ಕಳ್ಳರು ಹೆದರಿಸಿ ಲಗೇಜ್ ಹೊತ್ತೊಯ್ದರೆ ? ಗೃಹಮಂತ್ರಿ ಏನು ಮಾಡುತ್ತಾರೆ? ವಿಶ್ರಾಂತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಅವರು ಬರೆದ ಸಣ್ಣಕತೆಯನ್ನು ಪೂರ್ತಿಯಾಗಿ ಓದಿ…
ಕಳೆದ ವರ್ಷ ಅಮೆರಿಕಾದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಫ್ಲೈಬಸ್ ನಲ್ಲಿ ಮೈಸೂರು ಬಸ್ ಸ್ಟಾಂಡಿಗೆ ಬಂದಿಳಿದೆ. ನಾಲ್ಕು ದೊಡ್ಡ ಸೂಟ್ ಕೇಸುಗಳು ಸೇರಿ ಒಟ್ಟು ಹನ್ನೊಂದು ಮರಿ ಸೂಟ್ ಕೇಸು ಬ್ಯಾಗುಗಳು ಎಲ್ಲವನ್ನೂ ಇಳಿಸಿಕೊಂಡೆ. ಆಗ ಬೆಳಗಿನ ಜಾವ ನಾಲ್ಕು ಗಂಟೆ. ಅಲ್ಲಿಂದ ಮೆಯ್ನ್ ರೋಡಿಗೆ ಹೋಗಿ, ಚೌಕಾಸಿ ಮಾಡಿ ಟ್ಯಾಕ್ಸಿ ಗೊತ್ತು ಮಾಡಿಕೊಂಡು ಬರಬೇಕು. ನಂತರವೇ ಲಗೇಜನ್ನು ಕೂಲಿ ಸಹಾಯದಿಂದ ಕೊಂಡೊಯ್ಯಬೇಕು. ಟ್ಯಾಕ್ಸಿಯವರೋ ಪುಕ್ಷಟ್ಟೆ ಬರುವವರಂತೆ ಎರ್ರಾಬಿರ್ರಿ ತಕರಾರು ಮಾಡುತ್ತಾರೆ.
ಲಗೇಜನ್ನು ನೋಡಿಕೊಳ್ಳಲು ಪತ್ನಿಯೊಬ್ಬಳನ್ನೆ ಬಿಟ್ಟು ಹೋಗಲೂ ಭಯ. ಬಸ್ಸಿಳಿವ ( alighting area ) ಜಾಗದಲ್ಲಿ ಜನರು ನಿಲ್ಲುವುದಿಲ್ಲ. ಬಸ್ ಹೊರಟರೆ ಸಾಕು ನಿರ್ಜನವಾಗಿ ಬಿಡುತ್ತದೆ. ಮಸುಕು ಬೆಳಕು ಬೇರೆ.
ಕಳ್ಳರು ಹೆದರಿಸಿ ಲಗೇಜ್ ಹೊತ್ತೊಯ್ದರೆ ? ಹೆದರಿಸೋದೇನು? ಹೆಕ್ಕತ್ತಿನ ಮೇಲೆ ಅಪ್ಪಳಿಸಿ ಹೊತ್ತುಕೊಂಡು ಹೋಗೇ ಬಿಡುತ್ತಾರೆ . ಟ್ಯಾಕ್ಸಿ ಗೊತ್ತು ಮಾಡಿಕೊಂಡು ಬರುವಷ್ಟರಲ್ಲಿ ಯಾವ ಅನಾಹುತವಾದರೂ ಆಶ್ಚರ್ಯವಿಲ್ಲ ? ಅನತಿ ದೂರದಲ್ಲಿ ಕಾನ್ಸ್ಟೇಬಲ್ ಒಬ್ಬ ನಿಂತಿದ್ದ. ಆತನಿಗೆ ಪರಿಸ್ಥಿತಿ ಹೇಳಿ ” ಸ್ವಲ್ಪ ಲಗೇಜ್ ಇಟ್ಟಿರೋ ಜಾಗದ ಬಳಿ ನಿಗಾ ಇಡ್ತೀರಾ ? ” ಎಂದು ಕೇಳಿದೆ.
” ಪರ್ವಾಗಿಲ್ಲ ಸಾರ್… ಹೋಗಿಬನ್ನಿ. ಇಲ್ಲಿ ಅಂಥದೇನೂ ಆಗೋದಿಲ್ಲ ” ಎಂದ ನಿರ್ಲಕ್ಷ್ಯವಾಗಿ.
” ನಾನು ರಿಟೈರ್ಡ್ ಡಿವೈಎಸ್ಪಿ ” ಎಂದು ಮೆತ್ತಗೆ ಶೋಚನೀಯವಾಗಿ ಪರಿಚಯ ಹೇಳಿಕೊಂಡೆ. ಆತ ನಸುನಗುತ್ತಾ , ” ಗೊತ್ತಾಯ್ತು ಬುಡಿ ಸಾರ್. ನೀವಿಲ್ಲೇ ಸರ್ವೀಸ್ ಮಾಡಿದೋರಲ್ವಾ? ಸುತ್ತಾ ಸಿಸಿ ಕ್ಯಾಮರಾಗಳಿವೆ. ನಿಮ್ಮ ಮೇಡಮ್ಮೋರು ನಿಂತಿರೋ ಜಾಗದಲ್ಲೆ ನಾಲ್ಕು ಕ್ಯಾಮರಾಗಳಿವೆ. ಯಾವ ನನ್ಮಗನಿಗೆ ಬರೋಕೆ ದಮ್ಮಿದೆ ? ನೀವು ಧೈರ್ಯವಾಗಿ ಹೋಗಿ ಅರ್ಧಗಂಟೆ ಬಿಟ್ಟು ಬಂದರೂ ಏನೂ ಆಗೋದಿಲ್ಲ!” ಎಂದ.
” ಓಹ್ ಹೌದಾ? ” ಬಾಯ್ಬಿಟ್ಟೆ ಅಚ್ಚರಿಯಿಂದ.
” ನಿಮ್ಮ ಕಾಲದಂಗಿಲ್ಲ ಸಾರ್ ಈಗಿನ ಪೊಲೀಸಿಂಗ್. ಕಂಟ್ರೋಲ್ ರೂಂನಲ್ಲಿ 24 ಗಂಟೆಯೂ ಮಾನಿಟರ್ ಮಾಡತಿರ್ತಾರೆ. ರೆಡಿ ಗರುಡಗಳಿವೆ ( ಹೊಯ್ಸಳ ) ಹತ್ತು ನಿಮಿಷದಲ್ಲಿ ಯಾರನ್ನಾದ್ರೂ ಹಿಡಿದು ಹಾಕಬೌದು ”
ಒಂದೇ ಬಾರಿಗೆ ಹತ್ತು ಆನೆಬಲ ಬಂತು. ಕಾರು ಹಮಾಲಿ ಗೊತ್ತುಪಡಿಸಿ ಆರಾಮಾಗಿ ಲಗೇಜ್ ಸಾಗಿಸಿದೆ. ಇಂಗು ತೆಂಗಿದ್ರೆ ಮಂಗಮ್ಮನೂ ಸೊಗಸಾದ ಅಡುಗೆ ಮಾಡ್ತಾಳೆ. ಗೃಹಮಂತ್ರಿಯೇ ಹೇಳಲಿ , ಬಿಡಲಿ ನಮ್ಮ ಪೊಲೀಸ್ನೋರು ಪತ್ತೆ ಮಾಡೇ ಮಾಡ್ತಾರೆ.
- ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು.
