ಸಂದೀಪ್ ಶರ್ಮಾ ಅವರ ‘ಕಥಾಕಥಿತ’ ಪುಸ್ತಕವು ೧೩ ಸಣ್ಣ ಕಥೆಗಳುಳ್ಳ ಸುಂದರ ಕಥಾಲಹರಿ. ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ಕಥಾಕಥಿತ
ಲೇಖಕರು: ಸಂದೀಪ್ ಶರ್ಮಾ
ಪ್ರಕಾಶಕರು: ಪುಸ್ತಕಗಾರ Pustakagara Bly
ಪ್ರಥಮ ಮುದ್ರಣ: ೨೦೨೬
ಪುಟಗಳು: ೧೦೦
ಬೆಲೆ: ₹೧೫೦/-
ಕಥಾಕಥಿತ: 13 ಕಥೆಗಳ ಜೀವನದ ಪ್ರತಿಬಿಂಬ
ಸಂದೀಪ್ ಶರ್ಮಾ ಲೇಖಕರು ಈ ಎಲ್ಲಾ ಕಥೆಗಳ ಮೂಲಕ ಜೀವನದ ಸೂಕ್ಷ್ಮ ಸಂವೇದನೆಗಳು, ಮಾನವ ಸಂಬಂಧಗಳು, ಮನುಷ್ಯನ ಮನೋಭಾವಗಳು ಹಾಗೂ ಸಮಾಜದ ವಿವಿಧ ಮಜಲುಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಈ ಕಥೆಗಳಲ್ಲಿನ ಪಾತ್ರಗಳು ನಮ್ಮ ಸುತ್ತಮುತ್ತಲಿನ ಬದುಕಿನ ಪ್ರತಿಬಿಂಬಗಳಂತೆ ಭಾಸವಾಗುತ್ತವೆ.
ಬದುವಿನ ಬಲಿಪೀಠ: ಸಣ್ಣತನ, ಸಂಶಯ ಮತ್ತು ಸ್ವಾರ್ಥದಿಂದಾಗಿ ಕೃಷ್ಣಾ-ತುಂಗಾರ ಜೋಡಿಯಂತಿದ್ದ ಸ್ನೇಹಿತರು ಶತ್ರುಗಳಾಗಿ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಸುಂದರವಾಗಿ ಕಳೆಯಬೇಕಿದ್ದ ಜೀವನವನ್ನು ನರಕವನ್ನಾಗಿಸಿಕೊಂಡ ಕಥೆಯಿದು. ಮನುಷ್ಯನಿಗೆ ತಾಳ್ಮೆ ಅತ್ಯಗತ್ಯ ಹಾಗೂ ಅಹಂಕಾರ ವಿನಾಶಕ್ಕೆ ಹಾದಿ ಎಂಬುದನ್ನು ಈ ಕಥೆ ಮಾರ್ಮಿಕವಾಗಿ ಅರ್ಥೈಸುತ್ತದೆ.

ಇ-ವ್ಯಾಲೆಟ್: ಈ ಕಥೆಯು ಬಿಟ್ಕಾಯಿನ್ ದಂಧೆಯನ್ನು ಪರಿಚಯಿಸುವುದರ ಜೊತೆಗೆ, ‘ಅತಿ ಆಸೆ ಗತಿಕೇಡು’ ಎಂಬ ನೀತಿಯನ್ನು ಓದುಗರಿಗೆ ಮನದಟ್ಟು ಮಾಡಿಸುತ್ತದೆ.
ಸೋಗು: ಈ ಕಥೆಯನ್ನು ಓದಿದಾಗ ಮನಸ್ಸಿನಲ್ಲಿ ಒಂದು ರೀತಿಯ ವಿಷಾದ ಮೂಡುತ್ತದೆ. ಮಕ್ಕಳನ್ನು ಬೆಳೆಸಿ, ಅವರ ಭವಿಷ್ಯಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ತಂದೆಯು ವೃದ್ಧಾಪ್ಯದಲ್ಲಿ ಮಕ್ಕಳ ಪ್ರೀತಿಗಾಗಿ ಹಂಬಲಿಸುವ ಪರಿಸ್ಥಿತಿ ನಿಜಕ್ಕೂ ನೋವಿನ ಸಂಗತಿ. ರುದ್ರೇಗೌಡರ ಪಾತ್ರದ ಮೂಲಕ ಲೇಖಕರು ವೃದ್ಧಾಪ್ಯದ ಅಸಹಾಯಕತೆಯನ್ನು ಮಾತ್ರವಲ್ಲದೆ, ಸ್ವಾಭಿಮಾನದಿಂದ ಬದುಕುವ ಮನುಷ್ಯನ ಮನದಾಳದ ಆಸೆಗಳನ್ನು ತೆರೆದಿಟ್ಟಿದ್ದಾರೆ. ಮಕ್ಕಳ ಮನೆಗೆ ಹೋದಾಗ ಬಾಗಿಲು ತೆರೆಯದಿರುವ ಪ್ರಸಂಗ ಓದುಗರ ಮನಸ್ಸನ್ನು ಕಲಕುತ್ತದೆ. ಕೊರೊನಾ ಎಂಬ ಮಹಾಮಾರಿಯ ನಡುವೆ ಮಾನವೀಯ ಸಂಬಂಧಗಳಿಗೂ ಸೋಂಕು ತಗುಲಿದೆಯೇ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ವೃದ್ಧಾಪ್ಯದ ನೋವು, ಮಕ್ಕಳ ನಿರ್ಲಕ್ಷ್ಯ, ಕುಟುಂಬದ ಜವಾಬ್ದಾರಿ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಸಾರುವ ಹೃದಯಸ್ಪರ್ಶಿ ಕಥೆಯಿದು.
ಚಿಮಣಿ ದೀಪ: ಅರುಣಾಚಲಂ ಹಲವಾರು ಮನೆಗಳನ್ನು ಕಟ್ಟಿ, ಎಲೆಕ್ಟ್ರಿಕ್ ಮತ್ತು ಪೇಂಟಿಂಗ್ ಕೆಲಸಗಳನ್ನು ಮಾಡುತ್ತಿರುತ್ತಾನೆ. ಕೆಲಸ ಎಲ್ಲಿ ಇರುತ್ತದೆಯೋ ಅದರ ಸಮೀಪವೇ ಜಿಂಕ್ ಶೀಟ್ ಹಾಕಿಕೊಂಡು ವಾಸಸ್ಥಾನ ಮಾಡಿಕೊಂಡಿರುತ್ತಾನೆ. ದಿನವೂ ಬೀದಿ ದೀಪವನ್ನು ಆರಿಸುವುದು ಆತನ ರೂಢಿ. ಒಮ್ಮೆ ಆತನಿಗೆ ಸಿಗುವ ಲೈನ್ಮ್ಯಾನ್ ರಾಚಯ್ಯ, “ನನ್ನ ಕೆಲಸವನ್ನು ನೀನೇ ಮಾಡುತ್ತೀಯಾ? ನೋಡೋಣ, ನಿನ್ನ ಮನೆಗೆ ಹೋಗೋಣ” ಎಂದು ಕರೆದು ಮನೆಯೊಳಗೆ ಪ್ರವೇಶಿಸಿದಾಗ, ಇಟ್ಟಿಗೆ ಗೂಡಿನಂತಹ ಮನೆಯಲ್ಲಿ ಚಿಮಣಿ ದೀಪದಡಿ ಅರುಣಾಚಲಂನ ಮೊಮ್ಮಕ್ಕಳು ಓದುವ ದೃಶ್ಯ ಕಂಡು ಬೆರಗಾಗುತ್ತಾನೆ. ಹಲವಾರು ಮನೆಗಳಿಗೆ ಬೆಳಕು ಕೊಡುವ ಅರುಣಾಚಲಂ, ತನ್ನ ಮನೆಯೇ ಕತ್ತಲಲ್ಲಿದ್ದರೂ ಅದರ ಪರಿವೆಯೇ ಇಲ್ಲದಂತೆ ಬದುಕುವ ರೀತಿ ಎಂಥವರ ಮನವನ್ನೂ ತಟ್ಟುತ್ತದೆ.

ಪಲ್ಲಟ: ಈ ಕಥೆಯಲ್ಲಿ ಲೇಖಕರು ಪ್ರೀತಿ ಮತ್ತು ಸಂಪ್ರದಾಯಗಳ ನಡುವಿನ ಸಂಘರ್ಷವನ್ನು ಅತ್ಯಂತ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ಶಿಕ್ಷಣ, ಉದ್ಯೋಗ ಮತ್ತು ನಗರ ಜೀವನದಲ್ಲಿ ಬೆಳೆದ ಯುವಕನೂ ತನ್ನ ಕುಟುಂಬದ ಹಳೆಯ ನಂಬಿಕೆಗಳ ಮುಂದೆ ಹೇಗೆ ಅಸಹಾಯಕನಾಗುತ್ತಾನೆ ಎಂಬುದನ್ನು ಮುಕುಂದನ ಪಾತ್ರದ ಮೂಲಕ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಲೇಖಕರ ಸರಳವಾದ ನಿರೂಪಣೆ, ಕುತೂಹಲ ಮೂಡಿಸುವ ಕಥನಶೈಲಿ ಹಾಗೂ ಚಿಂತನೆಗೆ ಹಚ್ಚುವ ವಿಷಯಗಳು ಈ ಕೃತಿಯ ಓದಿನ ಅನುಭವವನ್ನು ಓದುಗರಿಗೆ ಆಸಕ್ತಿದಾಯಕವಾಗಿಸುತ್ತವೆ ಎಂಬುದು ನನ್ನ ಅನಿಸಿಕೆ. ಈ ಎಲ್ಲಾ ಕಥೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಬದುಕಿನ ಹಲವು ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುವಂತಿವೆ. ‘ಕಥಾಕಥಿತ’ ಕಥಾಸಂಕಲನವು ಎಲ್ಲಾ ಓದುಗರ ಗ್ರಂಥಾಲಯವನ್ನು ಸೇರಲಿ.
- ಚೇತನ ಭಾರ್ಗವ – ವಿಮರ್ಶಕರು, ಲೇಖಕರು, ಬೆಂಗಳೂರು.
