‘ಪ್ರೇಮ ಜ್ಯೋತಿ’ ಕವನ

ರೈತನ ಹೊಲದ ಐಸಿರಿ ಬತ್ತಿಯೂ ಅವನದೇ ಬೆವರಸಿರಿ…ಕೊಡಗು ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನನ್ನ ದೀಪ ನಿನ್ನ ದೀಪಕೆಲ್ಲ
ಒಂದೇ ನೆಲದ ಮಣ್ಣು
ಅದಕೆ ಬೆರೆತ ನೀರಿಗೂ
ಈ ನೆಲದ ಒರತೆ ಚೆನ್ನು

ಕೈ ಮಾತ್ರ ಬೇರೆ ಬೇರೆ
ಹಣತೆಯ ರೂಪಕೆ
ದೀಪದೊಳಗೆ ಉರಿವ ತೈಲ
ನಿದರ್ಶನ ಕಾಯಕಕೆ

ರೈತನ ಹೊಲದ ಐಸಿರಿ
ಬತ್ತಿಯೂ ಅವನದೇ ಬೆವರಸಿರಿ
ಹಸಿರ ತುಂಬಿ ಬದುಕ ನಂಬಿ
ಜಗಕೆ ಈವುದೇ ಅವನ ಪರಿ

ಆ ದೇವ ಮಾತ್ರ ನೀಡುವ
ಜೀವದ ಹಣತೆಗೆ ಜ್ಯೋತಿಯ ತಾನು
ತನ್ನ ತಾನು ಕಂಡುಕೊಳುವ
ಅರಿವು ನೀಡಿ ಅವನು

ಸುಡುವ ಬೆಂಕಿಯಲೂ
ಕುಂಭಾರನ ಶ್ರಮವು
ಹ‌ಣತೆ ಸೃಷ್ಟಿಯ ಪಂಚಭೂತಗಳ
ಅಪೂರ್ವ ಮಿಲನವು

ತಿಳಿದು ನೋಡೆ ಅರಿವು
ಕಣ್ತೆರೆವುದು ತಿಳಿಸಿ ಈ ಬಾಳಿಗೆ
ಸಹಕಾರದ ನಂಟ
ಪ್ರತ್ಯೇಕತೆಗೇಕೆ ಹಂಬಲಿಸುವೆ
ಇದೇ ಈ ಅನುಬಂಧದ ಗುಟ್ಟು

ನಂಟಿನಂಟು ಇದ್ದಲ್ಲಿಯೇ
ಹಬ್ಬಕುಂಟು ಸಡಗರದ ನಂಟು
ತಿಳಿದು ನೋಡು ಅರಿವಾಗುವುದು
ಈ ಬಾಳಿಗೆ ಸಹಕಾರದ ಅಂಟು

ನನ್ನ ದೀಪ ನಿನ್ನ ದೀಪ
ಕೊಡುವ ಬೆಳಕು ಒಂದೇ ..
ಬೆಳಕಿಗೀಗ ಬೆಳಕಂಟಿಸಿ
ಬೆಳಗಬೇಕಿದೆ ಜಗವನಿಂದೇ

ಉರಿಸಬೇಕು ಅಂಗಳದಿ
ನೆಲಚಕ್ರ ವಿಷ್ಣು ಚಕ್ರ ಮತಾಪುಗಳ
ಸುದರ್ಶನವಾದೀತು ಆಗ
ಬದುಕಿನ ನಿಜದರ್ಶನ

ತಮವನೆಲ್ಲ ತೊಡೆದು ಅತ್ತ
ಪ್ರಜ್ವಲಿಸಲಿ ಮನುಜ ಚಿತ್ತ
ನಲಿಯಲಿ ಮನೆ ಮನ
ನಿಜಾನಂದದ
ದೀಪಮಾಲಿಕೆಯ ಸುತ್ತ


  • ಶಿವದೇವಿ ಅವನೀಶಚಂದ್ರ – ಕವಿಗಳು, ಅಂಕಣಕಾರ್ತಿ, ಕೊಡಗು.

 

Leave a Reply

Home
Search
Menu
Recent
About
×