‘ಮನುಜ ಚಿತ್ತ ಹರಿವು ದೆತ್ತ’ ಕೃತಿ ಪರಿಚಯ

ಲೇಖಕರಾದ ಹರಿನರಸಿಂಹ ಉಪಾಧ್ಯಾಯ ಅವರ ‘ಮನುಜ ಚಿತ್ತ ಹರಿವು ದೆತ್ತ’ ಕೃತಿಯಲ್ಲಿ 70 ಲೇಖನಗಳು ವಿವಿಧ ವಿಚಾರಧಾರೆಯ ರಸದೌತಣವನ್ನು ಉಣಬಡಿಸುತ್ತವೆ. ಈ ಕೃತಿಯ ಕುರಿತು ಲೇಖಕರಾದ ಪುಷ್ಪಲತಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ: ಮನುಜಚಿತ್ತ ಹರಿವುದೆತ್ತ
ಪ್ರಕಾರ :
ಚಿಂತನಾರ್ಹ ಬರಹಗಳು
ಲೇಖಕರು: ಹರಿನರಸಿಂಹ ಉಪಾಧ್ಯಾಯ
ಪ್ರಕಾಶಕರು : ಹೆಚ್.ಎಸ್.ಆರ್.ಎ.ಪ್ರಕಾಶನ

“ಮನುಜ ಚಿತ್ತ ಹರಿವುದೆತ್ತ” ಎಂಬ ಶೀರ್ಷಿಕೆಯೇ ಈ ಲೇಖನ ಗುಚ್ಚದ ಬಗ್ಗೆ ಬಹಳಷ್ಟು ಕುತೂಹಲ ಉಂಟು ಮಾಡುತ್ತದೆ. ಹೌದು, ಗಾಳಿಗಿಂತ ವೇಗವಾಗಿ ಚಲಿಸುವ ನಮ್ಮ ಮನಸ್ಸು, ನಾಗಾಲೋಟದಲ್ಲಿ ಸಾಗುವ ಯೋಚನೆಗಳನ್ನು ಯಾರಿಂದಲೂ ತಡೆಹಿಡಿಯಲು ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ.‌ ಇಂತಹ ವಿವಿಧ ವಿಚಾರಗಳು, ಆಲೋಚನೆಗಳು, ಚಿಂತನ ಮಂಥನಗಳ ಮೂಲಕ, ನಮ್ಮ ಚಿತ್ತವನ್ನು ಯಾವ ರೀತಿ ಎಲ್ಲೆಲ್ಲಿ ಹರಿಬಿಡುತ್ತೇವೆ, ಆ ವಿಚಾರಗಳ ಫಲಿತಾಂಶ ಅಥವಾ ಪ್ರತಿಫಲ ಏನೆಂಬುದನ್ನು ಈ ಲೇಖನಗಳ ಗುಚ್ಚದಲ್ಲಿ ನಾವು ಕಾಣಬಹುದು.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಕೈಯಾಡಿಸಿ ಅತ್ಯುತ್ತಮ ಸಾಹಿತ್ಯವನ್ನು ಓದುಗರಿಗೆ ನಿರಂತರವಾಗಿ ನೀಡುತ್ತಿರುವ ಶ್ರೀಯುತ ಹರಿನರಸಿಂಹ ಉಪಾಧ್ಯಾಯರ ಚಿತ್ತ ಲೇಖನದತ್ತ ವಾಲಿದೆ. ಈಗಾಗಲೇ ಹದಿಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು, ಸಮಕಾಲೀನ ಸಾಹಿತ್ಯ ವಲಯದಲ್ಲಿ ಅತ್ಯಂತ ಚಿರಪರಿಚಿತ ಕವಿ ಮತ್ತು ಸಾಹಿತಿಯಾಗಿದ್ದಾರೆ.

ವಿವಿಧ ವಿಷಯಗಳನ್ನು ಕುರಿತು ಇವರು ಬರೆದಿರುವ ಸುಮಾರು ಎಪ್ಪತ್ತು ಲೇಖನಗಳ ಗುಚ್ಛ “ಮನುಜ ಚಿತ್ತ ಹರಿವುದೆತ್ತ”. ಇಲ್ಲಿರುವ ಪ್ರತಿಯೊಂದು ಲೇಖನಗಳು ವಿವಿಧ ವಿಷಯಗಳ ಕುರಿತು ಚಿಂತನ ಮಂಥನಕ್ಕೆ ಎಡೆ ಮಾಡುವುದಲ್ಲದೆ, ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಯೊಂದು ವಿಷಯಗಳ ಆಯ್ಕೆ, ಆ ವಿಷಯದ ಸುತ್ತ ಬರುವ ವಿಚಾರಗಳು, ಸಂಸ್ಕಾರಗಳು, ಸಂಸ್ಕೃತಿ, ನಾಡು ನುಡಿ, ಗಾದೆ ಮಾತುಗಳನ್ನು ಲೇಖನದಲ್ಲಿ ಸಂದರ್ಭೋಚಿತವಾಗಿ ಬಳಸಿದ್ದಾರೆ.

ಆಚಾರವಿಲ್ಲದ ನಾಲಿಗೆಯಿಂದ ಹಿಡಿದು ಕೀಳು ರಾಜಕೀಯ ಬೇಕೆ ಎಂಬುದನ್ನು ಪ್ರಶ್ನಿಸುತ್ತಾರೆ. ಪ್ರತಿ ಲೇಖನಗಳು ಯಾವುದೇ ಒಂದು ಚೌಕಟ್ಟು ಅಥವಾ ಒಂದು ಇತಿಮಿತಿಗೆ ಒಳಗಾಗದೇ, ಕಪೋಲಕಲ್ಪಿತವಾಗದೆ, ಸ್ಪಷ್ಟವಾದಂತ ಅಪಾರ ಅರ್ಥವನ್ನು ಕೊಡುತ್ತವೆ. ಓದಿದವರು “ಇದು ಹೌದು” ಈ ರೀತಿ ಯಾಕಾಯಿತು, ಹೀಗೆ ಮಾಡಿದರೆ ಹೇಗಾಗಬಹುದು ಎನ್ನುವ ಚಿಂತನ ಮಂಥನಕ್ಕೆ ಒಳಗಾಗುವ ವಿಷಯಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಬಹಳ ಸಮಂಜಸವಾಗಿದೆ. ಇದಲ್ಲದೆ ಕೋವಿಡ್ 19 ರ ಸಮಯದಲ್ಲಿ ನಡೆದಂತಹ ಫಜೀತಿಗಳಿರಬಹುದು, ಲಾಕ್ ಡೌನಿನಲ್ಲಿ ಎದುರಿಸಿದ ಸಮಸ್ಯೆಗಳಿರಬಹುದು ಹಾಗೆಯೇ ಕರೋನಾ ಸಂದರ್ಭದಲ್ಲಿ ವಿಶ್ವದಲ್ಲಾದಂತ ಬದಲಾವಣೆಗಳನ್ನು ಕಾಣಬಹುದು.‌ ಹೆಣ್ಣಿನ ಜೀವನ, ಅಸಮಾನತೆಯ ತೂಗುಯ್ಯಾಲೆ ಮಾತ್ರವಲ್ಲದೆ, ಮಹಿಳೆಯರು ಸಬಲ ಸಾಧಕೀಯರು ಎಂದು ಸಾರುವಂಥ ಲೇಖನಗಳು ಎಲ್ಲರಿಗೂ ಇಷ್ಟವಾಗುತ್ತವೆ.

ಮನುಷ್ಯನ ಸಹಜ ಗುಣವಾದ ಮರೆವು ವರವೋ ಶಾಪವೋ ಎಂದು ಪ್ರಶ್ನಿಸುತ್ತ, ಕರ್ನಾಟಕದ ಇತಿಹಾಸವನ್ನು ಪುಟ್ಟದಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಅಪ್ಪ ಅಮ್ಮನಂತೆ ಇದ್ದರೆ! ಓದುವಾಗ ಭಾವುಕಳಾಗಿದ್ದು ಸುಳ್ಳಲ್ಲ. ಸ್ವಾತಂತ್ರ್ಯೋತ್ಸವ ಒಳಗೊಂಡಂತೆ ಮಹಿಳೆಯರಿಗೆ ಸ್ಪೂರ್ತಿಯಾಗಿರುವಂತ ವಿಜಯಲಕ್ಷ್ಮಿ ಶಿಬರೂರು ಇವರ ಕುರಿತು ಕೂಡ ಲೇಖನವಿದೆ. ಹೀಗೆ 70 ಲೇಖನಗಳು ವಿವಿಧ ವಿಚಾರಧಾರೆಯ ರಸದೌತಣವನ್ನು ಉಣಬಡಿಸುತ್ತವೆ.

ವಯಸ್ಸು, ಲಿಂಗಭೇದವಿಲ್ಲದೆ ಈ ಲೇಖನ ಮಾಲಿಕೆಯನ್ನು ಪ್ರತಿಯೊಬ್ಬ ಕನ್ನಡಿಗನು ಖರೀದಿಸಿ ಓದಿಕೊಳ್ಳಬಹುದು.‌ ಇದನ್ನು ಮನೆಯ ಗ್ರಂಥಾಲಯದಲ್ಲಿಟ್ಟು ಆಗಾಗ ಓದುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಇದರಲ್ಲಿರುವ ವಿಚಾರಗಳನ್ನು ಅರಿತು ತಮ್ಮನ್ನು ತಾವು ಬದಲಾಯಿಸಿಕೊಳ್ಳಬಹುದು ಮತ್ತು ಸಮಾಜಕ್ಕೆ ತಾವು ಕೊಡಬಹುದಾದಂತಹ ಕೊಡುಗೆಗಳನ್ನು ಮನನ ಮಾಡಿಕೊಂಡರೆ, ಲೇಖಕರ ಪರಿಶ್ರಮಕ್ಕೆ ಕೃತಜ್ಞತೆಯನ್ನು ಸಲ್ಲಿಸಿದಂತಾಗುತ್ತದೆ. ಮುಂದೆಯೂ ಇದೇ ರೀತಿ ಇನ್ನಷ್ಟು ಮತ್ತಷ್ಟು ಸಾಹಿತ್ಯ ಕೃತಿಗಳು ಬರಲಿ ಎಂದು ಹಾರೈಸೋಣ.


  • ಪುಷ್ಪಲತಾ – (ಲತಾ ಕೆ ಎಸ್ ಹೆಗಡೆ) ಕವಯತ್ರಿ, ಸಾಹಿತಿ, ಬೆಂಗಳೂರು

 

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading