ಶ್ಯಾಮನ ತಾಯಿ ಕೃತಿ ಪರಿಚಯ

ಸಾನೆ ಗುರೂಜಿಯವರ ‘ಶ್ಯಾಮನ ತಾಯಿ’ ಕೃತಿಯಲ್ಲಿ 248 ಪುಟಗಳಿದ್ದು, ಒಂದು ಜೀವಮಾನದ ಕುಟುಂಬದ ಕಥೆಯಾಗಿದೆ. ಈ ಕೃತಿಯ ಕುರಿತು ಲೇಖಕರಾದ ಅರುಣ್ ಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಶ್ಯಾಮನ ತಾಯಿ
ಲೇಖಕರು : ಬಾಲಚಂದ್ರ ಗಣೇಕರ ಮತ್ತು ಸಾನೆ ಗುರೂಜಿ
ಪ್ರಕಾಶನ : ಸಮಾಜ ಪುಸ್ತಕಾಲಯ, ಧಾರವಾಡ
ಬೆಲೆ : 435 .00

ಕಣ್ಣೀರ ಧಾರೆ ಮತ್ತು ಕರಗಿದ ಮನಸ್ಸು. ಶ್ಯಾಮನ ತಾಯಿ ಪುಸ್ತಕದ ಜೊತೆ ಕಳೆದ ದಿನಗಳು.

​ಕೆಲವು ಪುಸ್ತಕಗಳು ಕೇವಲ ಅಕ್ಷರಗಳಲ್ಲ ಅವು ಜೀವಂತ ಅನುಭವಗಳು. ಅಂಥದ್ದೇ ಒಂದು ಅಪರೂಪದ, ಆರ್ದ್ರ ಅನುಭವವನ್ನು ನೀಡಿದ್ದು  ಪೂಜ್ಯ ಸಾನೆ ಗುರೂಜಿ ಅವರ ‘ಶ್ಯಾಮನ ತಾಯಿ’ (ಮರಾಠಿಯಲ್ಲಿ  ಶ್ಯಾಮಾಚಿ ಆಯಿ).

​ಕಳೆದ ವರ್ಷ ಅಂದರೆ 2025ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಧಾವಂತದ ದಿನಗಳ ನಡುವೆ ಈ ಪುಸ್ತಕವನ್ನು ಓದಲು ಕೈಗೆತ್ತಿಕೊಂಡಿದ್ದೆ. ಇಂದು 2026ರ ಅಕ್ಟೋಬರ್ 20ರಂದು ಕೊನೆಯ ಪುಟವನ್ನು ಮುಚ್ಚಿ ಕೆಳಗಿಟ್ಟಾಗ ಮನಸ್ಸು ತೀವ್ರವಾಗಿ ಕದಡಿಹೋಗಿತ್ತು, ಕಣ್ಣುಗಳು ತೇವವಾಗಿದ್ದವು.

ಹಾಗಂತ ಇದು ದೊಡ್ಡ ಪುಸ್ತಕವಲ್ಲ 248 ಪುಟಗಳ ಸಣ್ಣ ಪುಸ್ತಕ. ಇದರಲ್ಲಿ ಒಂದು ಜೀವಮಾನದ ಕುಟುಂಬದ ನಿಜ ಕಥೆ ಇದೆ. ಈ ಹತ್ತು ತಿಂಗಳುಗಳಲ್ಲಿ ಈ ಕೃತಿಯ ಪುಟಗಳನ್ನು ತಿರುವಿದಷ್ಟೂ ಎಷ್ಟು ಬಾರಿ ಕಣ್ಣೀರು ಸುರಿಸಿದೆನೋ ನನಗೇ ಲೆಕ್ಕವಿಲ್ಲ.

​ಶ್ಯಾಮನ ಬಾಲ್ಯ, ಆತನ ಬಡತನ, ಆತನ ಮುಗ್ಧತೆ, ಎಲ್ಲಕ್ಕಿಂತ ಹೆಚ್ಚಾಗಿ ಆತನನ್ನು ಮನುಷ್ಯತ್ವದ ಮೂರ್ತಿಯನ್ನಾಗಿ ರೂಪಿಸಿದ ಆ ತಾಯಿಯ ನಿಸ್ವಾರ್ಥ ವಾತ್ಸಲ್ಯ—ಪ್ರತಿಯೊಂದು ಅಧ್ಯಾಯವೂ ಎದೆಯನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಸಣ್ಣಪುಟ್ಟ ತಪ್ಪುಗಳಲ್ಲೂ ಮಗನಿಗೆ ಅರಿವು ಮೂಡಿಸುವ ಆಕೆಯ ರೀತಿ, ಹಸಿವಿನ ನಡುವೆಯೂ ಉಳಿಸಿಕೊಂಡ ಘನತೆ, ಕಷ್ಟಗಳ ನಡುವೆಯೂ ಕಳೆದುಕೊಳ್ಳದ ಆತ್ಮಸ್ಥೈರ್ಯ ಎಂಥ ಕಲ್ಲೆದೆಯ ಮನುಷ್ಯನನ್ನೂ ಕರಗಿಸಿ ಬಿಡುತ್ತದೆ.

​ಪುಸ್ತಕವನ್ನು ಓದುವಾಗ ಕೇವಲ ಶ್ಯಾಮನ ಕತೆಯಷ್ಟೇ ಎದುರಿಗೆ ಬರಲಿಲ್ಲ,ನಮ್ಮೂರಿನ ಮಣ್ಣು, ನಮ್ಮ ಬಾಲ್ಯ, ನಮ್ಮ ತಂದೆ, ತಾಯಂದಿರ ತ್ಯಾಗ, ಅವರ ವಾತ್ಸಲ್ಯದ ಕಣಕಣವೂ ನೆನಪಾಗಿ ಕಣ್ಣಂಚು ಒದ್ದೆಯಾಗುತ್ತಿತ್ತು.

ಆಧುನಿಕ ಬದುಕಿನ ಯಾಂತ್ರಿಕತೆಯಲ್ಲಿ ಮರೆಯಾಗುತ್ತಿರುವ ಮಮತೆ, ಸಂಸ್ಕಾರ ಮತ್ತು ನೈತಿಕತೆಯ ನಿಜವಾದ ಬೆಲೆ ಏನು ಎಂಬುದನ್ನು ಈ ಕೃತಿ ಮೌನವಾಗಿಯೇ ಬಡಿದೆಬ್ಬಿಸುತ್ತದೆ.
​ಸಾನೆ ಗುರೂಜಿಯವರ ಈ ಕೃತಿಯನ್ನು ಕೇವಲ ಓದಬಾರದು ಅದನ್ನು ಅನುಭವಿಸಬೇಕು. ಇಂದಿನ ಈ ದಿನಗಳಲ್ಲಿ ಒಳಗಿನ ಮನುಷ್ಯತ್ವವನ್ನು, ಆರ್ದ್ರತೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಲೇಬೇಕಾದ ಮಹಾನ್ ಕೃತಿಯಿದು.

​ಇಂದು ಪುಸ್ತಕ ಮುಗಿದಿರಬಹುದು ಆದರೆ ಶ್ಯಾಮನ ತಾಯಿ ಎದೆಯಾಳದಲ್ಲಿ ಬಿಟ್ಟುಹೋದ ಆ ಬೆಳಕು, ಆ ಕಣ್ಣೀರು ಮಾತ್ರ ಎಂದಿಗೂ ಮಾಸದು.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿಗಳು, ಲೇಖಕರು, ಹೊಸನಗರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading