ಬಹುಮುಖ ಪ್ರತಿಭೆ ವಕೀಲೆ ಅಂಜಲಿ ರಾಮಣ್ಣ

ವಕೀಲೆ, ಲೇಖಕಿ, ಹೋರಾಟಗಾರ್ತಿಯಾಗಿ, ರಂಗಭೂಮಿ ಕಲಾವಿದೆ, ಬಹುಮುಖ ಪ್ರತಿಭೆಯ ಅಂಜಲಿ ರಾಮಣ್ಣ ಅವರ ಕುರಿತು ಉಮಾ ಅಂಜಲಿ ಅವರು ಬರೆದ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ…

“ಅವರ ನಗು ಕಂಡೆ… ಅವರ ಮಾತು ಕೇಳಿದೆ… ಅಂಜಲಿ ರಾಮಣ್ಣ ಅವರನ್ನು ಅರಿಯಲು ಆರಂಭಿಸಿದೆ’ ಕೆಲವು ಹೆಸರುಗಳನ್ನು ನಾವು ಕೇಳುತ್ತೇವೆ. ಕೆಲವು ಹೆಸರುಗಳನ್ನು ನೆನಪಿಟ್ಟುಕೊಳ್ಳುತ್ತೇವೆ. ಆದರೆ ಕೆಲವೇ ಕೆಲವು ಹೆಸರುಗಳ ಹಿಂದೆ ನಿಂತಿರುವ “ಜೀವನವನ್ನು ತಿಳಿದುಕೊಂಡಾಗ”, ಆ ಹೆಸರು ನಮಗೆ ಮತ್ತೊಂದು ಅರ್ಥವನ್ನು ಕೊಡುತ್ತದೆ.

ಅಂಜಲಿ ರಾಮಣ್ಣ ಅವರ ನನಗೆ ಮೊದಲು ಪರಿಚಯವಾದದ್ದು ಒಂದು ಹೆಸರಾಗಿ. ನಂತರ ತಿಳಿಯಿತು ಆ ಹೆಸರಿನ ಹಿಂದೆ ಒಬ್ಬ ವಕೀಲೆ ಇದ್ದಾರೆ. ಮತ್ತಷ್ಟು ತಿಳಿದಾಗ ಒಬ್ಬ ಲೇಖಕಿಯಾಗಿ,  ಮತ್ತಷ್ಟು ಓದಿದಾಗ ಒಬ್ಬ ಸಮಾಜಮುಖಿಯಾಗಿ, ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಒಬ್ಬ ಹೋರಾಟಗಾರ್ತಿಯಾಗಿ, ರಂಗಭೂಮಿಯಲ್ಲಿ ಹೆಜ್ಜೆ ಇಟ್ಟ ಕಲಾವಿದೆಯಾಗಿ,  ಯುವಕರಿಗೆ ಜೀವನ ಕೌಶಲ್ಯಗಳನ್ನು ಹಂಚುವ ತರಬೇತುದಾರ್ತಿಯಾಗಿ

ಆಗ ನನ್ನಲ್ಲಿ ಮೂಡಿದ ಪ್ರಶ್ನೆ

“ಒಬ್ಬ ವ್ಯಕ್ತಿಯೊಳಗೆ ಇಷ್ಟೊಂದು ಬಹುಮುಖ ಪ್ರತಿಭೆ ಹೇಗೆ ಸಾಧ್ಯ?” ಬಹುಶಃ ಅಂಜಲಿ ರಾಮಣ್ಣ ಅವರ ಸೌಂದರ್ಯವೇ ಅದಿರಬಹುದು.

ವೇದಿಕೆಯ ಮೇಲೆಯೇ ಆರಂಭವಾದ ಒಂದು ಪ್ರಯಾಣ.  ಕಾನೂನು ಅವರ ಜೀವನಕ್ಕೆ ನಿನ್ನೆ ಬಂದದ್ದು ಅಲ್ಲ. ಚಿಕ್ಕವಯಸ್ಸಿನಲ್ಲಿಯೇ ತಾನು ವಕೀಲೆಯಾಗಬೇಕು ಎಂದುಕೊಂಡಿದ್ದರು.  ಕೇವಲ ಎರಡನೇ ವಯಸ್ಸಿನಲ್ಲೇ ರಂಗಭೂಮಿಗೆ ಕಾಲಿಟ್ಟಿದ್ದರು. ಮೈಸೂರಿನ ರಂಗಭೂಮಿ ವಾತಾವರಣದಲ್ಲಿ ಬೆಳೆದ ಅವರು ಸುಮಾರು 180 ಕ್ಕೂ ಹೆಚ್ಚು ರಂಗಭೂಮಿ, ಆಕಾಶವಾಣಿ ನಾಟಕಗಳಲ್ಲಿ ಭಾಗವಹಿಸಿ, ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಅಂದರೆ ಅವರ ಜೀವನವೇ ಒಂದು ಪುಸ್ತಕ.

ಒಂದು ವೇದಿಕೆಯಿಂದ ಬಂದದ್ದು.
ವೇದಿಕೆ ಅವರಿಗೆ ಮಾತು ಕೊಟ್ಟಿತು.
ಸಾಹಿತ್ಯ ಅವರಿಗೆ ಪದಗಳನ್ನು ಕೊಟ್ಟಿತು.
ಕಾನೂನು ಅವರಿಗೆ ಧ್ವನಿಯನ್ನು ಕೊಟ್ಟಿತು.
ಮತ್ತು ಸಮಾಜದ ಕೆಲಸ ಆ ಧ್ವನಿಗೆ ಒಂದು “ಉದ್ದೇಶ” ಕೊಟ್ಟಿತು.


ಕಾನೂನು ಕೇವಲ ವೃತ್ತಿಯಲ್ಲ,  ಕಾನೂನು ಶಿಕ್ಷಣ ಪಡೆದ ನಂತರ ಹಿರಿಯ ವಕೀಲರ ಬಳಿ ತರಬೇತಿ ಪಡೆದು ನಂತರ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿ ತಮ್ಮದೇ ಕಚೇರಿಯತ್ತ ಹೆಜ್ಜೆ ಇಟ್ಟರು. ಆದರೆ ಅವರ ಪಯಣ ಕೇವಲ ನ್ಯಾಯಾಲಯದ ಗೋಡೆಗಳೊಳಗೆ ನಿಲ್ಲಲಿಲ್ಲ. ಅವರ ಜೀವನದ ಒಂದು ಮಾತು ನನಗೆ ವಿಶೇಷವಾಗಿ ತಟ್ಟಿತು “ನನಗೆ ಕಾನೂನು ಎಂದರೆ ಮಾನವ ಹಕ್ಕು’. ಬಹುಶಃ ಇದೇ ಒಂದು ವಾಕ್ಯ ಅವರ ಇಡೀ ಪಯಣವನ್ನು ಅರ್ಥಮಾಡಿಕೊಳ್ಳಲು ಸಾಕು. ಅವರಿಗಾಗಿ ಕಾನೂನು ಎಂದರೆ ಸೆಕ್ಷನ್‌ಗಳು, ವಿಧಿಗಳು, ವಾದಗಳು ಮಾತ್ರವಲ್ಲ.

“ಮಾತನಾಡಲು ಸಾಧ್ಯವಾಗದವನಿಗೆ ಮಾತಾಗುವುದು.
ತನ್ನ ಹಕ್ಕು ಗೊತ್ತಿಲ್ಲದವನಿಗೆ ಅದನ್ನು ತಿಳಿಸುವುದು.
ತನ್ನ ಪರವಾಗಿ ನಿಲ್ಲಲು ಹೆದರುವವನ ಪಕ್ಕದಲ್ಲಿ ನಿಲ್ಲುವುದು.”

‘ಅಸ್ತಿತ್ವ’ — ಹೆಸರಿಗಿಂತ ದೊಡ್ಡ ಅರ್ಥ

2002ರಲ್ಲಿ ಅವರು Astitva Legal Trust ಅನ್ನು ಆರಂಭಿಸಿದರು. ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಜಾಗೃತಿ ಮೂಡಿಸುವುದು ಅದರ ಆರಂಭಿಕ ಉದ್ದೇಶವಾಗಿತ್ತು. ನಂತರ ಅದರ ಕೆಲಸ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ, ಕಾನೂನು ನೆರವು ಮತ್ತು ವಿವಿಧ ಸಾಮಾಜಿಕ ಅಗತ್ಯಗಳತ್ತ ವಿಸ್ತರಿಸಿತು. ಹನ್ನೆರಡು ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವುದರಿಂದ ಹಿಡಿದು, ಕೊಳೆಗೇರಿಗಳಲ್ಲಿ ಕೆಲಸ ಮಾಡುವವರೆಗೂ ಅದರ ಕಾರ್ಯ ವಿಸ್ತರಿಸಿತು.

ಒಂದು ಸಂಸ್ಥೆಗೆ “ಅಸ್ತಿತ್ವ” ಎಂಬ ಹೆಸರನ್ನು ಆಯ್ಕೆ ಮಾಡಿರುವುದೇ ಎಷ್ಟು ಅರ್ಥಪೂರ್ಣ. ಯಾಕೆಂದರೆ ಅವರ ಕೆಲಸದ ಮಧ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಒಂದು ಪ್ರಶ್ನೆ ಇದೆ—
ಈ ವ್ಯಕ್ತಿಯ ಅಸ್ತಿತ್ವವನ್ನು ಸಮಾಜ ಎಷ್ಟು ಗೌರವಿಸುತ್ತಿದೆ? ಮಹಿಳೆಯದ್ದಾಗಲಿ,  ಮಗುವಿನದ್ದಾಗಲಿ. ಸಂಕಷ್ಟದಲ್ಲಿರುವ ವ್ಯಕ್ತಿಯದ್ದಾಗಲಿ ಅವರ ಕೆಲಸ ಬಹುಶಃ ಕಾನೂನನ್ನು ಜನರ ಬಳಿಗೆ ಕೊಂಡೊಯ್ಯುವುದಕ್ಕಿಂತಲೂ ಮುಂದೆ ಹೋಗುತ್ತದೆ. ಜನರಿಗೆ ಅವರದೇ ಮೌಲ್ಯವನ್ನು ನೆನಪಿಸುವ ಪ್ರಯತ್ನದಂತೆ ಕಾಣುತ್ತದೆ.


ಒಬ್ಬ ವಕೀಲೆಯಿಂದ ಮಕ್ಕಳ ಪರವಾದ ಧ್ವನಿಯವರೆಗೆ

ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಅವರ ಕಾರ್ಯಕ್ಷೇತ್ರದ ಪ್ರಮುಖ ಭಾಗಗಳಾದವು. ಬೆಂಗಳೂರು ನಗರದ ‘Child Welfare Committee’ ಯ ಅಧ್ಯಕ್ಷೆಯಾಗಿ ಅವರು Juvenile Justice ವ್ಯವಸ್ಥೆಯಡಿಯಲ್ಲಿ ಮಕ್ಕಳ ಕಲ್ಯಾಣ ಮತ್ತು ರಕ್ಷಣೆಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಅವರು Child Rights Trustನ trustee ಆಗಿಯೂ, advocate, life-skill trainer, writer ಮತ್ತು columnist ಆಗಿಯೂ ಪರಿಚಿತರಾಗಿದ್ದಾರೆ.

ಮಕ್ಕಳ ಹಕ್ಕುಗಳ ಕುರಿತು ಕಾನೂನು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು, ಶಾಲಾ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು — ಅವರ ಕೆಲಸದ ಮತ್ತೊಂದು ಭಾಗ. 2024ರಲ್ಲಿ ನಡೆದ Child Rights ಕಾರ್ಯಾಗಾರವೊಂದರಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಕಾನೂನಿನ ಬದಲಾವಣೆಗಳ ಜೊತೆಗೆ communication ಮತ್ತು critical thinkingನ ಮಹತ್ವವನ್ನೂ ಹಂಚಿಕೊಂಡಿದ್ದರು.

ಅವರನ್ನು ನೋಡಿದಾಗ ಒಂದು ವಿಷಯ ಅರ್ಥವಾಗುತ್ತದೆ “ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳುವುದಕ್ಕಿಂತ, ಅದನ್ನು ಮತ್ತೊಬ್ಬರ ಬದುಕಿಗೆ ಉಪಯೋಗವಾಗುವಂತೆ ಮಾಡುವುದು ಬಹುಶಃ ಇನ್ನೂ ದೊಡ್ಡ ಸಾಧನೆ.”

ಸಾಹಿತ್ಯದತ್ತ ಪಯಣ

ಅವರ ಕೈಯಲ್ಲಿ ಕಾನೂನು ಮಾತ್ರ ಇರಲಿಲ್ಲ, ಪೆನ್ನೂ ಇತ್ತು. ಅವರ ಇನ್ನೊಂದು ಮುಖ ಸಾಹಿತ್ಯ. ಕಾಯುವೆಯಾ ಕಾಲ, ರಷೀತಿಗಳು, ಚೌಕಟ್ಟುಗಳು, ಹೂವಿನ ಹಾಡು, ಬೆಳಕಿನ ಸೆರಗು ಮುಂತಾದ ಕೃತಿಗಳ ಮೂಲಕ ಅವರು ತಮ್ಮ ಬರವಣಿಗೆಯ ಲೋಕವನ್ನು ಕಟ್ಟಿಕೊಂಡಿದ್ದಾರೆ. ಕನ್ನಡದಲ್ಲಿ ಅಂಕಣಗಳನ್ನು ಬರೆದಿರುವ ಅವರು, ಕಾನೂನು ಜಾಗೃತಿಗಾಗಿ ಇಂಗ್ಲಿಷ್‌ನಲ್ಲಿಯೂ ಬರೆದಿದ್ದಾರೆ. ಸಾಕ್ಷ್ಯಚಿತ್ರಗಳನ್ನೂ ರೂಪಿಸಿದ್ದಾರೆ.

Child Rights Trustನ ಅಧಿಕೃತ ಪರಿಚಯದಲ್ಲಿ ಅವರ 1500 ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ  ಉಲ್ಲೇಖವಿದೆ. 1500ಕ್ಕೂ ಹೆಚ್ಚು ಲೇಖನಗಳು. ಆ ಸಂಖ್ಯೆಯನ್ನು ನೋಡಿದಾಗ ನನಗೆ ಸಂಖ್ಯೆಯ ದೊಡ್ಡತನಕ್ಕಿಂತ ಒಂದು ವಿಚಾರ ಮುಖ್ಯವಾಗಿ ಕಾಣಿಸಿತು. “ಒಬ್ಬ ವ್ಯಕ್ತಿ ತನ್ನ ಆಲೋಚನೆಗಳನ್ನು ಎಷ್ಟು ವರ್ಷಗಳ ಕಾಲ ನಿರಂತರವಾಗಿ ಜಗತ್ತಿನೊಂದಿಗೆ ಹಂಚಿಕೊಂಡಿರಬಹುದು”


ತಮ್ಮ ಮೊದಲ ನ್ಯಾಯಾಲಯದ ವಾದದ ಸಂದರ್ಭದಲ್ಲಿ ‘ತುಂಬಾ ಬೆವರಿದ್ದೆ, ನನ್ನ ಧ್ವನಿ ನನಗೆ ಕೇಳಿಸುತ್ತಿರಲಿಲ್ಲ’ ಎಂದು ಅವರು ನೆನಪಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಉತ್ತಮ ಅಂಕ ಗಳಿಸಿದ್ದವರು, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವರು.

‘ಧೈರ್ಯ ಎಂದರೆ ಭಯವಿಲ್ಲದಿರುವುದಲ್ಲ. ಭಯ ಇದ್ದರೂ ತನ್ನ ಮಾತನ್ನು ಹೇಳಲು ಮುಂದೆ ಬರುವುದು’ ಬಹುಶಃ ಅದೇ ನಿಜವಾದ ಆತ್ಮವಿಶ್ವಾಸ.

POCSO, BNS, BNSS  ಮತ್ತು ಕಾನೂನಿನ ಹಲವು ವಿಷಯಗಳ ಕುರಿತು ಮಾತನಾಡಿದರು. ನಾನು ಅಲ್ಲಿ ಕೇವಲ ಕಾನೂನು ವಿಷಯಗಳನ್ನು ಕೇಳಲು ಕುಳಿತಿರಲಿಲ್ಲ. ನನ್ನ ಮುಂದೆ ಒಂದು ಜೀವನದ ಅನುಭವ ಮಾತನಾಡುತ್ತಿತ್ತು. ಪುಸ್ತಕದಲ್ಲಿ ಓದಿದ ಕಾನೂನು ಒಂದು ವಿಷಯ. ಅದನ್ನು ವರ್ಷಗಳ ಕಾಲ ಬದುಕಿನಲ್ಲಿ ಕಂಡು, ಬಳಸಿಕೊಂಡು, ಸಮಾಜದ ಸಮಸ್ಯೆಗಳ ನಡುವೆ ಕೆಲಸ ಮಾಡಿದ ವ್ಯಕ್ತಿಯಿಂದ ಕೇಳುವುದು ಮತ್ತೊಂದು ವಿಷಯ.

ಅವರ ಮಾತುಗಳನ್ನು ಕೇಳುತ್ತಾ ಹೋದಂತೆ, ನಾನು ಮೊದಲು ಓದಿದ್ದ ಅವರ ಪರಿಚಯಗಳು ನನ್ನ ಕಣ್ಣ ಮುಂದೆ ಒಂದೊಂದಾಗಿ ಬದಲಾಗುತ್ತಿದ್ದವು. ವಕೀಲೆ, ಅದು ಒಂದು ಪದ ಲೇಖಕಿ ಇನ್ನೊಂದು ಪದ, ಮಕ್ಕಳ ಹಕ್ಕುಗಳ ಪರವಾಗಿ ಕೆಲಸ ಮಾಡುವವರು ಮತ್ತೊಂದು ಪರಿಚಯ. ಆದರೆ ಆ ದಿನ ನನಗೆ ಅನಿಸಿದ್ದು, “ಇವು ಯಾವುದೂ ಅವರನ್ನು ಸಂಪೂರ್ಣವಾಗಿ ಪರಿಚಯಿಸುವುದಿಲ್ಲ.”

ಒಬ್ಬ ವಿದ್ಯಾರ್ಥಿಯಾಗಿ ನನಗೆ ಸಿಕ್ಕ ಪಾಠ

ನಾನು ಫಿಸಿಯೋಥೆರಪಿ ಓದುತ್ತಿದ್ದೇನೆ. ನನ್ನ ಕ್ಷೇತ್ರ ಕಾನೂನು ಅಲ್ಲ. ಆದರೆ ಅವರಿಂದ ನಾನು ಕಲಿತದ್ದು ಕಾನೂನಿಗೆ ಮಾತ್ರ ಸೀಮಿತವಾಗಿರಲಿಲ್ಲ. ಒಂದು ವೃತ್ತಿಯನ್ನು ಕೇವಲ ಉದ್ಯೋಗವನ್ನಾಗಿ ನೋಡಬಾರದು. ನಮಗೆ ಸಿಕ್ಕ ಜ್ಞಾನದಿಂದ ಇನ್ನೊಬ್ಬರ ಬದುಕಿಗೆ ಏನಾದರೂ ಮಾಡಬಹುದಾದರೆ, ಅದೇ ಆ ಜ್ಞಾನದ ನಿಜವಾದ ಅರ್ಥ. ಒಬ್ಬ ಫಿಸಿಯೋಥೆರಪಿ ಆಗಿ ನಾಳೆ ನಾನು ಒಬ್ಬ ರೋಗಿಯ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ಒಬ್ಬ ವಕೀಲೆಯಾಗಿ ಅವರು ಒಬ್ಬರ ಹಕ್ಕಿಗಾಗಿ ನಿಲ್ಲಬಹುದು.

ಒಬ್ಬ ಲೇಖಕಿಯಾಗಿ ಅವರು ಸಾವಿರಾರು ಜನರ ಮನಸ್ಸಿಗೆ ಒಂದು ಪ್ರಶ್ನೆ ತಲುಪಿಸಬಹುದು. ಮಾರ್ಗಗಳು ಬೇರೆ. ಆದರೆ ಉದ್ದೇಶ ಒಂದೇ — ಮನುಷ್ಯನ ಬದುಕನ್ನು ಸ್ವಲ್ಪವಾದರೂ ಉತ್ತಮಗೊಳಿಸುವುದು.  ಕೆಲವರು ನಮಗೆ ಉತ್ತರ ಕೊಡುವುದಿಲ್ಲ. ಪ್ರಶ್ನೆಗಳನ್ನು ಕೊಡುತ್ತಾರೆ. ಅಂಜಲಿ ರಾಮಣ್ಣ ಅವರನ್ನು ಭೇಟಿಯಾದ ನಂತರ ನನಗೆ ಬಂದ ದೊಡ್ಡ ಪ್ರೇರಣೆ ಇದೇ.
“ನಾನು ಮುಂದೆ ಏನಾಗಬೇಕು?” ಎಂಬ ಪ್ರಶ್ನೆಗೆ ಅವರು ನನಗೆ ಉತ್ತರ ಕೊಟ್ಟಿಲ್ಲ. ಅದರ ಬದಲು, “ನಾನು ಏನಾದರೂ ಆದ ಮೇಲೆ, ಅದನ್ನು ಯಾರಿಗಾಗಿ ಬಳಸುತ್ತೇನೆ?”
ಎಂಬ ಪ್ರಶ್ನೆಯನ್ನು ನನ್ನೊಳಗೆ ಬಿಟ್ಟರು.

ಅದು ಬಹುಶಃ ಅವರಿಂದ ನನಗೆ ಸಿಕ್ಕ ಅತ್ಯಂತ ಸುಂದರವಾದ ಪಾಠ.


  • ಉಮಾ ಅಂಜಲಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading