ರಾಮಾಯಣ ಕಥಾ ಸರಣಿ – ಭಾಗ ೧

ನಚಿಕೇತನು ಕೇಳಿದ ಎರಡನೇ ವರದಂತೆ, ಸ್ವರ್ಗಲೋಕವನ್ನು ಕರುಣಿಸುವ ‘ಅಗ್ನಿವಿದ್ಯೆ’ಯನ್ನು ಯಮನು ಅತ್ಯಂತ ವಿವರವಾಗಿ ಬೋಧಿಸುತ್ತಾನೆ. ರವೀಂದ್ರ ಕುಮಾರ್ ಎಲ್ವಿ ಅವರು ರಾಮಾಯಣ ಕಥಾ ಸರಣಿಯನ್ನು ತಪ್ಪದೆ ಮುಂದೆ ಓದಿ…

ಶ್ಲೋಕ -೧೫

ಲೋಕಾದಿಮಗ್ನಿಂ ತಮುವಾಚ ತಸ್ಮೈ ಯಾ ಇಷ್ಟಕಾ ಯಾವತೀರ್ವಾ ಯಥಾ ವಾ ।
ಸ ಚಾಪಿ ತತ್ಪ್ರತ್ಯವದದ್ಯಥೋಕ್ತಮಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ ॥೧೫ll

ಶ್ಲೋಕಾರ್ಥ:

ಲೋಕಕ್ಕೆಲ್ಲ ಆದಿಕಾರಣವಾದ ಹಾಗೂ ಸ್ವರ್ಗಪ್ರಾಪ್ತಿಗೆ ಸಾಧನವಾದ ಆ ಅಗ್ನಿವಿದ್ಯೆಯ ರಹಸ್ಯವನ್ನು, ಅದಕ್ಕೆ ಬಳಸಬೇಕಾದ ಇಟ್ಟಿಗೆಗಳು ಎಂತಹುದು, ಅವುಗಳ ಸಂಖ್ಯೆ ಎಷ್ಟು ಮತ್ತು ಆ ಯಜ್ಞಕುಂಡವನ್ನು ಹೇಗೆ ಜೋಡಿಸಬೇಕು ಎಂಬ ಸಂಪೂರ್ಣ ವಿಧಿವಿಧಾನಗಳನ್ನು ಯಮಧರ್ಮರಾಯನು ನಚಿಕೇತನಿಗೆ ಉಪದೇಶಿಸಿದನು. ನಚಿಕೇತನು ಕೂಡ ಯಮನು ಹೇಳಿಕೊಟ್ಟ ಎಲ್ಲ ವಿಷಯಗಳನ್ನು ಗ್ರಹಿಸಿ ಯಥಾವತ್ತಾಗಿ ತಿರುಗಿ ಯಮನಿಗೆ ಹೇಳಿದನು. ನಾಚಿಕೇತನ ಈ ಅದ್ಭುತ ಬುದ್ಧಿಶಕ್ತಿ ಮತ್ತು ಏಕಾಗ್ರತೆಯನ್ನು ಕಂಡು ಮೃತ್ಯುದೇವನಾದ ಯಮನು ಅತ್ಯಂತ ಸಂತೋಷಗೊಂಡು, ಅವನಿಗೆ ಆ ರಹಸ್ಯ ವಿದ್ಯೆಯನ್ನು ಮತ್ತಷ್ಟು ಅನುಗ್ರಹಿಸಲು ಮುಂದಾದನು.

ಎಲ್ಲ ಲೋಕಗಳಿಗೂ ಕಾರಣಕರ್ತನಾದ, ಲೋಕದ ಆದಿಗೆ ಕಾರಣವಾದ, ಸಕಲ ಜೀವಜಾತಕ್ಕೂ ಕಾರಣವಾದ ಅಗ್ನಿವಿದ್ಯೆ ಅಥವಾ ಅಗ್ನಿನಾರಾಯಣ ವಿದ್ಯೆಯನ್ನು ಯಮನು ನಚಿಕೇತನಿಗೆ ಉಪದೇಶಿಸಿದ ಎಂದಷ್ಟೇ ಹೇಳಲಾಗಿದೆ. ಯಜ್ಞ ಕುಂಡಕ್ಕೆ ಎಂತಹ ಇಟ್ಟಿಗೆಗಳು ಬೇಕು, ಎಷ್ಟು ಬೇಕು, ಮತ್ತು ಯಾಗ/ ಯಜ್ಞವನ್ನು ಹೇಗೆ ಮಾಡ ಬೇಕು ಎಂಬುದನ್ನು ತಿಳಿಸಿದನು. ಆದರೆ ಏನನ್ನು ಉಪದೇಶಿಸಿದ ಎಂದು ಎಲ್ಲಿಯೂ ಬಿಡಿಸಿ ಹೇಳಿಲ್ಲ. ಅದೇ ಅಗ್ನಿ ವಿದ್ಯೆಯ ರಹಸ್ಯವೆಂದೂ ಅದನ್ನು ಗುರು ಮುಖೇನ ತಿಳಿಯಬೇಕೆಂದು ಕೆಲ ಪ್ರವಚನಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಇಷ್ಟಕಾ ಎಂದರೆ ಇಟ್ಟಿಗೆ ಎಂಬುದು ಬಾಹ್ಯಾರ್ಥ. ಬಾಹ್ಯದಲ್ಲಿ ಮಾಡುವ ಯಜ್ಞಕ್ಕೆ ಕುಂಡ ಬೇಕು, ಕುಂಡಕ್ಕೆ ಇಟ್ಟಿಗೆಗಳು ಬೇಕು. ಅಂತಾರಾರ್ಥ ನೋಡಿದರೆ ಇಷ್ಟ – ಕಾ ಎಂದರೆ ಇಷ್ಟ ಕಾಮ್ಯ ಎನ್ನಬಹುದು. ಯಾವುದನ್ನು ಇಷ್ಟಪಡಬೇಕು ಮತ್ತು ಯಾವ ರೀತಿಯಲ್ಲಿ ಅದನ್ನು ಪೂರೈಸಬೇಕು (ಯಾವ – ತೀರ್ವಾ ) ಎಂಬುದನ್ನು ತಿಳಿಸುವ ಪ್ರಜ್ಞೆಯೇ ತ್ರಿಲೋಚನಾಗ್ನಿ.

ಚಂದ್ರ, ಸೂರ್ಯ ಮತ್ತು ಜ್ಯೋತಿ – ಇವೇ ಮೂರು ಅಗ್ನಿಲೋಚನಗಳು.

ಬಾಹ್ಯ ರೂಪಗಳನ್ನು ನೋಡಬೇಕು, ಅಂತರ್ದೃಷ್ಟಿಯಿಂದ ವಿಚಾರ ಮಾಡಬೇಕು ಮತ್ತು ವಿವೇಕ ಪ್ರಜ್ಞೆಯ ಬೆಳಕಿನಲ್ಲಿ ಜಗತ್ತಿನ ವಸ್ತು ವಿಷಯಗಳನ್ನು ಅನುಭವಿಸಬೇಕು.

ಹೀಗೆ ಅನಿತ್ಯದಲ್ಲೇ ಇದ್ದು ನಿತ್ಯವಾವುದೆಂಬುದನ್ನು ಅರಿತು, ಸರಿಯಾದುದನ್ನು, ಶ್ರೇಷ್ಠವಾದುದನ್ನು ಆಯ್ದುಕೊಂಡು ಶ್ರೇಯೋಭಿವೃದ್ಧಿಯ ಹಾದಿಯಲ್ಲಿ ಮುಂದೆ ಸಾಗಬೇಕು ಎಂಬುವ ಸಂದೇಶ.

ಶಾಸ್ತ್ರೀಯವಾಗಿ ೩೬೦ ಇಟ್ಟಿಗೆಗಳನ್ನು ಬಳಸಿ ಯಜ್ಞಕುಂಡವನ್ನು ಮಾಡಬೇಕೆಂಬುದು ನಿಯಮ. ಸಾಮಾನ್ಯವಾಗಿ ಯಜ್ಞಕುಂಡಗಳನ್ನು ೧೮ ಇಟ್ಟಿಗೆಗಳಿಂದ ಮಾಡುತ್ತಾರೆ.

ಅಗ್ನಿಮುಖವಾದ ಯಜ್ಞವನ್ನು ಮೂರುವಿಧದಲ್ಲಿ ಮಾಡುತ್ತಾರೆ.

ಒಂದು – ದೇಹವೇ ಅಗ್ನಿಕುಂಡ. ವೈಶ್ವಾನರನೇ ಅಗ್ನಿ. ನಮ್ಮ ಬದುಕೇ ಯಜ್ಞ. ನಾವು ಸ್ವೀಕರಿಸುವ ಆಹಾರವೇ ಹವಿಸ್ಸು. ಉಂಟಾಗುವ ಶಕ್ತಿಯೇ ಯಜ್ಞಶಿಷ್ಟ. ಅದರಿಂದ ಮತ್ತೆ ಯಜ್ಞ ಕಾರ್ಯವೆಂಬಂತೆ ಆತ್ಮಯಜ್ಞ. ನಮ್ಮ ದೇಹದಲ್ಲೂ ೩೬೦ ಅಸ್ಥಿಗಳಿವೆಯೆಂದೂ ಅವುಗಳನ್ನೇ ದೇಹಕುಂಡದ ಇಟ್ಟಿಗೆಗಳೆoಬ ಭಾವನೆ.

ಮಾನವನು ಅಂತರ್ಮುಖಿಯಾಗಿ ಮಾಡುವ ಜಪಯಜ್ಞವೇ ಶ್ರೇಷ್ಠವೆಂದೂ ಹೇಳಲಾಗಿದೆ. ಈ ಯಜ್ಞಕ್ಕೆ ಕುಂಡವನ್ನು ಪರಮಾತ್ಮನೇ ಸೃಷ್ಟಿಸಿ ಕೊಟ್ಟಿದ್ದಾನೆ. ಅಲ್ಲಿರುವ ವೈಶ್ವಾನರಾಗ್ನಿಯ ಶಕ್ತಿಯೇ ಕುಂಡಲಿನಿ, ಅಂದರೆ ಕುಂಡದಲ್ಲಿರುವ ಶಕ್ತಿ. ಹೀಗೆ ಊರ್ಧ್ವಗಮನ ಮಾಡುವುದೇ ಬ್ರಹ್ಮಸ್ಥಾನವನ್ನು ತಲುಪುವಿಕೆ ಎನ್ನಲಾಗಿದೆ.

ಎರಡು – ಬಾಹ್ಯಾಗ್ನಿಕುಂಡದಲ್ಲಿ ಸಾಮಾಜಿಕ ಹಿತದೃಷ್ಟಿಯಿಂದ ಮಾಡುವ ಯಜ್ಞ. ಯಜುರ್ವೇದದ ಪ್ರಕಾರ ಪ್ರಕೃತಿಯಿಂದ ಪಡೆದುದನ್ನು ಪ್ರಕೃತಿಗೇ ಕೊಡುವ ಯಜ್ಞ.

ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಿಂದ ಪಡೆದದ್ದನ್ನು, ಸೇವೆ ಮಾಡುವ ಮೂಲಕ ಸಮಾಜಕ್ಕೆ ಮರು ಸಲ್ಲಿಸುವ ಅಥವಾ ಹೆಚ್ಚಾಗಿ ಸಲ್ಲಿಸುವ ಕಾರ್ಯವೂ ಯಜ್ಞವೇ ಎನ್ನಲಾಗಿದೆ.

ಮೂರನೆಯದು ಕಾಲದ ದೃಷ್ಟಿಯಿಂದ ಮಾಡುವ ಯಜ್ಞ. ಒಂದು ವರ್ಷದ ಕಾಲದಿಂದ ಮತ್ತೊಂದು ವರ್ಷದ ಅದೇ ಕಾಲದವರೆಗೂ ನಡೆಸುವ ಯಜ್ಞ. ಅದೂ ಕೂಡಾ ೩೬೦ ದಿನಗಳನ್ನು ಹೊಂದಿದೆ.

ಮುಂದುವರೆಯುವುದು.


  • ರವೀಂದ್ರ ಕುಮಾರ್ ಎಲ್ವಿ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading