವಿ ಉಮರನು ನಿರ್ವ್ಯಾಜ ಪ್ರೇಮದ ತಾಣವಾವುದೆಂಬುದನ್ನು ಈ ಪದ್ಯದಲ್ಲಿ ಹೇಳಿದ್ದಾನೆ. ಜನರ ನಡುವೆ ಪ್ರೀತಿಯ ಅರ್ಥ ಕಾಣಲಾಗದ ಪ್ರೇಮಿಯೊಬ್ಬನು ತನ್ನ ಪ್ರೇಯಸಿಯೊಂದಿಗಿನ ಪ್ರೇಮಕ್ಕೆ ಏಕಾಂತ ಬಯಸಿದ್ದಾನೆ. ಅಂತಹ ಜಾಗವೆಂದರೆ, ನಾಡಗಡಿಯ ಅತ್ತ ಕಡೆ ಎಂದರೆ ಊರಾಚೆ.

ಓಯಸಿಸ್ ನ ಆಸರೆಯಲ್ಲಿ ಸಮೃದ್ಧವಾಗಿ ಬೆಳೆದ ಕಣ್ಮನ ತಣಿಸುವ ಹಸಿರಿರುವ ತಾಣವೊಂದು ಕಡೆ, ಮತ್ತು ಮರಳುಗಾಡು ಇನ್ನೊಂದೆಡೆ, ಇವೆರಡೂ ಜೊತೆಯಾಗಿ ಬೆರೆತು ನಿರ್ಮಿಸಿದ ಪ್ರಶಾಂತ ಸ್ಥಳ. ಇಂತಹ ಊರಾಚೆಯ ಸುಂದರ ತಾಣವು ನಮ್ಮನ್ನೇ ನಾವು ಮರೆಯುವಂತೆ ಮಾಡುತ್ತದೆ. ಈ ವಿಸ್ಮೃತಿಯಲ್ಲಿ ಮನುಷ್ಯ ತನ್ನ ಸಾಮಾಜಿಕ ಸ್ಥಾನಮಾನ, ಅಂತಸ್ತನ್ನು ಮರೆತು ಪ್ರಕೃತಿಯ ಮಡಿಲಲ್ಲಿ ಮಗುವಾಗಿ ನಿರ್ಮಲ ಪ್ರೀತಿಯ ಆತ್ಮಾನುಭವವನ್ನು ಪಡೆಯುತ್ತಾನೆ.

ಊರಿನಲ್ಲಿದ್ದರಷ್ಟೆ, ಸ್ಥಾನಮಾನದ, ಅಂತಸ್ತುಗಳ ತಾಕಲಾಟ. ಊರಾಚೆ ಮೇಲೆಕೀಳುಗಳೆಂಬ ಭೇದವಿಲ್ಲ. ಅಲ್ಲಿಗೆ ಹೋದಾಗ ದೊರೆಯೂ ಚಿಕ್ಕವನಾಗುತ್ತಾನೆ, ಮಕ್ಕಳಂತಾಗುತ್ತಾನೆ. ತರತಮದ ಭಾವವಿಲ್ಲದೆ ವ್ಯವಹರಿಸುತ್ತಾನೆ. ಅದಕ್ಕೆಂದೇ ಉಮರನು ಪ್ರೇಯಸಿಯನ್ನು ಅಂದರೆ ಬುದ್ಧಿಯನ್ನು ಊರ ಗಡಿಯಾಚೆಗೆ ಆಹ್ವಾನಿಸುತ್ತಿದ್ದಾನೆ. ಇಲ್ಲಿ ಗಡಿಯೆಂಬುದು ಬುದ್ಧಿಯ ಪರಿಧಿ.

ಸುಲ್ತಾನ್, ಗುಲಾಮ, ಮೇಲು, ಕೀಳು, ಅಂತಸ್ತು, ಸ್ಥಾನ ಮಾನವೆಂಬ ತಾರತಮ್ಯವು ಬುದ್ಧಿಯ ಸೃಷ್ಟಿ. ಇದು ಬುದ್ಧಿಯ ಪರಿಧಿಯೊಳಗಷ್ಟೇ ಮೆರೆಯುತ್ತದೆ. ಒಮ್ಮೆ ಬುದ್ಧಿಯ ಪರಿಧಿಯಿಂದ ಹೊರಗೆ ಬಂದರೆ ಭಾವದ ಕೈ ಮೇಲಾಗುತ್ತದೆ. ಎಲ್ಲವೂ ಗೌಣವಾಗುತ್ತದೆ. ಕೇವಲ ಆನಂದವುಳಿಯುತ್ತದೆ.

ಇದೇ ನಿಜವಾದ ಪ್ರೀತಿ. ಇದೇ ನಿರ್ವ್ಯಾಜ ಪ್ರೀತಿ..

ಮುಂದುವರೆಯುವುದು.

ಹಿಂದಿನ ಸಂಚಿಕೆಗಳು :


  • ರವೀಂದ್ರ ಕುಮಾರ್ ಎಲ್ವಿ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading