ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರಾವಣ ಪೂರ್ಣಿಮೆ ಎಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ.ಹಿಂದೂ ಪುರಾಣದ ಪ್ರಕಾರದ ಮಹಾಭಾರತದ ಅವಧಿಯಿಂದಲೇ ರಕ್ಷಾಬಂಧನದ ಇತಿಹಾಸ ಆರಂಭವಾಗುತ್ತದೆ. ರಕ್ಷಾ ಬಂಧನದ ದಿನದಂದು ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಖಿ ಕಟ್ಟುತ್ತಾಳೆ. ರಾಖೀ ಹಬ್ಬದ ವಿಶೇಷತೆಯ ಕುರಿತು ಲೇಖಕರಾದ ಸುಜಾತಾ ರವೀಶ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..
ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿ ಪೂಜೆಗೆ ಮಹತ್ವವಿರುವಂತೆ ಮನುಷ್ಯರ ನಡುವಿನ ಸಂಬಂಧ ಅನುಬಂಧಗಳ ಮಹತ್ವ ತಿಳಿಸುವ ಅದನ್ನು ಎತ್ತಿ ಹಿಡಿಯುವ ಹಬ್ಬಗಳು ಇವೆ. ಅಣ್ಣ ಸಹೋದರ ಬಾಂಧವ್ಯ ಎಂಬುವುದು ಒಂದು ವಿಶಿಷ್ಟ ಅನುಬಂಧ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಒಂದೇ ಬಳ್ಳಿಯ ಹೂಗಳ ನಡುವಣ ಸಂಬಂಧ ಜೀವನದುದ್ದಕ್ಕೂ ಕಾಪಿಟ್ಟುಕೊಳ್ಳಬೇಕಾದದ್ದು. ಅದರಲ್ಲೂ ಅಕ್ಕ ತಮ್ಮ ಅಣ್ಣ ತಂಗಿ ಎಂದರೆ ತವರಿನ ನೆನಪಿನ ಗಂಟನ್ನು ಸದಾ ಬಿಗಿಯುವ ಬೆಸುಗೆ. ಇಂತಹ ಸಂಬಂಧ ಶಾಶ್ವತವಾಗಿರಲಿ ಎಂದು ಸೋದರರು ಸೋದರಿಯರನ್ನು ಕಷ್ಟದಿಂದ ಕಾಪಾಡಲು ಹಾಗೂ ಸೋದರಿಯರು ಸದಾ ಸೋದರ ಹಿತವನ್ನೇ ಬಯಸಲೆಂದು ಈ ರಾಖಿ ಹಬ್ಬದ ಆಚರಣೆ ಆರಂಭವಾಯಿತು.
ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರಾವಣ ಪೂರ್ಣಿಮೆ ಎಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು ತುಂಬಾ ಪವಿತ್ರವಾದ ದಿನ ಉಪಾಕರ್ಮವನ್ನು ಸಹ ಹಿಂದೆ ಆಚರಿಸುತ್ತಾರೆ. ಸಹೋದರಿಯರು ಪವಿತ್ರವಾದ ನೂಲನ್ನು ತಮ್ಮ ಸಹೋದರರ ಕೈಗೆ ಕಟ್ಟುವುದರಿಂದ ಈ ಹಬ್ಬವನ್ನು ನೂಲು ಹುಣ್ಣಿಮೆ ಎಂದು ಸಹ ಕರೆಯುತ್ತಾರೆ. ಮೊದಲು ಉತ್ತರ ಭಾರತದಾದ್ಯಂತ ಪ್ರಚಲಿತವಿದ್ದ ಈ ಹಬ್ಬವನ್ನು ಈಗ ದಕ್ಷಿಣ ಭಾರತದಲ್ಲಿಯೂ ಸಹ ಬಣ್ಣ ಬಣ್ಣದ ರಾಕಿಗಳನ್ನು ಸಹೋದರ ಅಥವಾ ಸಹೋದರ ಸಮಾನರಿಗೆ ಕಟ್ಟಿ ಭಾತೃತ್ವದ ಭಾಂದವ್ಯವನ್ನು ಸಂಭ್ರಮಿಸುತ್ತಾರೆ.

ಇತಿಹಾಸ ಮತ್ತು ಐತಿಹ್ಯ
ಹಿಂದೂ ಪುರಾಣದ ಪ್ರಕಾರದ ಮಹಾಭಾರತದ ಅವಧಿಯಿಂದಲೇ ರಕ್ಷಾಬಂಧನದ ಇತಿಹಾಸ ಆರಂಭವಾಗುತ್ತದೆ. ಒಮ್ಮೆ ಶ್ರೀ ಕೃಷ್ಣನ ಕಿರುಬೆರಳಿಗೆ ಸುದರ್ಶನ ಚಕ್ರ ತಗುಲಿ ಗಾಯವಾಗಿ ರಕ್ತ ಸುರಿಯುತ್ತದೆ . ಆಗ ಈ ಗಾಯಕ್ಕೆ ಬಟ್ಟೆ ಕಟ್ಟಲು ದ್ರೌಪದಿ ತನ್ನ ಜರತಾರಿ ಸೀರೆಯ ಸೆರಗನ್ನೇ ಕತ್ತರಿಸಿ ಅವನ ಮಣಿಕಟ್ಟಿನ ಮೇಲೆ ಬಟ್ಟೆಯನ್ನು ಕಟ್ಟಿ ಹೆಚ್ಚಿನ ರಕ್ತ ಹರಿದು ಹೋಗದಂತೆ ತಡೆಯುತ್ತಾಳೆ. ದ್ರೌಪದಿಯ ಈ ಕಾರ್ಯದಿಂದ ಕೃಷ್ಣ ತೃಪ್ತನಾಗುತ್ತಾನೆ ಹಾಗೂ ದ್ರೌಪದಿಯ ಈ ಕಾಳಜಿಯನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಆ ಬಟ್ಟೆಯ ತುಂಡನ್ನು ರಕ್ಷಾ ಸೂತ್ರ ಎಂದು ಕರೆಯುತ್ತಾನೆ. ಹೀಗೆ ಅವನ ಕೈಗೆ ರಕ್ಷಾ ಸೂತ್ರ ಕಟ್ಟಿ ಸೋದರಿಯಾದ ದ್ರೌಪದಿ ಕಷ್ಟಕ್ಕೆ ಸಿಲುಕಿದಾಗಲೆಲ್ಲ ಕೃಷ್ಣ ತನ್ನ ಸಹೋದರಿಯ ರಕ್ಷಣೆ ಮಾಡುತ್ತಾನೆ. ಮುಂದೆ ದ್ರೌಪದಿಯ ಸೀರೆ ಸೆಳೆಯುವ ಸಂದರ್ಭದಲ್ಲಿ ಕೃಷ್ಣ ಅವಳನ್ನು ಅಕ್ಷಯ ವಸನವಿತ್ತು ಕಾಪಾಡುತ್ತಾನೆ.
ಭಾಗವತ ಹಾಗೂ ವಿಷ್ಣು ಪುರಾಣದ ಪ್ರಕಾರ
ವಾಮನ ಅವತಾರದಲ್ಲಿ ಬಲಿಯನ್ನು ಸೋಲಿಸಿದ ನಂತರ ಬಲಿ ವಿಷ್ಣುವನ್ನು ತನ್ನ ಅರಮನೆಯಲ್ಲೇ ನೆಲೆಸಲು ಕೋರುತ್ತಾನೆ. ಆಗ ಅದು ಸಮ್ಮತವಿಲ್ಲದ ಮಹಾಲಕ್ಷ್ಮಿಯು ಬಲಿಗೆ ರಾಖಿಯನ್ನು ಕಟ್ಟಿ, ಸೋದರನೆಂದು ಸ್ವೀಕರಿಸುತ್ತಾಳೆ. ಆಗ ಬಲಿ ಏನು ಉಡುಗೊರೆ ಬೇಕೆಂದು ಕೇಳಿದಾಗ ವಿಷ್ಣುವನ್ನು ವೈಕುಂಠಕ್ಕೆ ಮರಳಿ ಹಿಂದಿರುಗಿ ಕಳಿಸುವಂತೆ ಕೋರುತ್ತಾಳೆ.
ಗಣೇಶನ ಸೋದರಿಯಾದ ದೇವಿ ಮಾನಸ ಒಮ್ಮೆ ಗಣೇಶನ ಗಣೇಶನಿಗೆ ರಾಖಿ ಕಟ್ಟಿ ಸಂಭ್ರಮಿಸುವುದನ್ನು ಕಂಡ ಗಣೇಶನ ಮಕ್ಕಳಾದ ಶುಭ ಮತ್ತು ಲಾಭ ಇಬ್ಬರು ತಮಗೂ ಒಬ್ಬ ಸೋದರಿ ಬೇಕೆಂದು ಬಯಸುತ್ತಾರೆ. ಆಗ ಸಂತೋಷೀ ಮಾತೆ ಜನನವಾಗುತ್ತದೆ ಎಂದು ನಂಬಿಕೆ ಇದೆ.
ಮತ್ತೊಂದು ದಂತಕಥೆಯ ಪ್ರಕಾರ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದ ಪೋರಸ್. ಅವರಿಬ್ಬರ ನಡುವೆ ಘೋರ ಯುದ್ಧವೇ ನಡೆಯುತ್ತದೆ. ಆ ಸಮಯದಲ್ಲಿ ಅಲೆಕ್ಸಾಂಡರ್ ನ ಪತ್ನಿ ರೊಕ್ಸಾನಾಳು ಪೋರಸ್ ಗೆ ಪವಿತ್ರ ದಾರವನ್ನು (ರಾಖಿ)ಕಳುಹಿಸಿ ತನ್ನ ಪತಿಯನ್ನು ಕೊಲ್ಲದಿರುವಂತೆ ಮನವಿ ಮಾಡುತ್ತಾಳೆ. ಹಾಗಾಗಿಯೇ ಪೋರಸ್ ಅಲೆಕ್ಸಾಂಡರ್ ನನ್ನು ಕೊಲ್ಲುವುದಿಲ್ಲ.
ಮತ್ತೊಂದು ಪ್ರಸಂಗದಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಅವಳು ಆಗಿನ ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳಿಸಿ ತಮ್ಮ ರಾಜ್ಯದ ಮೇಲೆ ದಂಡೆತ್ತಿ ಬರುತ್ತಿದ್ದ ಚಕ್ರವರ್ತಿ ಬಹದ್ದೂರ್ ಶಾ ಇಂದ ರಕ್ಷಣೆ ಕೋರಿದಳು. ಆದರೆ ಸೈನ್ಯ ತಲುಪಲು ತಡವಾದ ಕಾರಣ ರಾಣಿ ಕರ್ಣಾವತಿಯು ತನ್ನ ಮಾನ ರಕ್ಷಣೆಗಾಗಿ ಜೋಹರ್ ಮೂಲಕ ಪ್ರಾಣತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹೊರಹಾಕಿ ಹುಮಾಯೂನ್ ಕರ್ಣಾವತಿಯ ಮಗ ವಿಕ್ರಮ ಜೀತನನ್ನು ಸಿಂಹಾಸನಕ್ಕೇರಿಸಿದನು.

ಆಚರಣೆ
ರಕ್ಷಾ ಬಂಧನದ ದಿನದಂದು ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಖಿ ಕಟ್ಟುತ್ತಾಳೆ. ರಾಕಿ ಕಟ್ಟುವ ಸಮಯದಲ್ಲಿ ಪೂಜಾ ತಟ್ಟೆಯಲ್ಲಿ ಅಕ್ಷತೆ ಕುಂಕುಮ ಶ್ರೀಗಂಧ ಆರತಿ ಮತ್ತು ಸಿಹಿ ಇರಬೇಕು. ಸಹೋದರನಿಗೆ ಆರತಿ ಮಾಡಿ ತಲೆಗೆ ಅಕ್ಷತೆ ಹಾಕಿ ಹಣೆಗೆ ಕುಂಕುಮ ಮತ್ತು ಗಂಧವನ್ನು ಇಟ್ಟು ಸಿಹಿ ತಿನಿಸಬೇಕು. ನಂತರ ಸಹೋದರನು ತನ್ನ ಸಹೋದರಿಗೆ ಶಕ್ತ್ಯಾನುಸಾರ ಉಡುಗೊರೆ ಕೊಡುತ್ತಾನೆ.
ಭದ್ರಾಕಾಲ
ರಾಖಿಯನ್ನು ಕಟ್ಟುವುದಕ್ಕೆ ಶುಭ ಮಹೂರ್ತ ಹಾಗೂ ಕಾಲವನ್ನು ನಿರ್ಧರಿಸುತ್ತಾರೆ ಆ ಕಾಲದಲ್ಲಿ ಕಟ್ಟಿದರೆ ಸಹೋದರರಿಗೆ ಸುಯೋಗ ಶ್ರೇಯಸ್ಸು ಉಂಟಾಗುತ್ತದೆ. ಅದು ಬಿಟ್ಟು ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಿದರೆ ಅದು ಅಶುಭವನ್ನೇ ತರುತ್ತದೆ. ಹಾಗಾದರೆ ಈ ಭದ್ರಕಾಲ ಎಂದರೆ ಏನು? ಪೌರಾಣಿಕ ನಂಬಿಕೆಗಳ ಪ್ರಕಾರ ರಾವಣನ ಸಹೋದರಿ ಶೂರ್ಪಣಕಿಯು ಈ ಭದ್ರಕಾಲದಲ್ಲಿ ರಾವಣನಿಗೆ ರಾಖಿಯನ್ನು ಕಟ್ಟಿದ್ದರಿಂದ ಅವನಿಗೆ ಆ ವರ್ಷ ಮರಣ ಉಂಟಾಯಿತು, ಮತ್ತೊಂದು ಪುರಾಣ ಕಥೆಯ ಪ್ರಕಾರ ಸೂರ್ಯದೇವ ಮತ್ತು ಛಾಯಾ ದೇವಿಯ ಮಗಳು ಭದ್ರ. ಈಕೆ ಶನಿದೇವನ ಸಹೋದರಿ. ಎಲ್ಲೆಲ್ಲಿ ಪೂಜೆ ವಿಧಿ ಯಾಗ ಶುಭ ಕಾರ್ಯಗಳು ನಡೆಯುತ್ತಿದ್ದರು ಭದ್ರ ಅಲ್ಲಿಗೆ ಬಂದು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಳು. ಈ ಕಾರಣದಿಂದ ಭದ್ರಗಳನ್ನು ಅಶುಭ ಎಂದು ಪರಿಗಣಿಸಲಾಗಿದೆ ಈ ಕಾರಣಕ್ಕೆ ಭದ್ರಕಾಲದಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ ಹಾಗೂ ರಾಖಿಯನ್ನು ಸಹ ಕಟ್ಟಬಾರದು ಈ ಭದ್ರ ಎಂದಿಗೂ ತನ್ನ ಸಹೋದರನಾದ ಶನಿಗೆ ರಾಖಿಯನ್ನು ಕಟ್ಟುವ ಮೂಲಕ ಶ್ರೇಯಸ್ಸನ್ನು ಬಯಸಿದವಳಲ್ಲ ಎಂಬುದು ಗಮನಾರ್ಹ.
ಒಟ್ಟಿನಲ್ಲಿ ಹೇಳಬೇಕೆಂದರೆ ಸಹೋದರ ಸಹೋದರಿಯರ ಮಧ್ಯೆ ಇರುವ ಬಾಂಧವ್ಯ ಚಿರಕಾಲ ಇರಬೇಕೆಂಬ ಸದಾಶಯವೇ ರಾಖಿ ಹಬ್ಬದ ಉದ್ದೇಶ. ಇಂದಿನ ಈ ದಿನಗಳಲ್ಲಿ ಇಂತಹ ಆಚರಣೆ ಮತ್ತಷ್ಟು ಪ್ರಾಮುಖ್ಯತೆ ಹೊಂದುತ್ತದೆ ನ್ಯೂಕ್ಲಿಯರ್ ಸಂಸಾರಗಳಲ್ಲಿ ತಮ್ಮಷ್ಟಕ್ಕೆ ತಾವೇ ಮುಳುಗಿ ಹೋಗಿರುವ ಇಂದಿನ ಜನಾಂಗಕ್ಕೆ ಸಂಬಂಧಗಳ ಜತನಿಸುವಿಕೆಯ ಅರಿವು ಇರುವುದಿಲ್ಲ .ಐಹಿಕ ಸುಖ ಭೋಗ ಸ್ವಾರ್ಥಗಳ ಮಧ್ಯೆಯೇ ಮುಳುಗಿ ಹೋಗಿರುವ ಇವರಿಗೆ ಬಾಂಧವ್ಯದ ಬಗ್ಗೆ ನಂಬಿಕೆಯು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಶುಭ ಕೋರುವ, ಒಬ್ಬರ ಹಿತ ಒಬ್ಬರು ಕಾಯುವಂತಹ ಪರಸ್ಪರ ಕೊಡುಕೊಳ್ಳುವಿಕೆಯ ಇಂತಹ ಹಬ್ಬಗಳು ಮುಖ್ಯವೆನಿಸುತ್ತದೆ. ತನಗೆ ಏನಾದರೂ ಆದರೆ ತನ್ನ ಸಹೋದರನ ನೆರವು ಇದೆ ಎಂದು ನಂಬಿದ ತಂಗಿ ಸುರಕ್ಷಾ ಭಾವವನ್ನು, ಯೋಗ ಕ್ಷೇಮವನ್ನು ಬಯಸುವ ಸೋದರಿ ಇದ್ದಾಳೆಂಬ ಭಾವನೆ ಸಹೋದರನಿಗೆ ಕ್ಷೇಮ ಭಾವ ಮೂಡಿಸುತ್ತದೆ. ಇಂತಹ ಸುಖೀ ಸಮಾಜ ಸಮೃದ್ಧಿ ನೆಮ್ಮದಿ ಸೌಹಾರ್ದಗಳನ್ನು ಬೆಳೆಸುವಲ್ಲಿ ಸಹಕಾರಿ. ರಕ್ತ ಸಂಬಂಧ ಮಾತ್ರವೇ ಸಹೋದರ ಭಾವ ಬೆಳೆಸಬೇಕೆಂದಿಲ್ಲ .ಸಹೋದರ ಸಮಾನರೆಂಬ ಭಾವವು ಸಹಿತ ಈ ರೀತಿಯ ಉದಾರ ಗುಣವನ್ನು ಬೆಳೆಸಿಕೊಳ್ಳುತ್ತದೆ. ಕೋಮು ದಳ್ಳುರಿ ಸಾಮಾಜಿಕ ದೌರ್ಜನ್ಯಗಳ ಇಂತಹ ಸಮಯದಲ್ಲಿ ಮಧುರ ಭಾವನೆಗಳನ್ನು ಕೋಮಲ ವ್ಯಕ್ತಿತ್ವವನ್ನು ಬೆಳೆಸುವಂತಹ ಸಮಾಜಮುಖಿಯಾದ ಇಂತಹ ಹಬ್ಬಗಳ ಅವಶ್ಯಕತೆ ಹೆಚ್ಚೇ ಇದೆ ಎನ್ನಬಹುದು.
ಮತ್ತೊಂದು ದೃಷ್ಟಿಯಿಂದ ನೋಡಿದರೆ ನಮ್ಮ ದೇಶದ ಗಡಿ ಕಾಯುವ ಶತ್ರುಗಳಿಂದ ನಮ್ಮನ್ನು ರಕ್ಷಿಸುವ ಸಹೋದರರು ನಮ್ಮ ಸೈನಿಕರು ನಮ್ಮ ಸಹೋದರರೇ ಅಲ್ಲವೇ? ಅವರ ಹಿತ ರಕ್ಷಣೆಗಾಗಿ ನಾವು ಕಂಕಣಬದ್ಧರಾಗಿ ರಾಖಿಯನ್ನು ಕಟ್ಟೋಣ ಅವರ ರಕ್ಷೆ ಕೋರೋಣ ಬನ್ನಿ.
- ಸುಜಾತಾ ರವೀಶ್ – ಮೈಸೂರು.
