ಹಾವೇರಿಯೊಳಗಿನ ಹೊಸಮನಿ ಸಿದ್ಧಪ್ಪನಂತಹ ವಕೀಲರು ದೇವರಾಗಿ ಕಾಣತಿದ್ದರಂತೆ ಜನರಿಗೆ. ಯಾಕಂದ್ರ ಆ ಹೊಸಮನಿ ಸಿದ್ದಪ್ಪ ಬರಿ ಐದು ರೂಪಾಯಿಯೊಳಗ ನ್ಯಾಯಾ ಕೊಡ್ಸತಿದ್ದರಂತೆ. ಅದಕ್ಕ ಅವರಿಗೆ ಐದು ರೂಪಾಯಿ ವಕೀಲರು ಅಂತಿದ್ದರಂತೆ. ಹಾವೇರಿಯ ಕುರಿತು ರೋಚಕ ವಿಷಯವನ್ನು ಹಂಚಿಕೊಂಡಿದ್ದಾರೆ ಲೇಖಕರಾದ ನಂದಿನಿ ವಿ.ಕೆ ಅವರು ತಪ್ಪದೆ ಮುಂದೆ ಓದಿ…
ನಮ್ಮ ಅಪ್ಪ ಹೊರಗಿಂದ ಬಂದು ಹಾವೇರ್ಯಾಗ ನೆಲೆ ನಿಂತವರು. ಆದರ ನಾನು ಹಾವೇರಿಯೊಳಗ ಹುಟ್ಟಿ ಬೆಳೆದಿರುವವಳು ಆಗಿರುವುದರಿಂದ ನಾನು ಹಾವೇರಿಯವಳೆ ಆಗಿದ್ದೇನೆ. ಹಾವೇರಿ ಕರ್ನಾಟಕದ ಗಂಡುಮೆಟ್ಟಿನ ಸ್ಥಳ. ಅದಕ್ಕ ಹಾವೇರಿ ಶುದ್ಧ ಕನ್ನಡದ ನೆಲೆವೀಡು ಅಂತಾರ. ಯಾಕಂತ ಕೇಳಿದರ, ಹಾವೇರಿ ಕರ್ನಾಟಕದ ಕೇಂದ್ರ ಸ್ಥಾನದೊಳಗೈತೆ. ಕನ್ನಡ ನಾಡಿನ ಪಶ್ಚಿಮದ ಸೀಮೆಯಾದ ಅರಬ್ಬಿಸಮುದ್ರ ಎಷ್ಟು ದೂರಾಕೈತೆ, ಪೂರ್ವಕ್ಕ ಬಂಗಾರಾ ಬೆಳೆಯುವ ಕೋಲಾರಾನೂ ಅಷ್ಟ ದೂರ ಆಕ್ಕೈತೆ. ಇತ್ಲಾಗ ಕನ್ನಡದ ಕಾಸರಗೋಡು ಎಷ್ಟು ದೂರಾಕ್ಕೈತೆ, ಅತ್ಲಾಗ ಶರಣ ಸಿದ್ರಾಮೇಶ್ವರನ ಸೊಲ್ಲಾಪುರಾನೂ ಅಷ್ಟ ದೂರ ಆಗತ್ತ್ರಿ. ಅದಕ್ಕ ನಮ್ಮ ಹಾವೇರಿ ಕರ್ನಾಟಕದ ಕೇಂದ್ರ ಬಿಂದು ಅಂತೀವಿ ನಾವು. ಅದಕ್ಕ ಹಾವೇರಿಯ ಕನ್ನಡದ ಮ್ಯಾಲೆ ಬೇರೆ ಯಾವ ಭಾಷೆಯ ಸೋಂಕೂ ಆಗಿಲ್ಲ. ಬೆಳಗಾವಿ ಕನ್ನಡದ ಮ್ಯಾಲೆ ಮರಾಠಿ ಪ್ರಭಾವ ಆಗೇತಿ. ಮತ್ತೆ ಕೋಲಾರ, ಬಳ್ಳಾರಿ ಕನ್ನಡದ ಮ್ಯಾಲೆ ತೆಲುಗಿನ ಪ್ರಭಾವ ಆಗೇತಿ. ಇನ್ನು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋದರ ಅಲ್ಲಿಯ ಕನ್ನಡದ ಮ್ಯಾಲೆ ನಮ್ಮ ದೇಶದ ಭಾಷೆ ಅಲ್ಲದ ಪರದೇಶದ ಭಾಷೆಗಳ ಪ್ರಭಾವಾನೂ ಆಗೇತಿ. ನಾವು ಹಾವೇರಿಯವರು ಉಳಿದವರ ಹಾಂಗ ಬ್ಯಾರೆ ಭಾಷೆಯವರಿಗೆ ಸಲುಗೆ ಕೊಟ್ಟಿಲ್ರಿ. ಪರೀಶುದ್ಧ ಕನ್ನಡದ ಹಾವೇರಿ ಗಡಿ ಅಂದರ ದಕ್ಷಣಕ್ಕೊಬ್ಬಳು ತುಂಗಭದ್ರೆ, ಕನ್ನಡದ ಹೆಸರಿಟ್ಟುಕೊಂಡ ಉತ್ತರ ಕನ್ನಡವೇ ಇನ್ನೊಂದು ಗಡಿ, ಕುಮಾರವ್ಯಸನನ್ನು ಹಾಡಿಸಿ ಕಲಿಯುಗವನ್ನು ದ್ವಾಪರ ಮಾಡಿದ ಗದಗು ಉತ್ತರದ ಮ್ಯಾರಿ, ನಮ್ಗ ನೆಲೆಯೇ ಆಗಿದ್ದ ಧಾರವಾಡ ಈಗ ಮತ್ತೊಂದು ಗಡಿ.
ಅದಕ್ಕ ಕಲಬೆರಕಿ ಇಲ್ಲದ ಕನ್ನಡಾ ಬೇಕಂದ್ರ ನೀವು ನಮ್ಮ ಹಾವೇರಿಗೆ ಬರಬೇಕು. ಅಂದ್ರ ಶುದ್ಧ ಸ್ವಚ್ಛ 24 ಕ್ಯಾರೆಟ್ಟಿನ ಕನ್ನಡ ಹಾವೇರಾಗಷ್ಟ ಸಿಗೋದು. ನಮ್ಮ ನುಡಿಯ ಪರಿಶುದ್ಧತೆಯನ್ನು ಉಳಿಸಿಕೊಂಡು ಬಂದವರಂದ್ರ ನಾವು ಹಾವೇರಿಯವರು.
ಇಲ್ಲಿಯ ಜನರಿಗೆ ಸುಖಾ ಸಮೃದ್ಧಿಯನ್ನು ಕೋಡೋದಕ್ಕಾಗಿ ಇದು ಮಲೆನಾಡು ಅಂದ್ರ ಮಲೆನಾಡು ಬೈಲು ಸೀಮೆ ಅಂದ್ರ ಬೈಲ ಸೀಮೆ ಆಗಿಬಿಡುತ್ತದೆ. ಹಾವೇರಿ ಪ್ರದೇಶಲ್ಲಿ ಐದು ನದಿ ಹರೀತಾವು. ಅದಕ್ಕ ಏನೋ ಈ ಹಾವೇರಿ ನೆಮ್ಮದಿ ಕೊಡೋ ನೆಲಾ ಅಂತಾ ಹೇಳಿ ಇಲ್ಲಿ ಹುಕ್ಕೇರಿಮಠದ ಶಿವಬಸ್ವಸ್ವಾಮಿ, ನಡೆದಾಡುವ ದೇವರಾಗಿದ್ದ ಶಿವ್ಲಿಂಗಜ್ಜ, ಶಿಶ್ವಿನಾಳದ ಷರೀಫಜ್ಜನಂತಾ ಸಂತರು ಬಂದು ಹೋಗ್ಯಾರ. ಅದೂ ಅಲ್ದ ಅರಮನಿನ ಗುರುಮನಿ ಮಾಡಿ ಉಪದೇಶಾ ಕೊಟ್ಟ ಕನಕದಾಸನಂತ ಚಿಂತಕರಿಗೆ ಜನ್ಮ ಕೊಟ್ಟ ನಾಡು ನಮ್ಮ ಹಾವೇರಿ. ಕಲ್ಯಾಣದ ಶರಣ ಬಸವಣ್ಣನ ಕಾಲಕ್ಕ ವಚನದ ಗಂಟು ಹೊತ್ತುಗೊಂಡು ಬಂದು ಇಲ್ಲಿ ಹಾವೇರಿಯೊಳಗ ನೆಲೆ ನಿಂತ ಶರಣರ ಅರವತ್ತಮೂರು ಮಠಾ ಇಲ್ಲಿ ಅದಾವು. ಅದರೊಳಗ ಗಿಡಮೂಲಿಕೆ ಹುಡುಕಿಕೊಂಡು ಬಂದು ಅರದು ಕುದಿಸಿ ಔಷಧಿ ಮಾಡಿ ಕುಡಿಸಿ ಭಕ್ತರ ಬವಣೆ ಕಳಿತಿದ್ದ ಸಿಂದಗಿಯ ಶಾಂತವೀರಜ್ಜನ ಮಠಾನೂ ಒಂದು ನೋಡ್ರಿ. ಇಷ್ಟು ಮಠಾ ನಮ್ಮೂರಾಗ ಇದ್ದದ್ದಕ್ಕ ಇದನ್ನು ಮರಿಕಲ್ಯಾಣ ಅಂತಾನೂ ಕರೀತಾರ.
ಅಂಧರಾಗಿದ್ದರೂ ಸಂಗೀತ ಸಮ್ರಾಜ್ಯದ ರಾಜರಾಗಿದ್ದ ಪಂಚಾಕ್ಷರ ಗವಾಯಿ ಮತ್ತು ಪುಟ್ಟರಾಜ ಗವಾಯಿಯವರು ನಮ್ಮ ಹಾವೇರಿಯ ಕೊಡುಗೆ. ಮತ್ತೆ ಹುಬ್ಬಳ್ಳ್ಯಾಗ ಹಾಡಿದರ ಹಾವೇರಿಗೆ ಕೇಳುವ ಹಾಂಗ ಹಾಡುತಿದ್ದ ಗಾನವಿದೂಷಿ ಗಂಗೂಬಾಯಿ ಹಾನಗಲ್ಲು ಅವರು ಹಾಡಿದ್ದು ಹಾವೇರಿ ಸಂಗೀತದ ಮಟ್ಟು.
ನಮ್ಮ ಹಾವೇರಿಯೊಳಗ ನ್ಯಾಯಾ ಕೊಡೋ ನ್ಯಾಯಾಧೀಶರಿಗಿಂತ ವಾದಾ ಮಾಡೋ ಹೊಸಮನಿ ಸಿದ್ಧಪ್ಪನಂತಹ ವಕೀಲರು ದೇವರಾಗಿ ಕಾಣತಿದ್ದರಂತೆ ಜನರಿಗೆ. ಯಾಕಂದ್ರ ಆ ಹೊಸಮನಿ ಸಿದ್ದಪ್ಪ ಬರಿ ಐದು ರೂಪಾಯಿಯೊಳಗ ನ್ಯಾಯಾ ಕೊಡ್ಸತಿದ್ದರಂತೆ. ಅದಕ್ಕ ಅವರಿಗೆ ಐದು ರೂಪಾಯಿ ವಕೀಲರು ಅಂತಿದ್ದರಂತೆ. ಇಂಥ ಜಾಣ ವಕೀಲರಿಂದಾಗ ಹಾವೇರಿಯೊಳಗ “ಹಾವೇರಿ ನ್ಯಾಯಾ” ಎನ್ನುವ ಒಂದು ನ್ಯಾಯಾ ಈಗಲೂ ಪ್ರಸಿದ್ಧಿ ಪಡೆದೈತೆ. ಯಾಕಂದ್ರ ಆ ಸಿದ್ಧಪ್ಪ ಅಡವಿಯೊಳಗಿನ ಗಿಡ ಮರಗಳನ್ನು ಕೋರ್ಟಿಗೆ ಕರಕೊಂಡು ಬಂದು ಸಾಕ್ಷಿ ಹೇಳಿಸುವಂಥ ಜಾಣ ವಕೀಲನಾಗಿದ್ದ.
ಹಾವೇರಿ ಪುರಸಿದ್ಧೇಶ್ವರನ ನೆಲೆವೀಡು ಹೌದು. ನೀವು ಈ ಪುರಸಿದ್ಧೇಶ್ವರನ ಆಲಯದೊಳಗ ಹೋದರ ಎಡಗೈಯೊಳಗ ಲಿಂಗಾ ಹಿಡಿದು, ಬಲಗೈಯಿಂದ ಬಿಲ್ವ ದಳ ಅರ್ಪಿಸುತ್ತಾ ಲಿಂಗಪೂಜೆ ಮಾಡುವ ವಿಷ್ಣುವಿನ ದರ್ಶನಾನೂ ಪಡಕೊಂಡು ಬರಬಹುದು.
ನಮ್ಮ ಹಾವೇರಿ ನಿವಾಸಿಗಳು ಬಲು ಬೆರಕಿ ಅಂತಾ ಹೇಳಿದೆನಲ್ಲಾ. ಯಾಕಂದ್ರ ಇಲ್ಲಿ ಯಾಲಕ್ಕಿ ಬೆಳಿಯದಿದ್ದರೂ, ಹಾವೇರಿಯನ್ನು ಘಮ ಘಮಾಡ್ಸವಂತ ಯಾಲಕ್ಕಿ ಕಂಪಿನ ನಗರ ಮಾಡಿ ಇಟ್ಟುಗೊಂಡು ಬಿಟ್ಟಾರ, ಅದಕ್ಕ ಇದನ್ನ ಯಾಲಕ್ಕಿ ಕಂಪಿನ ನಾಡು ಅಂತಾ ಕರಿತಾರ. ಇದ ಈ ಹಾವೇರಿ ಜನರ ಜಾಣತನ ನೋಡ್ರಿ. ಅಂದ್ರ ಈ ಊರಾಗ ಮಲೆನಾಡಿನೊಳಗ ಸುರ್ದಂಗ ಮಳಿ ಸುರಿಯಾಂಗಿಲ್ಲ, ಯಾಲಕ್ಕಿನೂ ಬೆಳಿಯಾಂಲ್ಲ, ಆದರೂ ಹಾವೇರಿಯಿಂದ ಕೋಟಿ, ಕೋಟಿ ರೂಪಾಯಿಯ ಯಾಲಕ್ಕಿ ಪರದೇಶಗಳಿಗೆ ರಫ್ತು ಆಗತೈತೆ. ಅದು ಹ್ಯಾಂಗ ಅಂದ್ರ, ನಮ್ಮ ಹಾವೇರಿಯ ಜಾಣ ವ್ಯಾಪಾರಿಗಳು; “ಯಾಲಕ್ಕಿ ಗೊನಿ ಬಾ ನಮ್ಮ ಮನಿಗೆ ಹೋಗಾನ!” ಅಂತಾ ನಮ್ಮ ಜಾನಪದ ಗರತಿ ಹಾಡಿದ ಹಾಂಗ ಹಾಡಿ, ಯಾಲಕ್ಕಿ ಗೊನಿನ ನಮ್ಮ ಹಾವೇರಿಗೆ ತಂದಾರ. ಅಂದ್ರ ಕಚ್ಚಾ ಯಾಲಕ್ಕಿನ ಆ ಮಲೆನಾಡಿನ ಸಕಲೇಶಪುರದಿಂದ, ಮಡಿಕೇರಿಯಿಂದ ಇಲ್ಲಿಗೆ ಹೊತಗೊಂಡು ಬಂದು ಇಲ್ಲಿ ತಿಕ್ಕಿ ತೊಳ್ದು, ಜಗ್ಗ ಅಂತಾ ಹೊಳಿಯುವ ಹಾಂಗ ಮಾಡಿದರು. ಮನಿ ಮುಂದೆ ನಾವು ಜ್ವಾಳಾ ಹರವಿದ ಹಾಂಗ ಅವರು ಯಾಲಕ್ಕಿ ಹರವಿ, ಊರಿಗೆ ಊರ ಘಮಾಡ್ಸುವ ಹಾಂಗ ಮಾಡಿದ ನಮ್ಮೂರಿನ ವ್ಯಾಪಾರಿಗಳಿಗೆ ಜಾಣರಂತಿರ ಏನಂತೀರಿ? ನಮ್ಮವ್ರು ಹಾಂಗ ಬಣ್ಣಾ ಕೊಟ್ಟ ಯಾಲಕ್ಕಿಗೆ ಒಂದಕ್ಕ ಎರಡು ರೇಟು ಬಂತು. ರೊಕ್ಕಾ ಎಣ್ಸಿ ಎಣ್ಸಿ ದಣಕೊಳ್ಳುವಷ್ಟು ಲಾಭಾನೂ ಆತು.

ಹಾವೇರಿಯೊಳಗ ಯಾಲಕ್ಕಿ ವ್ಯಾಪಾರದ್ದು ದೊಡ್ಡ ಲಾಭ ಐತ ಅಂತಾ ಗೊತ್ತಾಗಿ, ಎಲ್ಲೆಲ್ಲಿಯವರೋ ಇಲ್ಲಿಗೆ ಬಂದು ಠಿಕಾಣಿ ಹೂಡಿ ಯಾಲಕ್ಕಿ ವ್ಯಾಪಾರಾ ಚಾಲು ಮಾಡಿದರು. ಅಷ್ಟ ಅಲ್ರಿ ನಮ್ಮ ಊರಿನ ಕಿರಾಣಿಗಳೂ, ಯಾಲಕ್ಕಿಯ ಘರಾಣಿಗಳಾಗಿ ಬಿಟ್ಟವು. ಯಾಲಕ್ಕಿ ದಂಧೆ ಮಾಡುವವ್ರದ ಒಂದು ಸಂಘ ಆತು. ಕೋಟಿ ಕೋಟಿ ಕೊಡು-ಕೊಳಿ ಮಾಡ್ತಿದ್ದ ಆ ಯಾಲಕ್ಕಿ ವ್ಯಾಪಾರಿಗಳ ಸಂಘ ಈಗ ಕಾರ್ಡಮಮ್ ಬ್ಯಾಂಕ ಆಗಿ ಸಾವಿರಾರು ಜನರಿಗೆ ಅನ್ನಾ ಕೊಡೊ ಧಣಿ ಆಗಿ ಕುಂತೈತೆ. ಎಲ್ಲಾ ಕಡಿಗಿ ಬಿಟ್ಟು ಇಲ್ಲೇ ಯಾಕ ಯಾಲಕ್ಕಿಗೆ ಹೆಸರು ಬಂತು ಅಂತೀರೇನು. ಅದಕ್ಕೂ ಒಂದು ಕಾರಣ ಐತೆ. ನಮ್ಮ ಹಾವೇರ್ಯಾಗ ಇರುವ ಒಂದು ಬಾವಿನ ಯಾಲಕ್ಕಿ ಮ್ಯಾಲ ಜ್ಯಾದು ಮಾಡಿದ್ದು ನೋಡ್ರಿ. ಮಲೆನಾಡಿನಿಂದ ತಂದ ಯಾಲಕ್ಕಿನ ಈ ಬಾವಿ ನೀರಿನೊಳಗ ತೊಳ್ದು ಬಿಟ್ರ ಒಳ್ಳೆ ಚಲೋ ಬಣ್ಣ ಬರ್ತಿತ್ತು. ಅದರಿಂದ ಚಲೋ ರೇಟಿಗೆ ಮಾರಾಟ ಆಕಿತ್ತು. ನಮ್ಮ ಹಾವೇರಿಗೆ ಈ ಯಾಲಕ್ಕಿ ಬಾವಿಯ ಸವಲತ್ತು ಇದ್ದದ್ದಕ್ಕ ಯಾರು ಯಾರೋ ಎಲ್ಲೆಲ್ಲಿಂದಾನೋ ಹಾವೇರಿಗೆ ಬಂದು ಯಾಲಕ್ಕಿ ಅಂಗಡಿ ಇಟ್ಟಗೊಂಡು ಕುಂತು ಯಾಪಾರಕ್ಕ ನಿಂತು ಬಿಟ್ಟರು.
ಈ ಯಾಲಕ್ಕಿ ಪ್ರಭಾವ ಎಲ್ಲಿಗೆ ಬಂತು ಅಂದ್ರ, ಹಾವೇರಿ ಅಂದ್ರ, ಯಾಲಕ್ಕಿ ಅನ್ನುವ ಹಾಂಗ ಆಯ್ತು. ಬ್ಯಾರೆ ಕಡೆ ಹೂವಿನ ಮಾಲಿ ಕಟ್ಟಿದರ ನಮ್ಮೂರಾಗ ಕಂಪು ಸೂಸುವಂಥ ಯಾಲಕ್ಕಿ ಮಾಲಿ ಕಟ್ತಾರ. ನಮ್ಮ ಊರಾಗ ಹೂವಿನ ಮಾಲಿಗಿಂತ ಯಾಲಕ್ಕಿಯ ಮಾಲೆಗಳ ಹೆಚ್ಚು ಮಾರಾಟ ಆಗ್ತಾವ್ರಿ. ಯಾಕಂದ್ರ ನಮ್ಮ ಹಾವೇರಿಯ ಕಲಾ ಪ್ರವೀಣೆ ಪಟವೇಗಾರ ಮೋದಿನಬಿ ಕಲಾತ್ಮಕವಾಗಿ ಯಾಲಕ್ಕಿ ಮಾಲೆ ತಯಾರಿಸಿ ಪರದೇಶಕ್ಕೂ ಕಳಿಸಿ ಅದರೊಳಗ ರಾಜ್ಯೋತ್ಸವ ಪ್ರಶಸ್ತಿನೂ ಪಡಕೊಂಡಾಳ. ಯಾಲಕ್ಕಿ ಮಾಲೆ ಮಾಡುವುದೇ ಅವರ ಮನೆಯ ಕುಲ ಕಸಬು ಆಗಿ ಬಿಟ್ಟೈತೆ.
ಇಂಥಾ ನಮ್ಮ ಹಾವೇರಿಯೊಳಗ ಘಮ ಘಮಾಡ್ಸುವಂತ ಯಾಲಕ್ಕಿ ಅಂಗಡಿ ಅದಾವು, ಯಾಲಕ್ಕಿ ಮಾಲಿ ಅದಾವು, ಯಾಲಕ್ಕಿ ಬ್ಯಾಂಕ ಐತೆ, ಯಾಲಕ್ಕಿ ಬಾವಿ ಐತೆ,ಯಾಲಕ್ಕಿ ಓಣಿ ಐತೆ.ಅದಕ್ಕ ನಾನು ಯಾಲಕ್ಕಿಯನ್ನು ಮೆಚ್ಚಿಕೊಂಡು ಸರ್ವಂ ಯಾಲಕ್ಕಿ ಮಯಂ ಈ ನಮ್ಮ ಹಾವೇರಿ ಪುರಂ ಅಂತೀನಿ. ಹಾವೇರಿಯೊಳಗ ಯಾಲಕ್ಕಿ ಕಂಪು ಮಾತ್ರ ಇಲ್ರಿ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ರಕ್ತಹರಿಸಿ ಬೆಂಕಿ ಉಗುಳಿ, ಜೀವಾ ಕೊಟ್ಟು ಈ ದೇಶಕ್ಕ ಸ್ವಾತಂತ್ರ್ಯ ತಂದು ಕೊಟ್ಟ ಮೈಲಾರ ಮಹದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪನಂಥ ಸಾವಿರಾರು ಶೂರ ಸ್ವಾತಂತ್ರ್ಯ ಯೋಧರು ತಮ್ಮ ಹೆಸರು ಬರ್ದು ಹೋಗ್ಯಾರ.

ಮತ್ತೆ ನಮ್ಮ ಹಾವೇರಿ ಜಿಲ್ಲೆಯೊಳಗ ಬ್ಯಾಡಗಿ ಐತೆ. ಬ್ಯಾಡಗಿ ಅಂದ ಕೂಡ್ಲೆ ನಿಮಗ ಖಾರ ಹತ್ತಿ ನಾಲಿಗಿ ಮ್ಯಾಲೆ ನೀರಿನ ಸೆಲಿ ಒಡಿತೈತಿ ಹೌದಿಲ್ರಿ?. ಹೌದು ನಮ್ಮ ಬ್ಯಾಡಗಿ ಮೆಣಸಿನಕಾಯಿ ಜಗತ್ಪ್ರಸಿದ್ಧ ಆಗೇತಿ. ನಮ್ಮ ದೇಶದೊಳಗ ಬೆಳ್ದ ಎಲ್ಲಾ ನಮೂನಿಯ ಮೆಣಸಿನಕಾಯಿ ನಮ್ಮ ಬ್ಯಾಡಗಿ ಪ್ಯಾಟಿಗೆ ಬರ್ತೈತೆ. ವಾರದ ಸಂತಿ ದಿನಾ ಬಂದು ನೀವು ಬ್ಯಾಡಗಿ ಪ್ಯಾಟಿ ನೋಡ್ರಿ. ಮೆಣಸಿನಕಾಯಿ ಚೀಲಾ ಹಚ್ಚಾಕ ಜಾಗಾನ ಸಿಗಂಗಿಲ್ಲ. ಆಂದ್ರ, ತೆಲಂಗಾಣಾ, ಮಹಾರಾಷ್ಟ್ರಾ, ಗುಜರಾತದಿಂದ ಎರಡು-ಮೂರು ಲಕ್ಷ ಚೀಲ
ಮೆಣಸಿನಕಾಯಿ ಬ್ಯಾಡಗಿಗೆ ಬಂದು ಬೀಳತೈತೆ. ಒಂದು ಕಾಲಕ್ಕ ಹಾವೇರಿ ಹ್ಯಾಂಗ ಯಾಲಕ್ಕಿ ವ್ಯಾಪಾರಸ್ತರನ್ನು ಕರಿತಿತ್ತು, ಹಾಂಗ ಈಗ ಬ್ಯಾಡಗಿ, ಮೆಣಸಿನಕಾಯಿ ವ್ಯಾಪಾರಸ್ತರನ್ನು ಕರಿಲಾಕ ಹತ್ತೈತೆ. ಸಣ್ಣ ಊರಾಗಿದ್ದ ಬ್ಯಾಡಗಿ ಈ ಮೆಣಸಿನಕಾಯಿ ಖ್ಯಾತಿ ಹೊತ್ತು ಅದರ ಘಾಟದಿಂದಾಗಿ ಲಕ್ಷ ಲಕ್ಷ ಜನರನ್ನು ತನ್ನ ತೆಕ್ಕೆಗೆ ಸೆಳಕೊಂಡು ಈಗ ದೊಡ್ಡ ಪ್ಯಾಟಿ ಆಗಿ ಬಿಟ್ಟೈತೆ.
ಎತ್ತರದ ಬಿಲ್ಲು ಹತ್ತಿ ಎದ್ದು ನಿಂತು ಸದ್ದಲೇ ಅಂತಾ ಅಂದು ಏಳು ಕೋಟಿ ಭಕ್ತರನ್ನು ಗಪ್ಪ ಗಡಲ್ ಮಾಡಿ ವರ್ಷದ ಕಾರ್ಣಿಕಾ ಹೇಳುವ ಮೈಲಾರಲಿಂಗನ ದೇವರಗುಡ್ಡ ನಮ್ಮ ಹಾವೇರಿಯ ಸೆರಿಗಿನೊಳಗ ಐತೆ. ಕತ್ತಿ ಹಿಡ್ದು ಯುದ್ಧ ಮಾಡಿದ್ದ ಬಾಡದ ದಣಿ ಕನಕ, ಕನಕದಾಸನಾಗಿ ಉಡುಪಿ ಕೃಷ್ಣನ ದರ್ಶನಕ್ಕ ಹೋದರ ಪೂಜಾರಿಗುಳು ಆತನ್ನ ಒಳಗ ಬಿಡ್ಲಿಲ್ಲಂತೆ ಪಾಪ. ಅದಕ್ಕ ಆತ ಹಿಂದಿನ ಕಿಂಡ್ಯಾಗ ಹಣಕಿಕ್ಕಿ ನೋಡಿ “ಮುಂದಿನ ಬಾಗಿಲದಾಗ ಒಳಗ ಬಿಡುವಲ್ರು. ಹಿಂದಕ ಹೊಳ್ಳಿ ದರ್ಶನ ಕೊಟ್ಟು ಬಿಡು ಕಿಷ್ಣಾ” ಅಂತಾ ಬೇಡಿಕೊಂಡಾಗ ಕೃಷ್ಣ ಪರಮಾತ್ಮಾ ಹೊಳ್ಳಿ ನಿಂತು ಕನಕದಾಸಗ ದರ್ಶನಾ ಕೊಟ್ಟನಂತೆ. ಅಂಥಾ ದಣಿಯಾಗಿದ್ದ ಕನಕಾ ದಾಸನಾಗಿ ಬಾಡದಾಗಿರುವ ಛಂದನ್ನ ಅರಮನಿ ಬಿಟ್ಟು ಈಗ ನೆಲೆ ನಿಂತಿರುವುದು ನಮ್ಮ ಹಾವೇರಿ ಪರಿಸರದ ಕಾಗಿನೆಲೆಯಲ್ಲಿ.
ನಮ್ಮ ಹಾವೇರ್ಯಾಗ ಇರೋದು ಬರಿ ಕಸ್ತೂರಿ ಕನ್ನಡ ಅಲ್ಲ, ಇಲ್ಲಿ ಯಾಲಕ್ಕಿ ಕಂಪಿನ ಕನ್ನಡ ಐತೆ, ಕನ್ನಡ ಪುಸ್ತಕಕ್ಕ ಹೆಗಲು ಕೊಟ್ಟು ಅಡ್ಡಾಡಿದ ಕಾದಂಬರಿಕಾರ ಗಳಗನಾಥನ ಶ್ರಮದ ಬೆವರಿನ ಕನ್ನಡ ಐತೆ, ಕುಲದ ನೆಲೆಯನ್ನು ಸಪಾಟ ಮಾಡಿ ಸಮಾನತೆ ಸಾಧಿಸಿದ ಕನಕನ ಜೀವಗನ್ನಡ ಐತೆ, ಶಿಶುನಾಳ ಷರೀಫಜ್ಜನ ಮಾನವತೆಯ ಕುಲಗನ್ನಡ ಐತೆ. ಹೆಂಗುಲವನ್ನು ಎತ್ತಿ ಹಿಡಿದು ಹಾಡಿದ ಸಂಚಿ ಹೊನ್ನಮ್ಮನ ತಾಯ್‍ಗನ್ನಡ ಐತೆ.
ಏಳು ಕೋಟಿಯೆ ಕೋಟಿ,ಏಳು ಲಕ್ಷವೆ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳೊ ಸರ್ವಜ್ಞ ಎಂದು ಹಾಡುತ್ತಾ ನಾಡನ್ನೆಲ್ಲಾ ಸುತ್ತಿ ಎಲ್ಲಾ ತಿಳಕೊಂಡ ಕುಂಬಾರ ಮಾಳವ್ವನ ಮಗಾ ಸರ್ವಜ್ಞನನಾಗಿ ಏಳು ಕೋಟಿ, ಎಳು ಲಕ್ಷ ಏಳು ಸಾವರದಾ ಎಪ್ಪತ್ತು ವಚನಗಳ ಹಾವೇರಿಯ ಶುದ್ಧ ಚೆಲುಗನ್ನಡ ಐತೆ.
ಹಾವೇರಿಯ ಯಾಲಕ್ಕಿ ಕಂಪಿನ ಚೆನ್ನುಡಿಗರ ನಮಸ್ಕಾರಗಳು.
- ನಂದಿನಿ ವಿ.ಕೆ. ಹಾವೇರಿ
