ದೇಶದ ಆರ್ಥಿಕತೆ ಮತ್ತು ಆಡಳಿತದ ಒಳನೋಟ ನೀಡುವ ಮನಸ್ಸು ಗೆಲ್ಲುವ ಚಿತ್ರ. 1991ರ ಮಹತ್ತರ ಆರ್ಥಿಕ ಬಿಕ್ಕಟ್ಟಿನಿಂದ ದೇಶ ತತ್ತರಿಸಿದ ಸಂದರ್ಭದಲ್ಲಿ, ಭಾರತ ಆ ಸಂಕಷ್ಟದಿಂದ ಹೇಗೆ ಹೊರಬಂದಿತು ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿರುವ ಚಿತ್ರ ಗವರ್ನರ್. ಲೇಖಕರು ಅಶ್ವತ್ ಎಲ್ ಸಕ್ರೆಬೈಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಿರ್ದೇಶಕರು : ಚಿನ್ಮಯ್ ಡಿ ಮಂಡಳೇಕರ್
ನಿರ್ಮಾಪಕರು : ವಿಪುಲ್ ಅಮೃತಲಾಲ್ ಶಾಹ್
ಚಿತ್ರಕತೆ : ಸುವೆಂದು ಭಟ್ಟಾಚಾರ್ಜಿ, ಸೌರಭ ಭರತ್, ರವಿ ಅಸ್ರಾಣಿ
ತರಾಂಗಣದಲ್ಲಿ : ಮನೋಜ್ ಬಾಜಪೇಯಿ, ಅದಾಹ್ ಶರ್ಮ, ನೌಶಾದ್ ಮೋಹಮೀದ ಕುಂಜು
ಸಾಮಾನ್ಯವಾಗಿ ಒಂದು ದೇಶದ ಒಟ್ಟಾರೆ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಒಳಗಿನ ಪ್ರಕ್ರಿಯೆಗಳು ಹೇಗಿರುತ್ತವೆ, ದೊಡ್ಡ ನಿರ್ಧಾರಗಳ ಹಿಂದೆ ಯಾವ ರೀತಿಯ ಚಿಂತನೆ ಮತ್ತು ಉದ್ದೇಶಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಿನಿಮಾ ಬಹಳ ಸೂಕ್ತವಾಗಿದೆ.
ಇಂದಿನ ಯುವಕರು ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿನ ಅಭಿಪ್ರಾಯಗಳು, ಜನಪ್ರಿಯ ಚರ್ಚೆಗಳು ಅಥವಾ ಜನಸಾಮಾನ್ಯರ ಅಭಿಪ್ರಾಯಗಳನ್ನೇ ದೇಶದ ಮುನ್ನಡೆಯ ಕುರಿತ ನಿರ್ಧಾರಗಳ ಮಾನದಂಡವೆಂದು ಭಾವಿಸುವ ಸಂದರ್ಭಗಳಿವೆ.
ಆದರೆ ಒಂದು ದೇಶವನ್ನು ಮುನ್ನಡೆಸಲು ಅಗತ್ಯವಿರುವ ಬಲಿಷ್ಠ ಆಡಳಿತ ವ್ಯವಸ್ಥೆ, ದೂರದೃಷ್ಟಿಯುಳ್ಳ ಅಧಿಕಾರಶಾಹಿ ಮತ್ತು ಅದರ ಹಿಂದೆ ಅಡಗಿರುವ ನಿಜವಾದ ಉದ್ದೇಶ ಈ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವೊಮ್ಮೆ ಒಂದು ನಿರ್ಧಾರ ನಮಗೆ ತಕ್ಷಣ ಅರ್ಥವಾಗದಿರಬಹುದು. ಆದರೆ ಅದರ ಹಿಂದೆ ದೇಶವನ್ನು ಉಳಿಸುವ, ಸ್ಥಿರಗೊಳಿಸುವ ಮತ್ತು ಬೆಳೆಸುವ ಉದ್ದೇಶವಿರಬಹುದು ಎಂಬುದನ್ನು ಈ ಸಿನಿಮಾ ಬಹಳ ಅದ್ಭುತವಾಗಿ ಮನವರಿಕೆ ಮಾಡಿಕೊಡುತ್ತದೆ.

ಇದರ ಜೊತೆಗೆ, ಸಿನಿಮಾದಲ್ಲಿರುವ ಕೆಲವು ಸಣ್ಣ ಸಣ್ಣ ಭಾವನಾತ್ಮಕ ದೃಶ್ಯಗಳು ಮನಸ್ಸಿನಲ್ಲಿ ಬಹಳ ಹೊತ್ತು ಉಳಿಯುತ್ತವೆ. ಆರ್ ಬಿ ಐ ಗವರ್ನರ್ ಎ ರಮಣನ್ ಅವರು ತಮ್ಮ ಮಗಳು
ಐ ಎಸ್ ಎ ಪರೀಕ್ಷೆಯಲ್ಲಿ ಆಯ್ಕೆಯಾದ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ, ಅವರ ಕಚೇರಿಯ ಗುಮಾಸ್ತರು ಸಿಹಿ ತೆಗೆದುಕೊಂಡು ಬರುತ್ತಾರೆ. ಆಗ ರಮಣ್ ಅವರು, “ನನ್ನ ಮಗಳು ಐ ಎಸ್ ಎ ಆಗಿರುವುದು ನಿಮಗೆ ಇಷ್ಟು ಬೇಗ ಹೇಗೆ ಗೊತ್ತಾಯಿತು?” ಎಂದು ಕೇಳುತ್ತಾರೆ.
ಅದಕ್ಕೆ ಗುಮಾಸ್ತರು, “ನನ್ನ ಮಗಳೂ ಐ ಎಸ್ ಎ ಆಯ್ಕೆಯಾಗಿದ್ದಾಳೆ” ಎಂದು ಹೇಳುವ ಆ ಕ್ಷಣ… ನಿಜಕ್ಕೂ ಕಣ್ಣಂಚಿನಲ್ಲಿ ನೀರು ತರಿಸುವಷ್ಟು ಭಾವುಕ. ಸಾಮಾಜಿಕ ಮಾಧ್ಯಮದಲ್ಲಿ ಆ ಒಂದು ಸಣ್ಣ ತುಣುಕನ್ನು ನೋಡಿದ್ದೆ. ಆ ದೃಶ್ಯವೇ ಇಡೀ ಸಿನಿಮಾವನ್ನು ನೋಡಬೇಕು ಎಂಬ ಕುತೂಹಲ ಮೂಡಿಸಿತು. ಇಂತಹ ಎಷ್ಟೋ ಸೂಕ್ಷ್ಮ ಮತ್ತು ಭಾವನಾತ್ಮಕ ಕ್ಷಣಗಳನ್ನು #governermovie ತನ್ನೊಳಗೆ ತುಂಬಿಕೊಂಡಿದೆ.
ಅಮೆಜಾನ್ ಪ್ರೈಮ್ ನಲ್ಲಿ ಲಭ್ಯ.
- ಅಶ್ವತ್ ಎಲ್ ಸಕ್ರೆಬೈಲ್ – ಕ್ರಿಯೇಟಿವ್ ಪಿ ಯು ಕಾಲೇಜ್ ಉಪ ಸಂಸ್ಥಾಪಕರು, ಕಾರ್ಕಳ.
