ಬಡ ಕುಟುಂಬದಲ್ಲಿ ಹುಟ್ಟಿದ ನನಗೆ ಕನಸುಗಳಿಗಿಂತ ದುಡಿಯುವ ದಾರಿಯೇ ಮುಖ್ಯವಾಗಿತ್ತು.ಬಾಲ್ಯವಿವಾಹ ನನ್ನ ಬದುಕನ್ನು ಬೇಗನೆ ಬದಲಿಸಿರಬಹುದು ಎನ್ನುವ ವಿಜಯ ಕುಮಾರಿ. ತನೋಜ್. ಈ ಅವರ ಈ ಸ್ಪೂರ್ತಿಯ ಕತೆಯನ್ನು ಪೂರ್ತಿಯಾಗಿ ಓದಿ…
“ಲೇ… ವಿಜೀ… ನೀರು ತಂದು ನನ್ನ ಜೊತೆ ಕೂಲಿ ಕೆಲಸಕ್ಕೆ ಬಾ. ಯಾವ ಶಾಲೆಗೂ ಹೋಗಬೇಡ. ಮೇಷ್ಟ್ರು ಏನಾದರೂ ಊಟ, ಬಟ್ಟೆ ಕೊಟ್ಟು ನಮ್ಮ ಸಂಸಾರ ಸಾಕ್ತಾರಾ? ಹೇಳು…” ನನ್ನ ಬಾಲ್ಯದ ಪ್ರತಿಯೊಂದು ಬೆಳಗ್ಗೆಯೂ ಈ ಮಾತುಗಳಿಂದಲೇ ಆರಂಭವಾಗುತ್ತಿತ್ತು. ಆಗ ನನಗೆ ಶಾಲೆಗೆ ಹೋಗಬೇಕು ಎಂಬ ಆಸೆ ಇತ್ತು. ಪುಸ್ತಕ ಹಿಡಿದು, ಅಕ್ಷರ ಕಲಿತು, ದೊಡ್ಡವಳಾಗಬೇಕು ಎಂಬ ಕನಸಿತ್ತು. ಆದರೆ ಮನೆಯ ಬಡತನಕ್ಕೆ ನನ್ನ ಕನಸುಗಳಿಗಿಂತ ಹೊಟ್ಟೆಯ ಹಸಿವೇ ದೊಡ್ಡದಾಗಿತ್ತು.
ಮನೆಯ ಹಿರಿಯ ಮಗಳು ನಾನು. ನನ್ನ ಹಿಂದೆ ನಾಲ್ಕು ಮಂದಿ ತಂಗಿಯರು. ಸಂಸಾರವನ್ನು ನೋಡಿಕೊಳ್ಳಬೇಕಿದ್ದ ತಂದೆ ಸರಾಯಿ ವ್ಯಾಮೋಹಕ್ಕೆ ಬಿದ್ದು, ಕೊನೆಗೆ ಅದೇ ನಶೆಯಲ್ಲಿ ಪ್ರಾಣ ಕಳೆದುಕೊಂಡರು. ಅವರ ಸಾವಿನ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ತಾಯಿ ಮತ್ತು ನನ್ನ ಹೆಗಲ ಮೇಲೆ ಬಿತ್ತು. ನಾಲ್ಕು ತಂಗಿಯರು, ಮನೆಯ ಖರ್ಚು, ಅಡುಗೆ, ಬದುಕಿನ ಹೋರಾಟ ಎಲ್ಲವೂ ನಮ್ಮ ಮುಂದೆ ಬೃಹತ್ ಪ್ರಶ್ನೆಯಾಗಿ ನಿಂತಿದ್ದವು. ಹೀಗಾಗಿ ನನ್ನ ಶಾಲೆಯ ಓದು ಏಳನೇ ತರಗತಿಯಲ್ಲೇ ನಿಂತುಹೋಯಿತು.
ನಮ್ಮದು ಅಷ್ಟು ಬಡ ಕುಟುಂಬ. ಒಂದು ಹೊತ್ತಿನ ಊಟಕ್ಕೂ ಯೋಚಿಸಬೇಕಾದ ಪರಿಸ್ಥಿತಿ. ಏಳು ಜನರ ಒಂದು ಹೊತ್ತಿನ ಊಟಕ್ಕೆ ಒಂದು ಸೇರು ಅಕ್ಕಿ ಬೇಕಾಗುತ್ತಿತ್ತು. ನಾನು ಕೂಲಿ ಕೆಲಸಕ್ಕೆ ಹೋದರೆ ಆ ದಿನದ ಊಟಕ್ಕೆ ಬೇಕಾದ ಹಣ ಸಿಗುತ್ತಿತ್ತು.
“ಕೊಡೋರು ಸುಮ್ಮನೆ ಕೊಡ್ತಾರಾ? ಕತ್ತೆಯಂತೆ ದುಡಿದರೆ ಮಾತ್ರ ಹಣ ಕೊಡ್ತಾರೆ.” ಅಮ್ಮನ ಮಾತು ಕಿವಿಯಲ್ಲಿ ಸದಾ ಗುನುಗುತ್ತಿತ್ತು. ಹೀಗಾಗಿ ಬಾಲ್ಯದಲ್ಲೇ ಪುಸ್ತಕದ ಬದಲು ಗುದ್ದಲಿ, ನೀರಿನ ಕೊಡ, ಕೂಲಿ ಕೆಲಸ ನನ್ನ ಬದುಕಿನ ಸಂಗಾತಿಗಳಾದವು.
ಹದಿನೈದನೇ ವಯಸ್ಸಿನಲ್ಲೇ ಹೊಸ ಬದುಕು, ಹೀಗೆ ದಿನಗಳು ಸಾಗುತ್ತಿದ್ದವು. ನನಗೆ ಹದಿನೈದು ವರ್ಷ ತುಂಬಿತು. “ಮಗಳನ್ನು ಮದುವೆ ಮಾಡಿಕೊಟ್ಟು ಕೈ ತೊಳೆದುಕೊಳ್ಳುತ್ತೇನೆ” ಎಂದು ಅಮ್ಮ ಯೋಚಿಸಿದರು. ಕಾರ್ತಿಕ ಮಾಸದಲ್ಲಿ ಹದಿನೈದು ವರ್ಷದ ನನ್ನನ್ನು ನನ್ನ ಸೋದರಮಾವನ ಜೊತೆ ಮದುವೆ ಮಾಡಿಕೊಟ್ಟರು. ಮದುವೆಯಾದ ಮೇಲೆ ನನ್ನ ಜೀವನ ಮತ್ತೊಂದು ತಿರುವು ಪಡೆದುಕೊಂಡಿತು.
ಸಂಸಾರದ ಕಷ್ಟ ನನಗೆ ಬಾಲ್ಯದಿಂದಲೇ ಗೊತ್ತಿತ್ತು. ಆದರೆ ‘ಹೆಂಡತಿ’ ಎಂಬ ಪಾತ್ರದ ಅರ್ಥ ಮಾತ್ರ ಆಗ ನನಗೆ ಗೊತ್ತಿರಲಿಲ್ಲ. ನನ್ನ ಗಂಡನ ಜೊತೆ ಅವರ ಹೊಲದಲ್ಲಿ ದುಡಿಯುತ್ತಿದ್ದೆ. ಬೆಳೆ ಬೆಳೆಸಿ, ನಾಲ್ಕು ಕಾಸು ಸಂಪಾದಿಸಿ ಸಂಸಾರ ನಡೆಸುತ್ತಿದ್ದೆವು. ನನ್ನ ಕಷ್ಟವನ್ನು ಅರ್ಥಮಾಡಿಕೊಳ್ಳುವ ಮನಸ್ಸು ಅವರಿಗಿತ್ತು. ಮದುವೆಯಾದ ಹೊಸತರಲ್ಲಿ ನಾನು ಕಣ್ಣೀರು ಹಾಕದ ದಿನವೇ ಇರಲಿಲ್ಲ. ತಾಯಿಯನ್ನು, ತಂಗಿಯರನ್ನು ನೆನೆದು ಅಳುತ್ತಿದ್ದೆ.
ನನ್ನ ಗಂಡನಿಗೂ ತಾಯಿ ಇರಲಿಲ್ಲ. ಬಹುಶಃ ಅದಕ್ಕೇ ನನ್ನ ನೋವು ಅವರಿಗೆ ಇನ್ನಷ್ಟು ಅರ್ಥವಾಗುತ್ತಿತ್ತು. ನಾನು ತಾಯಿ-ತಂಗಿಯರನ್ನು ನೆನೆದು ಅತ್ತಾಗ, ಅವರು ನನ್ನ ಕಣ್ಣೀರನ್ನು ಒರೆಸಿ, ಮುತ್ತಿಟ್ಟು, ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಆ ಪ್ರೀತಿಯೇ ನಿಧಾನವಾಗಿ ನಮ್ಮಿಬ್ಬರ ನಡುವೆ ಅಪಾರವಾದ ಬಾಂಧವ್ಯವನ್ನು ಬೆಳೆಸಿತು. ನಾವು ನಮ್ಮದೇ ಒಂದು ಪುಟ್ಟ ಸಂಸಾರ ಕಟ್ಟಿಕೊಂಡೆವು.
ನನಗೆ ಚಿಕ್ಕಂದಿನಿಂದಲೂ ನಾಟಕದಲ್ಲಿ ಅಭಿನಯಿಸಬೇಕೆಂಬ ಆಸೆ ಇತ್ತು. ಯಾರಾದರೂ ನಾಟಕದ ಬಗ್ಗೆ ಮಾತನಾಡಿದರೆ ನನ್ನ ಕಿವಿ ಆ ಕಡೆ ಹೋಗುತ್ತಿತ್ತು. ಹಾಡು ಕೇಳಿದರೆ ನನ್ನ ಕಾಲು ತಾಳ ಹಾಕುತ್ತಿತ್ತು. ಆಗಾಗ ನನ್ನ ಮಾವನ ಬಳಿ ನನ್ನ ಆಸೆಯನ್ನು ಹೇಳಿಕೊಳ್ಳುತ್ತಿದ್ದೆ. ಮಾವನಿಗೆ ಬೇಸರವಾದಾಗಲೆಲ್ಲ ಅವರ ಮುಂದೆ ಶ್ರೀಕೃಷ್ಣನ ಹಾಡುಗಳನ್ನು ಹಾಡುತ್ತಿದ್ದೆ. ಹಾಡುತ್ತಾ ಕುಣಿಯುತ್ತಿದ್ದೆ. ನನ್ನೊಳಗಿನ ಕಲಾವಿದೆಯನ್ನು ಹೊರಗೆ ತರುತ್ತಿದ್ದೆ.
ಅದು ನನ್ನ ಬದುಕಿನ ತಿರುವಾಗುತ್ತದೆ ಎಂದು ಆಗ ನನಗೆ ಗೊತ್ತಿರಲಿಲ್ಲ. ಒಂದು ದಿನ ನವರಾತ್ರಿಯ ಸಮಯದಲ್ಲಿ ನಮ್ಮೂರಿನಲ್ಲಿ ನಡೆಯುತ್ತಿದ್ದ ‘ಶ್ರೀದೇವಿ ಮಹಾತ್ಮೆ’ ನಾಟಕಕ್ಕೆ ನನ್ನ ಮಾವನೇ ನನ್ನನ್ನು ಸೇರಿಸಿದರು. ಅದು ನನ್ನ ರಂಗಭೂಮಿ ಬದುಕಿನ ಮೊದಲ ಹೆಜ್ಜೆ. ಅಂದು ರಂಗದ ಮೇಲೆ ಕಾಲಿಟ್ಟ ನಾನು, ಇಂದಿಗೂ ಆ ರಂಗವನ್ನು ಬಿಟ್ಟಿಲ್ಲ. ಆ ದಿನ ಆರಂಭವಾದ ನನ್ನ ರಂಗಭೂಮಿ ಕಲಾಸೇವೆ, ಕ್ರಮೇಣ ನಮ್ಮ ಕುಟುಂಬದ ಸಂಪಾದನೆಯ ಮೂಲವಾಗಿಯೂ ಪರಿವರ್ತನೆಯಾಯಿತು. ಅಂದಿನಿಂದ ನಾನು ‘ವಿಜಯ ಕುಮಾರಿ’ ಎಂಬ ಹೆಸರಿನಿಂದ ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡೆ. ಹಳ್ಳಿಗಳಲ್ಲಿ ರೈತರು ವರ್ಷಕ್ಕೊಮ್ಮೆ ಜಾತ್ರೆ, ಹಬ್ಬ, ಹರಿದಿನಗಳ ಸಂದರ್ಭದಲ್ಲಿ ಪೌರಾಣಿಕ ನಾಟಕಗಳನ್ನು ಆಯೋಜಿಸುತ್ತಾರೆ. ಆ ನಾಟಕಗಳಲ್ಲಿ ಬರುವ ಬಹುತೇಕ ಸ್ತ್ರೀ ಪಾತ್ರಗಳನ್ನು ನಾನು ಅಭಿನಯಿಸುತ್ತೇನೆ. ಪೌರಾಣಿಕ ನಾಟಕಗಳು ಭಾರತೀಯ ರಂಗಭೂಮಿಯ ಅವಿಭಾಜ್ಯ ಅಂಗ. ಅದರಲ್ಲಿನ ಸ್ತ್ರೀ ಪಾತ್ರಗಳು ಕೇವಲ ಕಥೆಯ ಪಾತ್ರಗಳಲ್ಲ. ಅವು ಧರ್ಮ, ಕರ್ತವ್ಯ, ತ್ಯಾಗ, ಭಕ್ತಿ, ಸಾಹಸ, ಪ್ರೀತಿ ಮತ್ತು ಕೆಲವೊಮ್ಮೆ ದುಷ್ಟತನದ ಸಂಕೇತಗಳಾಗಿಯೂ ಕಾಣಿಸಿಕೊಳ್ಳುತ್ತವೆ. ನನಗೆ ಅತ್ಯಂತ ಹೆಚ್ಚು ಅಭಿನಯಿಸಿದ ನಾಟಕವೆಂದರೆ ‘ಶ್ರೀದೇವಿ ಮಹಾತ್ಮೆ’ ಅಥವಾ ‘ರಕ್ತಬೀಜಾಸುರನ ವಧೆ’.
ಈ ಒಂದೇ ನಾಟಕದಲ್ಲಿ ನಾನು ಹಲವು ವಿಭಿನ್ನ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತೇನೆ. ಲಕ್ಷ್ಮಿ, ಶಾರದೆ, ಪಾರ್ವತಿ, ನಿಕಾಶಾದೇವಿ, ಪುಷ್ಪಮಾಲಿನಿ ಹಾಗೂ ಆಸ್ಥಾನದ ನರ್ತಕಿ—ಪ್ರತಿಯೊಂದು ಪಾತ್ರವೂ ಒಂದೊಂದು ವಿಭಿನ್ನ ಜಗತ್ತು. ಲಕ್ಷ್ಮಿಯಾಗಿ ಲಕ್ಷ್ಮಿಯ ಪಾತ್ರದಲ್ಲಿ ಶ್ರೀಕೃಷ್ಣನ ಪತ್ನಿಯಾಗಿ ಅಭಿನಯಿಸುತ್ತೇನೆ. ಕೃಷ್ಣನ ಹಾಡಿನ ನಡುವೆ ನನ್ನ ಧ್ವನಿಯನ್ನೂ ಸೇರಿಸುತ್ತೇನೆ. ಹಾರ್ಮೋನಿಯಂ, ತಬಲಗಳ ತಾಳಕ್ಕೆ ಹಾಡುತ್ತಾ, ಕುಣಿಯುತ್ತಾ ಪಾತ್ರಕ್ಕೆ ಜೀವ ತುಂಬುತ್ತೇನೆ.
ಶಾರದೆ ಮತ್ತು ಪಾರ್ವತಿಯಾಗಿ ಜನರು ಭಕ್ತಿಯಿಂದ ಪೂಜಿಸುವ ಶಾರದೆ ಮತ್ತು ಪಾರ್ವತಿಯ ಪಾತ್ರಗಳನ್ನು ನಿರ್ವಹಿಸುವಾಗ ನನ್ನೊಳಗೆ ಒಂದು ರೀತಿಯ ಭಕ್ತಿ ಮೂಡುತ್ತದೆ.
ರಂಗದ ಮೇಲೆ ನಿಂತಿರುವ ನಾನು ಕೇವಲ ವಿಜಯ ಕುಮಾರಿ ಆಗಿರುವುದಿಲ್ಲ. ಆ ಕ್ಷಣದಲ್ಲಿ ನಾನು ಆ ಪಾತ್ರವೇ ಆಗಿಬಿಡುತ್ತೇನೆ.
ನಿಕಾಶಾದೇವಿ ನನ್ನ ಕಠಿಣ ಪಾತ್ರ, ನಿಕಾಶಾದೇವಿ ಪಾತ್ರ ನನ್ನ ಪಾಲಿಗೆ ಅತ್ಯಂತ ಕಠಿಣವಾದ ಪಾತ್ರ. ಅವಳು ರಾಕ್ಷಸ ಕುಲದ ಹಿರಿಯ ಹಾಗೂ ಗೌರವಾನ್ವಿತ ಮಹಿಳೆ. ತನ್ನ ಮಗ ರಕ್ತಬೀಜಾಸುರನು ದೇವತೆಗಳನ್ನು ಸೋಲಿಸಿ ಇಂದ್ರಪದವನ್ನು ವಶಪಡಿಸಿಕೊಳ್ಳಬೇಕು ಎಂಬುದು ಅವಳ ಬಯಕೆ. ಮಗನ ಮೇಲಿನ ಅತಿಯಾದ ವ್ಯಾಮೋಹ ಅವಳನ್ನು ತಪ್ಪು ದಾರಿಯತ್ತ ಕರೆದೊಯ್ಯುತ್ತದೆ. ಈ ಪಾತ್ರದಲ್ಲಿ ತಾಯಿಯ ಮಮತೆ, ಮಗನ ಮೇಲಿನ ಅಂಧ ಪ್ರೀತಿ ಮತ್ತು ದುಷ್ಟತನ ಮೂರನ್ನೂ ಒಟ್ಟಿಗೆ ತೋರಿಸಬೇಕಾಗುತ್ತದೆ.
ಪುಷ್ಪಮಾಲಿನಿಯಾಗಿ ರಕ್ತಬೀಜಾಸುರನ ಹೆಂಡತಿ ಪುಷ್ಪಮಾಲಿನಿಯ ಪಾತ್ರವೂ ನನಗೆ ಇಷ್ಟ. ಅವಳು ಸಾಮಾನ್ಯಳಾದರೂ ನಿಷ್ಠಾವಂತ ಭಕ್ತೆ. ಕೊನೆಗೆ ದೇವಿಯ ಕರುಣೆಗೆ ಪಾತ್ರಳಾಗುವ ಮಹಿಳೆ. ಒಂದೇ ನಾಟಕದಲ್ಲಿ ಇಷ್ಟು ವಿಭಿನ್ನ ಸ್ವಭಾವದ ಮಹಿಳೆಯರನ್ನು ಅಭಿನಯಿಸುವುದು ನನಗೆ ಕಲಾವಿದೆಯಾಗಿ ಹೊಸ ಹೊಸ ಅನುಭವಗಳನ್ನು ನೀಡುತ್ತದೆ.
ಆಸ್ಥಾನದ ನರ್ತಕಿಯಾಗಿ ರಕ್ತ ಬೀಜಾಸುರ, ಮಹಿಷಾಸುರ, ಶುಂಭ-ನಿಶುಂಭ, ದೇವೇಂದ್ರ ಮುಂತಾದ ರಾಜರ ಆಸ್ಥಾನದಲ್ಲಿ ನರ್ತಕಿಯಾಗಿ ಕುಣಿಯುವ ಪಾತ್ರವೂ ನನ್ನದೇ. ಆಸ್ಥಾನದ ಮಧ್ಯದಲ್ಲಿ ನಿಂತು ಕುಣಿಯುತ್ತೇನೆ, ಹಾಡುತ್ತೇನೆ, ಅಭಿನಯಿಸುತ್ತೇನೆ, ಕುಣಿದು ಕುಪ್ಪಳಿಸುತ್ತೇನೆ. ನನ್ನ ನೃತ್ಯ ಮುಗಿದಾಗ ರಾಜನ ಪಾತ್ರಧಾರಿಯ ಬಾಯಿಂದ,“ಭೇಷ್! ಯಾರಲ್ಲಿ, ಈ ನರ್ತಕಿಗೆ ಬಹುಮಾನ ಕೊಟ್ಟು ಕಳುಹಿಸು…” ಎಂಬ ಮಾತುಗಳು ಬರುತ್ತವೆ. ಅದು ನಾಟಕದ ಒಂದು ಸಣ್ಣ ಸಂಭಾಷಣೆಯಾದರೂ, ನನ್ನ ಪಾಲಿಗೆ ಅದೊಂದು ದೊಡ್ಡ ಸಂತೋಷ.
ನನ್ನ ಈ ಕಲಾ ದುಡಿಮೆ ಒಂದು ಸಂಪೂರ್ಣ ರಾತ್ರಿಯದ್ದು. ಸಂಜೆ ಆರಂಭವಾಗುವ ನಾಟಕ ಬೆಳಗಿನವರೆಗೂ ನಡೆಯುತ್ತದೆ. ದೇಹ ದಣಿದರೂ ಮನಸ್ಸು ಮಾತ್ರ ರಂಗದ ಬೆಳಕಿನಲ್ಲಿ ಜೀವಂತವಾಗಿರುತ್ತದೆ. ನನ್ನ ಅಭಿನಯವನ್ನು ನೋಡಿ ಸಂತೋಷಪಡುವ ಗ್ರಾಮಸ್ಥರು ನಾಟಕ ಮುಗಿದ ನಂತರ ತಮ್ಮ ಕೈಲಾದಷ್ಟು ಹಣವನ್ನು ಹೆಚ್ಚಾಗಿ ಕೊಟ್ಟು ಕಳುಹಿಸುತ್ತಾರೆ. ನಿಜ ಜೀವನದಲ್ಲಿ ನನಗೆ ಸಿಗದ ಒಡವೆ, ವಸ್ತ್ರ, ವೈಭವ ಯಾವುದೂ ಇಲ್ಲ. ಆದರೆ ರಂಗದ ಮೇಲೆ ನಿಂತಾಗ ನಾನು ಅವುಗಳನ್ನು ಧರಿಸುತ್ತೇನೆ.
ಅಲಂಕರಿಸಿಕೊಳ್ಳುತ್ತೇನೆ
ರಾಜರ ಆಸ್ಥಾನದಲ್ಲಿ ನರ್ತಿಸುತ್ತೇನೆ
ದೇವಿಯಾಗಿ ಪೂಜಿಸಲ್ಪಡುತ್ತೇನೆ
ರಾಣಿಯಾಗಿ ಬದುಕುತ್ತೇನೆ
ತಾಯಿಯಾಗಿ ಅಳುತ್ತೇನೆ
ಪತ್ನಿಯಾಗಿ ಪ್ರೀತಿಸುತ್ತೇನೆ
ರಾಕ್ಷಸಿಯಂತೆ ಕೋಪಗೊಳ್ಳುತ್ತೇನೆ
ಒಂದು ರಾತ್ರಿ ಹಲವು ಬದುಕುಗಳನ್ನು ಬದುಕುತ್ತೇನೆ
ನನ್ನ ಬಾಲ್ಯದ ಕಾಲದಲ್ಲಿ “ಹೆಣ್ಣು ಎಂದರೆ ಸಂಸಾರಕ್ಕೆ ಹುಣ್ಣು” ಎಂಬ ಮಾತುಗಳು ಕೇಳಿಬರುತ್ತಿದ್ದ ಕಾಲ. ಬಡ ಕುಟುಂಬದಲ್ಲಿ ಹುಟ್ಟಿದ ನನಗೆ ಕನಸುಗಳಿಗಿಂತ ದುಡಿಯುವ ದಾರಿಯೇ ಮುಖ್ಯವಾಗಿತ್ತು. ಬೇರೆಯವರ ದುಡಿಮೆಯ ಮೇಲೆ ನನ್ನ ಜೀವನ ಸಾಗಬಾರದು ಎಂದು ನಾನು ಬಯಸಿದೆ. ನನ್ನ ಕೈಯಿಂದ ದುಡಿದು, ನನ್ನ ಪ್ರತಿಭೆಯಿಂದ ಸಂಪಾದಿಸಿ ಬದುಕಬೇಕು ಎಂದುಕೊಂಡೆ. ಹಿಂದೆ ಹೆಣ್ಣುಮಕ್ಕಳು ದುಡಿಯುವ ದಾರಿಗಳು ಸೀಮಿತವಾಗಿದ್ದವು. ಆದರೆ ನನಗೆ ರಂಗಭೂಮಿ ಒಂದು ಹೊಸ ದಾರಿ ತೋರಿಸಿತು. ರಂಗದ ಮೇಲೆ ನಿಂತು ಅಭಿನಯಿಸುವಾಗ ನನ್ನನ್ನು ಯಾರೂ ಕೇವಲ ಬಡ ಮನೆಯ ಹೆಣ್ಣಾಗಿ ನೋಡುವುದಿಲ್ಲ.
ನಾನು ಕಲಾವಿದೆ
ನನ್ನನ್ನು ಗೌರವದಿಂದ ಕರೆಯುತ್ತಾರೆ
ನನ್ನ ಪ್ರತಿಭೆಗೆ ಹಣ ಕೊಡುತ್ತಾರೆ
ನನ್ನ ಕಲೆಗೆ ಚಪ್ಪಾಳೆ ತಟ್ಟುತ್ತಾರೆ
ಅದೇ ನನ್ನ ಬದುಕಿನ ದೊಡ್ಡ ಗೆಲುವು
ಬಡತನ ನನ್ನ ಬಾಲ್ಯವನ್ನು ಕಿತ್ತುಕೊಂಡಿರಬಹುದು
ಓದು ನನ್ನಿಂದ ದೂರವಾಗಿರಬಹುದು
ಬಾಲ್ಯವಿವಾಹ ನನ್ನ ಬದುಕನ್ನು ಬೇಗನೆ ಬದಲಿಸಿರಬಹುದು. ಆದರೆ ನನ್ನೊಳಗಿನ ಕಲಾವಿದೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಒಮ್ಮೆ ಹೊಟ್ಟೆಪಾಡಿಗಾಗಿ ದುಡಿದ ನನ್ನ ಕೈಗಳು, ಇಂದು ಕಲೆಯಿಗಾಗಿ ತಾಳ ಹಾಕುತ್ತಿವೆ. ಒಮ್ಮೆ ಬದುಕಿಗಾಗಿ ಹೋರಾಡಿದ ನನ್ನ ಧ್ವನಿ, ಇಂದು ಸಾವಿರಾರು ಜನರ ಮುಂದೆ ಹಾಡುತ್ತಿದೆ. ನನ್ನ ಬದುಕಿನ ರಂಗದಲ್ಲಿ ನೋವು ಹಲವು ಪಾತ್ರಗಳನ್ನು ಮಾಡಿದೆ. ಆದರೆ ಕೊನೆಗೆ ವಿಜಯ ಕುಮಾರಿಯೇ ಗೆದ್ದಳು.
- ತನೋಜ್. ಈ – ಬಿ.ಎ (ಪತ್ರಿಕೋದ್ಯಮ) ವಿದ್ಯಾರ್ಥಿ, ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾಲಯ.
