ಆಗಸ್ಟ್ 19ರಂದು ವಿಶ್ವ ಮಾನವೀಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2008ರಲ್ಲಿ ಆಗಸ್ಟ್ 19ನ್ನು ವಿಶ್ವ ಮಾನವೀಯ ದಿನವಾಗಿ ಘೋಷಿಸಿತು. ವಿಶ್ವ ಮಾನವೀಯ ದಿನದ ವಿಶೇಷತೆಯ ಕುರಿತು ಗೀತಾಂಜಲಿ ಎನ್ ಎಮ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ..
ಮಾನವೀಯತೆಯನ್ನು ಹುಡುಕಬೇಕಾಗಿದೆ. ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಮಾನವೀಯ ದಿನವನ್ನು ಆಚರಿಸಲಾಗುತ್ತದೆ. ಯುದ್ಧ, ಪ್ರಕೃತಿ ವಿಕೋಪ, ಹಸಿವು, ಬಡತನ, ಸ್ಥಳಾಂತರ ಸೇರಿದಂತೆ ವಿವಿಧ ಸಂಕಷ್ಟಗಳಲ್ಲಿ ಸಿಲುಕಿರುವ ಜನರಿಗೆ ನೆರವಾಗುವ ಮಾನವೀಯ ಕಾರ್ಯಕರ್ತರ ಸೇವೆಯನ್ನು ಸ್ಮರಿಸುವುದು ಹಾಗೂ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಮಾನವೀಯ ನೆರವು ತಲುಪಬೇಕು ಎಂಬ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ.
ಈ ದಿನದ ಆಚರಣೆಯ ಹಿಂದೆ ಒಂದು ನೋವಿನ ಇತಿಹಾಸವಿದ್ದು, 2003ರ ಆಗಸ್ಟ್ 19ರಂದು ಇರಾಕ್‌ನ ಬಾಗ್ದಾದ್‌ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ವಿಶ್ವಸಂಸ್ಥೆಯ ಮಾನವೀಯ ಕಾರ್ಯಕರ್ತರು ಸೇರಿದಂತೆ ಹಲವರು ಮೃತಪಟ್ಟರು, ಅವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಜಗತ್ತಿನಾದ್ಯಂತ ಮಾನವೀಯ ಸೇವೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಎಲ್ಲರಿಗೂ ಗೌರವ ಸಲ್ಲಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2008ರಲ್ಲಿ ಆಗಸ್ಟ್ 19ನ್ನು ವಿಶ್ವ ಮಾನವೀಯ ದಿನವಾಗಿ ಘೋಷಿಸಿತು.
ಹೀಗಾಗಿ ಇದು ಕೇವಲ ಒಂದು ದಿನದ ಆಚರಣೆಯಲ್ಲ, ಸಂಕಷ್ಟದಲ್ಲಿರುವ ಮನುಷ್ಯನ ನೋವಿಗೆ ಮತ್ತೊಬ್ಬ ಮನುಷ್ಯ ಸ್ಪಂದಿಸಬೇಕು ಎಂಬ ಮಾನವೀಯ ಮೌಲ್ಯದ ನೆನಪಿನ ಜೊತೆಗೆ, ಜಾತಿ, ಧರ್ಮ, ದೇಶ, ಭಾಷೆ, ಗಡಿ ಎಂಬ ಎಲ್ಲ ಭೇದಗಳನ್ನು ಮೀರಿ, ಕಷ್ಟದಲ್ಲಿರುವವರಿಗೆ ನೆರವಾಗುವುದು ಮನುಷ್ಯನ ಮೊದಲ ಕರ್ತವ್ಯ ಎಂಬ ಸಂದೇಶವನ್ನು ಈ ದಿನ ಜಗತ್ತಿಗೆ ನೀಡುವ ಮೌಲ್ಯಯುತ ಆಚರಣೆಯಾಗಿದೆ. ಆದರೆ ಇಂದು ಈ ದಿನವನ್ನು ಆಚರಿಸುವಾಗ ಒಂದು ಪ್ರಶ್ನೆಯನ್ನು ನಮ್ಮೊಳಗೇ ನಾವು ಕೇಳಿಕೊಳ್ಳಬೇಕಾಗಿದೆ, ಮನುಷ್ಯ ಬೆಳೆದಿದ್ದಾನೆ ಆದರೆ ಮಾನವೀಯತೆ ಬೆಳೆಯುತ್ತಿದೆಯೇ ? ಹಾಗಾಗಿ ಇಲ್ಲಿಂದಲೇ ನಮ್ಮ ಆತ್ಮಾವಲೋಕನ ಆರಂಭವಾಗಬೇಕು.
ವಿಜ್ಞಾನ ಬೆಳೆದಿದೆ, ತಂತ್ರಜ್ಞಾನ ಬೆಳೆದಿದೆ, ಕೃತಕ ಬುದ್ಧಿಮತ್ತೆ ಮನುಷ್ಯನ ಅನೇಕ ಕೆಲಸಗಳನ್ನು ಮಾಡುತ್ತಿದೆ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕ್ಷಣಗಳಲ್ಲಿ ಸಂಪರ್ಕ ಸಾಧಿಸಬಹುದು ಕೈಯಲ್ಲಿರುವ ಮೊಬೈಲ್ ಜಗತ್ತನ್ನೇ ನಮ್ಮ ಅಂಗೈಗೆ ತಂದಿದೆ, ಆದರೆ ಒಂದು ಪ್ರಶ್ನೆ ಮಾತಇನ್ನೂ ಕಗ್ಗಂಟಾಗಿಯೇ ಇದೆ, ಅದೇ ಕೋಟಿ ಕೋಟಿ ಜನಸಂಖ್ಯೆಯಲ್ಲಿ ನಿಸ್ವಾರ್ಥವಾಗಿ ಮಾನವೀಯತೆಯಿಂದ ಸ್ಪಂದಿಸುವ ಮನಸುಗಳು ಎಷ್ಟಿವೆ ಎಂಬುದು, ಮಾನವೀಯತೆಗಾಗಿ ಹೋರಾಡಿದವರನ್ನು ನಾವು ಸ್ಮರಿಸುತ್ತಿದ್ದೇವೆ, ಆದರೆ ನಮ್ಮ ದೈನಂದಿನ ಬದುಕಿನಲ್ಲಿ ಮಾನವೀಯತೆಯನ್ನು ಎಷ್ಟು ಉಳಿಸಿಕೊಂಡಿದ್ದೇವೆ? ಎಷ್ಟು ಜನರಿಗೆ ಸ್ಪಂದಿಸುತ್ತೇವೆ, ಎಂಬುದನ್ನು ಕೇಳಿಕೊಂಡಾಗ ಇದರ ಉತ್ತರ ಮಾತ್ರ ಬರೀ ಲೆಕ್ಕಾಚಾರದಲ್ಲಿ ಮುಗಿಯುತ್ತದೆ.
ನಿತ್ಯ ಬದುಕಿನಲ್ಲಿ ಬರುವ ಭವಣೆಗಳು ಅನಿರೀಕ್ಷಿತ ನೋವು ನಿರಾಸೆಗಳು, ಕಷ್ಟ ನಷ್ಟಗಳು ಸಾಕಷ್ಟು ಇರುತ್ತವೆ, ಇಂತಹ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು, ಸ್ಪಂದಿಸದಿದ್ದಾಗ ನಮ್ಮ ಕಷ್ಟದ ಸಮಯದಲ್ಲಿ ಅದಕ್ಕೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡಾಗ ಕನಿಷ್ಠ ಮಾನವೀಯತೆಯು ಇಲ್ಲವಾ? ಹೀಗೆ ಮಾಡಿದರು ಹಾಗೆ ಮಾಡಿದರು, ಅಷ್ಟು ಕಷ್ಟದಲ್ಲಿದ್ದರೂ, ನಮ್ಮ ಕಷ್ಟದ ಪರಿಸ್ಥಿತಿಯನ್ನು ನೋಡಿಯೂ ಹೀಗೆ ನಡೆದುಕೊಂಡರಲ್ಲ ಎಂದು ಮತ್ತೊಬ್ಬರ ವರ್ತನೆಯಲ್ಲಿ ಮಾನವೀಯತೆ ಕಾಣದಿದ್ದಾಗ ನಾವು ಪ್ರಶ್ನಿಸುತ್ತೇವೆ, ಧೂಷಿಸುತ್ತೇವೆ ಟೀಕಿಸುತ್ತೇವೆ, ಬೇಸರ ವ್ಯಕ್ತಪಡಿಸುತ್ತೇವೆ. ಆದರೆ ಇದೇ ಪ್ರಶ್ನೆಯನ್ನು ಒಮ್ಮೆ ನಮ್ಮೊಳಗೆ ಕೇಳಿಕೊಳ್ಳಬೇಕಾದ ಸಂದರ್ಭ ಬಂದಾಗ ನಮ್ಮ ತಪ್ಪನ್ನು ನಾವು ಮುಚ್ಚಿಕೊಳ್ಳುತ್ತೇವೆ, ನಾವು ಮತ್ತೊಬ್ಬರಲ್ಲಿ ಹುಡುಕುತ್ತಿರುವ ಮಾನವೀಯತೆ ನಮ್ಮೊಳಗೆ ಎಷ್ಟು ಇದೆ ಎಂಬುದನ್ನು ಆತ್ಮಾವಲೋಕನ, ಮಾಡಿಕೊಂಡಾಗ ಸತ್ಯದ ಅರಿವು ಆಗುತ್ತದೆ, ಈ ಆತ್ಮಾವಲೋಕನವೇ ಇಂದು ಬೇಕಾಗಿರುವುದು.
ಹಾಗಾಗಿ ಬದಲಾವಣೆಯನ್ನು ಸಮಾಜದಿಂದ ನಿರೀಕ್ಷಿಸುವ ಮೊದಲು ನಮ್ಮಿಂದಲೇ ಆರಂಭಿಸೋಣ. ನಮ್ಮ ಮಾತಿನಲ್ಲಿ ಮಾನವೀಯತೆ ಇರಲಿ, ನಮ್ಮ ನಡವಳಿಕೆಯಲ್ಲಿ ಮಾನವೀಯತೆ ಇರಲಿ, ನಮ್ಮ ಸಂಬಂಧಗಳಲ್ಲಿ ಮಾನವೀಯತೆ ಇರಲಿ. ಮತ್ತೊಬ್ಬರ ತಪ್ಪನ್ನು ತೋರಿಸುವ ಮೊದಲು ನಮ್ಮ ನಡೆ ಹೇಗಿದೆ ಎಂದು ಒಮ್ಮೆ ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ.
ಮಾನವೀಯತೆ ಎಂದರೆ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡುವುದಲ್ಲ, ನಮ್ಮಿಂದಾಗಿ ಮತ್ತೊಬ್ಬ ಮನುಷ್ಯನ ಬದುಕಿಗೆ ಸ್ವಲ್ಪ ನೆಮ್ಮದಿ ಸಿಗುವಂತೆ ಬದುಕುವುದೇ ನಿಜವಾದ ಮಾನವೀಯತೆ.
ನಮ್ಮಲ್ಲಿ ನಾವು ಬದಲಾವಣೆಯನ್ನು ಮಾಡಿಕೊಂಡು, ಮಾನವೀಯ ನೆಲಗಟ್ಟಿನ ಮೇಲೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಮಾತ್ರ ಸಮಾಜದಲ್ಲಿಯೂ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಮನುಷ್ಯನೊಳಗಿನ ಮಾನವೀಯತೆ ಎಚ್ಚೆತ್ತುಕೊಂಡಾಗ, ನಂಬಿಕೆ ಗಟ್ಟಿಯಾಗುತ್ತದೆ, ಸಂಬಂಧಗಳು ಮತ್ತೆ ಬೆಸೆಯುತ್ತವೆ, ಸಮಾಜವೂ ಹೆಚ್ಚು ಸುಂದರವಾಗುತ್ತದೆ, ಮಾನವೀಯತೆಯನ್ನು ಕಳೆದುಕೊಂಡು ಮನುಷ್ಯನಾಗಿ ಬದುಕುವುದಕ್ಕಿಂತ, ಮಾನವೀಯತೆಯನ್ನು ಉಳಿಸಿಕೊಂಡು ಮನುಷ್ಯತ್ವದಿಂದ ಬದುಕುವುದೇ ನಮ್ಮ ನಿಜವಾದ ಸಾಧನೆ.
ಮಾನವೀಯತೆ ಎಂದರೆ ಕಣ್ಣುಮುಚ್ಚಿ ಎಲ್ಲರನ್ನೂ ನಂಬುವುದು ಅಲ್ಲ. ಮಾನವೀಯತೆ ಎಂದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಮನಸ್ಸು. ಸಾಧ್ಯವಾದಾಗ ಸಹಾಯ ಮಾಡುವ ಗುಣ. ಮತ್ತೊಬ್ಬರ ಕಣ್ಣೀರನ್ನು ಕಂಡಾಗ ಕನಿಷ್ಠ ಒಂದು ಕ್ಷಣವಾದರೂ ನಮ್ಮ ಮನಸ್ಸು ಕರಗುವ ಸಂವೇದನೆ. ಅದೇ ಸಮಯದಲ್ಲಿ ವಿವೇಕದಿಂದ, ಎಚ್ಚರಿಕೆಯಿಂದ ಬದುಕುವುದೂ ಅಗತ್ಯ.
ಯಾಕೆಂದರೆ ಮಾನವೀಯತೆಯನ್ನು ಕಳೆದುಕೊಂಡು ಮೋಸದಿಂದ ಬದುಕುವುದು ಗೆಲುವಲ್ಲ. ಮತ್ತೊಬ್ಬರನ್ನು ವಂಚಿಸಿ ನಾವು ಎಷ್ಟೇ ಬೆಳೆದರೂ, ನಮ್ಮೊಳಗಿನ ಮನುಷ್ಯ ಸೋತಿರುತ್ತಾನೆ.
ನಾವು ಸಂಪರ್ಕದಲ್ಲಿದ್ದೇವೆ, ಆದರೆ ಸಂಬಂಧಗಳಿಂದ ದೂರವಾಗುತ್ತಿದ್ದೇವೆ, ಮಾಹಿತಿಯಿಂದ ಶ್ರೀಮಂತರಾಗುತ್ತಿದ್ದೇವೆ, ಆದರೆ ಭಾವನೆಗಳಿಂದ ಬಡವರಾಗುತ್ತಿದ್ದೇವೆ.
ಹಾಗಾದರೆ ಮಾನವೀಯತೆ ಎಲ್ಲಿ ಕಳೆದುಹೋಯಿತು? ಎಂದರೆ ಇಂದಿನ ದುಬಾರಿ ಹಾಗೂ ಪೈಪೋಟಿಯ ಜೀವನದ ಲೆಕ್ಕಾಚಾರಗಳಲ್ಲಿ ಎಲ್ಲವೂ ಕಳೆದು ಹೋಗುತ್ತಿವೆ.
ಹಸಿದವನಿಗೆ ಅನ್ನ ನೀಡುವುದು ಮಾನವೀಯತೆ, ಬಿದ್ದವನನ್ನು ಎಬ್ಬಿಸುವುದು ಮಾನವೀಯತೆ,ಅಳುತ್ತಿರುವವನ ಕಣ್ಣೀರು ಒರೆಸುವುದು ಮಾನವೀಯತೆ.ತಪ್ಪು ಮಾಡಿದವನಿಗೆ ತಿದ್ದಿಕೊಳ್ಳುವ ಅವಕಾಶ ನೀಡುವುದು ಮಾನವೀಯತೆ, ವಯಸ್ಸಾದ ತಂದೆ-ತಾಯಿಗೆ ಸಮಯ ಕೊಡುವುದು ಮಾನವೀಯತೆ, ಮನೆಯ ಕೆಲಸ ಮಾಡುವವರನ್ನು ಗೌರವದಿಂದ ಕಾಣುವುದು ಮಾನವೀಯತೆ, ಮಹಿಳೆಯನ್ನು ಮನುಷ್ಯಳಾಗಿ ಗೌರವಿಸುವುದು ಮಾನವೀಯತೆ, ಮಗುವಿನ ಭಯವನ್ನು ಅರ್ಥಮಾಡಿಕೊಳ್ಳುವುದು ಮಾನವೀಯತೆ, ಬಡವನನ್ನು ಕೀಳಾಗಿ ಕಾಣದೆ ಅವನ ಆತ್ಮಗೌರವವನ್ನು ಉಳಿಸುವುದು ಮಾನವೀಯತೆ, ಹೀಗೇ ನಿತ್ಯ ಜೀವನದಲ್ಲಿ ಸಾಕಷ್ಟು ಘಟನೆಗಳು ಬರುತ್ತವೆ ಆದರೆ ಎಷ್ಟನ್ನು ನಾವು ಪಾಲಿಸುತ್ತೇವೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಮೌನ.
ಇವೆಲ್ಲಕ್ಕೂ ದೊಡ್ಡ ಹಣ ಬೇಕಿಲ್ಲ, ದೊಡ್ಡ ಹುದ್ದೆ ಬೇಕಿಲ್ಲ ದೊಡ್ಡ ಶಿಕ್ಷಣವೂ ಬೇಕಿಲ್ಲ. ಬೇಕಿರುವುದು ಒಂದೇ ಒಳ್ಳೆಯ ಮನಸ್ಸು, ಆದರೆ ಇಂದು ನಮ್ಮ ಬದುಕಿನಲ್ಲಿ ‘ನಾನು’ ಎಂಬ ಪದ ದೊಡ್ಡದಾಗುತ್ತಾ ಹೋಗುತ್ತಿದೆ. ‘ನಾವು’ ಎಂಬ ಪದ ಚಿಕ್ಕದಾಗುತ್ತಿದೆ. ಸ್ವಾರ್ಥ, ಅಸೂಕ್ಷ್ಮತೆ, ಅಸಹನೆ ಮತ್ತು ಸ್ಪರ್ಧೆಯ ನಡುವೆ ಮತ್ತೊಬ್ಬರ ನೋವನ್ನು ಗಮನಿಸುವ ಕಣ್ಣುಗಳು ನಿಧಾನವಾಗಿ ಮುಚ್ಚಿಕೊಳ್ಳುತ್ತಿವೆ.
