‘ಬರೆಯದ ಪುಟಗಳು ಇನ್ನೂ ಇವೆ’ ಕವನ

ಸ್ವಂತದ ದಿನಚರಿ ಮತ್ತೆ ತೆರೆದು ನೋಡುವುದು ಹಳೆಯ ಶಿಕ್ಷಕರ ಹಠಾತ್‌ ರಸ್ತೆಯಲ್ಲಿ ಭೇಟಿಯಾದಂತೆ…ಕವಿ ಟಿ.ಪಿ.ಉಮೇಶ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ದಿನಚರಿಯ ಮತ್ತೆ ತೆರೆದು ನೋಡುವುದು
ಇನ್ನೂ ಹೊರಡದ ಬಸ್ಸಿನಲ್ಲಿ
ಟಿಕೇಟು ಪಡೆದುಕೊಂಡು ಕುಳಿತಂತೆ!
ಯಾವ ನಿಲ್ದಾಣದಲ್ಲಿ ಹತ್ತಿದೆವೊ
ಯಾವ ನಿಲ್ದಾಣದಲ್ಲಿ ಇಳಿವೆವೊ ತಿಳಿದು ತಿಳಿಯದಂತೆ
ಯಾರನ್ನು ಕಂಡೆವೊ ಅಪ್ಪಿ ಬೀಳ್ಕೊಟ್ಟೆವೊ
ನೆನಪಿದು ಕರೆಂಟು ಹೋಗಿ ಬಂದಂತೆ!
ನಿಲ್ದಾಣದ ನಿರ್ವಾಹಕರ ಸೀಟಿ
ಗಾಳಿಯಲ್ಲೇ ತೇಲಿ ಬೇರೆ ಕಾಲದ ನೆನಪು ಕೇಳಿಸುತ್ತದೆ
ಹಳೆಯ ಪ್ರಕಟಣೆಗಳ ಬಣ್ಣ ಉದುರುತ್ತದೆ
ಅವುಗಳನ್ನು ಸರಿಪಡಿಸಬೇಕೆಂದುಕೊಳ್ಳುತ್ತೇವೆ
ಪ್ರವೇಶ ನಿಷೇಧ ಎಂಬ ಫಲಕದ ಮುಂದೆ
ನಮ್ಮ ಹೆಜ್ಜೆಗಳೇ ನಿಧಾನವಾಗುತ್ತವೆ!

ಸ್ವಂತದ ದಿನಚರಿ
ಮತ್ತೆ ತೆರೆದು ನೋಡುವುದು
ಹಳೆಯ ಶಿಕ್ಷಕರ ಹಠಾತ್‌ ರಸ್ತೆಯಲ್ಲಿ ಭೇಟಿಯಾದಂತೆ!
ಮುಖದ ಮಡಿಕೆ ಚುಕ್ಕೆಗಳ ನಡುವೆ
ಹಿಂದಿನ ಮಮತೆ ಉಳಿದಿರುತ್ತದೆ!
ನಮ್ಮ ಹೆಸರು ನೆನಪಿಲ್ಲದಿದ್ದರೂ
ನಾವು ಒಮ್ಮೆ ಅವರ ತರಗತಿಯಲ್ಲಿ
ಕಿಟಕಿಯಾಚೆ ನೋಡುತ್ತಿದ್ದ ಮಕ್ಕಳಿವರು ಎಂಬ ಭಾವ
ಅವರ ಕಣ್ಣಲ್ಲಿ ಹೊಳೆಯುತ್ತದೆ!

ಈಗಿನ ಸ್ವಂತದ ದಿನಚರಿಗಳನ್ನು
ಮತ್ತೆ ತೆರೆದು ನೋಡುವುದೆಂದರೆ
ಬಿಟ್ಟು ಬಂದ ಮನೆಯ ಮೇಲ್ಮೆಟ್ಟಿಲಿಗೆ
ಮತ್ತೆ ಹತ್ತಿದಂತೆ!
ಗೋಡೆಯ ಬಣ್ಣಗಳು ಬದಲಾಗಿರುತ್ತವೆ
ಒಮ್ಮೆ ನಮ್ಮ ಎತ್ತರ ಗುರುತಿಸಿದ್ದ ಗೆರೆಗಳು
ಇನ್ನೂ ಅಲ್ಲಿ ಮಸುಕಾಗಿ ಕಾಣುತ್ತವೆ!
ಕೆಲ ಬಿರುಕುಗಳಲ್ಲಿ ಮಳೆ ನೀರು ನಿಂತಿರುತ್ತದೆ
ಕೆಲ ಮೂಲೆಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿರುತ್ತವೆ
ನಮ್ಮ ಹೆಜ್ಜೆಗಳ ಸದ್ದು ಉಸಿರಿನ ಪ್ರತಿಧ್ವನಿ ಮಾತ್ರ
ಇನ್ನೂ ಮನೆ ಬಿಟ್ಟಿರದು!

ಈಗಿನ ಸ್ವಂತದ ದಿನಚರಿಗಳನ್ನು
ಮತ್ತೆ ಮತ್ತೆ ಓದಬಾರದು!
ಅವು ಮುಗಿದ ಋತುಗಳನ್ನು
ಇನ್ನೂ ಮುಂದುವರಿಯುತ್ತಿರುವಂತೆ ತೋರಿಸುತ್ತವೆ!
ನಾವು ಕಳೆದುಕೊಂಡವರ ಧ್ವನಿಯನ್ನು
ಇನ್ನೂ ಹತ್ತಿರದಲ್ಲೇ ಇವೆ ಎಂದು ನಂಬಿಸುತ್ತವೆ!

ಹಳ್ಳಿಗಳು ವೃದ್ಧರಿಂದ ಗೊಣಗುತ್ತಿವೆ
ನಗರಗಳು ಇನ್ನೂ ಧೂಳಿನಿಂದ ತುಂಬುತ್ತಿವೆ
ನದಿಗಳು ದಾರಿ ತಪ್ಪುತ್ತಿವೆ
ಮರಗಳ ನೆರಳು ಕಡಿಮೆಯಾಗುತ್ತಿದೆ
ಮಕ್ಕಳು ಹೊಸ ಭಾಷೆಗಳಲ್ಲಿ ಅಳುತ್ತಿದ್ದಾರೆ
ಯಾರೋ ಮತ್ತೊಮ್ಮೆ ಸಂಬಂಧಗಳಿಗೆ ನವೀನ
ಗಡಿ ರೇಖೆಗಳ ಎಳೆಯುತ್ತಿದ್ದಾರೆ!

ಕಿಟಕಿಗಳು ಇನ್ನೂ ತೆರೆದುಕೊಳ್ಳುತ್ತಿವೆ
ಮಾನವರು ಇನ್ನು ಬದುಕಿನ ಮಾತಾಡುತ್ತಿದ್ದಾರೆ
ಬರೆಯದ ಪುಟಗಳು ಇನ್ನೂ ಉಳಿದಿವೆ!


  • ಟಿ.ಪಿ.ಉಮೇಶ್ –  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ತುಪ್ಪದಹಳ್ಳಿ ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading