ಲೇಖಕರಾದ ಗಾಯತ್ರಿ ರಾಜ್ ಅವರ ಹೊಸ ಕೃತಿ ‘ಒಲವಿನ ಭಿನ್ನರಾಶಿ’ ಕಾದಂಬರಿಯ ವಿಶೇಷ ಆಕರ್ಷಣೆಯೆಂದರೆ ಭಾವನೆಗಳನ್ನು ಏರುಪೇರಾಗಿಸುವ ಶಕ್ತಿಯುತ ಸಾಲುಗಳು ಮತ್ತು ಮೂರು ಭಾಗಗಳಲ್ಲಿ ಕಥೆಯನ್ನು ಹೇಳಲಾಗಿದ್ದು, ಈ ಕೃತಿಯ ಬಗ್ಗೆ ಆಶ್ರಿತಾ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…
ಪುಸ್ತಕ : ಒಲವಿನ ಭಿನ್ನರಾಶಿ
ಲೇಖಕರು : ಗಾಯತ್ರಿ ರಾಜ್
ಪ್ರಥಮ ಮುದ್ರಣ : 2026
ಪ್ರಕಾಶಕರು : ಪುಸ್ತಕಾಗಾರ
ಪುಟಗಳು : 348
ಬೆಲೆ : 450/-
ಹೆಣ್ಣಿನ ಭಾವನೆಗಳನ್ನು ಬರೆಯಲು ಹೆಣ್ಣಾಗಿ ಅಥವಾ ಗಂಡಿನ ಭಾವನೆಗಳನ್ನು ಬರೆಯಲು ಗಂಡಾಗಿಯೇ ಹುಟ್ಟುಬೇಕೆಂದಿಲ್ಲ. ಅದನ್ನು ಅರಿಯುವ ಸೂಕ್ಷ್ಮ ಮನಸ್ಸಿರಬೇಕು. ಆದರೆ ಈ ರೀತಿಯ ಸೂಕ್ಷ್ಮತೆ ಎಲ್ಲರಿಗೂ ಒಲಿಯುವುದಿಲ್ಲ. ಒಲಿಸಿಕೊಳ್ಳುವ ಪ್ರಯತ್ನ, ಅದರಿಂದಾಗುವ ಪರಿಣಾಮ, ನಿರ್ಧಾರದಿಂದ ನಲುಗುವ ಮುಗ್ಧ ಮನಸ್ಸು, ಆ ಮನಸ್ಸಿನ ಗೊಂದಲ, ನರಳಾಟ, ಪರಿಹಾರವನ್ನು ಒಂದು ತ್ರಿಕೋನ ಪ್ರೇಮಕಥೆ ಹೇಳುತ್ತದೆ. ಅದೇ “ಒಲವಿನ ಭಿನ್ನರಾಶಿ”.
ಕಥೆಯ ಒಂದು ಮುಖ್ಯ ಪಾತ್ರವಾದ ಅದಿತ್ಯನಿಗೆ ಹೆಣ್ಮನದ ಭಾವನೆಗಳನ್ನು ಬರೆದು ಜನರಿಂದ ಮೆಚ್ಚುಗೆ ಗಳಿಸುವ ಹಂಬಲ. ಆದರೆ ಅವನಿಂದ ಅದು ಸಾಧ್ಯವಾಗುವುದಿಲ್ಲ
ಎನ್ನುವುದು ಅವನಿಗೆ ತಿಳಿದಿತ್ತು. ಅದೇ ಸಮಯದಲ್ಲಿ ಅವನ ಕಣ್ಣಿಗೆ ಬೀಳುವವಳು ಅನ್ವಿತ.

“ಒಂಟಿತನದ ಕೋಟೆಯ ಬಾಗಿಲುಗಳನ್ನು ಯಾವ ಬಲಪ್ರಯೋಗವೂ ಮುರಿಯಬಾರದು. ಆದರೆ ಕಳಕಳಿಯ ಸೋಗುಹಾಕಿ ಬರುವ ಒಂದೇ ಒಂದು ಸಾಂತ್ವನ ಆ ಭದ್ರ
ಬಾಗಿಲನ್ನು ಸದ್ದಿಲ್ಲದೆ ತೆರೆಸಿಬಿಡುತ್ತದೆ.” ಅನ್ವಿತಾಳ ಬದುಕು ಅವಳ ನಿಲುವುಗಳು, ಆದಿತ್ಯನ ನಡೆಯ ಬಗ್ಗೆ ಈ ಸಾಲು ಸುಳಿವು ನೀಡುತ್ತದೆ. ಆದರೆ ಹೇಗೆ ಏನು ಎನ್ನುವುದನ್ನು
ಅದ್ಭುತವಾಗಿ ಹೆಣೆಯಲಾಗಿದ್ದು ಮನವನ್ನು ಕೆರಳಿಸುತ್ತದೆ.
ಇದನ್ನು ಕೇವಲ ಕಥೆಯಾಗಿ ಇಷ್ಟಪಡುವವರಿಗೆ ಇದು ಕಥೆಯ ರೂಪದಲ್ಲಿ ಗಮನ ಸೆಳೆಯುತ್ತದೆ. ಪ್ರತಿಯೊಂದು ಪಾತ್ರಗಳು ಪ್ರಭಾವ ಬೀರುವಂತಿದೆ. ಆದರೆ ಕಥೆಯಿಂದಾಚೆಗೆ ಇಲ್ಲಿನ ಭಾವನೆಗಳು, ಮನಸ್ಥಿತಿಗಳು, ಬದುಕಿನ ವಾಸ್ತವವನ್ನು ತೆರೆದಿಡುತ್ತದೆ.
ಪ್ರೀತಿಗಾಗಿ ಹಂಬಲಿಸುವ ಮನ ಆಯ್ಕೆಯಲ್ಲಿ ಸೋಲುವುದು ಯಾಕೆ? ಹೇಗೆ? ಎನ್ನುವುದಕ್ಕೆ ಉತ್ತರ ಇಲ್ಲಿದೆ. ಎಲ್ಲವೂ ಚೆನ್ನಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುವ ಜೀವನದಲ್ಲೂ ಒಂದಲ್ಲಾ ಒಂದು ಕೊರಗಿರುತ್ತದೆ ಎನ್ನುವುದಕ್ಕೂ ಇಲ್ಲೊಂದು ಉದಾಹರಣೆ ಇದೆ. ಮನದ ಕೊರಗನ್ನು ನುಂಗಿ ನಗುತ್ತಾ ಬದುಕುವ ನಿಲುವು, ಕಷ್ಟಪಟ್ಟು ಸ್ವತಂತ್ರವಾಗಿ ಬದುಕು
ಕಟ್ಟಿಕೊಂಡು ನೆಮ್ಮದಿಯಾಗಿ ಬಾಳಬೇಕೆನ್ನುವ ತುಡಿತ,ತನಗಾಗಿ ಯಾರಿಲ್ಲ ಎನ್ನುವ ಕೊರಗಿನಿಂದ ಹೊರಬಂದು ಜೀವನ ನಡೆಸಬೇಕೆಂಬ ಆತ್ಮವಿಶ್ವಾಸ, ಸುಳ್ಳಿನ ಕೋಟೆಯೊಳಗಿನ ಭೀತಿ, ಅಭಿಮಾನದ ಪೊರೆ ಸರಿದು ವಾಸ್ತವ ಅರಿತಾಗ ಆಗುವ ಅಚ್ಚರಿ ಹಾಗು ನೋವು ಕಾದಂಬರಿಯ ಜೀವಾಳವಾಗಿದೆ.
ಭಾವನೆಗಳನ್ನು ಏರುಪೇರಾಗಿಸುವ ಶಕ್ತಿಯುತ ಸಾಲುಗಳು ಈ ಕಾದಂಬರಿಯ ವಿಶೇಷ ಆಕರ್ಷಣೆ. ಮೂರು ಭಾಗಗಳಲ್ಲಿ ಕಥೆಯನ್ನು ಹೇಳಲಾಗಿದೆ. ಮೂರು ಭಾಗದ ಶೀರ್ಷಿಕೆ ಹಾಗು ಉಪಶೀರ್ಷಿಕೆಗಳು, ದಪ್ಪ ಅಕ್ಷರಗಳಲ್ಲಿನ ಅರ್ಥಗರ್ಭಿತ ಸಾಲುಗಳು ಕಥೆಗೆ ಸಣ್ಣ ಸುಳಿವು ನೀಡಿದರೂ ಅದು ಗುಟ್ಟನ್ನು ಬಿಟ್ಟುಕೊಡುವುದಿಲ್ಲ. “ನೆರಳಿನ ಸೆರೆ”ಯಿಂದ ಹೊರಬಂದು ಅಂತರಂಗದ ಅಲೆಗಳನ್ನು ಶಾಂತವಾಗಿಸಿ ಸತ್ಯವನ್ನು ಪ್ರಪಂಚದ ಮುಂದೆ “ಅನಾವರಣ”ಗೊಳಿಸುವ ಮೂರು ಭಾಗಗಳು ಕಥೆಯ ಕುತೂಹಲವನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿವೆ.
ಪಾತ್ರಪೋಷಣೆ, ಪಾತ್ರಕ್ಕೆ ನೀಡಿರುವ ಆರಂಭ-ಅಂತ್ಯ ಎರಡೂ ಅದ್ಭುತವಾಗಿದೆ. ಆಕರ್ಷಕ ಮುಖಪುಟ, ಪುಟವಿನ್ಯಾಸ ಕಾದಂಬರಿಯ ಮೆರುಗನ್ನು ಹೆಚ್ಚಿಸಿದೆ. ಕಥಾವಸ್ತು ಸಾಮಾನ್ಯ ಪ್ರೇಮಕಥೆ ಎಂದೆನಿಸಿದರೂ ಅದನ್ನು ಪ್ರಬ್ದುದ್ಧವಾದ ಪದಗಳಿಂದ, ಚೆಂದದ ಸಾಲುಗಳಿಂದ ಪೋಣಿಸಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿರುವ ಶೈಲಿ ಕುತೂಹಲದಿಂದ
ಓದಿಸಿಕೊಂಡು ಹೋಗುತ್ತದೆ.

ಒಂದು ಪರಿಶುದ್ಧ ಸ್ನೇಹ, ಪ್ರೀತಿಯ ಎರಡು ಮುಖ, ನಿಸ್ವಾರ್ಥ ಮನಸ್ಸುಗಳು, ಕೋಪ, ಆಕ್ರೋಶ, ನಂಬಿಕೆ- ಅಪನಂಬಿಕೆ, ಮನಸ್ಸಿನ ಆಘಾತ- ಅದರಿಂದ ಹೊರಬರುವ ಹೋರಾಟ, ಬದಲಾಗುವ ದೃಷ್ಟಿಕೋನ, ಪರಿಸ್ಥಿತಿ ಕಲಿಸುವ ಪಾಠ, ಸಂದರ್ಭಗಳು ತಂದೊಡ್ಡುವ ಬಿಕ್ಕಟ್ಟು, ಗೆಲ್ಲುವ ಅಹಂಕಾರ, ಸೋತು ಗೆಲ್ಲುವ ಅಲೆದಾಟ ಎಲ್ಲವನ್ನೂ ಅದ್ಭುತವಾಗಿ ಪ್ರಸ್ತುತ ಪಡಿಸಲಾಗಿದೆ.
ಕೇವಲ ಕಥೆಯಾಗಿ ಓದದೆ ಭಾವನೆಗಳ ಆಳವನ್ನು ಅರಿತರೆ ಮನಸ್ಥಿತಿಗಳ ಪರಿಚಯವಾಗುತ್ತದೆ. ಆಪ್ತವಾಗುವ ಮುನ್ನ ಮನಸ್ಸು ಲೆಕ್ಕಾಚಾರ ಮಾಡಲಾರಂಭಿಸುವುದರಲ್ಲಿ
ಸಂಶಯವಿಲ್ಲ. ಅಷ್ಟಕ್ಕೂ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಕಣ್ಣುಮುಚ್ಚಿ ನಂಬುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಮೂಡಿಸುತ್ತದೆ.
ಪ್ರೀತಿಗಾಗಿ ತನ್ನ ಅಸ್ತಿತ್ವವನ್ನು ಶರಣಾಗಿಸಿ ಬದುಕುವ ಭಾವನೆಯೊಂದಾದರೆ, ತಾನು ಹೇಗಾದರೂ ಗೆಲ್ಲಬೇಕೆಂಬ ಭಾವನೆ ಇನ್ನೊಂದೆಡೆ. ನಿಜವಾದ ಶ್ರಮಕ್ಕೆ ಮಾನ್ಯತೆ ದೊರಕಿಸಬೇಕೆಂಬ ಹಂಬಲದ ಭಾವನೆ ಮತ್ತೊಂದೆಡೆ. ಒಟ್ಟಾರೆಯಾಗಿ ಭಾವನೆಗಳನ್ನೇ ಜೀವವಾಗಿಸಿರುವ ಕಥೆ
ಇದಾಗಿದೆ.
- ಆಶ್ರಿತಾ ಕಿರಣ್ – ಪುಸ್ತಕ ವಿಮರ್ಶಕರು, ಬೆಂಗಳೂರು.
