ಅನಂತ ಜೀವರಿಗೆ ಏಕಕಾಲಕ್ಕೆ ತಾಯಿಯಂತೆ ಸಲಹುವ ಪರಮಾತ್ಮನ ರೂಪ ಅಗಣಿತ ಅಗಣಿತಾತ್ಮ. “ಏಕೋ ವಿಷ್ಣುರ್ಮಹದ್ಭೂತಂ” ಎಂಬ ವಿಷ್ಣು ಸಹಸ್ರನಾಮದ ಫಲಶೃತಿಯೇ ಇದಕ್ಕೆ ಆಧಾರ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಾಹಂ ಕರ್ತಾ ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ
“ಹರಿ”ಈ ಶಬ್ದದ ಗುಣ ಮಹಿಮೆಗೆ ಆದ್ಯಂತವಿಲ್ಲದ ಅಪರಿಮಿತವಾಗಿರುವದು. ಈ ನಾಮದ ಫಲವು ಬ್ರಹ್ಮಾಂಡದಲ್ಲಿರುವ ಎಲ್ಲ ಜೀವಿಗಳಿಗೂ ಒಂದೇ ಸಮಯದಲ್ಲಿ ಅವರವರ ಯೋಗ್ಯತೆಯಂತೆ ಕಾರ್ಯ ಮಾಡಿಸಿ ಫಲವನ್ನು ಅನುಗ್ರಹಿಸುವ ಶಕ್ತಿ ಇದೆ. ಈ ರಹಸ್ಯ ಲಕ್ಷ್ಮೀ ದೇವಿಗೆ ಪೂರ್ತಿ ತಿಳಿದಿಲ್ಲ ಅಂದ ಮೇಲೆ ಜನಸಾಮಾನ್ಯರ ಪಾಡೇನು? ಈ ಅಕ್ಷರಗಳಿಂದ ಪರಮೋಪಕಾರ ಮಾಡಿ ವಿಶ್ವಕ್ಕೆ ಶಬ್ದ ಭಂಡಾರ ಕೊಟ್ಟವರು ಪೂರ್ವಭಾಷಿ “ಶ್ರೀ ಹರಿ”. ಪ್ರಪಂಚದೊಳಗಿನ ಯಾವುದೇ ವ್ಯಕ್ತಿ ಮಾತನಾಡುವುದಿದ್ದರೆ ಮೊದಲು ಆದರೆ ಇಂದು ಮೊಬೈಲ ಹಾಗೂ ಅನೇಕ ರೀತಿಯ ಸಾಧನಗಳಿಂದ ಮಾತು ಬಹಳ ಸುಲಭವಾಗಿದೆ. ಆದರೆ ಇದರ ಮೂಲ ಪೂರ್ವ ಭಾಷಿ ಯಾರು ಎನ್ನುವುದನ್ನು ಮರೆಯಬಾರದು.
ಪೂರ್ವದಲ್ಲಿ ಮಂತ್ರಯುಗವಿತ್ತು. ಸೂಕ್ಷ್ಮಮತಿಯಿಂದ ಗಾಳಿಯ ತರಂಗಗಳಿಂದ ತಿಳೀತಾಯಿತ್ತಂತೆ. ಆ ರೀತಿ ಸಾಂಶರು ಭೂಮಿಯಲ್ಲಿ ಜನಿಸಿ ಲೋಕಕ್ಕೆ ಉಪಕಾರ ಮಾಡಿದ್ದಾರೆ. ಶ್ರೀ ರಾಘವೇಂದ್ರರು, ವ್ಯಾಸರಾಯರು ಕನಕದಾಸರು ಹೀಗೆ ಅನೇಕ ಜ್ಞಾನಿಗಳು ಮಂತ್ರಯುಗ (ಅಕ್ಷರ)ದ ಆನಂದವನ್ನು ಅನುಭವಿಸಿ ಈಗಲೂ ಕೆಲವರಿಗೆ ತೋರಿಸುತ್ತಿದ್ದಾರೆ. ಆಮೇಲೆ ಪೋಸ್ಟ್, ಮುಂತಾದ ಯಂತ್ರಯುಗ ಪ್ರಾರಂಭವಾಯಿತು. ಈಗಂತೂ ಯಂತ್ರಯುಗ ಶ್ರಮ ಕಡಿಮೆ. ಉಪದೇಶ ಪಾಠ ಗುರು ಶಿಷ್ಯ ಇವೆಲ್ಲ ಪರಮಾತ್ಮನಿಂದ ಬಂದಿದೆ. ಆದಷ್ಟು ಮರೆಯದೆ ಪ್ರಾರ್ಥಿಸಬೇಕು. ಲೋಕದ ಜನರಿಗಾಗಿಯೆ ಭಾಷ್ಯಕಾರರನ್ನು ಜ್ಞಾನಿಗಳನ್ನು ನೇಮಿಸಿದವನೇ ಪರಮ ಆತ್ಮನಾದ ಶ್ರೀ ಹರಿ.
ಬ್ರಹ್ಮಾಂಡವು ಪ್ರಳಯದಲ್ಲಿದ್ದಾಗ ಪರಮಾತ್ಮನು ಎಲ್ಲ ಕಡೆಗೂ ನೀರು ಅಂಧಕಾರ ಅದರಲ್ಲಿ ಬ್ರಹ್ಮನನ್ನು ಸೃಷ್ಟಿಸಿದ. ಆಗ ಬ್ರಹ್ಮನಿಗೆ ಶ್ರೀ ಹರಿಯು ಹದಿನಾರನೆಯ ಅಕ್ಷರ “ತ” ವನ್ನು ಮತ್ತು ಇಪ್ಪತ್ತೊಂದನೆಯ ಅಕ್ಷರ “ಪ” ವನ್ನು ಉಪದೇಶ ಮಾಡಿದನು. ನೀರನ್ನು ಹಿಡಿದು ಬ್ರಹ್ಮನು ತಪ ಎಂದು ಜಪಿಸುವಾಗ ವಾಯು ದೇವರು ಬ್ರಹ್ಮನ ಅಂತರ್ಯಾಮಿಯಾಗಿ ಬಂದರು.
ಪರಮಾತ್ಮನ ಕ್ರೀಡೆಯ ವ್ಯಾಪಾರವನ್ನು ವಾಯು ದೇವರು ಬಲ್ಲರು. ಆದರೆ ಗುಣ ಮಹಿಮೆಯನ್ನು ಪೂರ್ಣ ತಿಳಿದಿಲ್ಲ. ಪರಮಾತ್ಮನ ಪೂರ್ಣ ಗುಣ ರಹಸ್ಯ ತಿಳಿದವರು ಯಾರೂ ಇಲ್ಲದ ಕಾರಣ. ಅನಂತ ಕೋಟಿ ಬ್ರಹ್ಮಾಂಡ ನಾಯಕ ಶ್ರೀ ಹರಿಯು ಒಂದನೇ ಕಕ್ಷೆ. ಪರಮಾತ್ಮನ ಹೆಚ್ಚು ತಿಳಿದವಳು ನಿತ್ಯ ಮುಕ್ತಳು ಮತ್ತು ಕೇಶವನ ನಿಯತ ಪತ್ನಿ ಎನಿಸಿಕೊಂಡ ಮಹಾಲಕ್ಷ್ಮಿ ಎರಡನೇ ಕಕ್ಷೆ. ಮೂರನೇ ಕಕ್ಷೆಯಲ್ಲಿ ಬ್ರಹ್ಮ ವಾಯು ದೇವರು ಬರುವರು. ಸರಸ್ವತಿ ಭಾರತೀಯರು ನಾಲ್ಕನೇಯ ಕಕ್ಷೆಗೆ ಬರುವುದು. ಐದನೆಯ ಕಕ್ಷೆಯಲ್ಲಿ ಗರುಡ, ಶೇಷ, ರುದ್ರರು ಬರುವರು. ಆರನೇಯ ಕಕ್ಷೆಯಲ್ಲಿ ಶ್ರೀ ಕೃಷ್ಣನ ಷಣ್ಮಹಿಷಿಯರು ಬರುವರು. ಏಳನೇಯ ಕಕ್ಷೆಯಲ್ಲಿ ಸೌಪರ್ಣಿ, ವಾರುಣಿ ಪಾರ್ವತಿಯರು ಬರುವರು.ಇಂದ್ರ ಕಾಮರು ಎಂಟನೇ ಕಕ್ಷೆಯಲ್ಲಿ ಬರುವರು. ಒಂಬತ್ತನೇಯ ಕಕ್ಷೆಯಲ್ಲಿ ಅಹಂಕಾರಿಕ ಪ್ರಾಣದೇವರು ಬರುವರು. ಹತ್ತನೇ ಕಕ್ಷೆಯಲ್ಲಿ ರತಿ, ಸ್ವಾಯಂಭುವಮನು ದಕ್ಷ ಪ್ರಜಾಪತಿ, ಬ್ರಹಸ್ಪತಿ, ಶಚಿ ಅನಿರುದ್ಧ, ಬರುವರು.

ಇಂದ್ರನ ಪತ್ನಿ ಶಚಿ. ಕೃಷ್ಣನಮೊಮ್ಮಗ ಅನಿರುದ್ಧ. ಹನ್ನೊಂದನೆಯ ಕಕ್ಷೆಯಲ್ಲಿ ಪ್ರವಹವಾಯು, ಹನ್ನೆರಡನೇಯ ಕಕ್ಷೆಯಲ್ಲಿ ಶತರೂಪಾದೇವಿ (ಸ್ವಾಯಂಭುವಿನ ಪತ್ನಿ), ಯಮ, ಚಂದ್ರ, ಸೂರ್ಯ ಬರುವರು. ಹದಿಮೂರನೇ ಕಕ್ಷೆಯಲ್ಲಿ ವರುಣ, ಹದಿನಾಲ್ಕನೇ ಕಕ್ಷೆಯಲ್ಲಿ ನಾರದರು. ಹದನೈದರಲ್ಲಿ ಭೃಗುಮುನಿ, ಅಗ್ನಿ, ಪ್ರಸೂತಿ, ಕೇಶವನಾದ ವಿಷ್ಣುವೇ ಪರದೈವವೆಂದು ಸಾರಿದವರು ಭೃಗುಮುನಿಗಳು. ಇವರು ರುದ್ರಾಂಶರು. ಕೇಶವ ನಾಮದಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರ ಮೂರು ದೇವರ ಸ್ತೋತ್ರ ಬರುವುದು. ದೇವತೆಗಳಿಗೆ ಮುಖ ಎನಿಸಿದ ಅಗ್ನಿ ಶ್ರೀ ಹರಿಯ ಆದೇಶದಂತೆ ಮೇಲ್ಮುಖನಾಗಿ ಎಲ್ಲ ರಸಗಳನ್ನು ಹೊಂದಿರುವ ಹವಿಸ್ಸುಗಳನ್ನು ಆ ದೇವತೆಗಳಿಗೆ ಮುಟ್ಟಿಸುವನು. ಎಂಟು ವಸುಗಳ ಗುಂಪಿಗೆ ಒಡೆಯನೆನಿಸಿದ ಯಜ್ಞ ಪುರುಷ ಅಗ್ನಿ ದೇವರು.
ಅಸದೃಶ್ಯವಾದ ಬಲ ರೂಪ ಹೊಂದಿರುವ ಅಗ್ನಿ ದೇವರು ನಮಗೆ ಜ್ಞಾನ, ಯಶಸ್ಸು ಕೊಡುವರು ಎಂದು ಸ್ಮರಿಸಬೇಕು. ಪ್ರಸೂತಿ ದಕ್ಷ ಪ್ರಜಾತಿಯ ಪತ್ನಿ. ಹದಿನಾರನೆ ಕಕ್ಷೆಯಲ್ಲಿ ವಶಿಷ್ಠಾದಿ ಸಪ್ತರ್ಷಿಗಳು, ವೈವಸ್ವತಮನು ಹಾಗೂ ವಿಶ್ವಾಮಿತ್ರ ಋಷಿಗಳು.ಇವರೆಲ್ಲರೂ ಮಹಾ ತಪೋನಿಧಿಗಳಾದ ಋಷಿ ಶ್ರೇಷ್ಠರು ಶ್ರೀ ಹರಿಯನ್ನು ಸಮಾಧಿ ಸ್ಥಿತಿಯಲ್ಲಿ ಒಲಿಸಿಕೊಂಡು ಇವತ್ತಿಗೂ ಅಜರಾಮರಾಗಿರುವರು. ನಿತ್ಯ ಮಂಗಳಾಷ್ಟಕದಲ್ಲಿ ಇವರನ್ನು ಪ್ರಾರ್ಥಿಸುವರು. ವೈವಸ್ವತಮನುವು ವಿವಸ್ವಾನ ನಾಮಕ ಸೂರ್ಯನ ಪುತ್ರ. ಅಲ್ಲದೆ ಮನ್ವಂತರದ ಒಡೆಯ. ವಿಶ್ವಾಮಿತ್ರರು ಚಂದ್ರವಂಶದ ಇಂದ್ರಾವತಾರದ ಗಾಧಿರಾಜನ ಪುತ್ರ. ಇವರು ಮೊದಲು ರಾಜರ್ಷಿ ಎನಿಸಿ ನಂತರ ಬ್ರಹ್ಮರ್ಷಿ ಎನಿಸಿದವರು. ಅಲ್ಲದೆ ಗಾಯತ್ರಿ ಮಂತ್ರದ ದ್ರಷ್ಟಾರರೆನಿಸಿದ ಮಹನೀಯರು. ಹೀಗೆ ಒಟ್ಟು ಮೂವತ್ಮೂರು ಕಕ್ಷೆಗಳಿವೆ.
ಹೀಗೆ ಪರಮಾತ್ಮನ ಪರಿವಾರ ಮತ್ತು ಅವನ ಅದ್ಭುತ ಕರುಣೆ ಎಲ್ಲರಿಗೂ ಪರಮ ಆತ್ಮಸಖನಾಗಿ ಮಾಡುವ ಕಾರ್ಯಗಳು ಅಪಾರ. ವೈಷಯಿಕ ಸುಖ ನೀಡುವುದರಿಂದ ಮೋದ ಎಂದು, ಪಾರತ್ರಿಕ ಸುಖ ನೀಡುವುದರಿಂದ ಪ್ರಮೋದವೆಂದು ಕರೆಸಿಕೊಳ್ಳುವ ಶ್ರೀ ಹರಿಯು ದೇಹವೆಂಬ ವೃಕ್ಷದಲ್ಲಿ ಜೀವನೊಡನೆ ಪಕ್ಷಿಯಾಗಿ, ಸಾಗರದಂತೆ ಪೂರ್ಣನಾಗಿ, ಅಗ್ನಿಯಂತೆ ಪಾಪ ದಾಹಕನಾಗಿರುವನು. ಹೀಗೆ ಅನಂತ ಜೀವರಿಗೆ ಏಕಕಾಲಕ್ಕೆ ತಾಯಿಯಂತೆ ಸಲಹುವ ಪರಮಾತ್ಮನ ರೂಪ ಅಗಣಿತ ಅಗಣಿತಾತ್ಮ.(“ಏಕೋವಿಷ್ಣುರ್ಮಹದ್ಭೂತಂ”)ಎಂಬ ವಿಷ್ಣುಸಹಸ್ರನಾಮದ ಫಲಶೃತಿಯೇ ಇದಕ್ಕೆ ಆಧಾರ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
ಶುಭ ಮಸ್ತು
ಅರಿತು ತಿಳಿ ಅಚ್ಯುತನ ಮಹಿಮೆಯ
ಸಿರಿ ಕೇಶವ ಬಿಂಬ ಪರಮಮಯ
ಚೇತನ ಪ್ರಕೃತಿ ಜಗನ್ಮಾತೆ ಲಕ್ಷ್ಮೀ
ಧನ್ಯರಾದ ಬ್ರಹ್ಮ ವಾಯು ದೇವರೇ ಸಾಕ್ಷಿ
ಸರಸ್ವತಿ ಭಾರತೀ ನೀಡಲಿ ಮತಿ
ಗರುಡ ಶೇಷ ರುದ್ರರು ನೀಡಲಿ ಮುಕುತಿ
ನಗಧರನ ಷಣ್ಮಹಿಷಿಯರು ನೀಡಲಿ ಯುಕುತಿ
ಸೌಪರ್ಣಿ ವಾರುಣಿ ಪಾರ್ವತಿ ನೀಡಲಿ ಮತಿ
ಪರಮಾತ್ಮನ ಪರಿವಾರ ಸಹಿತ ಸಿಗಲಿ
ಮಾತರಿಶ್ವಾಂತರ್ಗತ ಶ್ರೀ ಹರಿ ಅನುಗ್ರಹಿಸಲಿ
ಶ್ರೀ ಕೃಷ್ಣಾರ್ಪಣ ಮಸ್ತು.
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
