‘ಅರಳಿಮರ’ ಪುಸ್ತಕ ಪರಿಚಯ

ಚೇತನಾ ತೀರ್ಥಹಳ್ಳಿ ಮತ್ತು ಚಿದಂಬರ ನರೇಂದ್ರ ಲೇಖಕರ ಅರಳಿಮರ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ಅರಳಿಮರ.
ಲೇಖಕರು: ಚೇತನಾ ತೀರ್ಥಹಳ್ಳಿ ಮತ್ತು ಚಿದಂಬರ ನರೇಂದ್ರ.
ಸಾವಣ್ಣ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨0೧೯ರಿಂದ ೨೦೨೨(೨ ಮುದ್ರಣ).
ಪುಟಗಳು:೧೩೨.
ಬೆಲೆ:೧೨೦.

ಸಾವಣ್ಣ ಪ್ರಕಾಶನದ ಜಮೀಲ್ ಅವರು ಸದಾ ಹೊಸಪ್ರಯೋಗಗಳಿಗೆ ಹೆಸರುವಾಸಿ. ಇಲ್ಲಿಯೂ ಅವರು ಬರೋಬ್ಬರಿ 150 ಝೆನ್, ಸೂಫಿ ಇತ್ಯಾದಿ ಪುಟ್ಟ ಪುಟ್ಟ ಕತೆಗಳನ್ನು ಇಬ್ಬರು ಲೇಖಕರಿಂದ ಬರೆಸಿದ್ದಾರೆ.

ಒಂದು ಕಪ್ ಚಹಾದೊಡನೆ ಇವನ್ನು ಓದಲು ಕುಳಿತರೆ, ಅದನ್ನು ಹೀರಿ ಮುಗಿಸುವುದರೊಳಗೆ ಕತೆಗಳೂ ಮುಗಿದು ಹೋಗುವಷ್ಟು ಚಿಕ್ಕ ಕತೆಗಳಿವು. ಅದಕ್ಕೆಂದೇ ಇವನ್ನು Tea Time Stories ಎಂದು ಕರೆದಿದ್ದಾರೆ. ಲೇಖಕರಾದ ಚೇತನಾ ತೀರ್ಥಹಳ್ಳಿ ಇವರು 1 ರಿಂದ 79 ಕಥೆಗಳು ಹಾಗೂ ಚಿದಂಬರ ನರೇಂದ್ರ ಇವರು 80 ರಿಂದ 150 ಕಥೆಗಳನ್ನು ಅನುವಾದಿಸಿ ಬರೆದಿದ್ದಾರೆ.

ನಮ್ಮ ಧರ್ಮಗಳು,ಅಧ್ಯಾತ್ಮ ಪರಂಪರೆಗಳು ತತ್ವಹೇಳುವ ಕಥೆಗಳನ್ನು ಬಳಸಿಕೊಂಡಿರುವ ಬಗೆ ನಿಜಕ್ಕೂ ಬೆರಗು ಹುಟ್ಟಿಸುತ್ತವೆ. ಈಗ ಅಂತಹ ಕಥೆಗಳ ಮಾದರಿಯನ್ನು ನೋಡೋಣವೇ?…

* ಚಹಾ ಬಟ್ಟಲಿನ ಕೊನೆಗಳಿಗೆ.

ಬಾಲ್ಯದಿಂದಲೂ ಬುದ್ಧಿವಂತನಾಗಿದ್ದ ಝೆನ್ ಮಾಸ್ಟರ್ ಇಕ್ಕಿ ಎಂಬಾತ ಗುರುಕುಲದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಅವನ ಗುರುವಿನ ಬಳಿ ಚೆಂದದ ಒಂದು ಚಹಾಬಟ್ಟಲಿತ್ತು. ಅವರದನ್ನು ಜೋಪಾನವಾಗಿಟ್ಟಿದ್ದರು. ಒಮ್ಮೆ ಕಸ ಗುಡಿಸುವಾಗ ಇಕ್ಕಿಯು ಅದನ್ನು ಬೀಳಿಸಿ ಒಡೆದು ಬಿಟ್ಟಿದ್ದ. ಅದೇ ಸಮಯಕ್ಕೆ ಗುರುವಿನ ಹೆಜ್ಜೆ ಸಪ್ಪಳವೂ ಕೇಳಿಬಂತು. ಆಗ ಇಕ್ಕಿ ತನ್ನ ಗಾಬರಿಯನ್ನು ತೋರಿಸಿಕೊಳ್ಳದೇ ಚಹಾಬಟ್ಟಲಿನ ಚೂರುಗಳನ್ನು ಹಿಡಿದು ಬೆನ್ನಹಿಂದೆ ಅಡಗಿಸಿ ನಿಂತ.

“ಗುರುಗಳೇ, ಜನರೇಕೆ ಸಾಯುತ್ತಾರೆ? “ಕೇಳಿದ.

“ಅದು ಸಹಜ.ಸಮಯ ಬಂದಾಗ ಎಲ್ಲವೂ ಕೊನೆಯಾಗಲೇ ಬೇಕು.” ಎನ್ನುವ ಉತ್ತರ ಅವರಿಂದ ಬಂದಿತು. ಆಗ ಇಕ್ಕಿ ತನ್ನ ಕೈಯನ್ನು ಮುಂದೆ ಚಾಚುತ್ತಾ, “ಈ ಚಹಾ ಬಟ್ಟಲಿಗೂ ಕೊನೆಘಳಿಗೆ ಬಂದಿತ್ತು”.. ಎಂದ.

*ಝೆನ್ ಗುರು ನಕ್ಕಿದ್ದು ಯಾಕೆ?..

ಚೀನಾದಲ್ಲಿ ಒಬ್ಬ ಯುವ ಝೆನ್ ಸನ್ಯಾಸಿಯಿದ್ದ. ಗಂಭೀರವಾಗಿ ಅಭ್ಯಾಸ ಮಾಡುವ ಆತ ಸದಾ ಬಿಗಿದ ಮುಖದಲ್ಲೇ ಇರುತ್ತಿದ್ದ. ಒಮ್ಮೆ ಯಾವುದೋ ಅರ್ಥವಾಗದ ಅಧ್ಯಾಯವೊಂದನ್ನು ತಿಳಿಯದೇ ಗುರುವಿನ ಬಳಿ ಕೇಳಲು ಹೋದಾಗ,ಗುರು ಜೋರಾಗಿ ನಗ ತೊಡಗಿದ್ದರು. ಈಗ ಶಿಷ್ಯನಿಗೆ, ಗುರು ಹಾಗೆ ನಕ್ಕಿದ್ದೇಕೆಂದು ತಿಳಿಯದೇ ತಲೆಬಿಸಿ ಶುರುವಾಯಿತು.
ಹೀಗೇ ಮೂರುದಿನ ಕಳೆಯಿತು. ಕೊನೆಗೂ ಧೈರ್ಯ ಮಾಡಿ ಗುರುವಿನಲ್ಲಿ ಮೊನ್ನೆ ನನ್ನ ಪ್ರಶ್ನೆಗೆ ನೀವು ನಕ್ಕಿದ್ದೇಕೆಂದು ಕೇಳಿದ.

“ಮತ್ತೆನ್ನೇನು ಮಾಡಲಿ? ..ನೀನೇನು ಝೆನ್ ಕಲಿಯುತ್ತಿ? ಯಾರಾದರೂ ನಕ್ಕರೆ ನಮ್ಮ ಮುಖದಲ್ಲೂ ನಗೆ ಮೂಡಬೇಕು.ಅದರ ಬದಲು ಮುಖ ಗಂಟು ಹಾಕಿಕೊಳ್ಳುವುದೇ?… ಕೇಳಿದ ಗುರುವಿನ ಮಾತಿಗೆ ಈಗ ಶಿಷ್ಯನು ನಗತೊಡಗಿದ.ಗುರು ಶಿಷ್ಯರ ನಗುವೀಗ ಆಶ್ರಮದ ಹೊರಗೂ ಕೇಳಿಸತೊಡಗಿತು.

* ಬುದ್ಧ ಸುಮ್ಮನೆ ಇದ್ದುದು ಯಾಕೆ?

ಬುದ್ಧ ತನ್ನ ಪರಿವಾರದೊಡನೆ ಕುಳಿತಾಗ ಆಗಂತುಕನೊಬ್ಬ ಬಂದು, ಹಿಂದುಮುಂದಿಲ್ಲದೆ ಅವನನ್ನು ವಾಚಾಮಗೋಚರವಾಗಿ ಬಯ್ಯ ತೊಡಗಿದ. ಕೊನೆಗೆ ಬೈದೂ ಬಯ್ದು ಸಾಕಾಗಿ ಅಲ್ಲಿಂದ ಹೊರಟು ಹೋದ.ಆತನಲ್ಲಿಗೆ ಬರುವಾಗಲೂ,ಹೋದಾಗಲೂ ಮುಗುಳ್ನಗುತ್ತಲೇ ಇದ್ದ ಬುದ್ಧ. ಆ ನಗುವಿನಲ್ಲಿ ವ್ಯಂಗವಾಗಲೀ ಉದಾಸೀನವಾಗಲಿ, ವಿಷಾದದ ಲೇಪವಾಗಲೀ ಕಿಂಚಿತ್ತೂ ಇರಲಿಲ್ಲ. ಇದನ್ನು ಕಂಡ ಶಿಷ್ಯ ಗುರುವಿಗೆ ” ಅವನು ಅಷ್ಟೆಲ್ಲ ಬೈದರೂ ನೀವ್ಯಾಕೆ ಸುಮ್ಮನಿದ್ದೀರಿ? ಸಾಲದ್ದಕ್ಕೆ ನಗುತ್ತಲೇ ಇದ್ದೀರಿ!”…

ಬುದ್ಧ ಕೇಳಿದ,ಯಾರಾದರೂ ಬಂದು ನಿನ್ನ ಚೀಲಕ್ಕೆ ಏನಾದರೂ ಹಾಕುತ್ತಾರೆ ಅಂತಿಟ್ಟುಕೋ…ಅದನ್ನು ನೀನು ಸ್ವೀಕರಿಸಿದರೆ ಏನಾಗುತ್ತದೆ ?”
“ಚೀಲದ ತೂಕ ಜಾಸ್ತಿಯಾಗಿ ಹೊರಲು ಭಾರವಾಗುತ್ತದೆ.’

“ಅದನ್ನು ಸ್ವೀಕರಿಸದೆ ಇದ್ದರೆ?’…..

“ಆ ಪದಾರ್ಥ ಅವನಲ್ಲೇ ಉಳಿಯುತ್ತೆ ಮತ್ತು ನಾನು ಎಂದಿನಂತೆ ಖಾಲಿಚೀಲ ಹೊತ್ತು ನಡೆಯುತ್ತೇನೆ.”

“ನಾನು ಮಾಡಿದ್ದೂ ಅದನ್ನೇ.ಅವನ ಬೈಗುಳಗಳನ್ನು ನಾನು ಸ್ವೀಕರಿಸ ಲಿಲ್ಲವಾದ್ದರಿಂದ ನನ್ನಲ್ಲಿ ಯಾವ ಬದಲಾವಣೆಯೂ ಘಟಿಸಲಿಲ್ಲ.”
ಎಂದ ಬುದ್ಧ.

* ಅವರು ಕೊಂದೇಬಿಟ್ಟರೆ ಏನೆನ್ನಿಸುತ್ತದೆ?

ಬುದ್ಧನಿಗೆ ಪೂರ್ಣ ಎಂಬ ಶಿಷ್ಯನಿದ್ದ. ತನ್ನ ಸಾಧನೆ ಪೂರ್ತಿಯಾಯಿ ತೆನಿಸಿದಾಗ ಆತ ” ಸೂಖಾ “ದ ಕಡೆ ಹೋಗಲು ಗುರುವಿನ ಅನುಮತಿ ಕೇಳಿದ.ಸೂಖಾ ಎಂದರೆ ಬಿಹಾರದಲ್ಲಿರುವ ಚಿಕ್ಕ ಊರು. ಅಲ್ಲಿ ಬರೀ ದುಷ್ಟ ಜನರೇ ತುಂಬಿದ್ದರು.ಅದನ್ನು ನೆನೆದು ಬುದ್ಧ,

“ಅಲ್ಲಿನ ಜನರು ನಿನಗೆ ಕಿರುಕುಳ, ಹಿಂಸೆ ಕೊಡಬಹುದು.ಆಗ ನಿನಗೇನೆನ್ನಿಸುತ್ತದೆ ?’ ಅದಕ್ಕೆ ಪೂರ್ಣ, “ಅವರು ಪ್ರಾಣವನ್ನೇನು ತೆಗೆಯುವುದಿಲ್ಲವಲ್ಲ! ಅದಕ್ಕಾಗಿ ನಾನವರಿಗೆ ಕೃತಜ್ಞನಾಗಿರುತ್ತೇನೆ” ಎಂದ.

‘ಯಾರಾದರೂ ನಿನ್ನನ್ನು ಕೊಲ್ಲಲು ಮುಂದಾದರೆ?…

“ಆಗಲೂ ನನ್ನಿಂದ ಮುಂದೆ ನಡೆಯಬಹುದಾದ ತಪ್ಪುಗಳಿಂದ ಬಿಡುಗಡೆ ಗೊಳಿಸಿರುತ್ತಾರೆ”.. ಎಂದು ಭಾವಿಸುತ್ತೇನೆಂದ.!

ಬುದ್ಧನಿಗೆ ಖುಶಿಯಾಯಿತು.ಈಗ ನೀನೆಲ್ಲಿಗೆ ಬೇಕಾದರೂ ಹೋಗಬಹುದು. ನಿನಗೆ ಈ ಭೂಮಂಡಲದಲ್ಲಿ ಎಲ್ಲರೂ ಬಂಧುಗಳೇ ಆಗಿದ್ದಾರೆ.ಇಂತಹ ಮನಸ್ಥಿತಿಯುಳ್ಳವನಿಗೆ ಭೂಮಿಯ ಮೇಲೆ ಕೆಡುಕೇ ಕಾಣಸಿಗದು.. ಎಂದು ಮನದುಂಬಿ ಹಾರೈಸಿದ.

ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?.. ಇಂತಹ ಹಲವಾರು ಪುಟ್ಟ ಪುಟ್ಟ ಕಥೆಗಳು ನಮ್ಮನ್ನು ಚಿಂತನೆಗೆ ಒರೆಹಚ್ಚಿ , ತಪ್ಪುಗಳನ್ನು ತಿದ್ದಿಕೊಳ್ಳಲು ದಿಕ್ಸೂಚಿಯಾಗಿವೆ. ಒಂದು ಗಂಟೆಯ ಉಪನ್ಯಾಸದ ಸಾರವನ್ನು ಒಂದೇ ಒಂದು ಪುಟದ ಕಥೆಯಲ್ಲಿ ಕಟ್ಟಿಕೊಡುವ ತಂತ್ರಗಾರಿಕೆಯಿಂದ ಇವು ಜನರಿಗೆ ಇಷ್ಟವಾಗುತ್ತವೆ . ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿ ಕೊಳ್ಳಬಹುದಾದ ಸಾಕಷ್ಟು ವಿಷಯಗಳು ಇಲ್ಲಿವೆ ಎನ್ನಬಹುದು.

ನೀವೂ ಒಮ್ಮೆ ಓದಿ ನೋಡಿ…


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading