‘ದಿ ಲಾಸ್ಟ್ ಲೆಕ್ಚರ್’ ಕೃತಿ (ಭಾಗ-೧)

ಸಾಕಷ್ಟು ಕನಸುಗಳನ್ನು ಹೊಂದಿದ್ದ ರ್ಯಾಂಡಿ ಪಾಶ್ ಜೀವನದ ಕೊನೆಯ ಹಂತದಲ್ಲಿದ್ದಾಗ ಆ ಕನಸುಗಳಿಗೆ ಭಾವ ತುಂಬಿ ಬರಹದ ರೂಪ ಕೊಟ್ಟದ್ದು ‘ದಿ ಲಾಸ್ಟ್ ಲೆಕ್ಚರ್’ ಕೃತಿ. ಎಸ್ ಉಮೇಶ್ ಅವರು ಕನ್ನಡಕ್ಕೆ ಅನುವಾಡಿದಿಸಿದ್ದಾರೆ. ಈ ಕೃತಿಯ ಕುರಿತು ಶಾರದಾ ಶ್ರಾವಣಸಿಂಗ್ ರಜಪೂತ ಅವರು ಸಂಚಿಕೆಯ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಾವಿನ ಸಾಂಗತ್ಯದಲ್ಲಿ ಅರಳಿದ ‘ದಿ ಲಾಸ್ಟ್ ಲೆಕ್ಚರ್’ ಕೃತಿಯ (ಭಾಗ -1)

ಪುಸ್ತಕ : ದಿ ಲಾಸ್ಟ್ ಲೆಕ್ಚರ್
ಮೂಲ : ರ್‍ಯಾಂಡಿ ಪಾಶ್ ಹಾಗೂ ಜೆಫ಼್ರಿ ಜೆಸ್ಲೊ
ಕನ್ನಡಕ್ಕೆ : ಎಸ್.ಉಮೇಶ
ಬೆಲೆ : ೧೯೦/-
ಪ್ರಕಾಶನ :  ಧಾತ್ರಿ ಪ್ರಕಾಶನ, ಮೈಸೂರು.

ಸಾವನ್ನು ನಗುನಗುತ್ತಾ ಎದುರಿಸಿದ ಅಮೆರಿಕದ ರ್ಯಾಂಡಿ ಪಾಶ್ ಒಬ್ಬ ಕಂಪ್ಯೂಟರ್ ವಿಜ್ಞಾನಿ. ‘ಪಿಟ್ಸ್ ಬರ್ಗನ ಸಂತ’ ಎಂದು ಅಮೆರಿಕದ ಜನರು ಇವನನ್ನು ಪ್ರೀತಿಯಿಂದ ಕರೆದರು. ಸಾವಿನ ದವಡೆಯಲ್ಲಿದ್ದ ವ್ಯಕ್ತಿ ರ್ಯಾಂಡಿ ಪಾಶ್ ಬದುಕಿನ ಕೊನೆಯ ಪುಟಗಳಲ್ಲಿದ್ದವನು. ಸಾಕಷ್ಟು ಕನಸುಗಳನ್ನು ಹೊಂದಿದ್ದ ರ್ಯಾಂಡಿ ಪಾಶ್ ಜೀವನದ ಕೊನೆಯ ಹಂತದಲ್ಲಿದ್ದಾಗ ಆ ಕನಸುಗಳಿಗೆ ಭಾವ ತುಂಬಿ ಬರಹದ ರೂಪ ಕೊಟ್ಟದ್ದು ‘ದಿ ಲಾಸ್ಟ್ ಲೆಕ್ಚರ್’ ಕೃತಿ. ಇದರ ಕನ್ನಡ ಅನುವಾದ ಓದುಗರಿಗೆ ಲಭ್ಯವಿದೆ. ಮೂಲ ಲೇಖಕರು ರ್ಯಾಂಡಿ ಪಾಸ್ ಹಾಗೂ ಜೆಫ್ರಿ ಜೆಸ್ಲೊ ಆಗಿದ್ದು ಎಸ್ ಉಮೇಶ್ ಮೈಸೂರು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. “ಓದು ಮುಗಿಯುವದರಲ್ಲಿ ಕಣ್ಣಂಚಿನಲ್ಲಿ ನೀರು ಜಿನುಗಿದ್ದು ಗೊತ್ತಾಗಲೇ ಇಲ್ಲ” ಎನ್ನುವಷ್ಟು ಗಾಢವಾಗಿ ನಮ್ಮನ್ನು ಈ ಕೃತಿ ಕಟ್ಟಿ ಹಾಕುತ್ತದೆ.

ರ್ಯಾಂಡಿ ಪಾಶ್ ವೃತ್ತಿಯಿಂದ ಕಂಪ್ಯೂಟರ್ ವಿಜ್ಞಾನಿಯಾಗಿದ್ದವರು. ಮುದ್ದಾದ ಹೆಂಡತಿ, ಮೂರು ಮಕ್ಕಳೊಂದಿಗೆ ಸುಖೀ ಸಂಸಾರ ಹೊಂದಿದ್ದವರು. ಆರ್ಥಿಕವಾಗಿ ಸಬಲರಾಗಿದ್ದವರು. ತಮ್ಮ ಜೀವನದ 37 ವರ್ಷಗಳನ್ನು ಅಧ್ಯಯನ, ನೌಕರಿಯ ಹುಡುಕಾಟ, ಹೊಸ ಸಂಶೋಧನೆ ಹೀಗೆ ಕಳೆದು ಯಶಸ್ವಿಯೂ ಆದರು. ಬಯಸಿದ್ದೆಲ್ಲ ಸಿಕ್ಕಾಯ್ತು ಇನ್ನು ಆರಾಮಾಗಿ ಹೆಂಡತಿ ಮಕ್ಕಳೊಂದಿಗೆ ಇರಬೇಕೆಂದಾಗ ಕ್ಯಾನ್ಸರ್ ಎಂಬ ಮಹಾಮಾರಿ ರ್ಯಾಂಡಿಯನ್ನು ಬಿಗಿದಪ್ಪಿತ್ತು. ವೈದ್ಯರಿಂದ ಈ ವಿಷಯ ಗೊತ್ತಾದಾಗ ರ್ಯಾಂಡಿ ಅಧೀರನಾದ. ಪತ್ನಿ ‘ಜೈ’ ಅತ್ತಳು. ಕೆಲವೇ ನಿಮಿಷಗಳಲ್ಲಿ ತನ್ನನ್ನು ತಾನು ಸಂಭಾಳಿಸಿಕೊಂಡ ರ್ಯಾಂಡಿ “ಜೀವನದಲ್ಲಿ ಎಂತೆಂಥ ಸಮಸ್ಯೆಗಳನ್ನು ಎದುರಿಸಿ ಗೆದ್ದಿದ್ದೇನೆ. ಇದ್ಯಾವ ಮಹಾ ?” ಎಂದು ಪತ್ನಿಗೆ ಧೈರ್ಯ ತುಂಬುತ್ತಾನೆ. ಆದರೆ ನಂಬಿ ಬಂದ ಹೆಸರಾಂತ ವೈದ್ಯ ಡಾ. ಆಲ್ಫ್ರೆಡ್ ಕ್ವಿನಾನ್ಸ “I am sorry dear, Cancer is in final stage” ಎಂದಾಗ ರ್ಯಾಂಡಿಗೆ ಸಾವಿನ ಎದುರು ತಾನು ನಿಂತಿದ್ದು ಅರಿವಾಯಿತು.

ಸಾಯುವುದು ಗ್ಯಾರಂಟಿ ಎಂದು ಗೊತ್ತಾದ ಬಳಿಕ ರ್ಯಾಂಡಿ ಪಾಶ್ ಪತ್ನಿಗೆ ಬದುಕುವುದು ಹೇಗೆ? ಎಂದು ಹೇಳಿಕೊಟ್ಟ. ಯಾರಿಗೆ ಯಾರೂ ಅನಿವಾರ್ಯತೆಯಲ್ಲಾ ಎಂಬ ವೇದಾಂತವನ್ನು ಪತ್ನಿಗೆ ಅರ್ಥ ಮಾಡಿಸಿದ.

ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಯೊಬ್ಬ ಸಾವಿಗೆ ಸಮೀಪವಿದ್ದಾನೆ ಎಂದು ಗೊತ್ತಾದರೆ ಅಮೆರಿಕದಲ್ಲಿ ಆತ ಸಾಯುವ ಮೊದಲು ಸಮಾನ ಮನಸ್ಕರ ಮುಂದೆ ನಿಂತು ಮಾತನಾಡುವ ಅಥವಾ ಅವರೊಂದಿಗೆ ಬದುಕುವ ಅವಕಾಶವನ್ನು ಮಾಡಿಕೊಡುತ್ತಾರೆ. ಇಂತಹ ಅವಕಾಶ ರ್ಯಾಂಡಿಗೆ ಒದಗಿ ಬರುತ್ತದೆ. ಆಗ ರ್ಯಾಂಡಿ ಸಂತೋಷದಿಂದ ಹೇಳಿದ್ದು “ನಾನು ಬದುಕಿನ ಬಗ್ಗೆ ಒಂದು ಉಪನ್ಯಾಸ ನೀಡಿ ಸಾಯೋಕೆ ನಾನು ಇಷ್ಟ ಪಡ್ತೀನಿ”. ನಂತರ ಆ ಸಮಯದಲ್ಲಿ ರ್ಯಾಂಡಿ ಪಾಶ್ ನೀಡಿದ ಉಪನ್ಯಾಸದ ಭಾವನುವಾದವೇ ‘ The Last Lecture’.

ಐವತ್ಮೂರು ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯಲ್ಲಿ ಜೀವನಕ್ಕೆ ಅದ್ಭುತ ಕಿವಿಮಾತುಗಳನ್ನು ಹೇಳಿದ್ದಾರೆ. ಬದುಕಿನ ಕುರಿತು ಕನಸುಗಳು, ಬಾಳಿನ ಕಥೆ – ವ್ಯಥೆ, ಸಂಕಟ, ನೋವು-ನಲಿವು, ಬೆಂದ ಕಣ್ಣೀರು – ಸಂತಸದ ಕಂಬನಿ, ಸೋಲು -ಗೆಲುವು, ತಿರಸ್ಕಾರ – ಪುರಸ್ಕಾರ ಇವೆಲ್ಲವುಗಳನ್ನು ಹೊತ್ತು ಸಾಗಿದ ರ್ಯಾಂಡಿ ಪಾಶ್ ನ ಕೊನೆಯಲ್ಲಿ ನಿಮ್ಮ ಹಾರೈಕೆ ನನ್ನೊಂದಿಗಿರಲಿ ಎಂಬ ನೋವು ಜಿನುಗುವ ಮಾತೂ ಇದೆ.

ಈ ಕೃತಿ ಕಲ್ಪನಾ ಲೋಕದ ಊಹಾಲೋಕದ ಮತ್ತು ಭ್ರಮಾಲೋಕದ ಕಥೆಯಲ್ಲ. ಸಾವನ್ನು ಸಮೀಪಿಸುತ್ತಿರುವ ಮಹಾನ್ ವಿಜ್ಞಾನಿ ಒಬ್ಬನ ಅಪೂರ್ವ ಚಿಂತನೆಗಳ ಸಿಂಚನ. ಜೀವನದ ಸತ್ಯ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿದ ರ್ಯಾಂಡಿಯ ಅಂತಿಮ ಉಪನ್ಯಾಸಗಳನ್ನು ಹೊಂದಿದ ಈ ಕೃತಿಯ ಲೇಖನಗಳನ್ನು ಪರಿಚಯಿಸುವ ಪ್ರಯತ್ನ ಈ ಲೇಖನದ್ದಾಗಿದೆ.

ಮುಂದುವರೆಯುವುದು…


  • ಶಾರದಾ ಶ್ರಾವಣಸಿಂಗ್ ರಜಪೂತ – ಶಿಕ್ಷಕರು, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading