ಈ ವರ್ಷದ ಮಿಡಿ ಮಾವಿನ ಕ್ರಯ ವಿಕ್ರಯ ಮತ್ತೆ ಉಪ್ಪಿನಕಾಯಿ ಎಲ್ಲದರ ವಹಿವಾಟು ಅಂದಾಜು ಹತ್ತು ಕೋಟಿ ರೂಪಾಯಿ ಆಗಿರಬಹುದು. ಮನಸ್ಸು ಮಾಡಿದರೆ ಮುಂದಿನ ವರ್ಷಗಳಲ್ಲಿ ಶತಕೋಟಿ ರೂಪಾಯಿಯ ವಹಿವಾಟೇ ಆದರೂ ಆಶ್ಚರ್ಯ ಇಲ್ಲ. ಎನ್ನುತ್ತಾರೆ ಸಾಗರದ ನಾಗೇಂದ್ರ ಸಾಗರ್ ಅವರು. ತಪ್ಪದ್ ಮುಂದೆ ಓದಿ…
ಊಟದ ಬಟ್ಟಲಿನ ಮೂಲೆಯಲ್ಲಿ ಕೂರುವ ಪುಟ್ಟ ಪುಟಾಣಿ ಗಾತ್ರದ ಯಕಶ್ಚಿತ್ ಮಾವಿನ ಮಿಡಿಯ ಈ ವರ್ಷದ ನಮ್ಮೂರಿನ ವಹಿವಾಟು ಅಂದಾಜು ಎಷ್ಟಿರಬಹುದು? ಸರಿ ಸುಮಾರು ಹತ್ತು ಕೋಟಿ ರೂಪಾಯಿ.
ನಮ್ಮ ಕಡೆ ಸಾಮಾನ್ಯವಾಗಿ ಜನವರಿ ಅಖೈರಿನಿಂದ ಹಿಡಿದು ಫೆಬ್ರವರಿ, ಮಾರ್ಚಿ ತಿಂಗಳಲ್ಲಿ ಬಹಳ ಮಾಡಿ ಏಪ್ರಿಲ್ಲಿನ ಮೊದಲಲ್ಲಿ ಅಂದಾಜು ಅರವತ್ತರಿಂದ ಎಪ್ಪತ್ತು ದಿನಗಳ ಕಾಲ ಉಪ್ಪಿನಕಾಯಿಗೆ ಬಳಸುವ ಮಾವಿನ ಮಿಡಿಗಳು ಮಾರಾಟಕ್ಕೆ ಬರುತ್ತದೆ.. ಕೇವಲ ಸಾಗರದಲ್ಲಿ ಬೆಳೆದದ್ದು ಮಾತ್ರವಲ್ಲದೇ ನೆರೆಯ ತಾಲೂಕುಗಳೇ ಏಕೆ ಹೊರ ಜಿಲ್ಲೆಗಳಿಂದ ಕೂಡ ಸಾಗರಕ್ಕೆ ಮಾವಿನ ಮಿಡಿಗಳು ಆವಕವಾಗುತ್ತಿದೆ. ಹಾಗಾಗಿ ಈ ದಿನಗಳಲ್ಲಿ ನಮ್ಮ ಕಡೆ ಮಿಡಿ ಮಾವಿನದೇ ಹವಾ.
ಕೆಲವು ವರ್ಷಗಳ ಹಿಂದೆ ನಮ್ಮ ಸಾಗರದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಇಡೀ ಈ ಮಿಡಿ ಮಾವಿನ ವಹಿವಾಟು ಇರುತ್ತಿತ್ತು. ತಿರುಗಾಟ ವಗೈರೆಗೆ ಬಸ್ಸನ್ನೇ ಅವಲಂಬಿಸಿದ ಕಾಲಕ್ಕೆ ಮಧ್ಯಾಹ್ನದ ಹೊತ್ತಿಗೆ ಬಸ್ಸಿನಲ್ಲಿ ಯಾರೇ ಮಾವಿನ ಮಿಡಿ ಮಾರಾಟಕ್ಕೆ ತರಲಿ ಮಧ್ಯವರ್ತಿಗಳು ನೇರ ಮಾರಾಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ.ಹೆಚ್ಚು ಕಡಿಮೆ ಜಬರ್ದಸ್ತಿಯಿಂದಲೇ ತಂದವನ ಜೇಬಿಗೆ ಒಂದಿಷ್ಟು ಹಣ ತುರುಕಿ ಅವರ ಕಣ್ಣೆದುರೇ ಒಂದಕ್ಕೆ ನಾಲ್ಕು ದರದಲ್ಲಿ ಮಾರಾಟ ಮಾಡಿ ದೊಡ್ಡ ಲಾಭ ಮಾಡುವ ಕಾಲವೊಂದಿತ್ತು. ಈಗ ಹಾಗಲ್ಲ.
ಅದೀಗ ತಾನೆ ಕೊಯ್ದ ಮಾಲು ಫ್ರೆಶ್ ಅಂಡ್ ಫ್ರೆಶ್ ಆಗಿ ಮನೆ ಬಾಗಿಲಿಗೆ ಬರುತ್ತಿದೆ. ಕೆಲವರು ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡು ತಂದು ಕೊಡುವ ಪರಿಪಾಠ ಆರಂಭವಾಗಿದೆ. ಹಾಗಾಗಿ ಮೇಲ್ನೋಟಕ್ಕೆ ಸಾಗರದ ಮಾವು ಮಾರಾಟದ ಮಾಮೂಲಿ ಅಡ್ಡೆಯಲ್ಲಿ ವಹಿವಾಟು ಸಪ್ಪೆಯಾಗಿ ಕಂಡರೂ ಈ ಅರವತ್ತು ಎಪ್ಪತ್ತು ದಿನಗಳಲ್ಲಿ ದಿನವೊಂದಕ್ಕೆ ಒಂದರಿಂದ ಒಂದೂವರೆ ಲಕ್ಷದಷ್ಟು ಮಾವಿನ ಮಿಡಿ ಮಾರಾಟ ಆಗಿದೆ.

ಮಾವಿನ ಮಿಡಿ, ಅಪ್ಪೆ ಮಿಡಿ ಆಗಿದ್ದರೆ ಎರಡರಿಂದ ಮೂರು ರೂಪಾಯಿ ಹಾಗೆಯೂ ವಿಶಿಷ್ಟ ಜೀರಿಗೆ ಪರಿಮಳದ್ದೇ ಆಗಿದ್ದಲ್ಲಿ ಮೂರರಿಂದ ಐದು ರೂಪಾಯಿ ದರದಲ್ಲಿಯೂ ಮಾರಾಟ ಆಗಿದೆ. ಈ ವರ್ಷ ಸಾಗರದಲ್ಲಿ ತಾವೇ ಸ್ವತಃ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ನಮ್ಮ ಮಲೆನಾಡು ಗಿಡ್ಡ ಕಚೇರಿಯಲ್ಲಿ ನಮ್ಮ ಗ್ರಾಹಕರಿಗೆ ಮಿಡಿಯನ್ನು ತಲುಪಿಸುವ ಕೆಲಸವನ್ನು ಮಾಡಲಾಗಿತ್ತು.
ಹಾಗೆ ನೋಡಿದರೆ ಈ ವರ್ಷ ಮಾವಿನ ಮರದಲ್ಲಿ ಬಂದ ಹೂವೆಲ್ಲ ಪೂರ್ತಿಯಾಗಿ ಕಚ್ಚಿದ್ದರೆ ಕೊಯ್ದು ಪೂರೈಸಲು ಆಗುತ್ತಿರಲಿಲ್ಲ. ಇದರ ಹತ್ತು ಪಟ್ಟು ಮಾವಿನ ಮಿಡಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು.ಇವೆಲ್ಲಾ ಉಪ್ಪಿನಕಾಯಿ ಆಗಿದ್ದರೆ ಸಾಗರದಿಂದ ಉಪ್ಪಿನಕಾಯಿಯ ಹೊಳೆಯೇ ಹರಿಯುವ ಸಂಭವ ಇರುತ್ತಿತ್ತು.
ಮರದಲ್ಲಿ ಹಣುಕಿದ ಎಲ್ಲಾ ಮಾವಿನ ಮಿಡಿಯೂ ಉಪ್ಪಿನಕಾಯಿ ಆಗುವುದಿಲ್ಲ. ಅದಕ್ಕೂ ಒಂದು ಯೋಗ್ಯತೆ ಅನ್ನುವುದು ಇರುತ್ತದೆ. ಉಪ್ಪಿನಕಾಯಿ ತಜ್ಞರು ಕೇವಲ ಮೇಲುನೋಟ ಮಾತ್ರದಿಂದಲೇ ಅವುಗಳ ಬಂಡವಾಳ ಅಳೆದು ಬಿಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತೊಟ್ಟನ್ನು ಮುರಿದು ಅದರ ಸೊನೆಯ ಪ್ರಮಾಣ, ಪರಿಮಳದ ಪ್ರಭಾವ ಕಡೆಗೆ ಅದನ್ನು ಸಿಗಿದಾಗ ಒಳಗಿನ ಕೋಗಿಲೆಯ ಗಾತ್ರ ಅಳೆದು ಸುರಿದು ಆದ ಮೇಲೆ ಮತ್ತೆ ಬಾಯೊಳಗೆ ಹಾಕಿಕೊಂಡು ಅದರ ಕ್ರಿಸ್ಪಿ ನೆಸ್ ಎಷ್ಟಿದೆ ಎಂದು ಅಳೆದ ಮೇಲೆಯೇ ಅದರ ಯೋಗ್ಯತೆ ತಿಳಿಯಲಾಗುತ್ತದೆ. ಇವೆಲ್ಲದರ ಮೇಲೆ ಗ್ರೇಡಿಂಗ್ ಬರುತ್ತದೆ ಎನ್ನಬಹುದು.
ಉಪ್ಪಿನಕಾಯಿ ಮಾಡುವದನ್ನೇ ಉದ್ಯಮ ಮಾಡಿಕೊಂಡವರಿಗೆ ಈ ಎಲ್ಲಾ ಗ್ರೇಡಿಂಗುಗಳ ತೀರಾ ಕಟ್ಟುನಿಟ್ಟು ಬೇಕು ಎಂದಿಲ್ಲ. ಹೇಗಿದ್ದರೂ ಕೃತಕ ಒಳಸುರಿಗಳನ್ನು ಬಳಸುವುದರಿಂದ ಉಪ್ಪಿನಕಾಯಿ ಹಾಳಾಯಿತು ಎಂಬ ಪ್ರಶ್ನೆ ಬರುವುದಿಲ್ಲ.. ಆದರೆ ಸ್ವಂತಕ್ಕೆ ಬಳಸುವವರು ಮತ್ತು ಒಂದು ಗ್ರಹೋದ್ಯಮವಾಗಿ ಮಾಡಿಕೊಂಡವರಿಗೆ ಎಲ್ಲಾ ಮಾನದಂಡಗಳು ಬೇಕಾಗುತ್ತದೆ.
ಈ ಮಾನದಂಡಗಳನ್ನು ಗುರುತಿಸಿ ಅವುಗಳನ್ನು ಕಸಿ ಮಾಡಿ ಅಭಿವೃದ್ಧಿ ಮಾಡಿದ ನೂರಾರು ವಿಶಿಷ್ಟ ತಳಿಗಳು ಈಗಾಗಲೇ ಮಾವು ಪ್ರಿಯರ ನೆಲದಲ್ಲಿ ನೆಲೆಯೂರಿದೆ.. ಆದರೆ ಫಸಲು ಹಿಡಿದ ದಾಖಲೆಗಳು ಕಡಿಮೆ. ಇದು ಗ್ಯಾರಂಟಿ ತಳಿ ಎಂಬ ಭರವಸೆಯ ಮೇಲೆ ಕೊಂಡು ನೆಟ್ಟು ಸಕಲ ಷೋಡಶೋಪಚಾರ ಮಾಡಿಯೂ ನಿರಾಸೆ ಹೊಂದಿದವರ ಸಂಖ್ಯೆ ದೊಡ್ಡದಿದೆ. ಹಾಗಾಗಿ ಕಸಿ ಗಿಡಗಳನ್ನು ಕೊಂಡು ನೆಡುವಾಗ ಎಚ್ಚರಿಕೆ ಅಗತ್ಯ ನೂರಕ್ಕೆ ನೂರು ಖಾತ್ರಿ ಕೊಡುವ ಕಸಿ ತಜ್ಞರಿಂದಲೇ ಗಿಡ ತರಬೇಕು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಕಸಿ ತಜ್ಞ ಕೋಣನಕಟ್ಟೆ ನಟೇಶರಂತವರು ನಿಮ್ಮ ಮನೆಗೇ ಬಂದು ಈಗಾಗಲೇ ನೆಲೆಯೂರಿದ ಮಾವಿನ ಮರದ ಗೆಲ್ಲೊಂದಕ್ಕೆ ನಿಮಗೆ ಬೇಕು ಅನ್ನಿಸಿದ ತಳಿಯನ್ನು ತಂದು ಕೂಡಿಸಿ ಹೋಗುತ್ತಾರೆ.. ಅದು ಇನ್ನೂ ಒಳ್ಳೆಯದಾಗುತ್ತದೆ.
ಉಪ್ಪಿನಕಾಯಿಗೆ ಬರುತ್ತದೆ ಛಲೋ ಮಿಡಿ ಎಂದು ತಂದು ನೆಟ್ಟವರಲ್ಲಿ ಬಹುಪಾಲು ಮಂದಿ ಬರೀ ಎಲೆ ಮುರಿದು ಮೂಸಿ ತೃಪ್ತಿ ಪಡುವುದೇ ಆಗಿತ್ತು.. ಆದರೆ ಈ ವರ್ಷ ಕೆಲವರ ಮುಖದಲ್ಲಿ ಮಂದಹಾಸ ಮೂಡಿದೆ. ಕೆಲವರಲ್ಲಿ ಫಸಲು ಕಚ್ಚಿ ಭರವಸೆ ತಂದಿದೆ.
ಗೆಳೆಯ ಕವಲುಕೋಡು ವೆಂಕಟೇಶನ ನಾಲ್ಕೈದು ಮರಗಳಲ್ಲಿ ಸುಮಾರು ಹದಿನೈದು ಸಾವಿರದಷ್ಟು ಮಿಡಿ ಸಿಕ್ಕಿದೆ. ನಟೇಶರಿಗೆ ಹತ್ತಿರತ್ತಿರ ನಲವತ್ತು ಸಾವಿರ ಮಿಡಿ ಸಿಕ್ಕಿದೆ. ಈ ಪಟ್ಟಿ ಹೀಗೆಯೇ ದೊಡ್ಡದಿದೆ.ಯೋಗ್ಯ ತಳಿ ಆಯ್ದು ನೆಟ್ಟ ಕೆಲವರಲ್ಲಿ ಮಂದಹಾಸಕ್ಕೆ ಕಾರಣ ಆಗಿದೆ. ಒಂದೇ ಮರ ಹದಿನೈದು, ಇಪ್ಪತ್ತು ಸಾವಿರ ವರಮಾನ ತಂದುಕೊಟ್ಟ ದಾಖಲೆ ಇದೆ.
ಬಹುಶಃ ಮುಂದಿನ ದಿನಗಳಲ್ಲಿ ಹೀಗೆ ಕಸಿ ಗಿಡಗಳನ್ನು ನೆಡುವವರ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗಲಿದೆ. ಅಡಿಕೆಗೆ ಪರ್ಯಾಯ ಯೋಚನೆ ಮಾಡುವ ರೈತರು ತಮ್ಮ ಖುಷ್ಕಿ
ಭೂಮಿಯಲ್ಲಿ, ಹೊಳೆಸಾಲು ಮತ್ತಿತರ ನೀರಿನ ಕೋವಿನಲ್ಲಿ, ಏನೂ ಇಲ್ಲದೇ ಹೋದರೂ ತಮ್ಮ ಹಿತ್ತಿಲ ಜಾಗೆಯಲ್ಲಿ ಖಾತ್ರಿ ಪಡಿಸಿದ ಗಿಡ ನೆಟ್ಟು ಗೆಲ್ಲಬಹುದು.
ಒಂದು ಅಂದಾಜಿನ ಪ್ರಕಾರ ಸಾಗರದ್ದೇ ಲೆಕ್ಕ ಹಾಕಿದರೆ ಈ ವರ್ಷದ ಮಿಡಿ ಮಾವಿನ ಕ್ರಯ ವಿಕ್ರಯ ಮತ್ತೆ ಉಪ್ಪಿನಕಾಯಿ ಎಲ್ಲದರ ವಹಿವಾಟು ಅಂದಾಜು ಹತ್ತು ಕೋಟಿ ರೂಪಾಯಿ ಆಗಿರಬಹುದು. ಮನಸ್ಸು ಮಾಡಿದರೆ ಮುಂದಿನ ವರ್ಷಗಳಲ್ಲಿ ಶತಕೋಟಿ ರೂಪಾಯಿಯ ವಹಿವಾಟೇ ಆದರೂ ಆಶ್ಚರ್ಯ ಇಲ್ಲ.
ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಮನಸ್ಸು ಮಾಡಿದರೆ ಸಾಗರವನ್ನು ಮಿಡಿ ಮಾವು ಬೆಳೆ ಮತ್ತು ಉಪ್ಪಿನಕಾಯಿ ಉದ್ಯಮದ ತೊಟ್ಟಿಲನ್ನಾಗಿ ಮಾಡಬಹುದು. ಈಗಾಗಲೇ ಈ ವಿಷಯದಲ್ಲಿ ಸಾಗರಕ್ಕೆ ಒಂದು ಐಡೆಂಟಿಟಿ ಇದೆ. ಇದನ್ನೇ ಬಂಡವಾಳ ಆಗಿಸಿಕೊಂಡು ನಮ್ಮ ಮಿಡಿ ಮಾವಿನ ಖ್ಯಾತಿಯು ದೇಶ ವಿದೇಶಗಳಿಗೂ ತಲುಪ ಬೇಕಿದೆ..
ಪ್ರಯತ್ನ ಪಟ್ಟಲ್ಲಿ ಮಿಡಿ ಮಾವು ಬೆಳೆದವರಿಗೆ ಲಾಭವನ್ನೂ ದುಡಿಯುವ ಕೈಗಳಿಗೆ ಕೆಲಸವನ್ನೂ, ಉದ್ಯಮವಾಗಿ ಕಂಡವರಿಗೆ ಕೈ ತುಂಬಾ ಹಣವನ್ನೂ ತಂದು ಕೊಡಬಹುದು. ಈ ನಿಟ್ಟಿನಲ್ಲಿ ನಮ್ಮ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪನಿ ಕೈ ಜೋಡಿಸುತ್ತಿದೆ. ಈಗಾಗಲೇ ಈ ವರ್ಷ ಯೋಗ್ಯ ಮಾವಿನ ಮಿಡಿ ದೊರಕಿಸುವ ವೇದಿಕೆ ಆಗಿ ಕೆಲಸ ಮಾಡಿದೆ. ಈಗ ಉಪ್ಪಿನಕಾಯಿಗೆ ಬಳಸುವ ಯೋಗ್ಯ ಮೆಣಸಿನ ಹುಡಿ, ಮಸಾಲೆಗಳನ್ನು ಒದಗಿಸುತ್ತಿದೆ.
ಕಂಪನಿಯ ಮಳಿಗೆಯಲ್ಲಿ ವಿಶೇಷ ತಳಿಯ ಖಾತ್ರಿ ಪಡಿಸಿದ ಬ್ರಾಂಡೆಡ್ ಉಪ್ಪಿನಕಾಯಿ ಕೂಡ ಲಭ್ಯವಿದೆ.
- ನಾಗೇಂದ್ರ ಸಾಗರ್
