”ಹೊಟ್ಟೆಗೆ ಅನ್ನವಿಲ್ಲದಿದ್ದರೂ ಚಿಂತೆಯಿಲ್ಲ, ಮಾನಕ್ಕೆ ಮಸಿ ಬರಬಾರದು” ದುಡಿದು ತಿನ್ನುವವನು ಯಾವತ್ತೂ ತಲೆ ತಗ್ಗಿಸಿ ನಡೆಯುವುದಿಲ್ಲ. ಅವನು ಎದೆಯೆತ್ತಿ ನಡೆಯುತ್ತಾನೆ. ಅದುವೇ ಮಹಾರಾಯನ ಲಕ್ಷಣ. ಲೇಖಕರಾದ ಓಂಕಾರ ಪಾಟೀಲ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಆತ್ಮೀಯರೇ,
ನಮ್ಮ ಹಳ್ಳಿಗಳಲ್ಲಿ ಹಿರಿಯರು ಒಂದು ಮಾತನ್ನು ಬಹಳ ಪ್ರೀತಿಯಿಂದ ಹೇಳುತ್ತಿದ್ದರು. ಅದೇನೆಂದರೆ “ಮಾಡಿದುಣ್ಣೋ ಮಹಾರಾಯ, ಮಾಡದೆ ಉಣ್ಣೋ ಭಿಕ್ಷುಕ” ಅಂದರೆ ದುಡಿದು ತಿನ್ನುವವನೇ ನಿಜವಾದ ಮಹಾರಾಯ. ದುಡಿಯದೆ, ಇನ್ನೊಬ್ಬರ ದುಡಿಮೆಯ ಮೇಲೆ ಬದುಕುವವನು ಎಷ್ಟೇ ದೊಡ್ಡ ಮನೆಯಲ್ಲಿ ಹುಟ್ಟಿದ್ದರೂ ಭಿಕ್ಷುಕನೇ ಎಂದರ್ಥ. ಇದು ಕೇವಲ ಗಾದೆ ಮಾತಲ್ಲ. ಇದು ನಮ್ಮ ಬದುಕಿನ ತತ್ವಶಾಸ್ತ್ರ, ನಮ್ಮ ಸಂಸ್ಕೃತಿಯ ಜೀವಾಳ.
ಬಸವಣ್ಣನವರು ೧೨ನೇ ಶತಮಾನದಲ್ಲೇ ಇದನ್ನೇ ಹೇಳಿದರು “ಕಾಯಕವೇ ಕೈಲಾಸ” ದುಡಿಮೆಯೇ ದೇವರು. ಕೆಲಸದಲ್ಲಿ ದೇವರನ್ನು ಕಾಣಬೇಕು. ಯಾವ ಕೆಲಸವೂ ಚಿಕ್ಕದಲ್ಲ, ಯಾವ ಕಾಯಕವೂ ಕೀಳಲ್ಲ. ಹೊಲದಲ್ಲಿ ಉಳುವ ರೈತ, ಚಪ್ಪಲಿ ಹೊಲಿಯುವ ಮಾದಾರ, ಬಟ್ಟೆ ನೇಯುವ ನೇಕಾರ, ಮನೆ ಕಟ್ಟುವ ಕೂಲಿ ಕಾರ್ಮಿಕ ಎಲ್ಲರೂ ಸಮಾನ. ಕಾಯಕ ಬೇರೆ ಬೇರೆಯಾಗಿರಬಹುದು, ಆದರೆ ಎಲ್ಲರ ಕಾಯಕವೂ ಪೂಜೆಗೆ ಅರ್ಹವಾಗಿದೆ. ಅದುವೇ ದುಡಿದು ತಿನ್ನುವ ತತ್ವ.
ಆದರೆ ಇಂದು ಏನಾಗಿದೆ? ಕೆಲಸ ಮಾಡುವುದು ಕೀಳರಿಮೆ ಎಂಬ ಭಾವ ಕೆಲವರಲ್ಲಿ ಬೆರೂರಿದೆ. ಬೆವರಿಳಿಸಿ ದುಡಿಯುವುದಕ್ಕಿಂತ, ಕುಳಿತು ಸಂಪಾದಿಸುವುದೇ ಜಾಣತನ ಎಂಬ ತಪ್ಪು ಕಲ್ಪನೆ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ನಮ್ಮ ಸಮಾಜದಲ್ಲಿ ಅಸಮಾಧಾನ, ಆತಂಕ ಜಾಸ್ತಿಯಾಗಿದೆ.
“ದುಡಿದು ತಿಂದರೆ ದೇವರಿಗೂ ಸಂತೋಷ, ಕೂತು ತಿಂದರೆ ಕೂದಲಿಗೂ ಸಂಕಟ” ಎಂಬ ಮಾತಿನಂತೆ, ಕುಳಿತು ತಿಂದರೆ ಕುಡಿಕೆಗೆ ಹೊನ್ನು ಸಾಲದು.
“ಮಾಡಿದುಣ್ಣೋ ಮಹಾರಾಯ” ಎಂದರೆ, ಆತನಿಗೆ ಯಾರ ಮುಂದೆಯೂ ಕೈ ಒಡ್ಡುವ ಅವಶ್ಯಕತೆ ಇಲ್ಲ. ಆತನ ತಟ್ಟೆಯಲ್ಲಿರುವ ಅನ್ನ ಆತನ ಬೆವರಿನ ಅನ್ನ. ಆ ಅನ್ನಕ್ಕೆ ಸ್ವಾಭಿಮಾನದ ಸುವಾಸನೆ ಇದೆ. ಇನ್ನೊಬ್ಬರ ಎದುರು ಕೈ ಚಾಚಿ ಬದುಕುವವನಿಗೆ ಎಷ್ಟೇ ಐಶ್ವರ್ಯವಿದ್ದರೂ ಮನಸ್ಸಿನಲ್ಲಿ ಕೊರಗು ಇರುತ್ತದೆ. ಆದರೆ ತನ್ನ ಸ್ವಂತ ದುಡಿಮೆಯಿಂದ ಒಂದು ಹೊತ್ತು ಊಟ ಮಾಡುವವನಿಗೆ ಸದಾ ಮಾನಸಿಕ ನೆಮ್ಮದಿ ಇರುತ್ತದೆ.
ನಮ್ಮ ತಂದೆ-ತಾಯಂದಿರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು – “ಹೊಟ್ಟೆಗೆ ಅನ್ನವಿಲ್ಲದಿದ್ದರೂ ಚಿಂತೆಯಿಲ್ಲ, ಮಾನಕ್ಕೆ ಮಸಿ ಬರಬಾರದು” ದುಡಿದು ತಿನ್ನುವವನು ಯಾವತ್ತೂ ತಲೆ ತಗ್ಗಿಸಿ ನಡೆಯುವುದಿಲ್ಲ. ಅವನು ಎದೆಯೆತ್ತಿ ನಡೆಯುತ್ತಾನೆ. ಅದುವೇ ಮಹಾರಾಯನ ಲಕ್ಷಣ.
ಆದರೆ ಇಂದು ನಮ್ಮ ಸಮಾಜಕ್ಕೆ ಅಂಟಿರುವ ದೊಡ್ಡ ರೋಗವೆಂದರೆ “ಸುಮ್ಮನೆ ಸಿಗಲಿ, ಉಚಿತವಾಗಿ ಸಿಗಲಿ, ಯಾರಾದರೂ ಕೊಡಲಿ, ಅದೃಷ್ಟ ಖುಲಾಯಿಸಲಿ” ಎಂದು ಕಾಯುವ ಮನೋಭಾವ. ಯುವಜನಾಂಗದಲ್ಲಿ ಆಲಸ್ಯ, ಸೋಮಾರಿತನ ಹೆಚ್ಚಾಗುತ್ತಿದೆ. ಇದರಿಂದಲೇ ಯುವ ಸಮುದಾಯ ದಾರಿ ತಪ್ಪುತ್ತಿದೆ.
ಉಚಿತವಾಗಿ ಬಂದದ್ದು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ದುಡಿದು ಗಳಿಸಿದ್ದು ಮಾತ್ರ ನಮ್ಮೊಂದಿಗೆ ಇರುತ್ತದೆ ಎಂಬುದನ್ನು ನಾವೆಲ್ಲರೂ ಅರಿಯಬೇಕಾಗಿದೆ.
“ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡುವೆ ಬಡವನಯ್ಯಾ ಎನ್ನ ಕಾಲೇ ಕಂಬ, ದೇಹವೇ ದೇಗುಲ”
ದುಡಿಯುವ ಕೈಗಳೇ ದೇಗುಲ,
ದುಡಿಯುವ ದೇಹವೇ ದೇವರು ಎಂದು ಶರಣರು
ದುಡಿಮೆಯ ಮಹತ್ವವನ್ನು ಸಾರಿದರು.
“ಆಲಸಿ ಮನುಷ್ಯನಿಗೆ ಅನ್ನವೂ ಭಾರ” ಎಂಬ ಗಾದೆಯು ಇಂದಿನ ಯುವಕರಿಗೆ ಮಹತ್ವದ ಸಂದೇಶವಾಗಿದೆ.
ಪಿಯುಸಿ, ಡಿಗ್ರಿ ಮುಗಿದ ಮೇಲೆ “ಉದ್ಯೋಗ ಸಿಗಲಿಲ್ಲ” ಎಂದು ಕೊರಗುವ ಬದಲು, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ಮುಖ್ಯ. ಸಣ್ಣ ಉದ್ಯೋಗವೆಂದು ಕೀಳಾಗಿ ನೋಡಬಾರದು. ಇಂದು ಸಣ್ಣ ಕೆಲಸದಿಂದ ಆರಂಭಿಸಿದವನೇ ನಾಳೆ ದೊಡ್ಡ ಉದ್ಯಮಿಯಾಗುತ್ತಾನೆ. ಇದಕ್ಕೆ ಇಂದಿನ ಅನೇಕ ಉದ್ಯಮಿಗಳು ಮತ್ತು ಅವರು ನಡೆದು ಬಂದ ದಾರಿಯೇ ಸಾಕ್ಷಿ.
ಮಹಾರಾಯ ಎಂದರೆ ಸಿಂಹಾಸನದ ಮೇಲೆ ಕೂತವನಲ್ಲ. ತನ್ನ ಶ್ರಮದಿಂದ ತನ್ನ ಕುಟುಂಬವನ್ನು ಸಾಕುವವನೇ ಮಹಾರಾಯ. ತನ್ನ ತಾಯಿ-ತಂದೆಯನ್ನು ನೋಡಿಕೊಳ್ಳುವವನೇ ಮಹಾರಾಯ. ಸಮಾಜದಲ್ಲಿ ಒಂದು ಕೈ ಕಸುಬು ಮಾಡಿ ಬಂದ ಕೆಲಸ ಮಾಡುವವನೇ ಮಹಾರಾಯ.
“ದುಡಿಮೆ ಇಲ್ಲದ ಬದುಕು, ದೀಪವಿಲ್ಲದ ಮನೆ ಇದ್ದಂತೆ”
“ಬೆವರು ಹರಿಸಿದವನಿಗೆ ಮಾತ್ರ, ಬದುಕಿನ ರುಚಿ ಗೊತ್ತು”
ದುಡಿಯುವ ಕೈಗೆ, ಶ್ರಮಿಕ ಜೀವಿಗೆ ಸದಾ ಸಮಾಜದಲ್ಲಿ ಬೆಲೆ ಇದ್ದೇ ಇರುತ್ತದೆ. ಹಾಗಾಗಿ ನಾವು ನಮ್ಮ ಕೈಲಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ದುಡಿಯೋಣ. ದುಡಿದು ಬಂದ ಆದಾಯದಲ್ಲಿ ತಿನ್ನೋಣ. ತಿಂದು ಸ್ವಲ್ಪ ಮಟ್ಟಿಗೆ ಉಳಿಸಿ ಸಮಾಜಕ್ಕೆ ದಾಸೋಹ ಮಾಡೋಣ. ದುಡಿದು ತಿನ್ನುವಾಗ ಸಿಗುವ ನೆಮ್ಮದಿ, ಮರ್ಯಾದೆ, ಸ್ವಾಭಿಮಾನ ಬೇರೆ ಯಾವುದರಲ್ಲೂ ಸಿಗುವುದಿಲ್ಲ.
ದುಡಿಯುವ ಕೈಗಳಿಗೆ ಯಾವತ್ತೂ ಕೊರತೆ ಇಲ್ಲ. ದುಡಿಯುವ ಮನಸ್ಸಿಗೆ ಯಾವತ್ತೂ ಸೋಲು ಇಲ್ಲ ಎಂಬುದನ್ನು ಅರಿಯೋಣ. ದುಡಿದು ತಿನ್ನೋಣ, ಮಹಾರಾಯರಂತೆ ಬದುಕೋಣ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
