ಭಾರತದಲ್ಲಿ ನಡೆದ ಅಧ್ಯಯನಗಳು ಹಿರಿಯರ ಆರೈಕೆಯಲ್ಲಿ ಕುಟುಂಬಗಳು ಎದುರಿಸುವ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳನ್ನು ದಾಖಲಿಸಿವೆ. ಆದ್ದರಿಂದ ಪ್ರತಿಯೊಬ್ಬ ಆರೈಕೆದಾರನನ್ನು “ಪ್ರೀತಿ ಇಲ್ಲದವನು” ಎಂದು ದೂಷಿಸುವುದು ನ್ಯಾಯವಲ್ಲ. ಇದು ಸಂಬಂಧಗಳ ಕುರಿತು ಲೇಖಕರಾದ ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಲೇಖನವನ್ನು ಪೂರ್ತಿಯಾಗಿ ಓದಿ…
ಬಾಲ ಅಲ್ಲಾಡಿಸುವ ಜೀವಿಗೆ ಬಾಗಿಲು ತೆರೆದೆವು; ಕೈ ನಡುಗಿಸುವ ಮನುಷ್ಯನಿಗೆ ಬಾಗಿಲು ಮುಚ್ಚಿದೆವು. ಪ್ರೀತಿಯ ಸಾಮರ್ಥ್ಯ ಕಡಿಮೆಯಾಗಿದೆಯೇ? ಇಲ್ಲವೇ, ಪ್ರೀತಿಗೆ ನಾವು ಆಯ್ಕೆ ಕಲಿತಿದ್ದೇವೆಯೇ? ಒಂದು ಮನೆಯ ಬಾಗಿಲು ತೆರೆದಾಗ ಹೊರಗಿನಿಂದ ಒಂದು ಶ್ವಾನ ಓಡಿ ಬರುತ್ತದೆ.
ಅದು ಬಾಲ ಅಲ್ಲಾಡಿಸುತ್ತದೆ. ನಾವು ಅದರ ತಲೆಯ ಮೇಲೆ ಕೈಯಿಡುತ್ತೇವೆ. ಅದು ನಮ್ಮ ಕಾಲ ಬಳಿ ಮಲಗುತ್ತದೆ. ನಾವು ಅದಕ್ಕೆ ಹೆಸರಿಡುತ್ತೇವೆ. ಅದರ ಊಟದ ಸಮಯ ನೆನಪಿಟ್ಟುಕೊಳ್ಳುತ್ತೇವೆ. ಅದು ಅಸ್ವಸ್ಥವಾದರೆ ವೈದ್ಯರ ಬಳಿಗೆ ಕರೆದೊಯ್ಯುತ್ತೇವೆ. ಕೆಲವೊಮ್ಮೆ ನಮ್ಮ ಹಾಸಿಗೆಯಲ್ಲೂ ಅದಕ್ಕೆ ಜಾಗ ಮಾಡುತ್ತೇವೆ. ಅದು ನಮ್ಮ ರಕ್ತ ಸಂಬಂಧಿಯಲ್ಲ.
ನಮ್ಮ ಸಂತಾನವಲ್ಲ.
ನಮ್ಮನ್ನು ಹೆತ್ತ ಜೀವಿಯೂ ಅಲ್ಲ. ಆದರೂ ಅದು ನಮ್ಮ “ಕುಟುಂಬ” ಇದು ತಪ್ಪಲ್ಲ.
ವಾಸ್ತವವಾಗಿ, ಮನುಷ್ಯನೊಳಗಿನ ಕರುಣೆ ಇಷ್ಟು ದೂರದ ಒಂದು ಜೀವಿಯನ್ನೂ ತನ್ನದಾಗಿಸಿಕೊಳ್ಳಬಲ್ಲದು ಎಂಬುದು ಮಾನವೀಯತೆಯ ಸುಂದರ ಮುಖ. ಆದರೆ ಅದೇ ಕ್ಷಣದಲ್ಲಿ ಮತ್ತೊಂದು ಪ್ರಶ್ನೆ ಮನಸ್ಸಿನ ಬಾಗಿಲು ತಟ್ಟುತ್ತದೆ.
ಒಂದು ಶ್ವಾನವನ್ನು ಇಷ್ಟು ಆಳವಾಗಿ “ನನ್ನದು” ಎಂದು ಅನುಭವಿಸಬಲ್ಲ ಮನಸ್ಸು, ತನ್ನನ್ನು ಬೆಳೆಸಿದ ಹಿರಿಜೀವಿಯನ್ನು ಏಕೆ ಕೆಲವೊಮ್ಮೆ “ಹೊರೆ” ಎಂದು ಅನುಭವಿಸುತ್ತದೆ? ಪ್ರಶ್ನೆ ನಾಯಿಯ ಬಗ್ಗೆ ಅಲ್ಲ. ಪ್ರಶ್ನೆ ನಮ್ಮ ಪ್ರೀತಿಯ ಸ್ವಭಾವದ ಬಗ್ಗೆ. ಪ್ರೀತಿಸುವ ಸಾಮರ್ಥ್ಯ ನಮಗಿದೆ; ಆದರೆ ಯಾರನ್ನು ಪ್ರೀತಿಸಬೇಕು ಎಂಬ ಆಯ್ಕೆಯನ್ನೂ ಮಾಡುತ್ತಿದ್ದೇವೆಯೇ?
ಇತ್ತೀಚಿನ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಮಾನವ–ಪ್ರಾಣಿ ಸಂಬಂಧವನ್ನು ಕೇವಲ “ಸಾಕುಪ್ರಾಣಿ ಸಾಕುವುದು” ಎಂದು ನೋಡಲಾಗುತ್ತಿಲ್ಲ.
ಹಿರಿಯರ ಜೀವನದಲ್ಲಿ companion animal ಒಡನಾಟ, ಭಾವನಾತ್ಮಕ ಬೆಂಬಲ, ಸಾಮಾಜಿಕ ಸಂಪರ್ಕ ಮತ್ತು wellbeing ಗೆ ಸಹಾಯಕವಾಗಬಹುದೇ ಎಂಬುದನ್ನೂ geriatric medicine ಅಧ್ಯಯನ ಮಾಡುತ್ತಿದೆ. 2026ರ ಒಂದು geriatric ವೈದ್ಯಕೀಯ position statement ಕೂಡ human-animal bond ಮತ್ತು animal-assisted interventions ಕುರಿತು ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದೆ. ಅಂದರೆ, ಶ್ವಾನವನ್ನು ಪ್ರೀತಿಸುವುದು ಮಾನಸಿಕ ದೌರ್ಬಲ್ಯವಲ್ಲ. ಅದು ಮಾನವ ಮನಸ್ಸಿನ ಒಂದು ಸಹಜ ಬಂಧನ ಸಾಮರ್ಥ್ಯ.
ಆದರೆ ಇದೇ ಜಾಗದಲ್ಲಿ ನಮ್ಮ ಸಮಾಜಕ್ಕೆ ಒಂದು ಕಹಿ ಪ್ರಶ್ನೆ ಎದುರಾಗುತ್ತದೆ. ನಮ್ಮಲ್ಲಿ attachment ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ. ಹಾಗಿದ್ದರೆ attachment ಗೆ ಮನುಷ್ಯನನ್ನೇ ಏಕೆ ಕೆಲವೊಮ್ಮೆ ಹೊರಗಿಡುತ್ತೇವೆ?.
ಶ್ವಾನ ನಮ್ಮನ್ನು ಕೇಳುವುದಿಲ್ಲ; ಮನುಷ್ಯ ಕೇಳುತ್ತಾನೆ. ಬಹುಶಃ ಇಲ್ಲೊಂದು ಮನೋವೈಜ್ಞಾನಿಕ ಉತ್ತರ ಅಡಗಿದೆ. ಶ್ವಾನ ನಮ್ಮೊಂದಿಗೆ ವಾದಿಸುವುದಿಲ್ಲ. ನಮ್ಮ ಹಳೆಯ ತಪ್ಪುಗಳನ್ನು ನೆನಪಿಸುವುದಿಲ್ಲ. ನಮ್ಮ ಸಂಬಳ ಎಷ್ಟು ಎಂದು ಕೇಳುವುದಿಲ್ಲ. ನಾವು ಎಷ್ಟು ಯಶಸ್ವಿಯಾಗಿದ್ದೇವೆ ಎಂದು ಅಳೆಯುವುದಿಲ್ಲ. ನಮ್ಮ ಜೀವನದ ನಿರ್ಧಾರಗಳ ಬಗ್ಗೆ ಉಪದೇಶಿಸುವುದಿಲ್ಲ.
ಅದು ನಮ್ಮ ಸಾನ್ನಿಧ್ಯವನ್ನು ಸ್ವೀಕರಿಸುತ್ತದೆ.
ಮನುಷ್ಯ ಸಂಬಂಧ ಹಾಗಲ್ಲ. ಹಿರಿಜೀವಿಯೊಂದಿಗೆ ಬದುಕುವುದು ಎಂದರೆ ಕೆಲವೊಮ್ಮೆ ಅವರ ನೋವು, ಕೋಪ, ಅಭ್ಯಾಸ, ಮರೆವು, ಅವಲಂಬನೆ, ಅನಾರೋಗ್ಯ, ಆರ್ಥಿಕ ಅಗತ್ಯ—ಎಲ್ಲವನ್ನೂ ಎದುರಿಸುವುದು. ಅಂದರೆ, ಶ್ವಾನ ನಮ್ಮ ಭಾವನೆಗೆ ಆರಾಮ ಕೊಡಬಹುದು; ಹಾಸಿಗೆ ಹಿಡಿದ ಮನುಷ್ಯ ನಮ್ಮ ಹೊಣೆಗಾರಿಕೆಯನ್ನು ನೆನಪಿಸುತ್ತಾನೆ.
ಆರಾಮವನ್ನು ಪ್ರೀತಿಸುವುದು ಸುಲಭ. ಹೊಣೆಗಾರಿಕೆಯನ್ನು ಪ್ರೀತಿಸುವುದು ಕಷ್ಟ. ಇದೇ ಬಹುಶಃ ನಮ್ಮ ಕಾಲದ ವಿಚಿತ್ರ ವಿರೋದ್ಯಾಭ್ಯಾಸ.
“ಪ್ರೀತಿ”ಗಿಂತ “ಕಾಳಜಿ” ಕಷ್ಟ. ಒಬ್ಬರನ್ನು ಪ್ರೀತಿಸುವುದು ಮತ್ತು ಒಬ್ಬರನ್ನು ಆರೈಕೆ ಮಾಡುವುದು ಒಂದೇ ಅಲ್ಲ. ಪ್ರೀತಿ ಭಾವನೆ. ಆರೈಕೆ ಕೆಲಸ. ಪ್ರೀತಿ ಒಂದು ಕ್ಷಣದಲ್ಲಿ ಹುಟ್ಟಬಹುದು.
ಆರೈಕೆ ಪ್ರತಿದಿನ ಸಮಯ ಕೇಳುತ್ತದೆ.
ಒಬ್ಬ ಶ್ವಾನಕ್ಕೆ ತಲೆಯ ಮೇಲೆ ಕೈಯಿಡಲು ಒಂದು ನಿಮಿಷ ಸಾಕಾಗಬಹುದು. ಆದರೆ ಹಾಸಿಗೆ ಹಿಡಿದ ಹಿರಿಯನಿಗೆ ಊಟ ಮಾಡಿಸುವುದು, ಸ್ನಾನ ಮಾಡಿಸುವುದು, ಔಷಧಿ ಕೊಡುವುದು, ವೈದ್ಯರ ಬಳಿಗೆ ಕರೆದೊಯ್ಯುವುದು, ಒಂದೇ ಮಾತನ್ನು ಹತ್ತು ಬಾರಿ ಕೇಳಿದರೂ ಉತ್ತರಿಸುವುದು—ಇವುಗಳಿಗೆ ಸಮಯ, ಶಕ್ತಿ ಮತ್ತು ಸಹನೆ ಬೇಕು. ಇದನ್ನೇ caregiver burden ಎಂದು ಆರೋಗ್ಯ ಕ್ಷೇತ್ರದಲ್ಲಿ ಚರ್ಚಿಸಲಾಗುತ್ತದೆ.
ಭಾರತದಲ್ಲಿ ನಡೆದ ಅಧ್ಯಯನಗಳು ಹಿರಿಯರ ಆರೈಕೆಯಲ್ಲಿ ಕುಟುಂಬಗಳು ಎದುರಿಸುವ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳನ್ನು ದಾಖಲಿಸಿವೆ. ಆದ್ದರಿಂದ ಪ್ರತಿಯೊಬ್ಬ ಆರೈಕೆದಾರನನ್ನು “ಪ್ರೀತಿ ಇಲ್ಲದವನು” ಎಂದು ದೂಷಿಸುವುದು ನ್ಯಾಯವಲ್ಲ. ಆದರೆ ಆರೈಕೆಯ ಕಷ್ಟವನ್ನು ನೆಪ ಮಾಡಿಕೊಂಡು ಮನುಷ್ಯನನ್ನೇ ಮರೆತು ಬಿಡುವುದು ನ್ಯಾಯವಲ್ಲ. ಕುಟುಂಬಕ್ಕೆ ನೆರವು ಬೇಕು. ಸಮಾಜಕ್ಕೆ ವ್ಯವಸ್ಥೆ ಬೇಕು. ಹಿರಿಯರಿಗೆ ಗೌರವ ಬೇಕು. ಆರೈಕೆ ಮಾಡುವವರಿಗೆ ವಿಶ್ರಾಂತಿಯೂ ಬೇಕು. ಇವು ಪರಸ್ಪರ ವಿರೋಧಿಗಳಲ್ಲ.
ನಮ್ಮ ಪ್ರೀತಿ ಏಕೆ ‘ಸಂತೋಷ ಕೊಡುವ ಜೀವಿ’ ಗಳ ಕಡೆ ಹೆಚ್ಚು ಹೋಗುತ್ತದೆ? ಇದು ಅತ್ಯಂತ ಸೂಕ್ಷ್ಮವಾದ ಮನೋವಿಜ್ಞಾನ. ಮನುಷ್ಯ ಸಹಜವಾಗಿ positive feedback ಕೊಡುವ ಸಂಬಂಧಗಳ ಕಡೆ ಆಕರ್ಷಿತನಾಗುತ್ತಾನೆ.
ನಾವು ಕರೆಯುತ್ತೇವೆ—ಶ್ವಾನ ಓಡಿ ಬರುತ್ತದೆ.
ನಾವು ಮುದ್ದಿಸುತ್ತೇವೆ—ಅದು ನಮ್ಮ ಹತ್ತಿರ ಕುಳಿತುಕೊಳ್ಳುತ್ತದೆ.
ನಾವು ಮನೆಗೆ ಬರುತ್ತೇವೆ—ಅದು ಸಂತೋಷ ತೋರಿಸುತ್ತದೆ.
ಆದರೆ dementia ಇರುವ ಹಿರಿಯರು ನಮ್ಮನ್ನು ಗುರುತಿಸದೇ ಇರಬಹುದು.
ಅನಾರೋಗ್ಯದಲ್ಲಿರುವವರು ಕೃತಜ್ಞತೆಯನ್ನು ವ್ಯಕ್ತಪಡಿಸಲಾರರು.
ಕೆಲವೊಮ್ಮೆ ಹಾಸಿಗೆ ಹಿಡಿದ ವ್ಯಕ್ತಿಗೆ ನಮ್ಮ ಸೇವೆಯ ಅರಿವೇ ಇರಲಾರದು.
ಆಗ ನಮ್ಮ ಮನಸ್ಸು ಒಂದು ಅಪಾಯಕಾರಿ ಲೆಕ್ಕ ಹಾಕಬಹುದು.
“ನಾನು ಇಷ್ಟೆಲ್ಲ ಮಾಡುತ್ತಿದ್ದೇನೆ; ಪ್ರತಿಯಾಗಿ ಏನು ಸಿಗುತ್ತಿದೆ?” ಆದರೆ ನಿಜವಾದ ಸಂಬಂಧದ ಪರೀಕ್ಷೆ ಅಲ್ಲಿಯೇ ಆರಂಭವಾಗುತ್ತದೆ. ಪ್ರತಿಫಲ ಸಿಗದಿದ್ದರೂ ಮಾಡುವುದು ಸೇವೆ.
ಗುರುತಿಸದಿದ್ದರೂ ಕೈ ಹಿಡಿಯುವುದು ಬಂಧ. ಧನ್ಯವಾದ ಕೇಳದೆ ಮಾಡುವ ಕಾಳಜಿಯೇ ಬಹುಶಃ ಪ್ರೀತಿಯ ಅತ್ಯಂತ ಪ್ರೌಢ ರೂಪ.
ಹಿರಿಯನ ದೇಹವನ್ನು ನೋಡಿದಾಗ ನಮಗೆ ನಮ್ಮ ಭವಿಷ್ಯ ಕಾಣುತ್ತದೆಯೇ?. ಇದು ಇನ್ನೂ ಆಳವಾದ ಮನೋ ವೈಜ್ಞಾನಿಕ ಕಾರಣವಾಗಿರಬಹುದು. ಹಾಸಿಗೆ ಹಿಡಿದ ವೃದ್ಧನನ್ನು ನೋಡುವಾಗ ನಾವು ಕೇವಲ ಆ ವ್ಯಕ್ತಿಯನ್ನು ನೋಡುವುದಿಲ್ಲ.
ತಿಳಿಯದೆ ನಮ್ಮದೇ ಭವಿಷ್ಯವನ್ನು ನೋಡುತ್ತೇವೆ. ಕೈ ನಡುಗುವುದು. ನಡೆಯಲು ಸಾಧ್ಯವಾಗದಿರುವುದು. ಇತರರ ಸಹಾಯ ಬೇಕಾಗುವುದು. ಸ್ಮರಣೆ ಕಡಿಮೆಯಾಗುವುದು.
ಇವುಗಳನ್ನು ನೋಡಿದಾಗ ನಮ್ಮೊಳಗೆ ವೃದ್ಧಾಪ್ಯದ ಭಯ ಎಚ್ಚರಗೊಳ್ಳಬಹುದು. ಆ ಭಯದಿಂದ ಕೆಲವರು ದೂರ ಸರಿಯಬಹುದು. ಅಸಹ್ಯವಲ್ಲದಿದ್ದರೂ, ಅಸ್ವೀಕಾರ ಹುಟ್ಟಬಹುದು.
ಅದಕ್ಕಾಗಿಯೇ ಬಹುಶಃ ನಾವು ವೃದ್ಧಾಪ್ಯವನ್ನು ಮನೆಯೊಳಗೆ ಇರಿಸಿಕೊಂಡರೂ ಮನಸ್ಸಿನೊಳಗೆ ಇರಿಸಿಕೊಳ್ಳಲು ಕಷ್ಟಪಡುತ್ತೇವೆ.
ಆದರೆ ವೃದ್ಧಾಪ್ಯ ಮನುಷ್ಯನ ವೈಫಲ್ಯವಲ್ಲ. ಅದು ಬದುಕಿರುವುದಕ್ಕೆ ಸಿಗುವ ಕೊನೆಯ ಹಂತ. ಇಂದು ನಾವು ಆರೈಕೆ ಮಾಡುವ ಹಿರಿಯನು ನಾಳೆ ನಮ್ಮ ಪ್ರತಿಬಿಂಬವಾಗಬಹುದು. ಮೂಢನಂಬಿಕೆ ಮನುಷ್ಯನನ್ನು ರೋಗಕ್ಕಿಂತಲೂ ಏಕಾಂಗಿಯಾಗಿಸಬಾರದು. ಕೆಲವು ಕಡೆ ಇನ್ನೂ ಅನಾರೋಗ್ಯವನ್ನು ಕರ್ಮದ ಫಲ, ವೃದ್ಧಾಪ್ಯವನ್ನು ಪಾಪದ ಫಲ, ದೀರ್ಘಕಾಲದ ಹಾಸಿಗೆ ಜೀವನವನ್ನು “ಅಪಶಕುನ” ಎಂದು ನೋಡುವ ಮನೋಭಾವಗಳಿವೆ. ಅಂತಹ ನಂಬಿಕೆಗಳು ಕೇವಲ ವಿಜ್ಞಾನ ವಿರೋಧಿಯಲ್ಲ. ಅವು ಮನುಷ್ಯನನ್ನು ಸಾಮಾಜಿಕವಾಗಿ ಪ್ರತ್ಯೇಕಿಸುತ್ತವೆ.
ಮುಂದೆವರೆಯುವುದು…
- ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