ಸಹಾನುಭೂತಿ ಕಳೆದುಕೊಂಡ ಸಮಾಜ ಅಪಾಯದಲ್ಲಿದೆ, ಮನುಷ್ಯನನ್ನು ಮನುಷ್ಯನಾಗಿಸುವುದು ಅವನ ಬುದ್ಧಿಶಕ್ತಿ ಮಾತ್ರವಲ್ಲ, ಅವನ ಸಹಾನುಭೂತಿ. ಮತ್ತೊಬ್ಬರ ನೋವನ್ನು ಕಂಡಾಗ ನಮ್ಮ ಮನಸ್ಸು ಕರಗಬೇಕು. ಅನ್ಯಾಯವನ್ನು ಕಂಡಾಗ ನಮ್ಮೊಳಗೆ ಪ್ರಶ್ನೆ ಹುಟ್ಟಬೇಕು. ಯಾರಿಗಾದರೂ ನೆರವು ಬೇಕಾದಾಗ ‘ಅದು ನನ್ನ ಸಮಸ್ಯೆಯಲ್ಲ’ ಎನ್ನುವ ನಿರ್ಲಿಪ್ತತೆಯ ಬದಲು ‘ನಾನು ಏನು ಮಾಡಬಹುದು?’ ಎಂಬ ಚಿಂತನೆ ಬರಬೇಕು ಅದು ನಿಜವಾದ ಮಾನವೀಯತೆ.
ಒಂದು ಸಮಾಜದಲ್ಲಿ ಜನರು ಪರಸ್ಪರರ ನೋವಿಗೆ ಸ್ಪಂದಿಸುವುದನ್ನು ನಿಲ್ಲಿಸಿದಾಗ, ಆ ಸಮಾಜ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅದು ಒಳಗಿನಿಂದ ದುರ್ಬಲವಾಗುತ್ತದೆ. ಇಂದು ರಸ್ತೆ ಅಪಘಾತವಾಗಿದ್ದರೆ ಸಹಾಯ ಮಾಡುವುದಕ್ಕಿಂತ ವಿಡಿಯೋ ಮಾಡುವ ಮನಸ್ಥಿತಿ, ವೃದ್ಧರು ಒಂಟಿಯಾಗಿದ್ದರೂ ಅವರೊಂದಿಗೆ ಮಾತನಾಡಲು ಸಮಯವಿಲ್ಲದ ಪರಿಸ್ಥಿತಿ, ಬಡತನವನ್ನು ಕರುಣೆಯಿಂದ ನೋಡುವ ಬದಲು ತಿರಸ್ಕಾರದಿಂದ ನೋಡುವ ದೃಷ್ಟಿ, ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಮತ್ತೊಬ್ಬರ ವ್ಯಕ್ತಿತ್ವವನ್ನು ತೀರ್ಪು ಮಾಡುವ ಪ್ರವೃತ್ತಿ, ಇವೆಲ್ಲವೂ ನಮ್ಮೊಳಗೆ ಮಾನವೀಯತೆಯ ಜಾಗವನ್ನು ಎಷ್ಟು ಕಡಿಮೆ ಮಾಡುತ್ತಿದ್ದೇವೆ ಎಂಬುದನ್ನು ತೋರಿಸುತ್ತವೆ.
ಮಾನವೀಯತೆ ದೊಡ್ಡ ಕಾರ್ಯಗಳಲ್ಲಿ ಮಾತ್ರ ಇರುವುದಿಲ್ಲ, ಮಾನವೀಯತೆ ಎಂದರೆ ದೊಡ್ಡ ಸೇವಾ ಕಾರ್ಯಗಳನ್ನು ಮಾಡುವುದು ಮಾತ್ರವಲ್ಲ, ನಿತ್ಯದ ಬದುಕಿನಲ್ಲಿ ಬರುವ ಸನ್ನಿವೇಶಗಳಲ್ಲಿ ಇರುತ್ತದೆ, ಬಸ್‌ನಲ್ಲಿ ನಿಂತಿರುವ ವೃದ್ಧರಿಗೆ ನಮ್ಮ ಸೀಟ್ ಬಿಟ್ಟುಕೊಡುವುದರಿಂದಲೂ ಅದು ಆರಂಭವಾಗಬಹುದು, ಶಾಲೆಗೆ ಹೋಗುವ ದಾರಿಯಲ್ಲಿ ಹಸಿದ ಮಗುವಿಗೆ ಒಂದು ಊಟ ಕೊಡುವುದರಿಂದಲೂ ಆರಂಭವಾಗಬಹುದು.
ಒಂಟಿಯಾಗಿರುವ ವ್ಯಕ್ತಿಯೊಂದಿಗೆ ಹತ್ತು ನಿಮಿಷ ಮಾತನಾಡುವುದರಿಂದಲೂ ಆರಂಭವಾಗಬಹುದು. ನಮ್ಮ ಮನೆಯ ಕೆಲಸಗಾರರನ್ನು ಗೌರವದಿಂದ ಮಾತನಾಡಿಸುವುದರಿಂದಲೂ ಆರಂಭವಾಗಬಹುದು, ತಪ್ಪು ಮಾಡಿದವನನ್ನು ಅವಮಾನಿಸುವ ಬದಲು ತಿದ್ದಿಕೊಳ್ಳಲು ಅವಕಾಶ ನೀಡುವುದರಿಂದಲೂ ಆರಂಭವಾಗಬಹುದು, ಹಾಗಾಗಿ ಮಾನವೀಯತೆ ದೊಡ್ಡ ಘೋಷಣೆಗಳಲ್ಲಿ ಹುಟ್ಟುವುದಿಲ್ಲ, ಬದಲಿಗೆ ಸಣ್ಣ ಸಣ್ಣ ಕಾಳಜಿಗಳಲ್ಲಿ ಬದುಕುತ್ತದೆ, ಹಾಗಾಗಿ ಮಕ್ಕಳಿಗೆ ಶಿಕ್ಷಣ, ಆಸ್ತಿ, ಮಾತ್ರವಲ್ಲ, ಮಾನವೀಯತೆಯನ್ನೂ ಕಲಿಸೋಣ, ಇಂದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು, ಉತ್ತಮ ಉದ್ಯೋಗ ಪಡೆಯಬೇಕು, ದೊಡ್ಡ ಮನೆ ಕಟ್ಟಬೇಕು, ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳುತ್ತೇವೆ. ಆದರೆ ಅದರ ಜೊತೆಗೆ ‘ಮತ್ತೊಬ್ಬರ ಕಣ್ಣೀರನ್ನು ಕಂಡಾಗ ನಿಲ್ಲಬೇಕು’, ‘ಹಸಿದವನನ್ನು ಕಂಡಾಗ ಹಂಚಿಕೊಳ್ಳಬೇಕು’, ‘ದುರ್ಬಲನನ್ನು ತುಳಿಯಬಾರದು’, ‘ಮನುಷ್ಯನನ್ನು ಅವನ ಹಣದಿಂದ ಅಳೆಯಬಾರದು’ ಎಂಬ ಪಾಠವನ್ನೂ ಕಲಿಸಬೇಕಾಗಿದೆ.
ಜಗತ್ತು ನಮ್ಮ ಅಂಗೈಗೆ ಬಂದರೂ, ನಮ್ಮ ಹೃದಯದಲ್ಲಿ ಮನುಷ್ಯನಿಗೆ ಜಾಗ ಉಳಿದಿದೆಯೇ? ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರಿಗೆ ‘ಲೈಕ್’ ಮಾಡುತ್ತೇವೆ. ಅಪರಿಚಿತರ ಚಿತ್ರಗಳಿಗೆ ಪ್ರತಿಕ್ರಿಯಿಸುತ್ತೇವೆ. ದುಃಖದ ಸುದ್ದಿಗಳಿಗೆ ಕೆಲವೇ ಕ್ಷಣಗಳಲ್ಲಿ ಇಮೋಜಿ ಹಾಕುತ್ತೇವೆ. ಆದರೆ ನಮ್ಮ ಅಕ್ಕ ಪಕ್ಕದ ಮನೆಯ ವ್ಯಕ್ತಿ ಯಾವ ನೋವಿನಲ್ಲಿ ಬದುಕುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಸಮಯವಿಲ್ಲ.
ಆದರೆ ಇದರ ಮಧ್ಯ ನಮ್ಮನ್ನು ಒಂದು ಪ್ರಶ್ನೆಯೂ ಸಹ ಕಾಡುತ್ತದೆ, ಇಂದಿನ ಸಮಾಜವನ್ನು ಗಮನಿಸಿದಾಗ ಕೆಲವೊಮ್ಮೆ ಒಂದು ವಿಚಿತ್ರವಾದ ಮನಸ್ಥಿತಿ ಕಾಣಿಸುತ್ತದೆ. ಅದನ್ನು ನೋಡಿದಾಗ ಅನಿಸುವುದುಂಟು ಯಾಕೆಂದರೆ ಮಾನವೀಯತೆಯಿಂದ ಸಹಾಯ ಮಾಡಲು ಹೋಗಿ ಮೋಸವಾಗಿದೆ ವಂಚನೆಯಾಗಿದೆ ನಂಬಿದವರೇ ಸಹ ಮೋಸ ಮಾಡುತ್ತಿದ್ದಾರೆ, ಕರುಣೆ ತೋರಿಸಿದರೆ ಅದನ್ನೇ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಈ ಬೆಳವಣಿಗೆಯನ್ನೆಲ್ಲಾ ನೋಡುತ್ತಿದ್ದಾಗ ನಮ್ಮೊಳಗೆ ಒಂದು ಭಯ ಖಂಡಿತವಾಗಿಯೂ ಹುಟ್ಟುತ್ತದೆ ಇದರ ಪರಿಣಾಮವಾಗಿಯೇ ಮತ್ತೊಬ್ಬರ ಕಷ್ಟವನ್ನು ಕಂಡರೂ ಹಿಂದೆ ಸರಿಯುವ, “ನನಗೇಕೆ?” ಎಂದುಕೊಂಡು ಸುಮ್ಮನಿರುವ ಮನೋಭಾವ ನಿಧಾನವಾಗಿ ಎಲ್ಲರಲ್ಲೂ ಹೆಚ್ಚುತ್ತಿದೆ. ಆದರೆ ಇಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ, ಮೋಸವಾಗಬಹುದು ಎಂಬ ಭಯದಿಂದ ಮಾನವೀಯತೆಯನ್ನೇ ಬಿಟ್ಟುಬಿಡುವುದೇ ಪರಿಹಾರವೇ? ಖಂಡಿತ ಅಲ್ಲ. ಯಾಕೆಂದರೆ ಮಾನವೀಯತೆಯಿಂದ ಮೋಸ ಹುಟ್ಟುವುದಿಲ್ಲ ಮಾನವೀಯತೆಯ ಕೊರತೆಯಿಂದಲೇ ಮೋಸ ಹುಟ್ಟುತ್ತದೆ.
ಏಕೆಂದರೆ ಮಾನವೀಯತೆಯನ್ನು ಕಳೆದುಕೊಂಡಿದ್ದರಿಂದಲೇ ಹೀಗೆಲ್ಲಾ ಆಗುತ್ತಿರುವುದು ಹಾಗಾಗಿ ಪ್ರತಿಯೊಬ್ಬರು ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿದಾಗ ಮಾನವೀಯ ನೆಲಗಟ್ಟಿನಲ್ಲಿ ಜೀವನ ನಡೆಸಿದಾಗ ಈ ರೀತಿಯ ಮೋಸ ವಂಚನೆಗಳು ಆಗುವುದಿಲ್ಲ ಹಾಗಾಗಿ ನಮ್ಮಲ್ಲಿ ನಾವು ಬದಲಾವಣೆಯನ್ನು ಮಾಡಿಕೊಳ್ಳೋಣ ಮಾನವೀಯತೆಯ ನೆಲಗಟ್ಟಿನಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೋಣ ಆಗ ಎಲ್ಲವೂ ಸರಿಯಾಗುತ್ತದೆ.
ಹಾಗಾಗಿ ಕೆಲವು ಜನರ ಅಮಾನವೀಯ ವರ್ತನೆಯ ಕಾರಣಕ್ಕೆ ನಾವೆಲ್ಲರೂ ಮಾನವೀಯತೆಯಿಂದ ಹಿಂದೆ ಸರಿದರೆ, ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತದೆ. ಒಬ್ಬನ ಅಮಾನವೀಯತೆ ಮತ್ತೊಬ್ಬನ ಮಾನವೀಯತೆಯನ್ನು ಕೊಲ್ಲಬಾರದು.
ಏಕೆಂದರೆ ಜ್ಞಾನವಿರುವ ಮನುಷ್ಯ ಸಮಾಜವನ್ನು ಕಟ್ಟಬಹುದು, ಆದರೆ ಮಾನವೀಯತೆ ಇರುವ ಮನುಷ್ಯ ಸಮಾಜವನ್ನು ಉಳಿಸಬಲ್ಲ. ಮಾನವೀಯತೆಯನ್ನು ನಾವು ಹೊರಗೆ ಹುಡುಕುತ್ತಿದ್ದೇವೆ, ಆದರೆ ಅದು ಮೊದಲು ನಮ್ಮೊಳಗೆ ಹುಟ್ಟಬೇಕಾಗಿದೆ, ಯಾರೋ ಬಂದು ಸಮಾಜವನ್ನು ಬದಲಾಯಿಸಲಿ ಎಂದು ಕಾಯುವುದಕ್ಕಿಂತ, ‘ನನ್ನಿಂದಲೇ ಒಂದು ಒಳ್ಳೆಯ ಬದಲಾವಣೆ ಆರಂಭವಾಗಲಿ’ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು.
ಒಂದು ಸಣ್ಣ ಸಹಾಯ, ಒಂದು ಸಾಂತ್ವನದ ಮಾತು, ಒಂದು ಕ್ಷಮೆ, ಒಂದು ಹಂಚಿಕೆ, ಒಂದು ಕಾಳಜಿ, ಇವು ಯಾರದೋ ಬದುಕಿನಲ್ಲಿ ದೊಡ್ಡ ಬೆಳಕಾಗಬಹುದು. ಮನುಷ್ಯನಾಗಿರುವುದೇ ದೊಡ್ಡದಲ್ಲ ಮಾನವೀಯವಂತರಾಗಬೇಕು, ವಿಶ್ವ ಮಾನವೀಯ ದಿನ ನಮಗೆ ಮತ್ತೊಂದು ಆಚರಣೆಯ ದಿನವಾಗಬಾರದು. ಅದು ನಮ್ಮೊಳಗೆ ಒಂದು ಪ್ರಶ್ನೆಯನ್ನು ಎಬ್ಬಿಸುವ ದಿನವಾಗಬೇಕು, ನನ್ನ ಸುತ್ತಲಿರುವ ಮನುಷ್ಯರ ನೋವಿಗೆ ನಾನು ಎಷ್ಟು ಸ್ಪಂದಿಸುತ್ತಿದ್ದೇನೆ? ಎಂಬ ಆತ್ಮಾವಲೋಕನವನ್ನು ಎಲ್ಲರೂ ಮಾಡಿಕೊಳ್ಳಬೇಕು.
ನಮ್ಮ ಕೈಯಲ್ಲಿ ತಂತ್ರಜ್ಞಾನ ಇರಲಿ.ನಮ್ಮ ಮನೆಯಲ್ಲಿ ಸಂಪತ್ತು ಇರಲಿ.ನಮ್ಮ ಬದುಕಿನಲ್ಲಿ ಯಶಸ್ಸು ಇರಲಿ. ಆದರೆ ಮತ್ತೊಬ್ಬರ ಕಣ್ಣೀರನ್ನು ಕಂಡು ಮನಸ್ಸು ಕದಲದಿದ್ದರೆ, ಆ ಎಲ್ಲ ಸಾಧನೆಗಳಿಗೂ ಅರ್ಥವೇನು? ಮಾನವೀಯತೆ ಎಂದರೆ ದುರ್ಬಲತೆ ಅಲ್ಲ ಅದು ಮನುಷ್ಯನ ಅತ್ಯಂತ ದೊಡ್ಡ ಶಕ್ತಿ.
ಕ್ಷಮಿಸುವುದು ಸೋಲಲ್ಲ, ಕರುಣೆ ತೋರಿಸುವುದು ದೌರ್ಬಲ್ಯವಲ್ಲ, ಇನ್ನೊಬ್ಬರಿಗೆ ನೆರವಾಗುವುದು ನಷ್ಟವಲ್ಲ ಮಾನವೀಯತೆ. ಯಾಕೆಂದರೆ ನಾವು ಈ ಭೂಮಿಯಲ್ಲಿ ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ನಮ್ಮ ಬದುಕಿನಿಂದ ಎಷ್ಟು ಹೃದಯಗಳಿಗೆ ನೆಮ್ಮದಿ ಸಿಕ್ಕಿತು ಎಂಬುದೇ ನಮ್ಮ ಮಾನವೀಯತೆಯ ನಿಜವಾದ ಅಳತೆ.
ವಿಶ್ವ ಮಾನವೀಯ ದಿನದಂದು ನಾವು ಮತ್ತೊಬ್ಬರನ್ನು ಬದಲಾಯಿಸುವ ಪ್ರತಿಜ್ಞೆ ಮಾಡುವ ಅಗತ್ಯವಿಲ್ಲ, ಮೊದಲು ನಮ್ಮನ್ನೇ ಬದಲಾಯಿಸೋಣ, ಯಾರಾದರೂ ಬೀಳುವಾಗ ಕೈ ಚಾಚೋಣ, ಯಾರಾದರೂ ಅಳುವಾಗ ಕಿವಿಯಾಗೋಣ, ಯಾರಾದರೂ ಹಸಿದಾಗ ಅನ್ನವಾಗೋಣ , ಯಾರಾದರೂ ಒಂಟಿಯಾಗಿದ್ದಾಗ ಜೊತೆಯಾಗಿ ಸಾಂತ್ವಾನಿಸೋಣ, ಯಾರಾದರೂ ಸೋತಾಗ ಧೈರ್ಯವಾಗೋಣ. ಮಾನವೀಯತೆ ಉಳಿದರೆ ಮನುಷ್ಯ ಉಳಿಯುತ್ತಾನೆ, ಮನುಷ್ಯ ಉಳಿದರೆ ಮಾತ್ರ ಮಾನವ ಸಮಾಜ ಉಳಿಯುತ್ತದೆ.
ಮನುಷ್ಯರ ಸಂಖ್ಯೆ ಹೆಚ್ಚಾಗುತ್ತಿರುವ ಜಗತ್ತಿಗೆ ಇನ್ನಷ್ಟು ಮನುಷ್ಯರು ಬೇಕಿಲ್ಲ, ಮಾನವೀಯತೆ ಹೊಂದಿದ ಹೃದಯಗಳು ಬೇಕಾಗಿದೆ, ಹಾಗೆಂದು ಮಾನವೀಯತೆಯನ್ನು ಹುಡುಕುತ್ತಾ ಸಮಾಜದ ಬೀದಿಗಳಲ್ಲಿ ಅಲೆದಾಡಬೇಕಿಲ್ಲ, ಒಮ್ಮೆ ನಮ್ಮ ಹೃದಯದ ಬಾಗಿಲು ತೆರೆದು ನೋಡೋಣ ಬಹುಶಃ ಕಳೆದುಹೋದ ಮಾನವೀಯತೆ ಅಲ್ಲೇ ನಮ್ಮನ್ನು ಕಾಯುತ್ತಿರಬಹುದು.
- ಗೀತಾಂಜಲಿ ಎನ್ ಎಮ್ – ಕೊಡಗು.
