ಹರಿ ಕಥಾಮೃತಸಾರ (ಭಾಗ – ೧೩)

ಸುಖ, ದು:ಖ, ಸೋಲು, ಗೆಲವು ಹೀಗೆ ಮಾನವರಿಗೆ ದ್ವಂದ್ವಗಳು ಜೀವನದಲ್ಲಿ ಬರುವವು. ಇವುಗಳನ್ನು ಅನುಭವೆಂದು ತಿಳಿದು ಆದಷ್ಟು ಧರ್ಮದಲ್ಲಿ ನಡೆಯಲು ಪ್ರಯತ್ನ ಮಾಡಬೇಕು.ಇದು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ನಾಹಂ ಕರ್ತಾ ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ.

ಶ್ರೀಮದ್ಭಗವದ್ಗೀತಾದಲ್ಲಿ ನಾಲ್ಕನೇ ಅಧ್ಯಾಯ ಜ್ಞಾನ ಕರ್ಮಸನ್ಯಾಸಯೋಗದಲ್ಲಿ ಪರಮಾತ್ಮನು ಹೇಳಿರುವನು. ಅಲ್ಲಿ ಅರ್ಜುನನಿಗೆ ಭಾರತಾ ಎಂದು ಸಂಬೋಧಿಸಿದ್ದಾನೆ. ಅರ್ಜನನನಲ್ಲಿ ವಾಯುದೇವರ ಆವೇಶವಿರುವದು.

ಭಾರತ, ಭರತ, ಭಾರತೀ ವಾಯುದೇವರ ಆವೇಶ ಪರಮಾತ್ಮನ ಪ್ರೀತಿ ಪಾತ್ರರಾದವರು ಧರ್ಮದಲ್ಲಿ ಇದ್ದವರು. ಅದನ್ನೇ ವಿಷ್ಣು ಸಹಸ್ರನಾಮದಲ್ಲಿ ಐವತ್ತೊಂದನೇಯ ಶ್ಲೋಕದಲ್ಲಿ ತಿಳಿಸಿರುವಂತೆ ಧರ್ಮ ಅಂದರೆ ಏನು? ಧರ್ಮ ಸೃಷ್ಟಿಸಿರುವರು ಯಾರು? ಧರ್ಮ ರಕ್ಷಿಸಲು ಉದ್ಭವಿಸುವವರು ಯಾರು? ಧರ್ಮ, ಕರ್ಮ ಮರ್ಮ ಈ ಮೂರು ಮಾನವನಿಗೆ ಪೂರ್ಣ ತಿಳಿಯದಿದ್ದರೂ ಸಮಯ ಪ್ರಜ್ಞೆಯಿಂದ ಅವರವರ ಯೋಗ್ಯತೆಗನುಸಾರವಾಗಿ ಮನಾಭಿಮಾನಿಯಾಗಿರುವ ಶಿವನಿಗೆ ಪ್ರೇರಕನಾಗಿ ಸಾಧಕರಿಂದ ಸಾಧನೆ ಮಾಡಿಸಿ ಧರ್ಮ ರಕ್ಷಣೆ ಮಾಡುವನು ಸರ್ವೋತ್ತಮನು.

ಈ ಧರ್ಮ ಸಾಧನೆಯನ್ನು ಮಹಾಭಾರತದಲ್ಲಿ ಅರ್ಜುನನಿಗೆ ಶಿವನಿಂದಲೆ ಪಾಶುಪತಾಸ್ತ್ರ ಎಂಬ ಶಸ್ತ್ರವನ್ನು ಕೊಡಿಸಿರುವ ಉಲ್ಲೇಖ ಇದೆ. ಇದು ತುಂಬಾ ಸೂಕ್ಷ್ಮವಾಗಿರುವದು. ಪಾಶು ಅಂದರೆ ಸಮಯಕ್ಕೆ ಸರಿಯಾಗಿ ಯಾರಿಗೆ ಮನಸ್ಸಿನಲ್ಲಿ ಜ್ಞಾನ ಹಾಗೂ ಅಜ್ಞಾನ ಕೊಡುವುದು ಕೃಷ್ಣನಿಗೆ ಗೊತ್ತು. ಆದುದರಿಂದ ವಾಯುವಿನ ಮುಖಾಂತರ ಎಲ್ಲರಿಗೂ ಕ್ಷಣಾರ್ಧದಲ್ಲಿ ಮುಟ್ಟಿಸುವನು. ಪ್ರತಿಕ್ಷಣಕ್ಕೂ ಧರ್ಮ ರಕ್ಷಿಸುವನು ಧರ್ಮ ಸ್ಥಾಪನೆ ಮಾಡುವವನು ಪರಬ್ರಹ್ಮ. ಕಾರಣ ಮಾನವನು ಬದುಕು ಸಾರ್ಥಕವಾಗಲು ಧರ್ಮ ಮಾರ್ಗದಲ್ಲಿ ನಡೆಯುವ ಸಜ್ಜನರಿಗೆ ದೇವರು ಧರ್ಮ ಪ್ರೇರಕನಾಗುವನು. ಧರ್ಮ ಎಂದರೆ ಆತ್ಮ ಶುದ್ಧಿ, ಮುಖ್ಯ. ನಂತರ ದೇಹ ಮತ್ತು ಇಂದ್ರಿಯಗಳು ಶುದ್ಧವಾಗಿರಬೇಕು. ನಂತರ ಸಾತ್ವಿಕ ಕರ್ಮಗಳು ತಾನೆ ಹುಟ್ಟುವವು.ಇದನ್ನು ಪರಮಾತ್ಮನು ತಾನು ಮಾಡಿ ತನ್ನ ಪರಿವಾರದಿಂದ ಮಾಡಿಸಿ ತೋರಿಸಿರುವನು.

ಸೃಷ್ಠಿಗೆ ಮೊದಲು ಜಗತ್ತು ಸತ್ಸ್ವರೂಪವಾಗಿತ್ತು. ಪ್ರಪಂಚರೂಪದಿಂದ ಬಂದ ಬ್ರಹ್ಮಕ್ಕೆ ಅಪರಬ್ರಹ್ಮ ಎಂದು ಕರೆಯುವರು. ಪರಮಾತ್ಮನ ಪರಿವಾರವು ಕ್ಷರದಲ್ಲಿ ಬರುವರು, ಆದರೆ ಅವರಿಗೆ ಮುಪ್ಪು ಇಲ್ಲ ಮುಕ್ತರು. ಸ್ಥಾನ ಸೇವೆಯಲ್ಲಿ ಪರಮಾತ್ಮನ ಆಜ್ಞೆಯಂತೆ ಪರಿವರ್ತನೆ ಆಗುವುದು. ಅವರು ಪರಬ್ರಹ್ಮನ ಆಧೀನ ನಾವು ಎಂದು ಸೂಕ್ಷ್ಮ ಮತಿಯಲ್ಲಿ ತಮಗೆ ಕೊಟ್ಟ ಕಾರ್ಯವನ್ನು ಸ್ವಾತ್ವಿಕವಾಗಿ ಶುದ್ಧ ಮನಸ್ಸಿನಿಂದ ಆಚರಿಸಿ ಪರಮಾತ್ಮನ ಸಾಕ್ಷಾತ್ಕಾರ ಪಡೆಯುತ್ತಾರೆ.

ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಆಕಾಶ ಎಂದಿಗೂ ತಮ್ಮ ಸ್ಥಾನವನ್ನು ಕರ್ತವ್ಯವನ್ನು ಮರೆಯಲಾರವು.ಭೂಮಿಯು ಜಲ, ಪರ್ವತ ಜೀವಿ, ಅಗ್ನಿ ಎಲ್ಲವನ್ನು ಹೊತ್ತು ಪ್ರಶಾಂತವಾಗಿ ಕರ್ತವ್ಯವನ್ನು ಮಾಡುವದು. ಆಕಾಶದಂತೆ ತಾನು ಮೇಲೆ ಹೋಗುವುದನ್ನು ಯೋಚಿಸುತ್ತಾ ಧರ್ಮಕಂಟಕ ಆಗುವುದಿಲ್ಲ. ಅದರಂಂತೆ ಜಲವು ಮುಖ ಮೇಲೆ ಮಾಡಿ ಹರಿಯುವುದಿಲ್ಲ. ಅಗ್ನಿಯು ಯಾವತ್ತೂ ಮುಖ ಮೇಲೆ ಮಾಡಿ ಪ್ರಕಟಗೊಳ್ಳುವದು.ಜಲದ ಮುಖ ಕೆಳಗಿದ್ದರೂ ಅಗ್ನಿಯ ಪ್ರಖರವನ್ನು ನಂದಿಸುವ ಶಕ್ತಿ ಹೊಂದಿದೆ. ಇದರಂತೆ ಅಗ್ನಿಯು ಜ್ಯೋತಿಯಾಗಿ ಮುಖ ಮೇಲೆ ಮಾಡಿ ಜ್ಞಾನ ಗಂಗೆಯನ್ನು ಹರಿಸುವ ಶಕ್ತಿ ಹೊಂದಿದೆ. ಹೀಗೆ ತಮ್ಮ ಸ್ಥಾನಕ್ಕೆ ಕರ್ತವ್ಯಕ್ಕೆ ಚ್ಯುತಿ ಬರದಂತೆ ಸಂಹಿತೆಯ ಸುಳಿಯಲ್ಲಿ ಧರ್ಮಪಾಲನೆ ಬಿಡದೆ ಮನುಜರ ಬದುಕಿಗೆ ತತ್ವಾಭಿಮಾನಿಗಳಾಗಿ ಸಹಾಯ ಮಾಡುತ್ತಾರೆ.

ಅಲ್ಲದೆ ಒಂದು ರೀತಿಯಿಂದ ಪೋಷಣೆ ಮಾಡುತ್ತಾರೆ. ಇದೆ ಪರಮಾತ್ಮನು ಪ್ರೇರಕ ರಕ್ಷಕ ಎಂದು ಶ್ರುತಿಗಳಲ್ಲಿ ಬರುವದು.ಆಕಾಶ ತುಂಬಾ ಎತ್ತರವಿದ್ದರೂ ಮುಖ ಕೆಳಗೆ ಮಾಡಿ ನಮ್ಮನ್ನು ರಕ್ಷಿಸುತ್ತದೆ. ವಾಯು ಹತ್ತು ದಿಕ್ಕಿನಲ್ಲಿ ಚೈತನ್ಯ ರೂಪವಾದ ಪ್ರಾಣನೆನಿಸಿ ಧರ್ಮ ಸಾಧನೆ ಮಾಡುತ್ತದೆ. ಹೀಗೆ ತಮ್ಮ ಸಹಚರೊಂದಿಗೆ ಸ್ನೇಹದಿಂದ ಸಹನೆಯಿಂದ ಮಾಡುವ ಕರ್ಮಗಳೆ ಧರ್ಮ. ಇದನ್ನು ಸರಿಯಾಗಿ ಪಾಲಿಸಿದರೆ ಮಧ್ಯೆ ಕಷ್ಟ ಬಂದರೂ ಮಾರ್ಗ ತಪ್ಪುವುದಿಲ್ಲ. ಧರ್ಮಕ್ಕೆ ಒಂದೇ ಮಾರ್ಗ ಅಧರ್ಮಕ್ಕೆ ನೂರಾರು ಮಾರ್ಗ ಹುಟ್ಟಿ ಗುರಿ ಮುಟ್ಟುವುದಿಲ್ಲ.ಸಾಧನೆ ಸಾಧ್ಯವಿಲ್ಲ, ಬದುಕು ಸ್ವಾರ್ಥದಲ್ಲಿ ಮುಳುಗುವದು. ಧರ್ಮವಿದ್ದಲ್ಲಿ ಮನುಷ್ಯ ಕಷ್ಟದಲ್ಲಿದ್ದಾಗ ಫಲವು ಸಹಾಯಕ್ಕೆ ಬರುತ್ತದೆ.

ಸುಖ, ದು:ಖ, ಸೋಲು, ಗೆಲವು ಹೀಗೆ ಮಾನವರಿಗೆ ದ್ವಂದ್ವಗಳು ಬರುವವು. ಇವುಗಳನ್ನು ಅನುಭವೆಂದು ತಿಳಿದು ಆದಷ್ಟು ಧರ್ಮದಲ್ಲಿ ನಡೆಯಲು ಪ್ರಯತ್ನ ಮಾಡಬೇಕು. ಅಂದರೆ ಶ್ರುತಿಯಲ್ಲಿ ಬಂದಿರುವಂತೆ “ಪವಿತ್ರಾಣಾಂಚ ಪವಿತ್ರಂ ಯೋ ಮಂಗಲಾನಾಂಚ ಮಂಗಲಂ. ಪವಿತ್ರಂ ಮಂಗಲಂ ಪರಂ ಪದಂ”ಅನ್ನುವ ಹಾಗೆ ನಡೆ ನುಡಿಯನ್ನು ಹೆಚ್ಚು ಪವಿತ್ರ ಮಾಡುವನು ಎಂದು ಅನುಭವವಿದ್ದ ಜ್ಞಾನಿಗಳು ತಿಳಿಸಿರುವರು.

ಒಂದಂತು ಎಲ್ಲರೂ ತಿಳಿದುಕೊಳ್ಳಬೇಕು. ದೇವರು ಎಲ್ಲರಿಗೂ ಸಮಯವನ್ನು ಹಾಗೂ ತನ್ನ ಸ್ವಾತಂತ್ರದಲ್ಲಿ ಪಕ್ಷಪಾತವಿಲ್ಲದೆ ಸಮನಾಗಿ ಕೊಟ್ಟಿರುವನು. ಈ ಸಂಸಾರ ಭವಸಾಗರವಿದ್ದಂತೆ. ಇದರ ಸುಖ ಝರಡಿಯ ನೆರಳಿನಂತಿರುವದು. ಆದಷ್ಟು ಸರಿಯಾಗಿ ನಡೆದಲ್ಲಿ ನಮ್ಮ ಸ್ವರೂಪವು ದೈವೀತತ್ವಕ್ಕೆ ಒಳಗಾಗುವುದು. ಆಗ ತಪ್ಪಾದಲ್ಲಿ ಪರಮಾತ್ಮನು ಕರುಣೆಯಿಂದ ಬೇಡನನ್ನು ವಾಲ್ಮೀಕಿಯನ್ನಾಗಿ ಪರಿವರ್ತಿಸಿದಂತೆ ಕರ್ಮದಿಂದ ಮುಕ್ತ ಮಾಡುವನು. ಒಳ್ಳೆಯ ನಡೆ ನುಡಿ ಆಗಿದ್ದರೆ ಅದು ಧರ್ಮಾಧಿತ ಕರ್ಮವೆನಿಸುವದು.ಇದೇ ಮಾನವ ಧರ್ಮ. ಜಾತಿ ಮತಗಳು ಧರ್ಮಕ್ಕೆ ಸಂಬಂಧವಿಲ್ಲ. ಧರ್ಮವೇ ಸಂಸಾರ ಬಂಧನದಿಂದ ಮುಕ್ತಗೊಳಿಸುವದು.

ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು.

ಹರಿನಾಮ ಸಂಕೀರ್ತನೆ ಅನುದಿನವಿರಲಿ

ಕ್ಷೀರವಾರಿಧಿ ಕನ್ಯೆಯ ಅನುಗ್ರಹ ಸಿಗಲಿ
ವಿಘ್ನೇಶ್ವರನು ಬುದ್ಧಿ ಮತಿಯ ನೀಡಲಿ

ಸೃಷ್ಟಿ ಕಾರಕ ಅಪರಬ್ರಹ್ಮನ ತಪ ನಮಗಿರಲಿ
ಹರಿಯ ಪ್ರೀತಿಗೆ ವಾಯುವಿನ ಕರುಣೆಯಿರಲಿ

ಗರುಡನೆ ಸೂಕ್ಷ್ಮ ದೃಷ್ಟಿ ಪಾಲಿಸಲಿ
ಶೇಷದೇವರೇ ಶಕ್ತಿ ನೀಡಲಿ ಕರ್ಮದಲಿ

ರುದ್ರ ದೇವರು ಭಕ್ತಿಗೆ ತೈಲಧಾರೆಯಾಗಲಿ
ಮಾತರಿಶ್ವಾಂತರ್ಗತ ಶ್ರೀಹರಿ ಧರ್ಮದಲಿ

ನಡೆಸೆಮ್ಮನು ಜೀವನದ ಬದುಕಿನಲಿ.
ಶ್ರೀ ಕೃಷ್ಣಾರ್ಪಣ ಮಸ್ತು

ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು: 


  • ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading