ಲೇಖಕಿ ಆರತಿ ಪಟ್ರಮೆಯವರು ವೃತ್ತಿಯಿಂದ ಇಂಗ್ಲೀಷ್ ಉಪನ್ಯಾಸಕಿ ಹಾಗೂ ಪ್ರವೃತ್ತಿಯಿಂದ ಯಕ್ಷಗಾನ ಕಲಾವಿದೆ. ಕೆಲಕಾಲ ಪತ್ರಕರ್ತೆಯಾಗಿಯೂ ದುಡಿದ ಅನುಭವವೂ ಇದ್ದ ಇವರು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ೬೬ ಅಂಕಣ ಬರಹಗಳ ಸಂಗ್ರಹವಿದು. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ತೀರದ ತುಡಿತ
ಲೇಖಕರು: ಆರತಿ ಪಟ್ರಮೆ
ಸಾಧನ ಪಬ್ಲಿಕೇಶನ್ ಬೆಂಗಳೂರು
ಮುದ್ರಣದ ವರ್ಷ: ೨೦೨0
ಪುಟಗಳು: ೨೩೬
ಬೆಲೆ: ರೂ. ೨೦೦
ಲೇಖಕಿ ಮಂಗಳೂರಲ್ಲಿದ್ದಾಗ ಪ್ರಜಾವಾಣಿ ಪತ್ರಿಕೆಯಲ್ಲಿ ‘ರಂಗೀಲಾರೇ ಎಂಬ ಹೆಸರಿನಲ್ಲಿ ಪ್ರಕಟವಾದ ಇಲ್ಲಿನ ಅಂಕಣ ಬರಹಗಳಲ್ಲಿ ನಗರ ಜೀವನದ ಗದ್ದಲ, ಗತ್ತು- ಗಮ್ಮತ್ತುಗಳನ್ನು ಹೇಳುತ್ತಲೇ ,ಅಲ್ಲಲ್ಲಿ ತುಳು ಭಾಷೆಯನ್ನು ಬಳಸಿ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಮಂಗಳೂರಿನ ಎಂ.ಜಿ. ರೋಡ್ ಎಂದರೆ ಅದು ಎಲ್ಲಾ ಭಾವಗಳ ಸಂಕೀರ್ಣ. ಸಂಜೆ ಶಾಲೆ ಬಿಡುವ ಹೊತ್ತಿಗೆ ಈ ರೋಡಲ್ಲಿ ನಿಂತರೆ ಸಾಧಾರಣ ಎಷ್ಟು ವಿಧದ ಯೂನಿಫಾರಂ ಇದೆ ಎನ್ನುವುದು ತಿಳಿಯುತ್ತದೆ . ವಾಕಿಂಗ್ ಮಾಡುವ ಎಲ್ಲಾ ವಯೋಮಾನದವರು ಕಾಣುತ್ತಾರೆ. ಅಲ್ಲಿನ ಜನದಟ್ಟಣಿಯಲ್ಲಿ ಹೆದರದೇ ಗಾಡಿ ಓಡಿಸಲು ಬರುತ್ತದೆಂದರೆ ಅದು ಡ್ರೈವಿಂಗ್ ವಿಷಯದಲ್ಲಿ ಬಹುದೊಡ್ಡ ಸರ್ಟಿಫಿಕೇಟು ಎನ್ನುತ್ತಾರೆ. ಎಂ.ಜಿ. ರೋಡ್ ಎಂದರೆ ಅದು ಮಹಾತ್ಮ ಗಾಂಧಿ ರಸ್ತೆ ಅನ್ನೋದು ಕೂಡಾ ಜನಕ್ಕೆ ಮರೆತು ಹೋದಿತೇನೋ ಎಂದು ಭಯದ ಆಡಳಿತದವರು ಕಾರ್ಪೊರೇಷನ್ ಎದುರು ಗಾಂಧೀ ತಾತನ ಪ್ರತಿಮೆ ಸ್ಥಾಪಿಸಿದರು. ಆದರೆ ದುರಂತವೆಂದರೆ 4 ವರ್ಷದಲ್ಲಿ 14 ಬಾರಿ ತಾತನ ಕನ್ನಡಕವನ್ನು ಅಪಹರಿಸಲಾಗಿದೆ.ಈಗ ಆಡಳಿತಕ್ಕೂ ಸಾಕಾಗಿದೆ. ಹಾಗಾಗಿ ತಾತ ಕನ್ನಡಕವಿಲ್ಲದೆ ಬರಿಗಣ್ಣಿನಲ್ಲಿ ಎಲ್ಲಾ ಧಾವಂತಗಳನ್ನು ನೋಡುತ್ತಾ ನಿಂತಿದ್ದಾರೆ. ಎನ್ನುವ ಅವರ ಸೂಕ್ಷ್ಮದೃಷ್ಟಿ ಇಷ್ಟವಾಯಿತು.
ತುಳು ಭಾಷೆ ಮಂಗಳೂರು ಮೂಲದ ಜನರಿಗೆ ಆಕರ್ಷಣೆ ಮತ್ತು ಅನುಭೂತಿ. ಅದು ಅಮ್ಮನ ಲಾಲಿಯ ಹಾಗೆ.ಅದೇ ಅಲ್ಲಿನವರ ಐಕ್ಯತೆಯ ಗುಟ್ಟು. ಕರೆಂಟ್ ಕೈಕೊಟ್ಟರೆ ನಾವು ಅಂಗವಿಕಲರಂತೆ ಆಗಿಬಿಡುತ್ತೇವೆ. ದಿನನಿತ್ಯ ಬಳಸುವ ಮಿಕ್ಸರ್, ವಾಷಿಂಗ್ ಮಷೀನ್, ಇಸ್ತ್ರಿ ಪೆಟ್ಟಿಗೆ, ಮೊಬೈಲ್ ಫ್ಯಾನ್ ಇವುಗಳಿಗೆ ಶರಣಾಗಿರುವ ನಗರವಾಸಿ ಗಳಿಗೆ ಕರೆಂಟು ಇಲ್ಲದಿದ್ದರೆ ಏನೂ ಇಲ್ಲ. ಊಟ, ನಿದ್ದೆ, ಬಟ್ಟೆ, ಸ್ನಾನವೂ ಇಲ್ಲ. ಕೊನೆಗೆ ಬುದ್ಧಿಯೂ ಇಲ್ಲ ಎಂದು ತಮಾಷೆ ಮಾಡಿದ್ದಾರೆ.

ಅಪಾರ್ಟ್ಮೆಂಟ್ ಜೀವನದ ದಿನಚರಿಯ ನೆಲವೆನ್ನದಲ್ಲ ಸೂರು ನಿನ್ನದಲ್ಲ ಎನ್ನುವ ಲೇಖನ, ಹುಡುಗಿಯರು ನಡೆಯುತ್ತಿದ್ದಾಗ ನೋಡಿದ ಅವರ ವಿವಿಧ ಶೈಲಿಯ ಪಾದರಕ್ಷೆಗಳ ಬಗ್ಗೆ ಬರೆದ ಹೀಗೊಂದು ಪಾದುಕಾ ಪ್ರವರ, ಸಿಟಿ ಬಸ್ಸಿನಲ್ಲೇ ಎಲ್ಲಾ ಮಾತುಕತೆ ನಡೆಸುವ ಮಹಾಸಭೆಗಳು, ಸೂರ್ಯ ಮಲಗುವ ಹೊತ್ತಿಗೆ ಎದ್ದೇಳುವ ನೈಟ್ ಶಿಫ್ಟ್ ದುಡಿಮೆಯ ಯುವಜನರ ಆರೋಗ್ಯ, ಟ್ಯೂಷನ್ ಎಂಬ ಭ್ರಮೆ ವಾಸ್ತವಗಳು, ಟಿವಿ ಧಾರಾವಾಹಿಗಳ ಡಿಪ್ರೆಶನ್ ಹಚ್ಚಿ ಕೊಂಡವರು, ಹೊತ್ತು ಗೊತ್ತಿಲ್ಲದೇ ಕೇಳುವ ಗುಜರಿಯವನ ಕೂಗಿಗೆ ಎಚ್ಚರಗೊಳ್ಳುವ ಸ್ಥಿತಿ ಮಂದಿಯ ದ್ದಾದರೂ ಅದರ ಹಿಂದಿನ ಗುಜರಿಯವನ ಬದುಕನ್ನು ವಿವರಿಸಿದ್ದಾರೆ.
ಪಾರ್ಕಿನವರೆಗೆ ಡ್ರೈವಿಂಗ್ ಮಾಡಿಕೊಂಡು ಹೋಗಿ ಆಮೇಲೆ ವಾಕಿಂಗ್ ಮಾಡುವ ಕೆಲವರು, ನಗರದಲ್ಲಿ ಸೊಳ್ಳೆಗಳ ಕಾಟಕ್ಕೆ ಸದಾ ಬಾಗಿಲು ಮುಚ್ಚುವವರು ಹಾಗೂ ಎಲ್ಲೆಂದರಲ್ಲಿ ಕಸ ಎಸೆದು ಪರಾರಿಯಾಗುವ ಜನದ ಬಗ್ಗೆ, ದಿನಪತ್ರಿಕೆ ಓದಲು ಆಸಕ್ತಿ ಇದ್ದರೂ, ತಾವು ಕೊಳ್ಳದೇ ಬೇರೆಯವರು ಓದುತ್ತಿರುವಾಗ ಒಂದೊಂದೇ ಹಾಳೆ ಗಿಟ್ಟಿಸಿ, ಅವರಿಗೂ ನೆಮ್ಮದಿಯಿಂದ ಓದಗೊಡದೇ, ಪುಟಗಳನ್ನು ಹಂಚಿ ಚಿತ್ರಾನ್ನವಾಗಿಸು ವುದನ್ನು ಕುರಿತ “ಇಡಿಯಾಗಿರುವ ಪೇಪರ್ ಬಿಡಿಯಾಗುವ ಬಗೆ” ಲೇಖನ, ಹಾಗೂ ಮಂಗಳೂರಲ್ಲಿ ಆಟ ಅಂದರೆ ಕ್ರಿಕೆಟ್ ಅಲ್ಲ. ಎನ್ನುತ್ತಾ ಅಲ್ಲಿನ ಜನರ ಯಕ್ಷಗಾನದ ಆಟದ ಪ್ರೀತಿಯ ಲೇಖನದಲ್ಲಿ ಚೆಂದವಾಗಿ ಬರೆದಿದ್ದಾರೆ.

ಇಂದಿನ ಜನರ ಮೊಬೈಲ್ ಬಳಕೆ ಬಗ್ಗೆ, ಇನ್ನಷ್ಟು ವರ್ಷ ಕಳೆದರೆ ನಾಯಿ ಬಾಲದಲ್ಲೂ ಮೊಬೈಲ್ ನೇತಾಡಿ ಕೊಂಡಿದ್ದೀತು…ಎಂದು ತಮಾಷೆ ಮಾಡುವ ಅತ್ತೆಯೊಬ್ಬರ ಬಗ್ಗೆ ಹೇಳಿದ್ದಾರೆ. ಮಂಗಳೂರಿನ ಕಡಲು, ಮೀನಿನ ಊಟ,ಕುಚ್ಚಲಕ್ಕಿ ಗಂಜಿ,ಧಗೆ, ಐಸ್ ಕ್ರೀಂ,ಸೆಕೆ, ಮಳೆ ಕೊಡೆ, ಎಲ್ಲವೂ ಇಲ್ಲಿನ ಲೇಖನಗಳ ವಸ್ತು ವೈವಿಧ್ಯ. ಎಲ್ಲಾ ಚೆಂದದ ಲೇಖನಗಳು ಓದುಗನಿಗೆ ಮುದ ನೀಡುತ್ತವೆ.
ಅಂತೆಯೇ ಕಾಲಕಳೆದು ಹೋದರೇನು ಬದುಕು ನವನವೀನ,ಖಾದಿಯ ಖದರು, ಶಿರಸ್ತ್ರಾಣ ಪುರಾಣ ಇನ್ನೂ ಮುಂತಾದ ಲೇಖನಗಳು ನವಿರು ಹಾಸ್ಯದೊಡನೆ ವಾಸ್ತವದತ್ತ ಗಮನ ಸೆಳೆಯುತ್ತವೆ.
- ಮಾಲತಿ ರಾಮಕೃಷ್ಣ ಭಟ್
