ತೆಂಕಣಗಾಳಿ, ಚಿ ಮೂ ಮೇಷ್ಟ್ರು ಮತ್ತು ಪೆಸಿಫಿಕ್

ಮಗನ ಮನೆಯ ಮುಂದೆಯೇ ಪೆಸಿಫಿಕ್ ಸಾಗರ. ಇಲ್ಲಿ ಪ್ರವಾಸಿಗಳಾಗಿ ಬಂದಿದ್ದೇನೆ. ಆದರೂ ಸದಾ ಕಾಲ ಸಾಗರದ ವ್ಯಾಪಾರಗಳನ್ನು ಕಾಣುತ್ತಿರುವ ಸೌಭಾಗ್ಯ ನನ್ನದು. ಲೇಖಕರಾದ ಡಾ.ಗಿರಿಜಾ ಶಾಸ್ತ್ರಿ ಅವರು ಬರೆದ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ….

ಸಿಯಾಟಲ್ಲಿನ ಆಲ್ಕಿ ಬೀಚಿನ ಮುಂದೆ ನಿಂತಾಗ ಪಂಜೆ ಮಂಗೇಶರಾಯರು ಮತ್ತು ನಮ್ಮ ಮೇಷ್ಟ್ರು ಚಿದಾನಂದ ಮೂರ್ತಿಗಳು ಒಮ್ಮೆಲೆ ನೆನಪಾಗುತ್ತಾರೆ. ನಾವು ಬೀಚಿಗೇನೂ ಹೋಗಬೇಕಿಲ್ಲ. ಆಲ್ಕಿ ಬೀಚು ನಮ್ಮ ಮನೆಯ ಬಾಲ್ಕನಿಯಿಂದ ಮಾತ್ರವಲ್ಲ, ಅಡುಗೆ ಮನೆ, ಲಿವಿಂಗ್ ರೂಮು ಮಲಗುವ ಕೋಣೆಗಳ ಗಾಜು ಕಿಟಕಿಗಳಿಂದಲೂ ಕಾಣುತ್ತದೆ.
ಅಗಲವಾದ ಉದ್ದ ರಸ್ತೆಯಮೇಲೆ ಓಡಾಡುವ ನಾನರಿಯದ ದುಬಾರಿ ಕಾರುಗಳು. ರಸ್ತೆಯ ಆಚೀಚೆಗೆ ಒಂದು ಕಡೆ ಅಪಾರ್ಟಮೆಂಟುಗಳಾದರೆ ಇನ್ನೊಂದು ಕಡೆ ಪೆಸಿಫಿಕ್ ಸಾಗರ.ಹಗಲಲ್ಲಿ ಒಂದು ರೂಪವಾದರೆ , ರಾತ್ರಿ ಮಿನುಗುವ ದೀಪಗಳ ಬೆಳಕಲ್ಲಿ ಇನ್ನೊಂದು ಅದ್ಭುತ ಅನುಭೂತಿ.

ನನ್ನ ಬಾಲ್ಯ ಕಳೆದದ್ದು ಮೈಸೂರು ಬೆಂಗಳೂರುಗಳಲ್ಲಿ. ಸಮುದ್ರ, ಸಾಗರಗಳನ್ನು ಭೂಗೋಳದ ಪುಟಗಳಲ್ಲೋ ಕನ್ನಡ ಕಾವ್ಯಗಳಲ್ಲೋ ಮಾತ್ರ ಕಂಡವಳು ನಾನು. “ಭವಸಾಗರ ದಾಟಿಸು”, “ದಡಮುಟ್ಟಿಸು” “ನೌಕೆ ಮುಳುಗದಿರಲಿ” ಎಂಬ ಹಾಡುಗಳ ಸಾಲುಗಳಲ್ಲಿ ಮಾತ್ರ ಕಂಡ ಸಮುದ್ರ ನಿಜವಾಗಿ ಅನುಭೂತಿಗೆ ದಕ್ಕುವುದಿಲ್ಲ. ಅದು ದಕ್ಕಬೇಕಾದರೆ ಅದರ ಮುಂದೆ ನಿಲ್ಲಬೇಕು! ಒಳಗೆ ಇಳಿಯುವುದು ನಮ್ಮಳವಲ್ಲ.

ಸಮುದ್ರವನ್ನೇ ಕಾಣದವಳು ಮದುವೆಯಾದ ಆನಂತರ ನೀರಿನಲೆಗಳ ಮಧ್ಯೆ ಸಿಕ್ಕಿದ ಬಂಡೆಗಲ್ಲುಗಳ ಹಾಗೆ ಉರುಳುರುಳಿ ಅರಬ್ಬಿ ದಡಕ್ಕೆ ಬಿದ್ದೆ. ಮುಂಬಯಿಯಲ್ಲಿ ನಲವತ್ತು ವರುಷಗಳ ಬದುಕು. ಆ ಮಾಯಾನಗರಿ ಪಾಠ ಕಲಿಸಿದ ಹಾಗೆ ಮತ್ತಾವ ನಗರವೂ ಕಲಿಸಲಾರದು. ಉರುಳುರುಳಿ ನಾನು ನುಣುಪಾದದ್ದು (ಅಥವಾ ಹಾಗೆ ಭಾವಿಸಿರುವುದು) ಅಲ್ಲಿಯೇ.

ಈಗ ಮಗನ ಮನೆಯ ಮುಂದೆಯೇ ಪೆಸಿಫಿಕ್ ಸಾಗರ. ಇಲ್ಲಿ ಪ್ರವಾಸಿಗಳಾಗಿ ಬಂದಿದ್ದೇನೆ. ಆದರೂ ಸದಾ ಕಾಲ ಸಾಗರದ ವ್ಯಾಪಾರಗಳನ್ನು ಕಾಣುತ್ತಿರುವ ಸೌಭಾಗ್ಯ ನನ್ನದು. ಈ ಸಾಗರಗಳ ಪ್ರಸ್ತುತಿ ನಮ್ಮ ಕಾವ್ಯಗಳಲ್ಲಿ ಸಂದರ್ಯೋಪಾಸನೆಗೆ ಮಾತ್ರ. ಆದರೆ ಇಲ್ಲಿ ಅದು ಅನೇಕ ಚಟುವಟಿಕೆಗಳ ತವರು. ವಿಸ್ಮಯಗಳ ಲೋಕ.

ಚಳಿ ಪ್ರಾರಂಭವಾಗಿರುವ ಈ ಶರದ್ ಋತುವಿನ (ಫಾಲ್ )ಮುಂಜಾನೆ , ಸಂಜೆಗಳಲ್ಲಿ ಬಾಲವೃದ್ಧರೂ ತುಂಡು ಬಟ್ಟೆಗಳಲ್ಲಿ ಸಾಗರದ ಹಾದಿಗುಂಟ ಹಾಸಿರುವ ಹಸುರಿನ ಇಕ್ಕೆಲಗಳ ಫುಟ್ ಪಾತಿನ ಮೇಲೆ ಶಿಸ್ತಾಗಿ ಓಡುತ್ತಿರುತ್ತಾರೆ. ನಾವು ಮಾತ್ರ ಕೈಗವಸು, ಮುಖಗವಸು , ವಜ್ರಕವಚಗಳನ್ನು ತೊಟ್ಟು “ಹು..ಹು..ಚಳಿ ಚಳಿ…‌” ಎಂದು ಬೀದಿಗಿಳಿಯುತ್ತೇವೆ ವಾಯು ವಿಹಾರಕ್ಕಾಗಿ. ಮೀನುಗಳೋ, ಸೀಲ್, ಓಟರ್ ಗಳೋ ಒಮ್ಮೊಮ್ಮೆ ಕಣ್ಣಿಗೆ ಬಿದ್ದು, ಬೆರಗು “ಏಯ್ …ಅಲ್ಲಿ ” ಎನ್ನುವಷ್ಟರಲ್ಲಿಯೇ ಬುಳಕ್ಕನೆ ನೀರೊಳಗೆ ಮುಳುಗಿ ಮಾಯವಾಗಿಬಿಡುತ್ತವೆ. ಅವಕ್ಕೆ ನಮ್ಮ ಭಯ! ನಮಗೆ ವಿನೋದ!

ಎಲ್ಲಿಂದಲೋ ಭರ್ರನೆ ಬಂದು ನೀರನ್ನು ಮುಟ್ಟಿದಂತೆ ಮಾಡಿ ಕ್ಷಣಮಾತ್ರದೊಳಗೆ ಮೀನುಗಳನ್ನು ಕಚ್ಚಿಕೊಂಡು ಸರ್ರನೆ ಹಾರಿ ಬಿಡುವ ಕಡಲವಕ್ಕಿಗಳ ‘ಉಭಯ’ ಸುಮ್ಮಾನ! ಕಂಠ ಮಾತ್ರ ಕರ್ಕಶ.

ಒಮ್ಮೊಮ್ಮೆ ದೂರದಲ್ಲಿ ತೇಲುವ ಮರಗಳು ಸಾಗರನ ಜೀವಿಗಳಂತೇ ಕಾಣಿಸಿ ಭ್ರಮೆ ಹುಟ್ಟಿಸುತ್ತವೆ. ಅವುಗಳ ಬದಿಯಲ್ಲೇ ಹಾಯಿದೋಣಿಗಳು, ದೊಡ್ಡ ಹಡಗುಗಳು, ಸರಕು ಸರಂಜಾಮುಗಳನ್ನು ಹೊತ್ತೊಯ್ಯುವ ಬೃಹದ್ ‘ಬೇಸಿನ್ ‘ಗಳು ಮೋಟಾರ್ ಬೋಟುಗಳು, ವಾಟರ್ ಟ್ಯಾಕ್ಸಿ ಮುಂತಾದವು ಹಾಯುತ್ತವೆ. ನೀರಮೇಲೆ ಚಲಿಸಿ ಹಾರುವ ವಾಟರ್ ಪ್ಲೇನುಗಳೂ ಉಂಟು.

ಸೂರ್ಯ ಕೃಪೆ ತೋರಿದರೆ ಆಚೆ ದಡದವರೆಗಿನ ಸಾಗರ ವ್ಯಾಪಾರದ‌ ವಿಸ್ಮಯಗಳು ಮೈತೆರೆದುಕೊಳ್ಳುತ್ತವೆ. ಇಲ್ಲದಿದ್ದರೆ ಜಗತ್ತೇ ಬೂದು ಛಾಯೆಯನ್ನು ಹೊತ್ತಂತೆ. ಎಲ್ಲ, ಮಂಜು ಮುಸುಕು ಹೊದ್ದು ಮಸಕು ಮಸಕು ಮಾಯೆ. ಸಂಜೆ ಏಳರ ಮೈ ಕೊರೆಯುವ ಚಳಿಯಲ್ಲಿಯೂ ಸ್ತ್ರೀಪುರುಷರಾದಿಯಾಗಿ sea divers ಗುಂಪು ಗುಂಪಾಗಿ ಭಾರವಾದ ಆಮ್ಲಜನಕದ ಸಿಲಿಂಡರುಗಳನ್ನು ಹೊತ್ತು ನೀರಿಗಿಳಿಯುತ್ತಾರೆ. ಅವರ ವೇಷಭೂಷಗಳೇ ಬೇರೆ. ಅವರ ದೈಹಿಕ ಕ್ಷಮತೆಯನ್ನು ನೋಡಿಯೇ ನಾವು ನಡುಗಿ ಹೋಗಬೇಕು. “ಸಾಗರನ ಹೃದಯದೊಳಗಿನ ರತ್ನ ಪರ್ವತ ಮಾಲೆ”ಗಳ ಸಂಶೋಧನೆಯೋ ? ಪ್ರಾಣಿ ಸಂಕುಲ ಅಧ್ಯಯನವೋ? ಎಂಥ ಉತ್ಸಾಹ! ಧೈರ್ಯ! ಕೇಕೆ….

ದೂರದಿಂದ ಹಡಗು ಸೈರನ್ ಕೂಗುತ್ತದೆ. ಸೀ ಡೈವರ್ ಗಳು ನೀರೊಳಗೆ ಮುಳುಗಿ ಕಾಣೆಯಾಗುತ್ತಾರೆ. ನಿದ್ದೆ ಬಾರದ ನೀರವ ರಾತ್ರಿಗಳಲ್ಲಿ ಸಾಗರ ದಡಕ್ಕೆ ಬಡಿಯುವ ಸದ್ದು ಕೇಳಿಸುತ್ತದೆ. ಬಾಲ್ಕನಿಗೆ ಬಂದರೆ ಧುತ್ತನೆ ಪಂಜೆಯವರ ‘ತೆಂಕಣಗಾಳಿ’ ಸುಯ್ಯೆಂದು ಬೀಸುತ್ತದೆ. ಎದುರಿನ ಸಾಗರ ಸಾಕ್ಷಿಯಾಗಿ..

“ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ,
ಅಬ್ಬರದಲಿ ಭೋರ್ ಭೋರನೆ ಗುಮ್ಮಿಸಿ,

ಬರುತದೆ! ಮೈತೋರದೆ ಬರುತದೆ! ಅದೆ –
ನಡುಮುರಿಯುತ ನಗನಾವೆಗೆ, ಕೂವೆಗೆ
ಉಡಿಸಿದ ಹಾಯಿಯ ಹರಿಯುತ ಬಿರಿಯುತ,
ಹಡಗನು ಕೀಲಿಸಿ, ತುಮುರನು ತೇಲಿಸಿ,
ದಡದಲಿ ಝಾಡಿಸಿ, ದೋಣಿಯನಾಡಿಸಿ

ಇದೆ! ಇದೆ! ಬರುತಿದೆ! ಇದೆ! ಇದೆ! ಬರುತಿದೆ –
ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ ……

“ದಡಕ್ಕೆ…. ಹೊಮ್ಮಿಸಿ” ಎನ್ನುವಾಗ ನಮ್ಮ ಚಿ ಮೂ ಮೇಷ್ಟ್ರು ಶಬ್ದ ನಾಟ್ಯ ಕ್ರಿಯೆಯನ್ನು ತಮ್ಮ ಕೈಕಾಲು ಚಲನೆಗಳ ಮೂಲಕ ಹಾರಿ ಕುಣಿದು ತೋರಿಸುತ್ತಿದ್ದ ಚಿತ್ರ ಕಣ್ಣ ಮುಂದೆ ಬರುತ್ತದೆ. ವ್ಯಾಕರಣದ ಯಾವ ವೈಚಿತ್ರ್ಯ/ ವೈಶಿಷ್ಟ್ಯದ ಕುರಿತು ಹೇಳುತ್ತಿದ್ದರೋ ನೆನಪಾಗದು.

ಬಹುಶಃ ಆಧುನಿಕ‌ ಕನ್ನಡ ಕವಿಗಳಲ್ಲಿ‌ ಸಮುದ್ರ ಮೊದಲು ದಕ್ಕಿದ್ದು ಪಂಜೆಯವರಿಗೇ ಇರಬೇಕು. (ಆನಂತರ ಗೋಕಾಕರಿಗೆ ಇರಬಹುದು) ಪಂಜೆಯವರು ಸಾಕ್ಷಾತ್ಕರಿಸಿಕೊಂಡ ಸಮುದ್ರವನ್ನು ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರದ ತರಗತಿಯೊಳಗೆ ತಂದವರು ನಮ್ಮ ಚಿ ಮೂ ಮೇಷ್ಟ್ರು.

ಬಾಲ್ಯದಲ್ಲಿ ಕಲಿತ ಪಂಜೆಯವರ ಕವಿತೆಯ, ನಲವತೈದು ವರುಷಗಳ ಹಿಂದೆ ಕೇಳಿದ ಚಿ ಮೂ ಮೇಷ್ಟ್ರರ ಪಾಠಗಳ ಸಾಕ್ಷಾತ್ಕಾರವಾಗಿದ್ದು ನನಗೆ ದೂರದ ಸಿಯಾಟಲ್ ನಗರದ ಪೆಸಿಫಿಕ್ ದಡದ ಮೇಲೆ. ಆ ಪಠ್ಯಗಳ ಸೂತ್ರ ಹಿಡಿದುಕೊಂಡೇ ಪೆಸಿಫಿಕ್ ಅಗಾಧತೆಯ ಮುಂದೆ ನಿಂತಾಗ ಸಾಗರ ನನ್ನೊಳಗೆ ಅನಾವರಣಗೊಳಿಸಿದ್ದು ಒಂದು ಅಮೂರ್ತ ಸಂಚಲನೆ ! ಇಷ್ಟಾದರೂ ಸಾಗರನನ್ನು ಮುಟ್ಟುವ ಧೈರ್ಯಬಂದಿಲ್ಲ. ಮರಗಟ್ಟಿದ ದೇಹಕ್ಕೆ ಸಂವೇದನೆಯಾದರೂ ಎಲ್ಲಿ?.

ಇಂತಹ ನೀರೊಳಗೆ ಇಳಿದೂ ದೇಹ ಮರಗಟ್ಟದೇ, ಏಕಕಾಲಕ್ಕೆ ತನ್ಮಯತೆ ಮತ್ತು ಅರಿವಿನ ( involvement and awareness) ಸ್ಥಿತಿಗೆ ತಲಪಲು ನಾನು ಇನ್ನು ಎಷ್ಟು ಜನ್ಮ ತಪಗೈಯ್ಯಬೇಕೋ?


  • ಡಾ ಗಿರಿಜಾ ಶಾಸ್ತ್ರಿ – ಲೇಖಕರು, ಚಿಂತಕರು,

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading