‘ಪ್ರತಿಜ್ಞೆ’ ಕೃತಿ ಪರಿಚಯ

ಲೇಖಕಿ ಡಾ. ಸಿ ನಂದಿನಿಯವರು ರಚಿಸಿದ ಇದೊಂದು ಸಾಮಾಜಿಕ ಕಾದಂಬರಿಯಂತೆ ಕಂಡರೂ ಪತ್ತೇದಾರಿ ಕತೆಯಂತಿದೆ. ಸೊಗಸಾದ ನಿರೂಪಣೆ ಹಾಗೂ ಭಾಷಾಶೈಲಿಯಿಂದ ಇದು ಅಂತ್ಯದವರೆಗೂ ಮುಂದೇನು ಎನ್ನುವಂತೆ ಓದಿಸಿಕೊಳ್ಳುತ್ತದೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ ಹೆಸರು: ಪ್ರತಿಜ್ಞೆ.
ಲೇಖಕರು: ಡಾ . ಸಿ .ನಂದಿನಿ.
ಎಸ್.ಎಲ್.ಎನ್.ಪಬ್ಲಿಷಿಂಗ್ ಹೌಸ್ ಬೆಂಗಳೂರು.
ಮುದ್ರಣದ ವರ್ಷ: ೨೦೧೭.
ಪುಟಗಳು: ೧೯೬.
ಬೆಲೆ: ರೂ. ೧೫೭.

ಕತೆಯ ಸಾರಾಂಶವಿಂತಿದೆ.

ಪೋಸ್ಟಾಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ವಿಧುರ ಯೋಗೇಶ್ವರ್ ಅವರ ಇಬ್ಬರು ಹೆಣ್ಣುಮಕ್ಕಳು ಅಕ್ಷತಾ ಹಾಗೂ ನಿರೂಪ. ತಾಯಿಯಿಲ್ಲದ ಮಕ್ಕಳನ್ನು ಅವರು ತುಂಬು ಪ್ರೀತಿ ಹಾಗೂ ಜವಾಬ್ದಾರಿಯಿಂದ ಬೆಳೆಸಿದ್ದರು. ಹಿರಿಯವಳು ರೂಪಿಸಿ ಅಕ್ಷತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಟೆನ್ನಿಸ್ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದಳು. ಧೈರ್ಯವಂತೆಯಾದ ಆಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚುವಾಸೆ.ಗಗನ್ ಎಂಬ ಮತ್ತೊಬ್ಬ ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರನನ್ನು ಅವಳು ಮೆಚ್ಚಿದ್ದಳು. ಮನೆಯಲ್ಲಿ ಈ ಬಗ್ಗೆ ಯಾರಲ್ಲೂ ಹೇಳಿರಲಿಲ್ಲ.ಹಾಗಾಗಿ ದಿನವೂ ಪ್ರಾಕ್ಟಿಸ್ ಮಾಡಲುಅವನೊಂದಿಗೆ ಕ್ಲಬ್ ಗೆ ಹೋಗುತ್ತಿದ್ದಳು.ಅಲ್ಲಿ ಸಹಜವಾಗಿ ಅವಳಿಗೆ ದೊಡ್ಡ ಗಣ್ಯ ವ್ಯಕ್ತಿಗಳ ಪರಿಚಯವಿತ್ತು.

ಇನ್ನು ಸರಳ ಸ್ವಭಾವದ ನಿರೂಪ ಎಂ. ಬಿ. ಎ.ಮುಗಿಸಿ ಕೆಲಸದ ನಿರೀಕ್ಷೆ ಯಲ್ಲಿದ್ದಳು.ಅಂದು ತನ್ನ ಪರಿಚಿತ ಪ್ರಭಾವಶಾಲಿಗಳ ಮೂಲಕ ಅವಳಿಗೇನಾದರೂ ಕೆಲಸ ಕೊಡಿಸುವೆನೆಂದು ಅಕ್ಷತಾ ಕ್ಲಬ್ಬಿನ ಪಾರ್ಟಿಗೆ ತಂಗಿಯನ್ನು ಜೊತೆಗೆ ಕರೆ ತಂದಿದ್ದಳು.ಅಲ್ಲಿ ಎಲ್ಲರ ಗಮನ ಸೆಳೆದ ಅಕ್ಕನನ್ನು ಕಂಡು ನಿರೂಪಳಿಗೆ ಅಭಿಮಾನವೆನ್ನಿಸಿತ್ತು. ಅವಳೂ ಕೂಡಾ ಅಲ್ಲಿ ಪರಿಚಯವಾದ ಶ್ರೀಮಂತ ಕುಟುಂಬದ ಗಗನ್ ನ ಆಕರ್ಷಕ ವ್ಯಕ್ತಿತ್ವಕ್ಕೆ ಮನ ಸೋತಿದ್ದಳು.

ಇದಾಗಿ ಸ್ವಲ್ಪ ದಿನಕ್ಕೆ ಅಕ್ಕನ ಪರಿಚಯದ ಸೌರಭ್ ಎಂಬ ಉದ್ಯಮಿಯೊಬ್ಬರ ಆಫೀಸಲ್ಲಿ ನಿರೂಪಳಿಗೆ ಕೆಲಸವೂ ಸಿಕ್ಕಿತ್ತು.ಅವಳ ಕೆಲಸದಲ್ಲಿನ ನಿಷ್ಠೆ , ವಿನಯಶೀಲ ನಡೆನುಡಿ ಸೌರಭ್ ನಿಗೂ ಇಷ್ಟವಾಗಿತ್ತು. ಆತನೂ ಕೂಡಾ ಟೆನ್ನಿಸ್ ಆಟಗಾರನೇ!! ಎನ್ನುವುದೂ ವಿಶೇಷ.

ಹೀಗೆ ಕೆಲವು ತಿಂಗಳ ಬಳಿಕ ಇದ್ದಕ್ಕಿದ್ದಂತೆ ಒಂದುದಿನ ಅಪ್ಪ ಆಫೀಸಿಗೆ ಫೋನ್ ಮಾಡಿ ಅಕ್ಷತಾ ನೇಣು ಹಾಕಿಕೊಂಡಿದ್ದಾಳೆ. ಬೇಗನೇ ಮನೆಗೆ ಬಾ…ಎಂದಾಗ ದುಃಖ ಭಯ ಆತಂಕಗಳಿಂದ ಮನೆಗೆ ಧಾವಿಸಿದ್ದಳು. ಪೊಲೀಸಿನವರು ಪ್ರಶ್ನೆಗಳ ಸುರಿಮಳೆ ಎಸಗಿ, ಸರಿಯಾದ ಸಾಕ್ಷಿಗಳು ಸಿಗದ ಪ್ರಯುಕ್ತ ಅದು ‘ಆತ್ಮಹತ್ಯೆ ‘ ಎಂದು ಸಾಬೀತು ಮಾಡಿದ್ದರು. ಆದರೆ ನಿರೂಪಳಿಗೆ ಮಾತ್ರ ಇದು ಅಸಹಜ ಸಾವು ಎಂದೇ ಸಂದೇಹವಾಗುತ್ತಿತ್ತು.

ಮೊದಲು ಹೆಂಡತಿ ಇದೀಗ ಕರುಳ ಕುಡಿಯನ್ನು ಕಳೆದುಕೊಂಡ ಸಂಕಟದಲ್ಲಿ ಕುಸಿದ ತಂದೆಯನ್ನು ಸಮಾಧಾನಿಸುತ್ತಲೇ ನಿರೂಪ ಅಕ್ಕನ ಸಾವಿನ ರಹಸ್ಯ ಬಂಧಿಸುವ ಪ್ರತಿಜ್ಞೆ ಮಾಡಿದಳು. ಯಾರೆಷ್ಟೇ ಹೇಳಿದರೂ ಕೇಳದೇ ಮಾಡುತ್ತಿದ್ದ ಕೆಲಸ ಬಿಟ್ಟು,ಮೊದಲ ಹೆಜ್ಜೆಯಾಗಿ ಅಕ್ಕನ ಕಾಣೆಯಾದ ಫೋನ್ ಬಗ್ಗೆ ತಿಳಿಯುವ ಪ್ರಯತ್ನದಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಳು.

ಇದಾದ ನಂತರ ಪೊಲೀಸ್ ಇನ್ಸ್ಪೆಕ್ಟರ್ ಶರಣ್, ತನ್ನ ಬಾಸ್ ಸೌರಭ್ ಹಾಗೂ ಟೆನ್ನಿಸ್ ಆಟಗಾರ ಗಗನ್ ಎಲ್ಲರ ಮೇಲೂ ಅನುಮಾನ ಪಡುವ ನಿರೂಪ ಯೋಗೇಶ್ವರ್ ಅವರಿಗೊಂದು ಸಮಸ್ಯೆಯಾಗುತ್ತಾಳೆ. ಸಾಲದ್ದಕ್ಕೆ ತನ್ನ ಅಕ್ಕನಿಗೆ ಮೋಸ ಮಾಡಿದ್ದು ಅವನೇ ಎನ್ನುವ ಸತ್ಯವನ್ನು ತಿಳಿಯದೆ ಗಗನ್ ಜೊತೆ ಸ್ನೇಹ ಬೆಳೆಸಿ,ಅಪಾಯಕ್ಕೆ ಸಿಕ್ಕಿದ್ದು ಕೂಡ ಅರಿವಿಗೆ ಬರದೇ ಅವನೊಂದಿಗೆ ವಿದೇಶಕ್ಕೆ ಟೂರ್ನಮೆಂಟಿಗೆ ಹೋಗುವ ಮೊದಲು ವಿವಾಹವಾಗಲು ಬಯಸುತ್ತಾಳೆ. ಇದಕ್ಕೆ ಗಗನ್ ಒಪ್ಪುತ್ತಾನೆಯೇ?. ಅಕ್ಷತಾಳ ಮೊಬೈಲ್ ಪತ್ತೆಯಾಯಿತೇ? ಅವಳದು ಆತ್ಮಹತ್ಯೆಯೋ … ಅಥವಾ ಕೊಲೆಯೋ?.

ಸೌರಭ್ ಶರಣ್ ಇಬ್ಬರೂ ಸೇರಿ ಸೈಕೋ ಗಗನ್ ನಿಂದ ಅಕ್ಕನ ದಾರಿಯಲ್ಲೇ ಸಾಗುತ್ತಿದ್ದ ನಿರೂಪಳನ್ನು ಸಾವಿನ ದವಡೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾದರೆ ?…
ಇದೆಲ್ಲವೂ ಬಹಳ ಕುತೂಹಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ಸುಂದರ ಕುಟುಂಬ ಹೇಗೆ ನಾಶವಾಯಿತು ಎನ್ನುವುದರ ಸುತ್ತ ಹೆಣೆದ ಈ ಕಾದಂಬರಿಯ ಮುಕ್ತಾಯ ಕೂಡಾ ಓದುಗರನ್ನು ನಿರಾಸೆ ಗೊಳಿಸುವುದಿಲ್ಲ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು  ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ  ಪುಸ್ತಕಗಳ ಪರಿಚಯ : 

ಪುಸ್ತಕ ಓದಿ

  • ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading