ನಿನ್ನ ನೆನಪಿಸಿಕೊಳ್ಳಲೆಂದೇ ಚಳಿಯನ್ನೂ ಇಷ್ಟಪಡತೊಡಗಿದ್ದೇನೆ…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹೊರಗೆ ಚುಮುಚುಮು ಚಳಿ
ಮೈಮನಸಿನೊಳಗೆ ನಿನ್ನ ನೆನಪಿನ ಬೆಚ್ಚನೆ ಕಚಗುಳಿ
ನೀನೊಂದು ಜೊತೆಗಿದ್ದಿದ್ದರೆ ಒಲವೇ
ಈ ಚಳಿಯಿನಿತೂ ಸೊಕ್ಕುತ್ತಿರಲಿಲ್ಲ!
ಚಳಿಯಿದು ತುಸು ಹೆಚ್ಚೇ ಇದೆ
ನಿನ್ನ ನೆನಪಿನ ಕಂಬಳಿ ಸಾಲುತ್ತಿಲ್ಲ!
ನನ್ನ ಕನಸಿನ ಬಾಗಿಲು ತೆರೆದಿಟ್ಟಿರುವೆ
ನೀ ಬಂದರೆ
ಸ್ವಲ್ಪ ಹೊತ್ತು ಮಾತಾಡುತ್ತಾ ಬೆಚ್ಚಗಿರಬಹುದು!
ಚಳಿಗಾಲವೆಂದರೆ ನನಗೇನೂ ಭಯವಿಲ್ಲ
ನೀ ಜೊತೆಗಿದ್ದರೆ ಸಾಕಲ್ಲ!
ಮಂಜು ಮುಸುಕಿದ ಇರುಳೂ ಬೆಳಗೂ ಕೂಡ
ನಿನ್ನ ನಗುವಿಗೆ ಹಿತವಾದ ವಸಂತವಾಗುತ್ತದೆ!
ಮಂಜಿನ ಹನಿಗಳು ಕಿಟಕಿಯ ಮೇಲೆ
ಹನಿ ಕವಿತೆ ಬರೆಯುತ್ತಿವೆ!
ನಿನ್ನ ನೆನಪುಗಳು ನನ್ನ ಎದೆಯ ಮೇಲೆ
ಬೆಚ್ಚನೆಯ ಪ್ರೇಮಗೀತೆ ಹಾಡುತ್ತಿವೆ!
ಚಳಿ ಹೆಚ್ಚಾಗಿದೆಯೆಂದು
ನಿನ್ನ ನೆನಪಿಸಿಕೊಳ್ಳುತ್ತಿಲ್ಲ ಒಲವೇ
ಕೈಯಲ್ಲೊಂದು ಬಿಸಿಬಿಸಿ ಕಾಫಿಕಪ್ಪು
ಮನದ ತುಂಬ ನಿನ್ನದೇ ಬೆಚ್ಚನೆಯ ನೆನಪು
ಎದುರಿಗೆ ನೀನೂ ಇದ್ದಿದ್ದರೆ
ಈ ಚಳಿಗಾಲವೆಲ್ಲ ರಂಗಿನ ಹಬ್ಬವಾಗಿರುತ್ತಿತ್ತು!
ನಿನ್ನ ಒಂದೆರಡು ಮಾತುಗಳಿದ್ದರೆ ಸಾಕು
ಮಂಜಿನ ಮುಂಜಾನೆಯೂ ಮಧುಮಾಸ!
ನಿನ್ನ ಧ್ವನಿಯ ಬಿಸಿ ಶಾಖದ ಮುಂದೆ
ದಿಗಂತದ ಸೂರ್ಯನ ಬಿಸಿಲೂ ಕಡಿಮೆಯೇ!
ಹೊರಗೆ ಚಳಿ ಒಳಗೆ ಮೌನ
ಕಿಟಕಿಯಾಚೆ ಮಂಜಿನ ಪರದೆ!
ನನ್ನ ಕನಸಿನೊಳಗೆ ನೀ ಬಂದರೆ
ಇರುಳಿಡೀ ಬೆಳದಿಂಗಳೇ ಹಾಡಾದಂತೆ!
ಚಳಿಯ ಮೈಗೆ ಬೆಚ್ಚನೆಯ ಬಟ್ಟೆ ಸಾಕು
ಮನದ ಚಳಿಗೆ ನೀನೇ ಬೇಕು!
ಪ್ರಿಯೆ ನಿನ್ನ ಸಾಮೀಪ್ಯವೇ ಮೈಮನಕ್ಕೆ ಬಿಸಿ!
ನೀನಿದ್ದುಬಿಟ್ಟರೆ ಚಳಿಗು ಹತ್ತಿರ ಬರಲು ಕಸಿವಿಸಿ!
ಮಂಜು ಮುಸುಕಿದ ಮುಂಜಾವಿನಲ್ಲಿ
ನಿನ್ನ ಹೆಸರನ್ನೊಮ್ಮೆ ಉಸಿರಾಗಿಸುವೆ
ತುಟಿಯಂಚಿನ ನಿನ್ನ ನೆನಪಿನ ನಗುವೇ
ನನ್ನ ಪಾಲಿನ ಸೂರ್ಯೋದಯವಾಗುವುದು!
ಚಳಿಯೆಂದು ಬೆಂಕಿ ಕಾಯಿಸಿಕೊಳ್ಳುವುದಿಲ್ಲ
ನಿನ್ನ ನೆನಪನ್ನೇ ಸುತ್ತಿಕೊಳ್ಳುವೆ!
ನೀ ತುಸು ಹತ್ತಿರವಿದ್ದರೆ ಸಾಕು ಋತುಗಳಿಗೂ
ನನ್ನ ಸಂತೃಪ್ತ ಜೀವನದ ಮೇಲೆ ಅಸೂಯೆಯಾಗಬಹುದು!
ಚಳಿಯ ರಾತ್ರಿಗಳೆಲ್ಲ ದೀರ್ಘವಾಗಲಿ
ಮಂಜಿನ ಹನಿಗಳು ನಿಲ್ಲದೆ ಸುರಿಯುತ್ತಿರಲಿ
ನಿನ್ನೊಡನೆ ಒಂದಷ್ಟು ಮಾತು ಸಿಕ್ಕರೆ
ಕಾಲ ಜರುಗುವುದೇ ಮನಸ್ಸಿಗೆ ತಿಳಿಯದಿರಲಿ!
ಚಳಿ ಹೆಚ್ಚಾಗುತ್ತಿದೆ ಪ್ರಿಯೆ
ಕಿಟಕಿಯ ಬಾಗಿಲುಗಳ ಮುಚ್ಚಿದ್ದೇನೆ
ಆದರೆ ನಿನ್ನ ನೆನಪುಗಳಿಗೆ
ಇನ್ನೂ ಯಾವ ಬಾಗಿಲನ್ನೂ ಹಾಕಿಲ್ಲ!
ನೀನು ಬರುವುದಾದರೆ
ಮನೆಯ ದಾರಿಯಲ್ಲಾದರು ಬಾ
ಕನಸಿನ ದಾರಿಯಲ್ಲಾದರೂ ಬಾ
ಬೆಳಗಾಗುವವರೆಗೂ ಚಳಿಯನ್ನೂ ಮರೆತು
ಚಳಿಯೇ ಬೆರಗಾಗಿ ಬಿಸಿಗೂಡುವಂತೆ ಮಾತಾಡೋಣ!
ಚಳಿಗು ಚಳಿಯೇ ಮರೆಯುವಂತೆ ಜೀವಿಸೋಣ!
- ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ತುಪ್ಪದಹಳ್ಳಿ ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ.
