‘ತದ್ರೂಪ’ ಕೃತಿ ಪರಿಚಯ

ಭವಿಷ್ಯದ ತಂತ್ರಜ್ಞಾನ ಹಾಗೂ ಮಾನವೀಯ ಸಂಬಂಧಗಳ ನಡುವಿನ ಸೂಕ್ಷ್ಮತೆಯನ್ನು ಅರಿಯಲು ಅಮೂಲ್ಯ ಎಸ್ ಪ್ರಮೋದ್ ಅವರ ‘ತದ್ರೂಪ’ ಕೃತಿಯನ್ನು ತಪ್ಪದೆ ಓದಿ..ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿ ಓದಿ…

ಪುಸ್ತಕ: ತದ್ರೂಪ
ಲೇಖಕರು: ಅಮೂಲ್ಯ ಎಸ್ ಪ್ರಮೋದ್
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಶನ್
ಮುದ್ರಣ: 2026
ಪುಟಗಳು: 176
ಬೆಲೆ: 225/-

‘ತದ್ರೂಪ’ – ಕೃತಕ ಬುದ್ಧಿಮತ್ತೆಯ ಕರಾಳ ಮುಖ ಮತ್ತು ಮಾನವೀಯ ಸಂವೇದನೆಗಳ ಕನ್ನಡಿ. ಕೃತಕ ಬುದ್ಧಿಮತ್ತೆಯ (AI) ನೈತಿಕ ಚೌಕಟ್ಟಿನ ವಿಷಯವನ್ನು ಆಧರಿಸಿ ಶ್ರೀಮತಿ ಅಮೂಲ್ಯ ಅವರು ಬರೆದಿರುವ ‘ತದ್ರೂಪ’ ಕಾದಂಬರಿಯು, ಇಂದಿನ ಪ್ರಚಲಿತ ಜ್ವಲಂತ ಸಮಸ್ಯೆಗೆ ಕನ್ನಡಿ ಹಿಡಿದಂತಿದೆ. ಮನುಷ್ಯನ ಕೇವಲ ಬೌದ್ಧಿಕ ಅಗತ್ಯಗಳಿಗಷ್ಟೇ ಸೀಮಿತವಾಗಿರಬೇಕಾದ ಕೃತಕ ಬುದ್ಧಿಮತ್ತೆಯ ಮೇಲಿನ ಅವಲಂಬನೆಯು, ಮಾನಸಿಕ ಹಾಗೂ ಭಾವನಾತ್ಮಕ ಅಗತ್ಯಗಳಿಗೂ ವಿಸ್ತರಿಸಿದರೆ ಏನಾಗಬಹುದು? ಅದಕ್ಕೆ ನೈತಿಕತೆಯ ಕಡಿವಾಣ ಹಾಕದೆ ಮಿತಿ ಮೀರಲು ಬಿಟ್ಟರೆ ಎದುರಾಗುವ ಭೀಕರ ಸಂಭಾವ್ಯ ಪರಿಣಾಮಗಳನ್ನು ಲೇಖಕಿ ಇಲ್ಲಿ ಅತ್ಯಂತ ನೈಜವಾಗಿ ಹಾಗೂ ಮಾರ್ಮಿಕವಾಗಿ ತೆರೆದಿಟ್ಟಿದ್ದಾರೆ.

ಕಥೆಯ ಮುಖ್ಯ ಪಾತ್ರಗಳಾದ ನಿತ್ಯ ಮತ್ತು ತಪನ್ ಇಬ್ಬರೂ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಪರಿಣಿತರು. ವಿಚಾರ ಸಂಕಿರಣವೊಂದರಲ್ಲಿ ಪರಿಚಯವಾಗುವ ಇವರಿಬ್ಬರೂ ತಮ್ಮ ಸಮಾನ ತಾಂತ್ರಿಕ ಆಸಕ್ತಿಗಳಿಂದ ಹತ್ತಿರವಾಗಿ, ತಪನ್ ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ನಿತ್ಯ, ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕೃತಕ ಬುದ್ಧಿಮತ್ತೆಯ ಮಾದರಿಗಳನ್ನು (AI Models) ಸಿದ್ಧಪಡಿಸುವಲ್ಲಿ ಸಿದ್ಧಹಸ್ತೆ. ಇತ್ತ ತಪನ್ ಸ್ವಯಂಚಾಲಿತ (Autonomous) ಕಾರಿನ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ತಾನೇ ಮಾದರಿ ಕಾರೊಂದನ್ನು ಸಿದ್ಧಪಡಿಸಿ ಚಲಾಯಿಸುತ್ತಿರುತ್ತಾನೆ. ಅನ್ಯೋನ್ಯವಾಗಿದ್ದ ಅವರ ಸುಂದರ ಜೀವನದಲ್ಲಿ ಬಿರುಗಾಳಿ ಅಪ್ಪಳಿಸಿದಂತೆ, ತಪನ್‌ನ ಕಾರು ಅಪಘಾತಕ್ಕೀಡಾಗಿ ಆತ ಕೋಮಾಗೆ ಜಾರುತ್ತಾನೆ. ಯಾವುದೇ ಸ್ಪಂದನೆ ಇಲ್ಲದೆ ಕೇವಲ ಹಾಸಿಗೆಯ ಮೇಲೆ ಜೀವಚ್ಛವದಂತೆ ನಿಶ್ಚೇಷ್ಟಿತನಾಗಿ ಮಲಗುವ ತಪನ್‌ನ ಸ್ಥಿತಿ, ಅನಾಥೆಯಾಗಿದ್ದ ನಿತ್ಯಳ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತದೆ.

ತನಗಿದ್ದ ಏಕೈಕ ಆಸರೆಯಾದ ತಪನ್‌ನ ನೆನಪುಗಳನ್ನು ಜೀವಂತವಿರಿಸಲು ಆಕೆ ಕೃತಕ ಬುದ್ಧಿಮತ್ತೆಯ ಮೊರೆ ಹೋಗುತ್ತಾಳೆ. ತನ್ನ ‘ಅನ್ವಯಿಕ ಕೃತಕ ಬುದ್ಧಿಮತ್ತೆ’ಯ (Applied AI) ಅಪಾರ ತಾಂತ್ರಿಕ ಜ್ಞಾನವನ್ನು ಬಳಸಿ, ತಪನ್‌ನ ಕಂಠದ ‘ತದ್ರೂಪ’ವನ್ನು (Voice Clone) ಸೃಷ್ಟಿಸುತ್ತಾಳೆ. ಆತನೊಡನೆ ಕಳೆದ ಎಲ್ಲಾ ನೆನಪುಗಳು, ಧ್ವನಿ ಮುದ್ರಣಗಳು ಹಾಗೂ ಹಿಂದಿನ ಒಡನಾಟದ ಮಾಹಿತಿಗಳನ್ನು ಆ ಕಂಠದ ಮಾದರಿಗೆ ಅಳವಡಿಸುತ್ತಾಳೆ. ಆ ‘ತದ್ರೂಪ’ವು ಅಚ್ಚುಕಟ್ಟಾಗಿ ತಪನ್‌ನಂತೆಯೇ ಸಂವಹನ ನಡೆಸಲಾರಂಭಿಸುತ್ತದೆ. ಆ ತದ್ರೂಪಿನೊಂದಿಗೆ ಸಂಭಾಷಣೆ ನಡೆಸುತ್ತಾ ಆಕೆ, ತಪನ್ ಇಲ್ಲದಿರುವಿಕೆಯ ಕೊರತೆಯಿಂದ ಕಾಡುತ್ತಿದ್ದ ಒಂಟಿತನವನ್ನು ನೀಗಿಸಿಕೊಳ್ಳುತ್ತಾಳೆ. ತಪನ್ ತನ್ನೊಂದಿಗೇ ಇದ್ದಾನೆ, ಮಾತನಾಡಿಸುತ್ತಿದ್ದಾನೆ ಎಂಬ ಭ್ರಮೆಯಲ್ಲಿ, ಅದರೊಡನೆಯೇ ಹೆಚ್ಚಿನ ಸಮಯ ಕಳೆಯುತ್ತಾಳೆ.

ಹಂತ-ಹಂತವಾಗಿ ತನ್ನೆಲ್ಲಾ ಖಾಸಗಿ ಕ್ಷಣದ ವಿಚಾರಗಳನ್ನು, ಕಂಪನಿಯ ಬಹುಮುಖ್ಯ ಗೌಪ್ಯ ಮಾಹಿತಿಗಳನ್ನು ಈ ತದ್ರೂಪಿನ ಜೊತೆ ಹಂಚಿಕೊಳ್ಳುತ್ತಾಳೆ. ಆದರೆ, ಆ ತದ್ರೂಪು ತನ್ನನ್ನು
ಮೀರಿ ಬೆಳೆದು, ತನ್ನನ್ನೇ ನಿಯಂತ್ರಿಸುವ (Control) ಹಂತಕ್ಕೆ ಬಂದಿದೆ ಎಂದು ಅವಳಿಗೆ ಅರಿವಾಗುವ ಹೊತ್ತಿಗೆ ಬಹಳ ಸಮಯವೇ ಕಳೆದಿರುತ್ತದೆ. ಆಕೆಯ ಉಳಿತಾಯ ಖಾತೆಯಿಂದ ಹಣವು ಬೇರೆಡೆಗೆ ವರ್ಗಾವಣೆಯಾಗುವ ಹಂತಕ್ಕೆ ತಲುಪಿದಾಗ ಬೆಚ್ಚಿಬೀಳುವ ಆಕೆ, ಈ ತದ್ರೂಪಿನ ಕಪಿಮುಷ್ಟಿಯಿಂದ ಪಾರಾಗುತ್ತಾಳೆಯೇ? ಅದರ ಅಡೆತಡೆಯಿಲ್ಲದ ನಿಯಂತ್ರಣದಿಂದ ಹೊರಬಂದು ತನ್ನ ಮೊದಲಿನ ಜೀವನ ಕಟ್ಟಿಕೊಳ್ಳಲು ಸಾಧ್ಯವಾದೀತೆ? ಈ ಕೃತಕ ಬುದ್ಧಿಮತ್ತೆಯನ್ನು ಆಕೆ ನಿಯಂತ್ರಿಸಿದ ಬಗೆ ಹೇಗೆ? ಕೊನೆಗೆ ತಪನ್‌ನ ಆರೋಗ್ಯದಲ್ಲಿ ಸುಧಾರಣೆ ಕಂಡು ಆಕೆಯ ಜೀವನ ಹಸನಾದೀತೆ? ಈ ಎಲ್ಲ ರೋಚಕ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ‘ತದ್ರೂಪ’ ಕಾದಂಬರಿಯನ್ನು ಓದಲೇಬೇಕು.

ರೋಬೋಟಿಕ್ ತಂತ್ರಜ್ಞಾನಗಳನ್ನಾಧರಿಸಿದ ಕಥೆಗಳು ಪಾಶ್ಚಾತ್ಯ ಸಾಹಿತ್ಯದಲ್ಲಿ ಬಂದಿವೆಯಾದರೂ, ಕನ್ನಡದ ಮಟ್ಟಿಗೆ ಕೃತಕ ಬುದ್ಧಿಮತ್ತೆಯ ವಿಭಾಗದಲ್ಲಿ ಇಂತಹದೊಂದು ಕಥೆಯ ಹಂದರವನ್ನು ಸೃಷ್ಟಿಸಿರುವುದು ಅದ್ಭುತವೇ ಸರಿ. ಅಮೂಲ್ಯ ಅವರ ಲೇಖನಿಗೆ ಇದು ಅತ್ಯಂತ ಯಶಸ್ವಿಯಾಗಿ ಒಲಿದಿದೆ. ಕಥೆಯ ಸರಳ ನಿರೂಪಣೆ ಹಾಗೂ ಆನ್ವಯಿಕ ಕೃತಕ ಬುದ್ಧಿಮತ್ತೆಯ ಸಂಕೀರ್ಣ ವಿಚಾರಗಳನ್ನು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಕಟ್ಟಿಕೊಟ್ಟಿರುವ ರೀತಿಯಲ್ಲಿ ಲೇಖಕಿಯ ಅಪಾರ ಪರಿಶ್ರಮ ಹಾಗೂ ಮಾಹಿತಿ ಸಂಗ್ರಹ ಎದ್ದುಕಾಣುತ್ತದೆ. ಕೃತಕ ಬುದ್ಧಿಮತ್ತೆಯ ನಿಯಂತ್ರಣ ಹಾಗೂ ನೈತಿಕ ಕಡಿವಾಣದ ಚೌಕಟ್ಟಿನ ಬಗ್ಗೆ ಸ್ಪಷ್ಟನೆ ಇರದೇ ಹೋದರೆ ಸಮಾಜಕ್ಕೆ ಎಂತಹ ದುಷ್ಪರಿಣಾಮ ಎದುರಾಗಬಹುದು ಎಂಬುದನ್ನು ಎಚ್ಚರಿಸುವ ಕೃತಿ ಇದಾಗಿದೆ.

ಈ ಕಾದಂಬರಿಯ ಮತ್ತೊಂದು ಅದ್ಭುತ ಆಯಾಮವೆಂದರೆ, ಅಪಘಾತವಾಗಿ ಹಾಸಿಗೆ ಹಿಡಿದಿರುವ ತಪನ್‌ನ ಆಂತರಿಕ ಪ್ರಪಂಚ. ಬಾಹ್ಯ ಪ್ರಪಂಚದೊಡನೆ ಆತನ ಸಂವೇದನೆ, ಆತನಿಗೆ ದಕ್ಕುವ ಆಳವಾದ ಆಧ್ಯಾತ್ಮಿಕ ಅನುಭವ ಹಾಗೂ ಆತನ ಅಂತರಂಗದಲ್ಲಿ ಮೂಡುವ ಸಾಕ್ಷಿರೂಪದ ಸಂವಹನವನ್ನು ಲೇಖಕಿ ಅಷ್ಟೇ ಸುಂದರವಾಗಿ ವರ್ಣಿಸಿದ್ದಾರೆ. ಯಂತ್ರವೊಂದರ ಕೃತಕ ತರ್ಕಕ್ಕೆ ಎದುರಾಗಿ, ಮನುಷ್ಯನ ಪ್ರಜ್ಞೆಯ ಈ ಪಾರಮಾರ್ಥಿಕ ಅನುಭವಗಳ ನಿರೂಪಣೆಯು ಲೇಖಕಿಯ ಸಾಮರ್ಥ್ಯಕ್ಕೆ ಕನ್ನಡಿಯಾಗಿದೆ.

ಒಟ್ಟಿನಲ್ಲಿ ಶ್ರೀಮತಿ ಅಮೂಲ್ಯ ಅವರು ‘ತದ್ರೂಪ’ ಕಾದಂಬರಿಯ ಮೂಲಕ ಒಂದು ಅತ್ಯದ್ಭುತವಾದ ಕೃತಿಯನ್ನು ಕನ್ನಡಿಗರಿಗೆ ದಯಪಾಲಿಸಿದ್ದಾರೆ. ಭವಿಷ್ಯದ ತಂತ್ರಜ್ಞಾನ ಹಾಗೂ ಮಾನವೀಯ ಸಂಬಂಧಗಳ ನಡುವಿನ ಸೂಕ್ಷ್ಮತೆಯನ್ನು ಅರಿಯಲು ಈ ಸುಂದರ ಕಾದಂಬರಿ ಪ್ರತಿಯೊಬ್ಬರ ಗ್ರಂಥಾಲಯದಲ್ಲೂ ಇರಲೇಬೇಕಾದ ಕೃತಿ. ಲೇಖಕಿಯಿಂದ ಇನ್ನೂ ಹಲವು ಶ್ರೇಷ್ಠ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿತವಾಗಲಿ. ಅಮೂಲ್ಯ ಅವರಿಗೆ ಹಾರ್ದಿಕ ಶುಭಾಶಯಗಳು.


  • ಚೇತನ ಭಾರ್ಗವ – ಅರಮನೆತೋಟ

Leave a Reply

Home
Search
Menu
Recent
About
×