ಲೇಖಕರಾದ ಬನವಾಸಿ ವೆಂಕಟೇಶ ದೀಕ್ಷಿತ್ ಅವರ ‘ಮಾವಿವಕುರ್ವೆ ಬೀಗ ಮತ್ತು ಇತರ ಕಥೆಗಳು’ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ಮಾವಿವಕುರ್ವೆ ಬೀಗ ಮತ್ತು ಇತರ ಕಥೆಗಳು
ಲೇಖಕರು: ಬನವಾಸಿ ವೆಂಕಟೇಶ ದೀಕ್ಷಿತ್
ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್
ಮುದ್ರಣ: 2025
ಪುಟಗಳು: 146
ಬೆಲೆ: 200/-
ಮಾನವ ಸಂಬಂಧಗಳ ಭಾವ ಲೋಕವೇ. ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು. ಬನವಾಸಿ ವೆಂಕಟೇಶ ದೀಕ್ಷಿತ್ ರವರ ಮಾವಿನಕುರ್ವೆ ಮತ್ತು ಇತರ ಕಥೆಗಳು ಎಂಬ ಕಥಾಸಂಕಲನದಲ್ಲಿ ಒಟ್ಟು ಒಂಬತ್ತು ನೀಳ್ಗತೆಗಳಿವೆ. ಈ ಎಲ್ಲಾ ಕಥೆಗಳು ಸಮಾಜದ ಒಂದೊಂದು ಮಗ್ಗಲುಗಳನ್ನು ಪರಿಚಯಿಸುತ್ತದೆ. ಮನುಷ್ಯನ ಸ್ವಭಾವ, ಆಸೆ ಆಕಾಂಕ್ಷೆ, ನಂಬಿಕೆ, ನೋವು ನಿರೀಕ್ಷೆ ಹಾಗೂ ಸಂಬಂಧಗಳಲ್ಲಿನ ಸೂಕ್ಷ್ಮತೆಯನ್ನು ಕಥೆಗಳಲ್ಲಿ ಕಾಣಬಹುದಾಗಿದೆ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ, ಆಧುನಿಕ ಜೀವನ ಶೈಲಿ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಘರ್ಷಗಳ ಮೇಲೂ ಈ ಕಥೆಗಳು ಬೆಳಕು ಚೆಲ್ಲುತ್ತದೆ.
ಬೊಗಸೆಗೆ ಬಾ ಬೆಳದಿಂಗಳೆ: ಈ ಕಥೆಯು ಹೆಣ್ಣೊಬ್ಬಳ ಅಸಹಾಯಕತನವನ್ನು ನಿದರ್ಶಿಸುತ್ತದೆ. ಕಾಶವ್ವನಿಗೆ ಮೂರು ಜನ ಹೆಣ್ಣು ಮಕ್ಕಳು. ಹಿರಿಯ ಮಗಳು ಪದ್ಮಾವತಿ. ತನ್ನ ಮನೆಯ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು, ದೂರದ ಊರಿನ ವರನಿಂದ ಹಣ ಪಡೆದು ಅವಳನ್ನು ವಿವಾಹ ಮಾಡಿಕೊಟ್ಟು, ಕ್ರೂರವಾದ ಅಸಹ್ಯ ಸ್ಥಿತಿಗೆ ತಳ್ಳಿ, ಪದ್ಮಾವತಿಯ ಜೀವನವನ್ನೇ ಬಲಿ ಕೊಟ್ಟ ಮನ ಮಿಡಿಯುವ ಕಥೆ ಇದಾಗಿದೆ.

ಬದುಕಿನಲ್ಲಿ ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ಮಹತ್ವವಿದೆ. ಮಾನವೀಯತೆ ಮತ್ತು ಪರಸ್ಪರ ಗೌರವದಿಂದ ಬದುಕುವುದೇ ನಿಜವಾದ ಜೀವನ ಮೌಲ್ಯ ಎಂಬ ಚಿಂತನೆಯನ್ನು ಈ ಕಥೆಯು ಓದುಗನಿಗೆ ಮೂಡಿಸುತ್ತದೆ.
ದೇಹದಾನ: ಈ ಕಥೆಯ ನಾಯಕಿ ಹಾಸಿನಿ, ತಂದೆಯ ಬಲವಂತದಿಂದ ಆತ ತೋರಿಸಿದ ವರ ಘನಶ್ಯಾಮ ನೊಂದಿಗೆ ವಿವಾಹವಾಗುತ್ತಾಳೆ. ಮಧುಚಂದ್ರಕ್ಕೆಂದು ಅವರಿಬ್ಬರು ಹೋದಾಗ, “ನಿನಗೆ ನಾನು ದೇಹದಾನ ವನ್ನು ಮಾತ್ರ ಮಾಡಿದ್ದೇನೆ” ಎಂದು ಸೂಕ್ಷ್ಮವಾಗಿ ತನ್ನ ಗತ ಜೀವನದ ಬಗ್ಗೆ ಘನಶ್ಯಾಮ ನಿಗೆ ಹೇಳುತ್ತಾಳೆ. ಅಂದಿನಿಂದ ಅವನಿಗೆ ದೇಹ ದಾನ ಎಂಬ ಪದವನ್ನು ಕೇಳಿದರೆ ಮನಸ್ಸಿನಲ್ಲಿ ಕಸಿವಿಸಿ ಉಂಟಾಗುತ್ತಿರುತ್ತದೆ. ಆದರೂ ಹಾಸಿನಿ ಮದುವೆಯಾದ ನಂತರ ತನ್ನ ದಾಂಪತ್ಯ ಜೀವನಕ್ಕೆ ಬದ್ಧಳಾಗಿ ಪ್ರಾಮಾಣಿಕಳಾಗಿ ಸಂಸಾರ ಮಾಡುತ್ತಿರುತ್ತಾಳೆ. ಆಕೆಯ ಕೊನೆಯ ದಿನಗಳಲ್ಲಿ ತನ್ನ ಮರಣ ನಂತರ ವೈದ್ಯಕೀಯ ಅಧ್ಯಯನಕ್ಕಾಗಿ ದೇಹದಾನ ಮಾಡುತ್ತಾಳೆ. ಕೊನೆಯಲ್ಲಿ ಘನಶ್ಯಾಮನಲ್ಲಿ ಆಗುವ ಪರಿವರ್ತನೆಯು ಈ ಕಥೆಗೆ ಅನಿರೀಕ್ಷಿತ ತಿರುವನ್ನು ನೀಡುತ್ತದೆ. ಈ ಕಥೆಯಲ್ಲಿ ದೇಹದಾನ ಎನ್ನುವುದಕ್ಕೆ ದ್ವಂದ್ವಾರ್ಥವಿದೆ.
ಮಾವಿನಕುರ್ವೆ ಬೀಗ: ಮಾವಿನಕುರ್ವೆ ಬೀಗ ಒಂದು ಕಾಲದಲ್ಲಿ ಹೆಸರುವಾಸಿಯಾದ ಬೀಗ. ಆ ಬೀಗವನ್ನು ಈಶ್ವರ ಎನ್ನುವವರು ತಯಾರಿಸುತ್ತಿದ್ದರು. ಕೆಟ್ಟದೊಂದು ಗಳಿಗೆಯಲ್ಲಿ ಅವರು ತಮ್ಮ ಸ್ಮರಣ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಿ ಈಶ್ವರ ರವರ ಎಲ್ಲಾ ಆಸ್ತಿಯು ಕೈತಪ್ಪಿ ಹೋಗುತ್ತದೆ ಎಂಬ ದುರಾಸೆಯಿಂದ ಅವರ ಇಬ್ಬರು ತಮ್ಮಂದಿರು ಮತ್ತು ಅಕ್ಕ-ತಂಗಿಯರು ಈಶ್ವರನ ಹೆಂಡತಿಗೆ ಮರು ಮದುವೆ ಮಾಡಿಸುತ್ತಾರೆ. ಪವಾಡದಂತೆ 33 ವರ್ಷದ ನಂತರ ಅವರಿಗೆ ಸ್ಮರಣ ಶಕ್ತಿ ಮರಳಿ ಬರುತ್ತದೆ. ಸಾಕಷ್ಟು ಆಸ್ತಿಯ ಒಡೆಯನಾಗಿದ್ದ ಈಶ್ವರ ರವರ ವಾರಸುದಾರತ್ವಕ್ಕಾಗಿ ತಮ್ಮಂದಿರ ಮತ್ತು ಅಕ್ಕ-ತಂಗಿಯರ ನಡುವೆ ತಿಕ್ಕಾಟ ಕಂಡು ಮೌನಕ್ಕೆ ಶರಣಾಗಿ ಮತ್ತೆ ತನ್ನ ನೆನಪಿನ ಶಕ್ತಿಗೆ ಬೀಗ ಹಾಕಿಕೊಳ್ಳುತ್ತಾರೆ. ಈ ಕಥೆಯು ಮಾನವೀಯತೆಗಿಂತ ಮಾನವ ಸಂಬಂಧಗಳ ನಡುವೆ ಇರುವ ಸ್ವಾರ್ಥವೇ ಹೆಚ್ಚಾಗಿರುವುದನ್ನು ಪ್ರತಿನಿಧಿಸುತ್ತದೆ.

ಈಗಿನ ಹಲವು ಖಾಸಗಿ ಚಾನೆಲ್ ಗಳ ಚಿತ್ರ ವಿಚಿತ್ರ ರಿಯಾಲಿಟಿ ಶೋಗಳ ಪ್ರಯೋಗಕ್ಕೆ “ಮಗುಚಿ ಇಟ್ಟ ಕನ್ನಡಿ”ಕಥೆಯು ಕನ್ನಡಿ ಹಿಡಿದಂತಿದೆ. ಆಕಾಶಕ್ಕೆ ಜೋಕಾಲಿ: ರಮಾಕಾಂತ ಎಂಬ ಶಿಕ್ಷಕ ಕೃಷಿಕ ತೋಟಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಾದಿಯಲ್ಲಿ ಇರುತ್ತಾನೆ. ಅವನು ತೋಟಕ್ಕೆ ಮೆಕ್ಸಿಕೋ ದೇಶದ ಹುಡುಗಿ ಕ್ಯಾಮಲ ಎಂಬುವವಳು ಕೃಷಿ ಸಂಶೋಧನೆಗಾಗಿ ಹೊಸ ಹೊಸ ಪ್ರಯೋಗ ಮಾಡಲು ಅವನಿಗೆ ಸಲಹೆ ನೀಡುತ್ತಾ ಜೊತೆಯಾಗುತ್ತಾಳೆ. ಸಂಶೋಧನೆ ಮಾಡುತ್ತಾ ಮಾಡುತ್ತಾ ರಮಾಕಾಂತನಿಗೆ ಅವಳ ಮೇಲೆ ಪ್ರೇಮಾಂಕರವಾಗುತ್ತದೆ. ಆಕೆಯ ವೀಸಾ ಮುಗಿದ ನಂತರ ಒಂದು ತಿಂಗಳು ಮೆಕ್ಸಿಕೋ ಕ್ಕೆ ಹೋಗಿ ಗೆಳೆಯನೊಂದಿಗೆ ಮರಳುತ್ತಾಳೆ. ರಮಾಕಾಂತ ಅವಳ ಪ್ರಾಜೆಕ್ಟ್ ನ ಯಶಸ್ಸಿಗೆ ಕಾರಣ ಹೊರತು ಅವಳ ಜೀವನಕ್ಕೆ ಮುಖ್ಯವಲ್ಲ, ಎನ್ನುತ್ತಾ ಆಕಾಶಕ್ಕೆ ಜೋಕಾಲಿ ಕಟ್ಟಲು ಸಾಧ್ಯವಿಲ್ಲ ಎಂದು ಅರ್ಥೈಸುತ್ತಾನೆ.
ಒಟ್ಟಿನಲ್ಲಿ ಈ ಎಲ್ಲಾ ಕಥೆಗಳು ಇಂದಿನ ಸಮಾಜದಲ್ಲಿ ಗತಿಸುತ್ತಿರುವ ಎಲ್ಲಾ ಘಟನೆಗಳನ್ನು ಮಥಿಸಿದಂತಿದೆ. ವಾಸ್ತವಕ್ಕೆ ಹತ್ತಿರವಾಗಿದೆ. ಲೇಖಕರು ಸರಳವಾದ ಭಾಷೆ, ಸಹಜವಾದ ನಿರೂಪಣೆ ಮತ್ತು ವಾಸ್ತವಿಕ ಘಟನೆಗಳ ಮೂಲಕ ಪಾತ್ರಗಳ ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಸಾಮಾನ್ಯ ಜನರ ಬದುಕಿನಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ಸಾಹಿತ್ಯದ ಸ್ಪರ್ಶ ನೀಡಿರುವುದೇ ಈ ಕಥಾ ಸಂಕಲನದ ವಿಶೇಷತೆ ಎಂದು ನನ್ನ ಅನಿಸಿಕೆ. ಪ್ರತಿಯೊಂದು ಕಥೆಯೂ ಓದುಗರಿಗೆ ಒಂದೊಂದು ಜೀವನಾನುಭವವನ್ನು ನೀಡುತ್ತದೆ. ಕೆಲವು ಕಥೆಗಳು ಸಮಾಜದ ವಾಸ್ತವತೆಯನ್ನು ಪ್ರಶ್ನಿಸಿದರೆ, ಇನ್ನು ಕೆಲವು ಮಾನವೀಯತೆ, ಪ್ರೀತಿ ಮತ್ತು ಸಹಾನುಭೂತಿಯ ಮಹತ್ವವನ್ನು ಸಾರುತ್ತವೆ.
ಮಾನವ ಸಂಬಂಧಗಳ ಬೆಲೆ, ಜೀವನದ ಮೌಲ್ಯಗಳು ಮತ್ತು ಸಮಾಜದ ಜವಾಬ್ದಾರಿಯನ್ನು ನೆನಪಿಸುವ ಈ ಪುಸ್ತಕವು ಓದುಗರ ಮನಸ್ಸಿನಲ್ಲಿ ಚಿಂತನೆಗೆ ಹಚ್ಚುತ್ತದೆ . ಸರಳ ನಿರೂಪಣೆ, ಜೀವನಾನುಭವದ ಆಳ ಮತ್ತು ಮಾನವೀಯ ಕಾಳಜಿಯಿಂದ ಈ ಕಥಾಸಂಕಲನ ಓದುಗರಿಗೆ ಆಪ್ತವಾಗುತ್ತದೆ
- ಚೇತನ ಭಾರ್ಗವ – ಅರಮನೆತೋಟ.
