ಹರಿ ಕಥಾಮೃತಸಾರ (ಭಾಗ – ೩)

“ನಾನು”ಎಂಬ ಅಹಂಕಾರ ಹುಟ್ಟಿ ನಾನೆ ಕರ್ತೃ ಎಂಬ ಭ್ರಮೆಯಲ್ಲಿ ಆತ್ಮಸಾಕ್ಷಿ ಕಳೆದು ಅಹಿತ ಕರ್ಮಗಳಿಂದ ದಾನವರಾಗಿ ಪ್ರಕಟರಾಗುತ್ತಾರೆ.. ಇಲ್ಲಿ ಸಹಜವಾಗಿ ಕಲಿ ಪ್ರವೇಶದಿಂದ ದುಷ್ಕೃತ್ಯಗಳು ನಡೆಯುವವು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಹರಿ: ಓಂ ಶ್ರೀ ಗುರುಭ್ಯೋ ನಮಃ

ಶ್ರೀಹರಿಯು ಎಲ್ಲಿರುವನು? ಎಂಬ ಪ್ರಶ್ನೆಗೆ ಅವನು ಎಲ್ಲಿಲ್ಲಾ ಎಂಬುವುದೇ ಉತ್ತರ.ಶ್ರೀಹರಿಯು ಈ ರೀತಿ ದ್ವಂದ್ವದಲ್ಲಿದ್ದರೂ ಆನಂದಮಯ ನಾಗಿದ್ದಾನೆ. ಅಕ್ಷರಗಳಿಂದಲೆ ರೋಗ ಬರುವುದು, ಅಕ್ಷರಗಳಿಂದಲೆ ರೋಗ ನಿವಾರಣೆ ಆಗುವುದು. ಅಕ್ಷರಗಳಿಂದಲೇ ದೇವರು, ಮಾನವರು ದಾನವರು ಪ್ರಕಟವಾಗುವರು. ಈ ರೀತಿ ಮೂರು ವಿಧ ಜೀವಿಗಳಲ್ಲಿ ವ್ಯಾಪ್ತನಾಗಿದ್ದಾನೆ. ಅಲ್ಲದೇ ನಮಗಾಗಿ ನೀರು, ಆಹಾರ ಗಾಳಿ ಮೊದಲಾದ ಎಲ್ಲ ಸೌಕರ್ಯಗಳನ್ನು ಸೃಷ್ಟಿಸಿದ್ದಲ್ಲದೇ ತನ್ನನ್ನು ತಿಳಿಯಲು ಸಹಾಯವಾಗಲೆಂದು ಶರೀರದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಆನಂದಮಯ ಎಂಬ ಐದು ಕೋಶಗಳನ್ನು ಸೃಷ್ಟಿಸಿ ಅವುಗಳಲ್ಲಿ ೫,೮೫,೪೦೦ ರೂಪಗಳಿಂದ ನೆಲೆಸಿ ನಮ್ಮೆಲ್ಲರ ಕ್ಷೇಮವನ್ನು ನೋಡುತ್ತಾನೆ. ಕಾರಣ ವಿಶ್ವ ಎನಿಸಿದ್ದಾನೆ. ಇದು ವಿಷ್ಣುಸಹಸ್ರನಾಮಗಳಲ್ಲಿ “ಓಂ ವಿಶ್ವಂ”ಈ ನಾಮದಿಂದ ಪ್ರಾರಂಭವಾಗಿದೆ. ಒಂದು ಮತ್ತು ಎರಡನೇ ಶ್ಲೋಕಗಳಲ್ಲಿ ಪರಮಾತ್ಮನ ಗುಣ ಮಹಿಮೆ ದ್ವಂದ್ವಮಯರೂಪ, ಜ್ಞಾನಾನಂದರೂಪಗಳನ್ನು ತಿಳಿಸಿದಂತೆ ಸರ್ವ ಎನಿಸಿದ್ದಾನೆ. ಅನಂತರೂಪ, ಅನಂತ ಗುಣಗಳನ್ನು ಹೊಂದಿರುವ ಪರಮಾತ್ಮನನ್ನು ಏಕ ವಚನದಲ್ಲಿ ಕರೆಯುತ್ತೇವೆ. ಯಾಕೆಂದರೆ ಎಲ್ಲರಿಗೂ ಪರಮ ಆತ್ಮಸಖ ಪರಮಾತ್ಮನು.

ಮನುಷ್ಯನು ಯಾವುದೋ ರೀತಿಯಲ್ಲಿ ಕರ್ಮ ಮಾಡುವುದಂತೂ ನಿಜ.ಆ ಕರ್ಮಗಳೆ ತಾರಕವೆಂಬ ಭ್ರಮೆಯಲ್ಲಿ ಬೀಳದೆ ತೈಲಧಾರೆಯಂತೆ ಭಕ್ತಿಯನ್ನು ಕೊಡು ಎಂದು ಶಿವನಲ್ಲಿ ಪ್ರಾರ್ಥಿಸಬೇಕೆಂದು ತಿಳಿಸುತ್ತಾರೆ. ಕರ್ಮಗಳು ಸಾಧನೆಗೆ ಮೆಟ್ಟಲಾಗಬೇಕೆಂದು ಹರಿಕಥಾಮೃತಸಾರದಲ್ಲಿ ತಿಳಿಸಲಾಗಿದೆ. ಭೂಮಿಯು ಕರ್ಮಭೂಮಿ ಎನಿಸಿದೆ. ಕರ್ಮವು ಜ್ಞಾನ ಸಂಪತ್ತಿಗೆ ನಾಂದಿಯಾಗಬೇಕು. ಕರ್ಮಗಳಲ್ಲಿ ಭಾವ, ದ್ರವ್ಯ ಕ್ರಿಯೆ ಈ ಮೂರು ಪ್ರಕಾರ. ದತ್ತು ಸ್ವಾತಂತ್ರ ಉಪಯೋಗಿಸಿ ಮಾಡುವ ಕರ್ಮಗಳಲ್ಲಿ ಪರಮಾತ್ಮನು ಪ್ರಕಟನಾಗುವನು.ಈ ಮೂರರಲ್ಲಿ ಭಾವದಲ್ಲಿಯೇ ಪರಮಾತ್ಮನ ಸನ್ನಿಧಾನ ಹೆಚ್ಚು. ಭಾವದಿಂದ ಮಾಡುವ ಕ್ರಿಯೆಯಲ್ಲಿ, ಸೇವಿಸುವ ಆಹಾರ ಮತ್ತು ಮಾತಿನ ಶಬ್ದಗಳಲ್ಲಿ ಪರಮಾತ್ಮನು ವ್ಯಕ್ತನಾಗುತ್ತಾನೆ.

ಸರ್ವರಲ್ಲಿ ಪರಮಾತ್ಮನು ಇದ್ದರೂ ಅವನು ದೋಷವರ್ಜಿತನು. ನಿತ್ಯ ತೃಪ್ತನು ಸರ್ವವೂ ಅವನ ಅಧೀನ ಎಂದು ಅನುಸಂಧಾನ ಮಾಡಿ ಸಾತ್ವಿಕ ಭಾವನೆಯಲ್ಲಿ ಅವನ ಗುಣ ಮಹಿಮೆಗಳನ್ನು ಕೊಂಡಾಡುತ್ತ ಪರಮಾತ್ಮನ ಸಾರೋಪ್ಯದಿಂದ ಮೋಕ್ಷವನ್ನು ಪಡೆಯಬೇಕು. ವಿಸ್ಮಯ ಪ್ರಕೃತಿಯಿಂದ ನಾವು ತಿಳಿದುಕೊಳ್ಳಲು ಕಣಜ ಹುಳದ ದೃಷ್ಟಾಂತ ಸುಂದರವಾಗಿದೆ. ಆ ಹುಳವು ಮನೆಗಳ ಗೋಡೆಗಳ ಮೇಲೆ ಮಣ್ಣಿನಿಂದ ಚಿಕ್ಕ ಗೂಡು ಕಟ್ಟಿ ಅದರಲ್ಲಿ ತನ್ನ ಸಂತತಿ ಅಲ್ಲದಿದ್ದರೂ ಚಿಕ್ಕ ಕ್ರಿಮಿಯಾದ ಅವರೆ ಹುಳವನ್ನು ತಂದು ಗೂಡಿನಲ್ಲಿಟ್ಟು ನಿತ್ಯವೂ ಅದಕ್ಕೆ ಆಹಾರ ತಂದುಕೊಟ್ಟು ಜೋಪಾನವಾಗಿ ಸಲಹುತ್ತದೆ. ಅದರಂತೆ ಆ ಅವರೆಹುಳ ನಿರಂತರ ಕಣಜದಹುಳದ ಧ್ಯಾನದಿಂದ ಅದರಂತೆ ರೂಪಹೊಂದಿ ಕಣಜದಹುಳದಂತೆ ಜೀವನ ಸಾಗಿಸುತ್ತದೆ. ಮನುಷ್ಯರೂ ಪರಮಾತ್ಮನ ಪ್ರೀತಿಯಪಾತ್ರರಾಗಿ ಮೋಕ್ಷ ಪಡೆಯುವುದೆ ಜೀವನದ ಸಾರ. ಭಾವನೆಯಲ್ಲಿ ಒಳ್ಳೆಯ ವಿಚಾರ ಆಹಾರ ಇದ್ದಲ್ಲಿ ನಮ್ಮಿಂದ ವಿಹಿತ ಕಾರ್ಯಗಳು ಜರಗುವವು. ಶಾಸ್ತ್ರಬದ್ಧವಾದ ತತ್ವಗಳಿಂದ ಸಜ್ಜನರು ಪ್ರಕಟವಾಗುತ್ತಾರೆ. ಅವರಲ್ಲಿ ಮಾನವೀಯತೆ ಇರುತ್ತದೆ. ಈ ಕ್ರಿಯೆಗಳು ಹೆಚ್ಚು ಜರುಗಿದಲ್ಲಿ ಪರಿಸರ ಮಳೆ ಬೆಳೆಯಿಂದ ಸಮೃದ್ಧಿಯಾಗುವದು.ಕರ್ಮಭೂಮಿ ದೇವತೆಗಳ ಸಂತೃಪ್ತಿ ಭೂಮಿ ಎನಿಸುವದು.

ಭಾವ, ದ್ರವ್ಯ, ಕ್ರಿಯೆ ಈ ಮೂರು ಭ್ರಮಾತ್ರಯಗಳೆಂದು ಭಾವಿಸಿದಲ್ಲಿ ಅಜ್ಞಾನ ಆವರಿಸಿ “ನಾನು”ಎಂಬ ಅಹಂಕಾರ ಹುಟ್ಟಿ ನಾನೆ ಕರ್ತೃ ಎಂಬ ಭ್ರಮೆಯಲ್ಲಿ ಆತ್ಮಸಾಕ್ಷಿ ಕಳೆದು ಅಹಿತ ಕರ್ಮಗಳಿಂದ ದಾನವರಾಗಿ ಪ್ರಕಟರಾಗುತ್ತಾರೆ. ಇಲ್ಲಿ ಸಹಜವಾಗಿ ಕಲಿ ಪ್ರವೇಶದಿಂದ ದುಷ್ಕೃತ್ಯಗಳು ನಡೆಯುವವು. ಇವರಲ್ಲಿ ಪರಮಾತ್ಮ ನೆಲೆಸಿದ್ದರೂ ಅವರ ಯೋಗ್ಯತೆಯಂತೆ ಕಾರ್ಯ ಮಾಡಿಸಿ ಮೋಹಗೊಳಿಸುತ್ತಾನೆ. ಹೀಗಿದ್ದಲ್ಲಿ ಪರಿಸರ ಹಾಳಾಗುತ್ತದೆ. ಪ್ರಕೃತಿಯಲ್ಲಿ ಸತ್ವ, ರಜಸ್ಸು ತಮ ಈ ಮೂರು ಗುಣಗಳಿವೆ. ಭಾವನೆಗಳಲ್ಲಿ ಅಳವಡಿಸಿಕೊಳ್ಳುವುದನ್ನು ಶ್ರೀ ಹರಿಯು ನಮಗೆ ಬಿಟ್ಟಿದ್ದಾನೆ. ಭೂಮಿಯಲ್ಲಿರುವ ರಾಜನು ತನ್ನ ಸ್ವಾಮಿತ್ವದಲ್ಲಿರುವ ಧರ್ಮದ ಅಧಿಕಾರವನ್ನು ತನ್ನ ಆಧೀನರಾದ ಮಂತ್ರಿಗಳಿಗೆ ನೀಡಿ ಅವರಿಂದ ರಾಜ ಕಾರ್ಯಗಳನ್ನು ಮಾಡಿಸುವಂತೆ ಪರಮಾತ್ಮನು ತನ್ನಲ್ಲಿರುವ ಗುಣಗಳನ್ನು ನೀಡಿ ನಮಗೆ ಜ್ಞಾನ ಕಾರ್ಯಗಳನ್ನು ಮಾಡಲು ಕರ್ಮಭೂಮಿಯಲ್ಲಿ ಕಳಿಸಿರುವನು. ಭೂಮಿಯ ಮೇಲಿರುವ ರಾಜರಿಗೆ, ಅಧಿಕಾರಿಗಳಿಗೆ ಪ್ರಜೆಗಳಿಗೆ ಭವಸಾಗರದ ಭಯವಿದೆ. ಶ್ರೀಹರಿಗೆ ಯಾವ ಭಯವಿಲ್ಲ.

ಗಾಳಿಯಿಲ್ಲದ ಪ್ರದೇಶದಲ್ಲಿ ದೀಪವು ಶಾಂತವಾಗಿ ಹೇಗೆ ಬೆಳಗುತ್ತದೆಯೋ ಹಾಗೆ ಪರಮಾತ್ಮನು ಗಾಳಿ, ಮಳೆ ಏನಿದ್ದರೂ ಒಂದೇ ರೀತಿಯಲ್ಲಿ ಶಾಂತವಾಗಿ ಪ್ರಕಾಶಿಸುತ್ತಾನೆ. ಯಾರಿಗೆ ಯಾವ ಸಮಯದಲ್ಲಿ ಹೇಗೆ ವ್ಯಕ್ತವಾಗಬೇಕೊ ಆ ರೀತಿ ಅನಂತರೂಪಗಳಿಂದ ಅನಂತ ಗುಣಗಳಿಂದ ವ್ಯಕ್ತನಾಗುತ್ತಾನೆ. ನಮ್ಮ ಭಾವನೆಯಲ್ಲಿರುವ ವಿಚಾರಗಳಿಂದ ಶಬ್ದ ಕ್ರಿಯೆಗಳಲ್ಲಿ ವ್ಯಕ್ತನಾಗುತ್ತಾನೆ. ಹೀಗೆ ಎಲ್ಲವನ್ನು ತನ್ನಲ್ಲಿ ಧರಿಸಿರುವದರಿಂದ ಜಗತ್ತು, ಜಗತ್ಪ್ರಭು ಎನಿಸಿದ್ದಾನೆ. ವಿಷ್ಣು ಸಹಸ್ರನಾಮಗಳಲ್ಲಿ ಈ ನಾಮವು ಬಂದಿದೆ. ಈ ಸೂಕ್ಷ್ಮವಾದ ಭಕ್ತಿ ರಹಸ್ಯವನ್ನು ವಿಶಾಲವಾದ ಬ್ರಹ್ಮಾಂಡದಲ್ಲಿ ತಿಳಿಯುವ ಪ್ರಯತ್ನದ ಜ್ಞಾನವನ್ನು ಮಾತರಿಶ್ವಾಂತರ್ಗತ ಶ್ರೀ ಹರಿಯು ಎಲ್ಲರಿಗೂ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಏಸು ಜನ್ಮದ ಪುಣ್ಯದ ಫಲವೋ ಶ್ರೀ ಹರಿ
ತಂದೆ ತಾಯಿಯ ಸುಕೃತ ಫಲವೋ ನಾನರಿಯೆ

ನಿನ್ನ ನಾಮವ ಜಪಿಸುವ ಭಾಗ್ಯ ನನಗಿರಲಿ
ನಿನ್ನ ನಾಮವು ನಾಲಿಗೆಯ ಮೇಲೆ ಹರಿಯಲಿ

ಅಸನ ವಸನಕ್ಕಾಗಿ ಬನ್ನಬಟ್ಟೆ ನಿನ್ನನರಿಯದೆ
ವರ ಮಾತಾ ಪಿತರ ಮಮತೆ ಅಸಲೆಂದೆ

ಹರಿದಾಸರ ನುಡಿಯಿಂದ ನಿನ್ನ ಮಹಿಮೆ ಕೇಳಿದೆ
ನನ್ನ ಅದರಲಿ ಮುಳುಗಿಸೋ ನೀ ನಿಜ ತಂದೆ

ನೆನಿಸಿದವರಘನಾಶನ ನೀ ಪರಮ ಆತ್ಮ
ಮನ್ನಿಸೆನ್ನನು ಸಜ್ಜನರ ಸನ್ನುತಾತ್ಮ

ಭಾವ ದ್ರವ್ಯ ಕ್ರಿಯೆದ್ವೈತಗಳಲಿ
ಭಾವವ ತಿಳಿಯದೆ ನಡೆದೆ ಜೀವನದಲಿ

ಮಧ್ವ ಸಿದ್ಧಾಂತ ಪ್ರೇರಕ ವಾಯುವಿಧಿಪಿತ
ಅಧಮನಾದನಯೆನ್ನನು ಉದ್ಧರಿಸು ಸರ್ವಜಿತ

ಮಾತರಿಶ್ವಾಂತರ್ಗತ ಶ್ರೀ ಹರಿ ಭಾವದಲಿ
ನೀನಿಂತು ನಡೆಸೆನ್ನನು ಸನ್ಮಾರ್ಗದಲಿ

ಶ್ರೀ ಕೃಷ್ಣಾರ್ಪಣ ಮಸ್ತು.


ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು: 


  • ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

One thought on “ಹರಿ ಕಥಾಮೃತಸಾರ (ಭಾಗ – ೩)”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading