ಶ್ರೀಹರಿಯು ಪಂಚ ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ ಹಾಗೂ ವಿಶಿಷ್ಟವೆನಿಸಿದ ಮನಸೇಂದ್ರಿಯದಲ್ಲಿ ಅನೇಕರೂಪ ನಾಮಗಳಿಂದ ವಾಯು ಸಹಿತ ಇದ್ದು ನಮ್ಮಿಂದ ಕ್ರಿಯೆಗಳನ್ನು ಮಾಡಿಸುವನು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹರಿ: ಓಂ. ಶ್ರೀ ಗುರುಭ್ಯೋ ನಮಃ
ಔಷಧಂ ಜಾನ್ಹವೀತೋಯಂ ವೈದ್ಯೋ ನಾರಾಯಣೋ ಹರಿ:
ಕಲಿಯುಗದಲಿ ಹರಿ ನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವೋ ರಂಗ
ಸುಲಭದ ಮುಕ್ತಿಗೆ ಸುಲಭನೆಂದೆನಿಸುವ
ಜಲರುಹ ನಾಭನ ನೆನೆ ಮನವೇ
ನೀನ್ಯಾಕೊ ನಿನ್ನ ಹಂಗ್ಯಾಕೊ
ನಿನ್ನ ನಾಮದ ಬಲ ವೂಂದಿದ್ದರೆ ಸಾಕೋ
ಅಕ್ಷರಗಳ ಪ್ರತಿಪಾದ್ಯನಾದ ಪರಮಾತ್ಮನ ನಾಮಗಳ ಬಲದ ಮಹಿಮೆಯ ಜ್ಞಾನದ ನುಡಿಗಳನ್ನು ಸಾಂಶರಾದ ದೇವಾಂಶಸಂಭೂತರಾದ ಪುರಂದರ ದಾಸರು, ಕನಕದಾಸರು. ಮೊದಲಾದ ಅನೇಕ ದಾಸರ ಅಂತರಂಗದಿಂದ ಬಂದ ನುಡಿಪದಗಳು. ಹೀಗೆ ಜ್ಞಾನಿಗಳನ್ನು ಸಜ್ಜನರನ್ನು ನಮ್ಮಂಥ ಜನಸಾಮಾನ್ಯರಿಗೆ ಸಾಧನ ಮಾರ್ಗಕ್ಕಾಗಿ ಕಳಿಸುವನು. ಶ್ರೀಹರಿಯ ನಾಮಸ್ಮರಣೆಯು ನವವಿಧ ಭಕುತಿಯಲಿ ಪ್ರಮುಖವಾಗಿದೆ. ಈ ಭಕ್ತಿಯನ್ನು ಸಕಲ ಧರ್ಮದವರು, ಸರ್ವ ಕಾಲದಲ್ಲಿಯೂ, ಸರ್ವಸ್ಥಳದಲ್ಲಿಯೂ ಮಾಡಬಹುದಾದ ಶ್ರೇಷ್ಠವಾದ ಸರಳವಾದ ಸಾಧನೆ ಇದಾಗಿದೆ. ಈ ಭಕ್ತಿಯು ಶ್ರೀ ರಾಮಚಂದ್ರನು ಶಬರಿಯಿಂದ ಫಲವನ್ನು ಸ್ವೀಕರಿಸಿದಂತಿರಬೇಕು. ಅಂದರೆ ಪರಮಾತ್ಮನ ಸನ್ನಿಧಾನವನ್ನು ಅರಿತು ಶುದ್ಧ ಮನಸ್ಸಿನಿಂದ ಮಾಡಬೇಕು. ಅದಕ್ಕೆ ಅನುಸಂಧಾನವಿರಬೇಕು.

ನಮ್ಮ ದೊಡ್ಡದಾದ ಈ ದೇಹದ ಭಾರವನ್ನು ಅಳತೆಯಲ್ಲಿ, ತೂಕದಲ್ಲೂ ಚಿಕ್ಕದಾಗಿರುವ ಪಾದಗಳೆ ಈ ಭಾರವನ್ನು ಹೊರುವವು. ಎಲ್ಲಿ ಹೋದರೂ ಈ ಪಾದಗಳೆ ದೇಹವನ್ನು ಹೊತ್ತುಕೊಂಡು ಸಾಗುವವು ಅಲ್ವಾ? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಈ ಮಾತು ಮೊದಲಿಗೆ ಪಾದಗಳಿಗೆ ಸಲ್ಲಿಸತಕ್ಕದ್ದು. ಪಾದಗಳಿಗೆ ಕಲ್ಲು ಮುಳ್ಳು ಚುಚ್ಚಿ ಘಾಯವಾಯಿತೆಂದರೆ ದೇಹಕ್ಕೆ ತೊಂದರೆ. ಇದನ್ನು ತಡೆಯಲು ಪಾದುಕೆಗಳನ್ನು ಧರಿಸಲಾಗುವದು. ಇದರಂತೆ ನಾವು ಪರಮಾತ್ಮನನ್ನು ಅರಿತು ನಾಮ ಸ್ಮರಣೆ ಮಾಡಿದರೆ ನಮ್ಮ ಶರೀರದ ಹನ್ನೊಂದು ಇಂದ್ರಿಯಗಳಲ್ಲಿ ನೆಲೆಸಿದ ಪರಮಾತ್ಮನಿಗೆ ಸಲ್ಲುತ್ತದೆ. ಆಗ ಮೋಕ್ಷಮಾರ್ಗದ ಪ್ರತಿಬಂಧಕವನ್ನು ತಡೆಯುವದು. ಶ್ರೀಹರಿಯು ಸರ್ವ ಸ್ವತಂತ್ರ, ಪೂರ್ಣಸುಖಿ, ಸಿರಿಯರಸ, ಸರ್ವಜ್ಞ, ಶಕ್ತ, ಅಪರಿಮಿತ ವ್ಯಾಪಕನು. ಜೀವನು ಅಸ್ವತಂತ್ರನು, ಅಪೂರ್ಣ ಸುಖಿ, ಅಲ್ಪಜ್ಞ, ಅಶಕ್ತ ಹೃಸ್ವದೇಹಿ ಈ ಸತ್ಯವನ್ನು ಮೊದಲು ಅರಿತುಕೊಳ್ಳಬೇಕು. ಭೂಮಿಯಲ್ಲಿ ವಿಶ್ವ,ಜಲದಲ್ಲಿ ತೈಜಸ, ಅಗ್ನಿಯಲ್ಲಿ ಪ್ರಾಜ್ಞ, ವಾಯುವಿನಲ್ಲಿ ವಾಸುದೇವ, ಆಕಾಶದಲ್ಲಿ ಆತ್ಮ, ಮನದಲ್ಲಿ ಅಂತರಾತ್ಮ ಬುದ್ಧಿಯಲ್ಲಿ ಪರಮಾತ್ಮ ಹೀಗೆ ಪರಮಾತ್ಮನು ಪ್ರಕೃತಿಯಲ್ಲಿ ಶರೀರದಲ್ಲಿ ಒಂದೊಂದು ನಾಮದಿಂದ ಎಲ್ಲ್ಲ ಕಡೆಗೂ ಇರುವನು.
ದೇಹದಲ್ಲಿ ಪರಮಾತ್ಮನು ಲಕ್ಷ್ಮೀಸಹಿತ ನೆಲೆಸಿರುವನು. ಶಾಂತಿಪತಿ ಅನಿರುದ್ಧ, ಕೃತಿಪತಿ ಪ್ರದ್ಯುಮ್ನ, ಜಯಾಪತಿ ಸಂಕರ್ಷಣ, ಮಾಯಾಪತಿ ವಾಸುದೇವ, ಲಕ್ಷ್ಮೀ ನಾರಾಯಣ ಈ ಐದು ನಾಮದಿಂದ ಪಾಲಿಸುವನು. ಪಾದದಲ್ಲಿ ಜಯಂತ ನಾಮದಿಂದ ಮತ್ತು ಸುಮೇಧ ನಾಮದಿಂದ ಇರುವನು. ಬಲಪಾದದ ಅಂಗುಷ್ಟ (ಹೆಬ್ಬೆರಳು) ದಲ್ಲಿ ಪವನನಾಮದಿಂದ ವಾಯುದೇವರು ಭಾರಭೃತ್ ನಾಮದಿಂದ ಹರಿಯು ನೆಲೆಸಿರುವರು. ದೇಹಕ್ಕೆ ಶಿಖರವಾದಂತಿರುವ ಶಿರದಲ್ಲಿ ವಾಸುದೇವನು ನೆಲೆಸಿರುವನು. ಹೀಗೆ ಶ್ರೀಹರಿಯು ಪಂಚ ಜ್ಞಾನೇಂದ್ರಿಯಗಳಲ್ಲಿ, ಪಂಚ ಕರ್ಮೇಂದ್ರಿಯಗಳಲ್ಲಿ ಹಾಗೂ ವಿಶಿಷ್ಟವೆನಿಸಿದ ಮನಸೇಂದ್ರಿಯದಲ್ಲಿ ಅನೇಕರೂಪ ನಾಮಗಳಿಂದ ವಾಯು ಸಹಿತ ಇದ್ದು ನಮ್ಮಿಂದ ಕ್ರಿಯೆಗಳನ್ನು ಮಾಡಿಸುವನು. ಕಾರಣ ಹರಿ ಸ್ಮರಣೆಯಿಲ್ಲದೆ ಮಾಡುವ ಸ್ನಾನ, ಜಪ, ಹೋಮ ದಾನ ಯಾತ್ರೆ ಎಲ್ಲವೂ ವಿಫಲವಾಗುವವು.ಮಹಾ ಭಾರತದಲ್ಲಿ ಭೀಮಾದಿ ಪಾಂಡವರು ಹರಿ ಸ್ಮರಣೆಯಿಂದ ಮಾಡಿದ ಯುದ್ಧವು ಪುಣ್ಯ ಕರ್ಮವಾಯಿತು. ಪ್ರಿಯವ್ರತಾದಿಗಳು ಹರಿ ಸ್ಮರಣೆಯಿಂದ ಮಾಡಿದ ಭೋಗ ಕೂಡಾ ಪುಣ್ಯ ಕರ್ಮ ವಾಯಿತು. ಸ್ವಾರ್ಥಕ್ಕಾಗಿ ಮಾಡಿದ ದುರ್ಯೋಧನನ ಯುದ್ಧ ನಾಶಕ್ಕಾಯಿತು. ಕಾರಣ ಪಂಚವಿಧ ತಾರತಮ್ಯವನರಿತು ಯೋಚಿಸಿದರೆ ಯಾರಲ್ಲಿಯೂ ದ್ವೇಷ ಅಸೂಯೆ ಹುಟ್ಟುವುದಿಲ್ಲ.ಜೀವ-ಜೀವ,ಜಡ-ಜಡ,ಜೀವ-ಜಡ,ಜೀವ -ಈಶ, ಜಡ -ಈಶ, ಇದು ಪಂಚಭೇದ ತತ್ವವು.ಆದರೆ ಈಶನ ಅನಂತರೂಪಗಳಲ್ಲಿ ಭೇದವಿಲ್ಲ. ಈಶನಲ್ಲಿ ವಿಜ್ಞಾನ ಕಾಣಬೇಕು. ಅದಕ್ಕಾಗಿ ನಾವು ದೇವತೆಗಳಲ್ಲಿ ಸುಜ್ಞಾನವನ್ನು, ಯತಿ ಗುರುಗಳಲ್ಲಿ ಜ್ಞಾನಕ್ಕಾಗಿ ಪ್ರಾರ್ಥಿಸಬೇಕು. ದಾಸರಲ್ಲಿ, ಪ್ರಾರ್ಥನೆಯಲ್ಲಿ ಭಕ್ತಿಯಿರಬೇಕು, ಮಿಥ್ಯಾವಾದಿಗಳಲ್ಲಿ ಉದಾಸೀನತೆ ಯಾಕಿರಬೇಕು. ಈ ರೀತಿ ಶ್ರೀ ಹರಿಯನ್ನು ಸಕಲ ಪ್ರಾಣಿಗಳಲ್ಲಿ ಜೀವಿಗಳಲ್ಲಿ ಕಾಣಬೇಕು.
ದಾಸಿಯ ಪುತ್ರನು ದೂರದಿಂದಲೇ ಜ್ಞಾನಿಗಳ ಉಪದೇಶವನ್ನು ಗ್ರಹಿಸಿ ನಾರದ ಮುನಿಗಳಾದರು.ಕುರುಬನಾದ ತಿಮ್ಮಪ್ಪನಾಯಕನು ಜಿಜ್ಞಾಸೆಯಿಂದ ಕನಕದಾಸನಾಗಿ ಬ್ರಹ್ಮ ಪುತ್ರ ಬ್ರಾಹ್ಮಣ ಎನಿಸಿದನು. ಬಡೇಸಾಬ ಎನ್ನುವ ಮುಸಲ್ಮಾನ ಯುವಕ ಜ್ಞಾನದಿಂದ ರಾಮದಾಸನಾಗಿ ಏಳನೂರಾ ಎಪ್ಪತ್ತು ಕೀರ್ತನೆ ರಚಿಸಿ ಮೋಕ್ಷ ಪಡೆದು ಜೀವನ ಸಾರ್ಥಕ ಮಾಡಿಕೊಂಡರು. ಭರತಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಅಕ್ಷರಗಳ ಸತ್ಯವಾದ ಶಕ್ತಿ ಬಲವನ್ನು ಅರಿತು ನಮ್ಮಿಂದ ಸತ್ಕ್ರಿಯೆ ಜರಗಲೆಂದು ಮಾತರಿಶ್ವಾಂತರ್ಗತ ಶ್ರೀ ಹರಿಯರಲ್ಲಿ ಪ್ರಾರ್ಥಿಸೋಣ. ಸರ್ವೇ ಜನ:ಸುಖಿನೋ ಭವಂತು.
ಶುಭಮಸ್ತು
ವಿಠ್ಠಲ ವಿಠ್ಠಲ ಪಾಂಡುರಂಗ ವಿಠಲ
ಅಪ್ರತಿಮಲ್ಲ ಪಂಡರಿನಾಥ ವಿಠ್ಠಲ
ಎಲ್ಲಿಂದಿಲ್ಲಿಗೆ ಬಂದಿರುವೆನಾ ವಿಠ್ಠಲ
ಬಲ್ಲಿದವರಲಿ ನಿಲ್ಲಿಸೋ ನೀ ವಿಠ್ಠಲ
ಸೃಷ್ಟಿ ಸ್ಥಿತಿ ಲಯ ನೀನೆ ವಿಠ್ಠಲ
ಕಾರ್ಯ ಕಾರಣಕೆ ಸ್ವತಂತ್ರ ವಿಠ್ಠಲ
ಅಭೀಷ್ಠೆ ಸಲಿಸುವಿ ಸುರನಿಕರಿಗೆ
ವಿಶಿಷ್ಟ ಮಹಿಮೆ ತೋರುವಿ ಭಕ್ತರಿಗೆ
ಸರ್ವ ಪರಿಪೂರ್ಣ ನೀ ವಿಠ್ಠಲ
ಸರ್ವರೊಳಗೆ ನೀನಿರುವಿ ವಿಠ್ಠಲ
ಸರ್ವರನು ನೀನಿಲ್ಲದೆ ಕಾಯ್ವರ್ಯಾರೋ ವಿಠ್ಠಲ
ಸರ್ವಾದಿ ವಂದ್ಯನೋ ನಮ್ಮ ವಿಠ್ಠಲ
ನಿನ್ನ ಮಹಿಮೆಯ ಭ್ರಮರ ನಾ ವಿಠ್ಠಲ
ಕರ ಪಿಡಿದು ಜ್ಞಾನ ನೀಡೋ ವಿಠ್ಠಲ
ಮಾತರಿಶ್ವಾಂತರ್ಗತ ಶ್ರೀ ಹರಿ ವಿಠ್ಠಲ
ಜೈಹರಿ ವಿಠ್ಠಲ ಶ್ರೀ ಹರಿ ವಿಠ್ಠಲ
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
