ಮೌನ ಮಾತಾದಾಗ (ಭಾಗ-೧)

ಉಪೇಂದ್ರ ಅವರ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದಂತೆ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡು ಬಂತು. ಆಗ ಧನರಾಜ್ ಅವರು ಉಪೇಂದ್ರ ಅವರಿಗೆ ಎಸ್ಟೀಮ್ ಕಾರು ಉಡುಗೊರೆಯಾಗಿ ಕೊಟ್ಟು ಮತ್ತೆ ವಾಪಸ್ ಪಡೆದುಕೊಂಡರು. ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೊಂಡು ಅವರು ಸಿನಿಮಾ ಜಗತ್ತಿನ ಕುರಿತು ರೋಚಕ ಕತೆಯನ್ನು ಓದುಗರ ಮುಂದಿಡುತ್ತಿದ್ದಾರೆ. ತಪ್ಪದೆ ಮುಂದೆ ಓದಿ…

ಉಪೇಂದ್ರರಿಗೆ ಅಡ್ವಾನ್ಸ್ ಆಗಿ ಗಿಫ್ಟ್ ಕೊಟ್ಟ ಎಸ್ಟೀಮ್ ಕಾರನ್ನು ವಾಪಾಸ್ಸು ಪಡೆದ ಧನರಾಜ್. ಉಪೇಂದ್ರರಾವ್ ಆಗಿದ್ದ ಉಪೇಂದ್ರ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿದ ಚಿತ್ರ ‘A’. 28 ವರ್ಷಗಳ ಹಿಂದೆ ತೆರೆ ಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದ್ದು ಈಗ ಇತಿಹಾಸ. ‘ಓಂ’, ‘ಶ್’ ಸಿನಿಮಾಗಳು ಉಪೇಂದ್ರರಿಗೆ ದೊಡ್ಡ ರೀತಿಯಲ್ಲಿ ಹೆಸರು ತಂದು ಕೊಟ್ಟಿದ್ದು ನಿಜ. ಆದರೆ ನಾಯಕನಟರಾಗಿ ಪ್ರಮೋಟ್ ಮಾಡಿದ ಚಿತ್ರ ‘A’.

ಈ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಇದೇ ಉಪೇಂದ್ರ ನಿರ್ಮಾಪಕ ಧನರಾಜ್ ಅವರಿಗಾಗಿ ಒಂದು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದರು. ಆ ಕಾಲದಲ್ಲಿ ಉಪೇಂದ್ರ ಕ್ರೇಜ್ ಹೇಗಿತ್ತೆಂದರೆ ನಿರ್ಮಾಪಕರು ಉಪೇಂದ್ರ ಮನೆ ಮುಂದೆ ಕ್ಯೂನಲ್ಲಿ ನಿಂತಿದ್ದರು ಎಂದರೆ ಅದು ಅತಿಶಯೋಕ್ತಿಯಾದೀತು! ಆದರೆ ಇದೇ ನಿರ್ಮಾಪಕರು ನಾ ಮುಂದು, ತಾ ಮುಂದೆಂದು ಹಣದ ಚೀಲ ಹಿಡಿದುಕೊಂಡು ಉಪೇಂದ್ರರ ಕಾಲ್ಶೀಟ್’ಗಾಗಿ ಕಾದಿರುತ್ತಿದ್ದುದಂತೂ ನಿಜ! ಹೀಗೆ ಕಾಯದೇ ನೇರವಾಗಿ ಉಪೇಂದ್ರರನ್ನು ಭೇಟಿಯಾಗಿ ಅಡ್ವಾನ್ಸ್ ಕೊಟ್ಟು ಮೊದಲು ಕಾಲ್ಶೀಟ್ ಬುಕ್ ಮಾಡಿಕೊಂಡವರೇ ಈ ಧನರಾಜ್.

ಉಪೇಂದ್ರ ನಿರ್ದೇಶಿಸುವ ಸಿನಿಮಾದ ಶೈಲಿ ಡಿಫರೆಂಟ್ ಅಲ್ವಾ? ಹೀಗಾಗಿ ಧನರಾಜ್ ಡಿಫರೆಂಟಾಗಿ ಅವರಿಗೆ ಅಡ್ವಾನ್ಸ್ ಕೊಡಲು ನಿರ್ಧರಿಸಿದರು. ಕ್ಯಾಶ್ ಕೊಡುವ ಬದಲು ಒಂದು ಮಾರುತಿ ಎಸ್ಟೀಮ್ ಕಾರನ್ನು ಉಡುಗೊರೆಯ ನೆಪದಲ್ಲಿ ಅಡ್ವಾನ್ಸ್ ಕೊಟ್ಟು ಬಿಟ್ಟರು ಧನರಾಜ್. ಹೀಗೆ ಭರ್ಜರಿಯಾಗಿ ಉಪೇಂದ್ರರಿಗೆ ಅಡ್ವಾನ್ಸ್ ಕೊಡುವ ಗಿಫ್ಟ್ ರೂಪದ ಎಸ್ಟೀಮ್ ಕಾರಿನ ಎದುರು ನಿಂತಿರುವ ಫೋಟೋವೊಂದನ್ನು ಆಗ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿದ್ದ ನನಗೆ ಧನರಾಜ್ ಕಳಿಸಿಕೊಟ್ಟರು.

ಈ ಸುದ್ದಿಯನ್ನು ಫೋಟೋ ಸಮೇತ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಿನಿಮಾ ವಿಭಾಗದ ಮೊದಲ ಪುಟದಲ್ಲೇ ಪ್ರಿಂಟ್ ಮಾಡಿಸಿದ್ದಿನ್ನೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚ ಹಸಿರಾಗಿಯೇ ಉಳಿದಿದೆ…

ವಿಷಯ ಇದಲ್ಲ, ಮುಂದೆ ನಡೆದ ನಾಟಕೀಯ ವಿದ್ಯಮಾನವನ್ನು ನೀವು ಓದಿದರೆ ‘ಛೇ ಹೀಗೂ ಉಂಟೇ?’ ಎಂದು ಹೇಳಿ ಮೂಗಿನ ಮೇಲೆ ಬೆರಳಿಡದಿದ್ದರೆ ಕೇಳಿ! ಮುಂದೆ ಏನಾಯ್ತಪ್ಪಾ ಅಂದರೆ :

ಅವರ ಚಿತ್ರಗಳು ಸೂಪರ್ ಹಿಟ್ ಆಗುತ್ತಿರುವಂತೆಯೇ ಉಪೇಂದ್ರರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಕನ್ನಡಲ್ಲಿ ಹೇಗೋ ಹಾಗೆಯೇ ಪಕ್ಕದ ಆಂಧ್ರಪ್ರದೇಶದಿಂದಲೂ ಡಿಮ್ಯಾಂಡ್ ಬಂದೇ ಬಂತಲ್ಲಾ? ಒಂದು ಕೈಲಿ ಧನರಾಜ್ ಅವರ ಕನ್ನಡ ಸಿನಿಮಾ, ಮತ್ತೊಂದು ಕೈಲಿ ತೆಲುಗು ಸಿನಿಮಾ! ಯಾವುದನ್ನು ಆಯ್ಕೆ ಮಾಡಿಕೊಂಡರು ಉಪೇಂದ್ರ? ಆಫ್ಕೋರ್ಸ್ ತೆಲುಗು ಚಿತ್ರವನ್ನೇ ಒಪ್ಪಿಕೊಂಡು ಹೈದರಾಬಾದಿಗೆ ಹೊರಟೆ ಬಿಟ್ಟರು! ಇಲ್ಲಿ ಎಸ್ಟೀಮ್ ಕಾರನ್ನು ಉಡುಗೊರೆಯ ನೆಪದಲ್ಲಿ ಅಡ್ವಾನ್ಸ್ ಕೊಟ್ಟ ಧನರಾಜ್ ಮಂಗ ಆಗಿ ಬಿಟ್ರು! ನಖಶಿಖಾಂತ ಕೋಪದಿಂದ ನಡುಗಿ ಬಿಟ್ಟರು ಧನರಾಜ್. ಇನ್ನು ಕಾಯುವುದು ಮೂರ್ಖತನ ಅನಂತಂದುಕೊಂಡ ಧನರಾಜ್ ತಕ್ಷಣವೇ ತಾವು ಅಡ್ವಾನ್ಸಾಗಿ ಕೊಟ್ಟ ಎಸ್ಟೀಮ್ ಕಾರನ್ನು ವಾಪಾಸ್ಸು ಕೊಡುವಂತೆ ತಾಕೀತು ಮಾಡಿದರು. ಅನ್ಯ ಮಾರ್ಗ ಕಾಣದ ಉಪೇಂದ್ರ ಆ ಕಾರನ್ನು ಧನರಾಜ್ ಅವರಿಗೆ ವಾಪಸ್ಸು ಕೊಟ್ಟ ಸಿನಿಮೀಯ ಘಟನೆಯೂ ನಡೆಯಿತು.

ಉಪೇಂದ್ರರಿಗೆ ಕಾರಿನ ಕೀ ಕೊಡುವಾಗ ಕ್ಲಿಕ್ ಮಾಡಿರುವ ಫೋಟೋವನ್ನು ನನಗೆ ಕಳಿಸಿಕೊಟ್ಟಿದ್ದ ಧನರಾಜ್, ಅದನ್ನು ವಾಪಾಸ್ಸು ಮಾಡುವ ಫೋಟೋವನ್ನು ಕಳಿಸಿಕೊಡಲಿಲ್ಲ. ಮುಂದೆ ಅದೇ ಧನರಾಜ್ ಅವರು ಉಪೇಂದ್ರರ ಕೈಲಿ ‘H2O’ ಸಿನಿಮಾವನ್ನು ನಿರ್ಮಿಸಿದ್ದು ಮತ್ತು ಇನ್ನೊಂದು ದೊಡ್ಡ ನಾಟಕಕ್ಕೆ ಕಾರಣವಾದ ಹಾಸ್ಯಾಸ್ಪದ ಘಟನೆಯನ್ನು ಇನ್ನೊಮ್ಮೆ ಹೇಳುವೆ.


  • ಗಣೇಶ ಕಾಸರಗೊಂಡು – ಖ್ಯಾತ ಪತ್ರಕರ್ತರು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×