‘ಚುಟುಕು ಕೌಸ್ತುಭ’ ಕೃತಿ ಪರಿಚಯ

ಚುಟುಕುಗಳು ಕೂಡ ಒಂದು ಅದ್ಭುತ ಸಾಹಿತ್ಯ ಪ್ರಕಾರವಾಗಿದೆ.  ಬಹುದಿನಗಳ ನಂತರ ಡಿ ಪದ್ಮನಾಭ ಅವರ  “ಚುಟುಕು ಕೌಸ್ತುಭ” ದ ಮೂಲಕ ಚುಟುಕು ಸಾಹಿತ್ಯ ಓದುವ ಅವಕಾಶ ಸಿಕ್ಕಿತು, ಈ ಕೃತಿಯ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚುಟುಕು ಕೌಸ್ತುಭ
ಲೇಖಕರು : ಡಿ ಪದ್ಮನಾಭ
ಪ್ರಕಾಶನ : ಅಕ್ಷರ ನಾದ ಪ್ರಕಾಶನ

ಬೆಲೆ : 130.00

ಕತೆಗಾರ, ಕಾದಂಬರಿಕಾರ, ಕವಿ, ಈಗ ಚುಟುಕು ಸಾಹಿತಿ ಡಿ ಪದ್ಮನಾಭ ಅವರು ಮೂಲತಃ ಮೈಸೂರಿನವರು, ನಿವೃತ್ತ ಪೋಸ್ಟ್ ಮಾಸ್ಟರ್ ಆಗಿದ್ದ ಇವರು ಸಾಹಿತ್ಯಲೋಕದಲ್ಲಿ ತಮ್ಮದೇ ಚಾಪನ್ನು ಮೂಡಿಸಿದ್ದಾರೆ. ಕವನವನ್ನು ಓದುವರಿಲ್ಲ ಎನ್ನುವ ಕಾಲಘಟ್ಟದಲ್ಲಿ ಪದ್ಮಾನಾಭ ಅವರು ಧೈರ್ಯವಾಗಿ ಈಗಾಗಲೇ ಐದು ಕವನ ಸಂಕಲನವನ್ನು ಹೊರ ತಂದಿದ್ದಾರೆ ಮತ್ತು ಅವುಗಳನ್ನು ಓದುಗರು ಮೆಚ್ಚಿಕೊಂಡಿದ್ದಾರೆ.

ಪದ್ನಾನಾಭ ಅವರು ನಾಲ್ಕು ಕಾದಂಬರಿ, ಎರಡು ಕಥಾಸಂಕಲನ ಮತ್ತು  ಅವರ ಹದಿಮೂರನೆ ಕೃತಿಯಾಗಿ “ಚುಟುಕು ಕೌಸ್ತುಭ “ವನ್ನು  ಹೊರ ತರುವ ಮೂಲಕ ಸಾಹಿತ್ಯಲೋಕದ ಎಲ್ಲ ಗಡಿಗಳನ್ನು ಮುಟ್ಟಿದ್ದಾರೆ.

ಈ “ಚುಟುಕು ಕೌಸ್ತುಭ” ದಲ್ಲಿ ಒಟ್ಟು 191 ಚುಟುಕುಗಳಿದ್ದು, ಇದರಲ್ಲಿ ಪಂಚಿಂಗ್ ಪದಗಳಿಗಿಂತ ಬದುಕಿನ ಅರ್ಥಗಳು ತಿಳಿಸುವ ಪ್ರಯತ್ನವನ್ನು ಪದ್ಮನಾಭ ಅವರು ಮಾಡಿದ್ದಾರೆ.

“ಜ್ಞಾನದಾತ” ಚುಟುಕಿನ ಸಾಲಿನಲ್ಲಿ ಗುರು ಹಾಗೂ ಗೋವಿಂದ ಈ ಇಬ್ಬರಲ್ಲಿ ಮೊದಲಿಗೆ ನಮಿಸುವುದು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರವಾಗಿ ಗುರು ಗೋವಿಂದನ ಕುರಿತು ಜ್ಞಾನವನ್ನು ತುಂಬುತ್ತಾನೆ. ಹಾಗಾಗಿ ಮೊದಲು ಗುರುವಿಗೆ ನಾನು ನಮಿಸುವುದು ಎನ್ನುವ ಸಾಲುಗಳುಳ್ಳ

ಗುರುವು ಗೋವಿಂದನು ಒಟ್ಟಿಗೆ ಬರಲು
ಗುರುವಿಗೆ ನಾ ವಂದಿಸುವೆನು ಮೊದಲು
ಹಾದಿ ತೋರಿದ ಗೋವಿಂದನನರಿಯಲು
ಜ್ಞಾನದಾತ ಗುರುವೇ ನಮ್ಮ ಬಾಳಿನೊಳು

ಹೆಣ್ಣಿಗೆ ಮಾಂಗಲ್ಯ ಎನ್ನುವುದು ಅಲಂಕಾರಿಕ ವಸ್ತುವಲ್ಲ, ಬೇಕೆಂದಾಗ ಹಾಕುವುದು, ಬೇಡವೆಂದಾಗ ತಗೆದಿಡುವುದು. ಬಟ್ಟೆಗೆ ತಕ್ಕಂತೆ ಚಿಕ್ಕದು ದೊಡ್ಡದು ಹಾಕುವ ಮಾಂಗಲ್ಯಗಳು ಶೋಕಿಗಲ್ಲ. ಮಾಂಗಲ್ಯ ಎನ್ನುವುದು ಹೆಣ್ಣಿಗೆ ಒಂದು ಶ್ರೀರಕ್ಷೆ ಇದ್ದಂತೆ. ಮಾಂಗಲ್ಯದ ಮಹತ್ವ ತಿಳಿಸುವ ಈ ಸಾಲುಗಳು ಅರ್ಥಪೂರ್ಣವಾಗಿದೆ.

ಮಾಂಗಲ್ಯ

“ಸಿಂಗಾರಕಲ್ಲ ತಾಳಿ ಕಟ್ಟುವುದು
ದಾಂಪತ್ಯದ ಶುಭಸಂಕೇತವಿದು
ವನಿತೆಯ ಬಾಳಿಗೆ ಶ್ರೀರಕ್ಷೆಯಿದು
ಗೌರವ ಘನತೆಗಳ ಪ್ರತಿಬಿಂಬವಿದು “

ಓದುವ ವಯಸ್ಸಿನಲ್ಲಿ ಮಕ್ಕಳು ಮೊಬೈಲ್, ಹೊರ ಜಗತ್ತಿನ ಬಣ್ಣದ ಲೋಕದತ್ತ ಒಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಚುಟುಕು ಪ್ರಸ್ತುತ ದಿನಗಳಲ್ಲಿ ಜಾಗೃತಿ ಮೂಡಿಸುವ ಚುಟುಕಾಗಿದೆ.

ಓದುವ ವಯಸ್ಸಿಲ್ಲಿ ಓದಬೇಕು
ದುಡಿಯುವ ವಯಸ್ಸಲ್ಲಿ ದುಡಿಯಬೇಕು
ಆಗ ಜೀವನ ಹೂವಿನ ಹಾಸಿಗೆ
ಇಲ್ಲದಿದ್ದರೆ ಮುಳ್ಳಿನ ಹಾಸಿಗೆ

ತಾಯಿಯ ಪ್ರೀತಿಯನ್ನೇ ನೋಡದ ಕಂದ ಅನಾಥಶ್ರಮದಲ್ಲಿ ಕಾಣುತ್ತೇವೆ, ಪ್ರೀತಿಯಿಂದ ಸಲುಹಿದ ಕೆಲವು ವೃದ್ಧರನ್ನು ಈಗ ವೃದ್ದಾಶ್ರಮದಲ್ಲಿ ನೋಡುತ್ತಿದ್ದೇವೆ. ಇದೊಂದು ಹೃದಯಸ್ಪರ್ಶಿ ಚುಟುಕು.

ಮಮತೆ

ಮಾತೆಯ ಮಮತೆಯ ಅರಿಯದ ಕಂದನ
ಕಂಡೆನು ಅನಾಥಶ್ರಮದಲ್ಲಿ
ಮಮತೆಯ ಉಣಿಸಿ ಬೆಳೆಸಿದ ಹಿರಿಯರ
ವಾಸವು ವೃದ್ದಾಶ್ರಮಗಳಲಿ

*
ಹತ್ತಿರದಲ್ಲಿರುವ ಬಂಧು ಬಾಂಧವರು, ಅಕ್ಕಪಕ್ಕದವರ ಜೊತೆ ನಾಲ್ಕು ಮಾತನ್ನಾಡಲು ಸಮಯವಿಲ್ಲ, ಮನಸ್ಸಿಲ್ಲ. ಆದರೆ ದೂರದಲ್ಲಿ ಕುಳಿತಿರುವವರ ಜೊತೆ ತಂತ್ರಜ್ಞಾನ ಬಳಸಿ ಮಾತಾಡುತ್ತೇವೆ. ಈ ಚುಟುಕು ಒಣ ಪ್ರತಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರತಿಷ್ಠೆ

ವಿದೇಶದಲ್ಲಿದ್ದವರೊಡನೆ ಮಾತನಾಡುವೆವು
ತಂತ್ರಜ್ಞಾನದ ನೆರವಿನಿಂದ
ಹತ್ತಿರವಿದ್ದವರೊಡನೆ ಮಾತಾಡುವುದಿಲ್ಲ
ಇದು ಪ್ರತಿಷ್ಠೆಯಿಂದ

*
ಇಂದಿನ ಮಹಿಳೆಯರು ಬಟ್ಟೆ, ನೆಲ, ಕಸವನ್ನು ಬಗ್ಗಿ ಕೆಲಸ ಮಾಡದಿದ್ದರೂ ಸ್ಲಿಮ್ ಆಗಿದ್ದಾರೆ, ಅದಕ್ಕೆ ಕಾರಣ ವಾಕಿಂಗ್, ಜಿಮ್ ಎನ್ನುವ ರಹಸ್ಯವನ್ನು ಪದ್ಮನಾಭವ ಅವರು ಭೇದಿಸಿದ್ದಾರೆ.

ಮಾಡ್ರನ್ ಮಹಿಳೆಯರು

ಮಗು ಅತ್ತರೆ ಮೊಬೈಲ್ ನೀಡಿ
ಸಮಾಧಾನಪಡಿಸುವರು
ವಾಷಿಂಗ್ ಮಷಿನ್ನಿರದೆ ಬಟ್ಟೆ ಒಗೆಯದವರು
ಮೈಬಗ್ಗಿಸಿ ನೆಲವ ಗುಡಿಸಿ ಒರೆಸದವರು
ಆದರೂ ವಾಕಿಂಗ್ ಜಿಮ್ ಮಾಡಿ ಸ್ಲಿಮ್ ಆಗಿಹರು

ಪದ್ಮನಾಭ ಅವರು ಹೇಳುವಂತೆ ಚುಟುಕು ಸಾಹಿತ್ಯವು ಹೆಂಡತಿ, ಪ್ರೇಯಸಿಯ ಸುತ್ತ ಹೆಚ್ಚು ಸಾಗುತ್ತವೆ. ಆದರೆ ಚುಟುಕು ಕೌಸ್ತುಭದಲ್ಲಿ ಬದುಕಿನ ವಾಸ್ತವವನ್ನು ತೆರೆದಿಟ್ಟಿದ್ದಾರೆ. ಚುಟುಕು ಸಾಹಿತಿಗಳಾದ ಪದ್ಮಾವತಿ ಚಂದ್ರು ಅವರು ಮುನ್ನುಡಿಯನ್ನು ಬರೆದಿದ್ದಾರೆ. ಪ್ರತಿ ಚುಟುಕುಗಳು ಸರಳವಾಗಿದೆ ಮತ್ತು ಅರ್ಥಪೂರ್ಣವಾಗಿದೆ ಹಾಗಾಗಿ  ಓದುಗರು ತಲೆ ಕೆಡಿಸಿಕೊಂಡು ಓದುವ ಅವಶ್ಯಕತೆಯಿಲ್ಲ.ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಇದಾಗಿದೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading