ಹರಿ ಕಥಾಮೃತಸಾರ (ಭಾಗ – ೧೯)

ಶ್ರೀಹರಿಯು ಅಗೋಚರನಾಗಿದ್ದು ನಮ್ಮನ್ನು ಖಂಡಿತವಾಗಿ ಪಾಲಿಸುವನು ಎಂಬುದು ಜ್ಞಾನಿಗಳ ನೀತಿ ಮತ್ತು ನಂಬಿಕೆ. ಮಾನವನಿಂದ ಮಾಡಲು ಅಸಾಧ್ಯ. ಭಕ್ತಿ ರಸವನ್ನು ಅರ್ಪಿಸಿದರೆ ದೇವರ ಕಾರುಣ್ಯ ಅನುಗ್ರಹದ ಅನುಭವ ಆಗುವುದು ನಿಶ್ಚಿತ. ಪ್ರಕೃತಿ ಕುರಿತು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ನಾಹಂ ಕರ್ತಾ ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ

ಹರಿ ಕಥಾಮೃತಸಾರದಲ್ಲಿ ಶ್ರೀ ಹರಿಯ ಕರುಣೆಯ ಮಹತ್ವವನ್ನು ತುಂಬಾ ವಿಶಾಲವಾಗಿ ತಿಳಿಸಿರುವರು.ಅದರಲ್ಲಿಯ ಎರಡು ನುಡಿಗಳು ಹೀಗಿವೆ.

ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವ ಒಂದರೆಕ್ಷಣ
ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ/

ತಡೆವ ದುರಿತೌಘಗಳ ಕಾಮದಕೊಡುವ ಸಕಲೇಷ್ಟಗಳ ಸಂತತ
ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ//

ಇದರಲ್ಲಿ ಎರಡು ವಿಶೇಷವಾದ ಎರಡು ಅರ್ಥಗಳಿವೆ.ನಮ್ಮ ದೇಹದ ನೆರಳಿನಂತೆ ಒಂದರೆಕ್ಷಣವೂ ಬಿಡದಂತೆ ನಮ್ಮೊಂದಿಗೆ ಇರುತ್ತಾನೆ ಇದು ಮುಖ್ಯಾಂಶ.ನೆರಳು ಕಾಣುವುದು ದೇಹದ ಹೊರಗೆ ಅದರಂತೆ ದೇಹದ ಒಳಗೂ ಪರಮಾತ್ಮನು ಇರುವನು.ದೇಹದ ಹೊರಗೆ ಇರುವ ನೆರಳು ಕಾಣಬೇಕಾದರೆ ಸೂರ್ಯನ ಪ್ರಕಾಶ ಕತ್ತಲಿದ್ದರೆ ದೀಪದ ಬೆಳಕು ಬೇಕೇ ಬೇಕು ಅಲ್ವಾ! ಹೊರಗಿನ ನೆರಳು ನಮ್ಮ ಆಧೀನದಂತೆ ತೋರುವುದು.ನಾವು ಮಾಡಿದಂತೆ ಅದು ಮಾಡುವುದು ನಿಜ ಆದರೆ ನಾವು ನುಡಿದಲ್ಲಿ ಬರುವ ಶಬ್ದ ಮತ್ತು ಸ್ಪರ್ಶದ ಅನುಭವ ಇರುವದಿಲ್ಲ.

ಭಕ್ತರಿಗಾಗಿಯೇ ಶ್ರೀಹರಿಯ ಸಕಲ ಕ್ರಿಯೆಗಳಾದ್ದರಿಂದ ಭಕ್ತಾಧೀನ ಎನಿಸುವನು.ಭಕ್ತರ ದುಷ್ಟಕಾಮನೆಗಳನ್ನು ತಡೆದು ಸತ್ ಕಾಮನೆಗಳನ್ನು ಕೊಡುವದರಿಂದ ಕಾಮದ ಎನಿಸುವನು. ಇದನ್ನೆ ವಿಷ್ಣುಸಹಸ್ರನಾಮದಲ್ಲಿ (ಕಾಮಹಾ ಕಾಮಕೃತ್ ಕಾಂತ:ಕಾಮ:ಕಾಮಪ್ರದ: ಪ್ರಭು:) ಭಕ್ತರ ಅಹಿತಕರ ಆಶೆಗಳನ್ನು ನಾಶಮಾಡಿ ಸಾತ್ವಿಕ ಸ್ವಭಾವದ ಆಶೆಗಳನ್ನು ಈಡೇರಿಸುವನು. ಹೀಗೆ ಭಕ್ತರಿಗೆ ಇಷ್ಟಾರ್ಥಗಳನ್ನು ಕೊಟ್ಟು ಅವರಲ್ಲಿ ಪ್ರಕೃಷ್ಟಭಾವದಿಂದ ನೆಲೆಸುವನು. ದೇವರು ಒಂದರೆಕ್ಷಣ ಬಿಟ್ಟರೂ ದೇಹ ಹೆಣ ವೆನಿಸುತ್ತದೆ ಜೀವನನ್ನು ಬಿಟ್ಟರೆ ಜೀವನನ ಅಸ್ತಿತ್ವವೇ ಇಲ್ಲವಾಗುವುದು.ಆದರೆ ದೇವರು ಬಿಟ್ಟಿಲ್ಲ ಬಿಡುವುದಿಲ್ಲ. ಇದು ಪರಮಾತ್ಮನ ಕರುಣೆ ಇದನ್ನು ಅರ್ಥೈಸಿಕೊಂಡು ನಡೆಯಬೇಕು. ನವ ಸುವಿಶೇಷ ಸನ್ಮಹಿಮ ಅಂದರೆ ನಿತ್ಯ ಹೊಸದಾದ ಒಳ್ಳೆಯ ವಿಶೇಷವಾದ ಸತ್ ಮಹಿಮೆಯುಳ್ಳ ಶ್ರೀ ಹರಿಯು ನಿರಂತರ ನಮ್ಮೊಡನೆ ನಮ್ಮ ಶಕ್ತಿಗೆ ಅನುಗುಣವಾಗಿ ನಡೆಯುವನೆಂದಾದರೆ ಹರಿಯ ಕಾರುಣ್ಯ ಎಂತಹದು ತಿಳಿದರೆ ಜೀವನದ ಉದ್ದೇಶ ಗೊತ್ತಾಗುವುದು.

ದೇವರನ್ನು ಬಿಟ್ಟರೆ ಕಟ್ಟುವ, ಕಟ್ಟಿದರೆ ಬಿಚ್ಚುವನೆಂಬ ದೇವರ ವಿಚಿತ್ರ ಸ್ವಭಾವವನ್ನು ಈ ಕೆಳಗಿನ ನುಡಿಯಲ್ಲಿ ತಿಳಿಸಿರುವರು.

ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹು ಕಠಿಣನಿವ
ಶಿಷ್ಟೇಷ್ಟ ನೆಂದರಿದನವರತ ಸದ್ಭಕ್ತಿಪಾಶದಲಿ/

ಕಟ್ಟುವರ ಭವಕಟ್ಟು ಬಿಡಿಸುವ ಸಿಟ್ಟಿನವನಿವನಲ್ಲ ಕಾಮದ
ಕೊಟ್ಟು ಕಾವನು ಸಕಲ ಸೌಖ್ಯವನಿಹಪರಂಗಳಲಿ//

ದೇವರನ್ನು ನಾವು ವಿನಯ ತುಂಬಿದ ಭಕ್ತಿಯೆಂಬ ಹಗ್ಗದಿಂದ ಕಟ್ಟಿದರೆ ದೇವರು ನಮ್ಮನ್ನು ಕಟ್ಟಿದ ಭವಸಾಗರವೆಂಬ ಹಗ್ಗದಿಂದ ಬಿಚ್ಚುವನು. ಆದರೆ ನಾವು ಪರಮಾತ್ಮನನ್ನು ಮರೆತರೆ ನಮ್ಮನ್ನು ಕಠೋರಿಯಾಗಿ ಸಂಸಾರದಲ್ಲಿ ಕಟ್ಟಿ ಹಾಕುತ್ತಾನೆ. ಪರಮಾತ್ಮನಿಗೆ ಸಿಟ್ಟಿಲ್ಲ. ಆದರೆ ನಮ್ಮ ದುಷ್ಟ ಕೃತಿಗೆ ಶಿಕ್ಷೆ ಕೊಡಲು ನಮಗೆ ಕಠಿಣನಾಗುವನು. ನಾವು ಸದ್ಭಾವನೆಯಿಂದ ದೇವರನ್ನು ಹಾಗೂ ಅವನ ಪರಿವಾರವನ್ನು ದ್ವೇಷಿಸದೆ ಭಕ್ತಿಯಿಂದ ತಾರತಮ್ಯವನರಿತು ಸರ್ವವೂ ಪರಮಾತ್ಮನ ಆಧೀನವೆಂದು ಸಮರ್ಪಿಸಿ ಆತ್ಮನಿವೇದನೆ ಮಾಡಿದಲ್ಲಿ ಇಹ ಪರಂಗಳಲಿ ಸೌಖ್ಯವನೀಡುವನು.

ಪ್ರಲ್ಹಾದನ ಭಕ್ತಿಗೆ ಮೆಚ್ಚಿ ನರಸಿಂಹನ ರೂಪ ತಾಳಿದ್ದು ಅಸುರೀ ಸ್ವಭಾವದ ವಿನಾಶಕ್ಕೆ ಮತ್ತು ದೈವೀಸ್ವಭಾವದ ಮೋಕ್ಷಾನಂದಕ್ಕೆ. ಕಾರಣ ನವ ವಿಧ ದ್ವೇಷ ಬಿಟ್ಟು ನವವಿಧ ಭಕ್ತಿಯನ್ನು ಚಿಂತನೆ ಮಾಡುವುದೇ ಭಕ್ತರಗುಣ. ಭಕ್ತಿ ಮಾರ್ಗದಲ್ಲಿ ನಡೆದವರ ಆತ್ಮಕ್ಕೆ ಎಷ್ಟೇ ಜನ್ಮ ಬಂದರೂ ದೇವರು ಜೊತೆಗಿದ್ದು ಯೋಗಕ್ಷೇಮವನ್ನು ನೋಡುವನು. ಹೇಗೆ ಸಂರಕ್ಷಿಸುವನೆಂದರೆ ರೆಪ್ಪೆಯು ಕಣ್ಣನ್ನು ರಕ್ಷಿಸುವಂತೆ ಶ್ರೀ ಹರಿಯು ಭಕ್ತರಲ್ಲಿ ಸನ್ನಿಹಿತನಾಗಿರುವನು. ಆದರೆ ಕಣ್ಣಿಗೆ ರೆಪ್ಪೆ ಕಾಣುವುದಿಲ್ಲ. ನೋಡಬೇಕಾದರೆ ಕನ್ನಡಿ ಬೇಕು. ಅದರಂತೆ ಶ್ರೀಹರಿಯನ್ನು ಕಾಣಲು ಶಾಸ್ತ್ರ ದರ್ಪಣ ಬೇಕು. ಇನ್ನು ಮೈಗೆ ತಿಂಡಿಯಾದರೆ ನಮ್ಮ ಗಮನಕ್ಕೆ ಬರುವ ಮೊದಲೇ ಶರೀರದಲ್ಲಿ ಇಂದ್ರಿಯ ಎನಿಸಿದ ಕೈ ಧಾವಿಸಿ ಬೆರಳುಗಳ ಸಹಾಯದಿಂದ ಶಮನ ಮಾಡುತ್ತದೆ.

ಅದರಂತೆಯೆ ಪರಮಾತ್ಮನು ತನ್ನ ಪರಿವಾರದೊಂದಿಗೆ ನಮ್ಮ ಆಪತ್ತನ್ನು ಪರಿಹರಿಸುವನು. ಬಾಯಿಯೊಳಗೆ ಇರುವ ಮೂವತ್ತೆರಡು ಹಲ್ಲುಗಳು ಆಹಾರ ಪದಾರ್ಥಗಳನ್ನು ಅಗೆದು ನಾಲಿಗೆಗೆ ಹಿತವಾದ ರಸ ರುಚಿಯನ್ನು ನೀಡುವಂತೆ ಶ್ರೀ ಹರಿಯು ಅಂತರ್ಯಾಮಿಯಾಗಿದ್ದು ಭಕ್ತರಿಗೆ ಎಲ್ಲ ರೀತಿಯಿಂದ ಅನುಭವಿಸಲು ಅನುಕೂಲ ಮಾಡಿಕೊಡುವನು. ತಾನು ಮಾತ್ರ ಅವುಗಳನ್ನು ಅನುಭವಿಸುವುದಿಲ್ಲ. ಹೀಗೆ ಪುಣ್ಯದ ಫಲವನ್ನು ಒಂದಕ್ಕೆ ಹೆಚ್ಚು ಮಾಡಿ ಕೊಡುವನು. ಶ್ರೀಹರಿಯು ಅಗೋಚರನಾಗಿದ್ದು ನಮ್ಮನ್ನು ಖಂಡಿತವಾಗಿ ಪಾಲಿಸುವನು ಎಂಬುದು ಜ್ಞಾನಿಗಳ ನೀತಿ ಮತ್ತು ನಂಬಿಕೆ. ನಿಜವಾಗಲೂ ಯೋಚಿಸಲು ಇದು ದೇವರ ಕರುಣೆಯೇ ಸತ್ಯ. ಮಾನವನಿಂದ ಮಾಡಲು ಅಸಾಧ್ಯ. ಭಕ್ತಿ ರಸವನ್ನು ಅರ್ಪಿಸಿದರೆ ದೇವರ ಕಾರುಣ್ಯ ಅನುಗ್ರಹದ ಅನುಭವ ಆಗುವುದು ನಿಶ್ಚಿತ.ಆಕಾಶದೊಳಗೆ ಬ್ರಹ್ಮಾಂಡವನ್ನು ಸೃಷ್ಟಿಸಿ ಅದರೊಳಗೆ ಮಾನವ ಜೀವಿ ಎನಿಸಿದ ಬುದ್ಧಿ ಜೀವಿಗೆ ಅವಕಾಶಗಳನ್ನು ಕೊಟ್ಟು ಸಾಧನ ಶರೀರ ಸೃಷ್ಟಿ ಮಾಡಿದ್ದು ಅವನ ಕರುಣೆಯಿಂದಲೇ ತಾನೆ!ಇದು ಮರೆಯದ ಸ್ಮೃತಿ.ದೇವತೆಗಳಿಗೆ ಅಮೃತ ಉಣಿಸಿದರೆ ಭೂಸುರರಿಗೆ ಅಂದರೆ ಭೂಮಿಯಲ್ಲಿ ಜನಿಸಿದ ಭಕ್ತರಿಗೆ ಸಾಂಶರಿಂದ ರಚಿತವಾದ ನ್ಯಾಯ ತತ್ವದಿಂದ ಕೂಡಿದ ಅಧ್ಯಯನದ ಅವಕಾಶವನ್ನು ಕೊಟ್ಟಿರುವನು.ಆ ಅಕ್ಷರಗಳಲ್ಲಿಯ ಅಮೃತ ಸಾರವನ್ನು ಸ್ವಾದಿಸಿ ಸಾಧನೆ ಮಾಡಲು ಅವಕಾಶ ಕಲ್ಪಿಸಿರುವದು ಮಹಾಕರುಣೆ.

ಈ ತತ್ವವನ್ನು ಮರೆತು ಅಂಧಕಾರದಲ್ಲಿ ಮೆರೆದ ದುರ್ಯೋಧನನು ಎದುರಿಗೆ ಬಂದ ಶ್ರೀ ಕೃಷ್ಣನನ್ನೆ ಕಟ್ಟಿ ಹಾಕಲು ನಿಂತ ಅಸುರೀ ಕೃತ್ಯವು ಕೊನೆಗೆ ಕುಟುಂಬ ಸಮೇತರಾಗಿ ಕೌರವ ಕುಲ ನಾಶವಾಯಿತು.ಸಾಯುವದಂತೂ ನಿಶ್ಚಿತ ನಿಷ್ಠೆಯಿಂದ ನಿಷ್ಕಾಮ ಕರ್ಮ ಮಾಡಿ ಇಹ ಪರಂಗಳಲಿ ಪರಮಾತ್ಮನ ಸಖ್ಯ ಪಡೆಯುವದು ಮಾನವನ ಧರ್ಮ.

ಕಾಳಿದಾಸನಿಗೆ ಕಾಳಿಕಾದೇವಿಯು ನಾಲಿಗೆ ಮೇಲೆ ಓಂ ಕಾರವನ್ನು ಬರೆದಳಂತೆ ಇದು ಕಟ್ಟು ಕಥೆ ಇದನ್ನು ನಂಬಬೇಡಿರಿ ಎಂದು ಅಜ್ಞಾನಿಗಳು ಹೇಳುವರು. ಅದನ್ನು ತಾಯಿ ಪೆನ್ನಿಂದಲೋ ಆಯುಧದಿಂದಲೋ ಬರೆದಿದ್ದಲ್ಲ. ನಿರ್ಮಲ ಭಕ್ತಿಗೆ ಮೆಚ್ಚಿ ಅವನ ಸ್ವರೂಪ ಜ್ಞಾನ ಚಿತ್ತಕ್ಕೆ ತಂದಳು ಎಂದು ಅರ್ಥ. ಅದರಂತೆಯೆ ಶಾಸ್ತ್ರೀಯ ಗ್ರಂಥಗಳನ್ನು ಅಗೌರವದಿಂದ ನೋಡುವವರಿದ್ದಾರೆ. ಈ ರೀತಿ ಇರುವ ಜನರು ಡಂಭಾಚಾರಕ್ಕಾಗಿ ದಾನ ದೊಡ್ಡ ಪೂಜೆ ಎಷ್ಟೋ ಹಣ ಕೊಟ್ಟು ಮಾಡಿಸಿದರೂ ಅದು ವಜ್ರ ವೈಢೂರ್ಯ ಹೀಗೆ ಬೆಲೆವುಳ್ಳ ವಸ್ತುಗಳನ್ನು ಕೊಟ್ಟು ಚಿಕ್ಕ ಬೆಲೆಯ ಅಜವಾನ ಎಂಬ ಪದಾರ್ಥ ಕೊಂಡಂತೆಯಾಗುವದು ಅವರಿಗೆ ಲೌಕಿಕ ಕ್ಷಣದ ಸುಖ ತೋರಿಸಿ ಪುಣ್ಯದ ಫಲವನ್ನು ಭಕ್ತರಿಗೆ ಕೊಡುವನು.ದೇವ ಮಾನವ ದಾನವ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿರುವ ಪರಮಾತ್ಮನು ಪಕ್ಷಪಾತವಿಲ್ಲದೆ ಸಮನಾಗಿ ನ್ಯಾಯ ಕೊಡುವನು ಎಂದು ವಿಶ್ವಾಸದಿಂದ ನಾಮ ಸ್ಮರಣೆ ಮಾನಸ ಪೂಜೆ ಮಾಡಬೇಕು.

ಅವನೆ ಎಲ್ಲರನ್ನೂ ಅನಾದಿಕಾಲದಿಂದ ಅನಂತಕಾಲದವರೆಗೂ ಒಳಗೂ ಹೊರಗೂ ಸಂರಕ್ಷಣೆ ಮಾಡುವನು.ಪಶು, ಪಕ್ಷಿ, ಕೀಟ, ಜಲಚರ ಪ್ರಾಣಿ,ಗಿಡ ಮರ ಮಾನವ ಎಲ್ಲರಿಗೂ ಅವರವರ ಆಹಾರವನ್ನು ಅವನೆ ಸೃಷ್ಟಿಸಿ ಒದಗಿಸಿದ್ದಾನೆ ಎಂದು ಅವನು ನಮ್ಮ ಹೃದಯದಲ್ಲಿ ವಿಶ್ವ ನಾಮದಿಂದ ಬಿಂಬ ರೂಪನಾಗಿ ಸಲಹುವನು.ಇದನ್ನು ಸೂಕ್ಷ್ಮ ಮತಿಯಲ್ಲಿ ಕೊಂಡಾಡಲು ನಾಲಿಗೆಗೆ ಶಕ್ತಿ ಬುದ್ಧಿಗೆ ಸೂಕ್ಷ್ಮ ದೃಷ್ಟಿ ಕೊಟ್ಟು ನಮ್ಮನ್ನು ರಕ್ಷಿಸಲಿ.

ಶಾಂತಾಕಾರನೂ ಶೇಷಶಾಯಿಯೂ ಪದ್ಮನಾಭನೂ, ಸುರರಿಗೆಲ್ಲಾ ಈಶ್ವರನೂ ವಿಶ್ವಕ್ಕೆ ಆಧಾರವೂ,ಆಕಾಶಸದೃಶನೂ ಮೇಘವರ್ಣವುಳ್ಳವನೂ ಯೋಗಿಗಳಿಂದಧ್ಯಾನದ್ವಾರಾ ಸಾಕ್ಷಾತ್ಕಾರನೂ ಭವಸಾಗರದ ಭಯವನ್ನೂ ನಾಶಮಾಡುವವನೂ ಸರ್ವಲೋಕಗಳಿಗೆ ಒಡೆಯನೂ ಆಗಿರುವ ವಿಷ್ಣುನನ್ನು ನಮಸ್ಕರಿಸುತ್ತೇನೆ. ಸದ್ಭುದ್ಧಿಪಾಲಿಸೆಂದು ಪ್ರಾರ್ಥಿಸುತ್ತೇನೆ.

ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ

ತಂದೆಯಾಗಿ ಬಂದೆ ಜ್ಞಾನವನ್ನು ತಂದೆ
ತಾಯಿಯಾಗಿ ಬಂದೆ ಮೌನವನ್ನು ತಂದೆ
ನಿನ್ನ ಕರುಣೆ ಎಂತಹುದೋ ಮುಕುಂದ

ಒಡಹುಟ್ಟಿದವರಾಗಿ ಸತ್ಯವ ತೋರಿದೆ
ಬಂಧು ಬಳಗವಾಗಿ ನಿತ್ಯವ ತೋರಿದೆ
ನಿನ್ನ ಕರುಣೆಯೋ ದೇವಕಿ ಕಂದಾ

ಶ್ರೀ ಶ್ರೀ ಸತ್ಯಪ್ರಮೋದರಾಗಿ ಬಂದೆ
ಮಹಿಪತಿದಾಸರ ಶಿಷ್ಯನ ಮನೆ ಎಂದೆ
ಹೇಳಿ ನಿಜ ಮಾರ್ಗಾಕ್ಷರವ ತೋರಿದೆ

ನನ್ನಾತ್ಮ ತಿಳಿಯಲು ಶ್ರೀ ಶ್ರೀ ಸತ್ಯಾತ್ಮರಾಗಿ ಬಂದೆ
ಅಕ್ಷರ ಕಾಣಲು ಶ್ರೀ ಪ್ರಮೋದರಾಗಿ ನಿಂದೆ
ನಿನ್ನ ಕರುಣ ಲಕ್ಷ್ಮೀ ರಮಣಾನಂದ

ಪ್ರಾರ್ಥಿಸುವೆ ಮಾತರಿಶ್ವಾಂತರ್ಗತ ಶ್ರೀ ಹರಿ
ಇರಲಿ ನಿರಂತರ ಸತ್ಸಂಗ ದಾರಿ
ತೋರು ನನಗೆ ಮೋಕ್ಷಾನಂದಾದಿ ಶ್ರೀ ಹರಿ

 

ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು: 


  • ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×