ಸಸಿ ಪ್ರಕಾಶನದಲ್ಲಿ ಮೂಡಿಬಂದ ಜಯರಾಮಾಚಾರಿ ಅವರ ‘ಗುಲಗಂಜಿ’ ಕಾದಂಬರಿಯ ಕುರಿತು ಲೇಖಕರಾದ ನಾಗೇಶ್ ಕುಮಾರ್ ಸಿ ಎಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಗುಲಗಂಜಿ
ಲೇಖಕರು : ಜಯರಾಮಾಚಾರಿ
ಪ್ರಕಾಶಕರು : ಸಸಿ ಪ್ರಕಾಶನ
ಬೆಲೆ : 240/-
ಪ್ರಕಾರ : ಕಾದಂಬರಿ
ಒಂದು ವೈಜ್ಞಾನಿಕ ಥ್ರಿಲರ್ ಬರೆಯುವುದು ತಂತಿಯ ಮೇಲೆ ನೆಡೆದಂತೆ. ಸ್ವಲ್ಪ ಅತ್ತಿತ್ತ ಹೋದರೂ ಆಯತಪ್ಪಬಹುದು. ನಾಳೆಯನ್ನು ಗೆದ್ದವನು ವೈಜ್ಞಾನಿಕ ಕಾಲಯಾನ ಕಾದಂಬರಿ ಬರೆದ ಸ್ವಾನುಭವದಿಂದ ಹೇಳುತ್ತಿದ್ದೇನೆ. ಹಲವು ವೈಜ್ಞಾನಿಕ ಸತ್ಯಗಳನ್ನು ವೈಯಕ್ತಿಕ ಕಥಾ ಹಂದರದಲ್ಲಿ ಬೆರೆಸಿ ಒಟ್ಟು ಹೂರಣವನ್ನು ನೀಡಬೇಕು. ಅಂತಹ ಒಂದು ಉತ್ತಮ ಪ್ರಯತ್ನವನ್ನು ಜಯರಾಮಾಚಾರಿಯವರು ಗುಲಗಂಜಿ ಎಂಬ ಹೊಸ ಕಾದಂಬರಿಯಲ್ಲಿ ಮಾಡಿದ್ದಾರೆ.

ಈ ಜಾನರ್ ನಲ್ಲಿ ಬರೆಯುವವರೇ ಇಲ್ಲ ಎಂದು ನಾನು ವ್ಯಥೆ ಪಡುತ್ತಿದ್ದಾಗ ಹೊಸಬರೊಬ್ಬರ ಉದಯ ಮತ್ತು ಅವರ ಕೃತಿಯ ಪ್ರಕಟನೆ ಆಗಿದೆ. ಇದಕ್ಕಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು, ಅವರಿಗೆ ಶುಭವಾಗಲಿ. ಅರ್ಹ ಯಶಸ್ಸು ಸಿಗಲಿ.
ಇದರಲ್ಲಿ ದಶಕಗಳ ಹಿಂದಿನ ಸರಣಿ ಕ್ರೈಮ್ ಒಂದರ ಕಥಾ ಹಂದರವಿದೆ. ನಾಯಕ ಅದನ್ನು ಕಾಲಯಾನ ಮಾಡಿ ಪತ್ತೆ ಮಾಡಿ, ಅಪರಾಧಿಯನ್ನು ರೋಚಕವಾಗಿ ಹಿಡಿದು ಕಾನೂನಿಗೆ ಕೊಡುವ ಕಥಾವಸ್ತು ಇದೆ. ಇದನ್ನು ಲೇಖಕರು ತಮ್ಮ ಸ್ಟೈಲಿಷ್ ಚಿತ್ರಕಥೆಯ ಶೈಲಿಯಲ್ಲಿ ಬರೆದು ಪ್ರಸ್ತುತಪಡಿಸಿದ್ದಾರೆ. ಕಥೆಯ ವಿವರಗಳ ಬಗ್ಗೆ ಹೆಚ್ಚು ಹೇಳುವುದಿಲ್ಲ, ನಿಮಗೆ ರಸಭಂಗವಾದೀತು, ಗುಟ್ಟು ರಟ್ಟಾದೀತು.

ಇವರ ಕೈಯಿಂದ ಇನ್ನೂ ಉತ್ತಮವಾದ ವೈಜ್ಞಾನಿಕ ಕಥೆಗಳು ಮೂಡಿ ಬರಲಿ ಎಂದು ಹಾರೈಸುವೆ. ಗುಲಗಂಜಿ ಕಾದಂಬರಿ ಚೆನ್ನಾಗಿದೆ. ಕನ್ನಡದ ಓದುಗರು ಅದನ್ನು ಕೊಂಡು ಓದಬೇಕು.
- ನಾಗೇಶ್ ಕುಮಾರ್ ಸಿ ಎಸ್ – ಪತ್ತೇದಾರಿ ಕಾದಂಬರಿಕಾರರು, ಬೆಂಗಳೂರು.
