ಪ್ರೀತಿಯಿಂದ ಎಲ್ಲ ಗೆಲ್ಲಬಹುದು ಅರಿಯಿರಿ ದ್ವೇಷದಿಂದ ಎಲ್ಲ ಕಳೆದುಕೊಳ್ಳುವಿರಿ ಎಂಬುದ ಮರೆಯದಿರಿ…ಕವಿ ನಾಗರಾಜ್ ಜಿ.ಎನ್.ಬಾಡ ಅವರು ತಮ್ಮ ರಕ್ತ ಸಂಬಂಧಗಳ ಒಲವಿನ ಕುರಿತು ಬರೆದ ಕವನವನ್ನು ಪೂರ್ತಿಯಾಗಿ ಓದಿ…
ತೆರೆದುಕೊಳ್ಳಲಿ ನಮ್ಮ ಮನದ ಬೀಗ
ಪ್ರೀತಿ ಆತ್ಮೀಯತೆಗೆ ಇರಲಿ ಸದಾ ಜಾಗ
ದ್ವೇಷದ ಭಾವನೆ ಖಾಲಿಯಾಗಲಿ ಬೇಗ
ತುಂಬಿಕೊಳ್ಳಲಿ ನಮ್ಮೊಳಗೆ ಒಲವ ರಾಗ
ಯಾರದೋ ಹುಸಿ ಮಾತಿಗೆ ಕಿವಿಗೊಡದಿರಿರಿ
ಯಾರ ಬಗ್ಗೆಯೂ ಅಸೂಯೆ ಪಡದಿರಿ
ಪ್ರೀತಿಯಿಂದ ಎಲ್ಲ ಗೆಲ್ಲಬಹುದು ಅರಿಯಿರಿ
ದ್ವೇಷದಿಂದ ಎಲ್ಲ ಕಳೆದುಕೊಳ್ಳುವಿರಿ ಎಂಬುದ ಮರೆಯದಿರಿ
ರಕ್ತ ಸಂಬಂಧಗಳು ಕೊನೆಗೊಳ್ಳಬಾರದು ಎಂದು
ಕಷ್ಟ ಕಾಲದಲ್ಲಿ ಕೈ ಹಿಡಿಯುವವನೇ ಬಂಧು
ಪ್ರೀತಿಯಿಂದ ಮನಸ ಗೆದ್ದರೆ ನಗುತಿರಬಹುದು
ದ್ವೇಷ ಅಸೂಯೆ ತುಂಬಿರಲು ಹೋಗುವೆವು ಬೆಂದು
ಮನೆ ಮನಸು ಆಗಿರಲಿ ಪ್ರೀತಿಯ ದೇಗುಲ
ತೆರೆದಿಡಿ ಸ್ವಚ್ಛಂದ ಗಾಳಿಯ ತುಂಬಿಕೊಳ್ಳಲು ಬಾಗಿಲ
ಹೊರಹಾಕಿಬಿಡಿ ಮನಸ್ಸಿನೊಳಗಿನ ಎಲ್ಲ ದಿಗಿಲ
ಸಂಬಂಧಗಳ ಸಪ್ತವರ್ಣ ತುಂಬಿಕೊಳ್ಳಲು ಬಿಡಿ ಮನದ ಮುಗಿಲ
ಗಟ್ಟಿಯಾಗಿರಲಿ ಎಂದೆಂದೂ ಸಂಬಂಧಗಳ ಮಿಡಿತ
ಒಬ್ಬರ ಮೇಲೊಬ್ಬರಿಗಿರಲಿ ಪ್ರೀತಿಯ ತುಡಿತ
ಬೆಚ್ಚಗಿನ ಸ್ಪರ್ಶವ ನೀಡಲಿ ಸಂಬಂಧಗಳ ಹಿಡಿತ
ಅಹಂಕಾರವ ಬದಿಗಿಟ್ಟುಬಿಡಿ ಮನದ ಬಾಗಿಲ ತೆರೆದಿಡುತ್ತ
- ನಾಗರಾಜ್ ಜಿ.ಎನ್.ಬಾಡ – ಕುಮಟ
