ಅಂತ್ಯಕಾಲದಲ್ಲಿ ಕೃಷ್ಣನ ದರ್ಶನ ಪಾಂಡವರ ಸಮ್ಮುಖದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಶಬ್ದ ಸಹಿತ ರಚನೆ ಮಾಡಿ ಶುದ್ಧ ಸಂಕಲ್ಪದಿಂದ ಫಲ ಶ್ರುತಿ ಸಹಿತ ತಿಳಿಸಿ ಮುಕ್ತಿ ಹೊಂದಿದರು. ಇದು ಕಾರುಣ್ಯದ ಭಕ್ತಿರಸ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಭಕ್ತಿರಸ + ವಿನಯ = ಕರುಣಾರಸ
ನಾಹಂ ಕರ್ತಾ ಹರಿ: ಕರ್ತಾ
ಶ್ರೀ ಗುರುಭ್ಯೋ ನಮಃ ಶ್ರೀಹರಿ: ಓಂ
ಹರಿ ಹರ ಈ ಎರಡು ವಿಶೇಷವಾದ ಅಕ್ಷರಗಳಲ್ಲಿ ಶಬ್ದಗಳು ಎರಡು ಸ್ವರಗಳು ಎರಡು ತಕ್ಷಣ ಕಣ್ಣಿಗೆ ಕಾಣುವವು ಎರಡು ರೂಪಗಳು.ಈ ರೂಪಗಳಲ್ಲಿ ಅನಂತ ಮಹಿಮೆ ಈ ಎರಡು ಅಕ್ಷರಗಳಲ್ಲಿ ಅಪಾರ ಶಕ್ತಿ ಅಡಗಿದೆ. ಈ ಶಕ್ತಿಯನ್ನು ತಿಳಿದು ಮನಸಾಕ್ಷಿಯಾಗಿ ವಾಯು ದೇವರದ್ವಾರ ಸನಾತನ ಧರ್ಮಕ್ಕೆ ಚ್ಯುತಿ ಬರದಂತೆ ಋಷಿ ಮುನಿಗಳು ಸಾಂಶರಾದ ದಾಸ ವರೇಣ್ಯರು ಯೋಗಿಗಳು ಪವಾಡಗಳನ್ನು ಮಾಡಿ ತೋರಿಸಿದ್ದಾರೆ. ಅಪೌರುಷಗಳೆನಿಸಿದ ಅಕ್ಷರಗಳ ಮೂಲಕ ಜೀವನದ ಉದ್ದೇಶ ತಿಳಿಸಿ ಕರುಣಾರಸಕ್ಕೆ ಪ್ರೀತಿ ಪಾತ್ರರಾಗಿದ್ದಾರೆ.ಅದನ್ನು ನಂಬುವದು ಬಿಡುವುದು ಅವರವರ ಯೋಗ್ಯತೆಗೆ ಬಿಟ್ಟಿದ್ದು! ಭಕ್ತಿರಸದಲ್ಲಿ ಮುಳುಗಿರುವದು ವಾಯುದೇವರು ಅವನ ಅವತಾರಗಳು.ಪರಮಾತ್ಮನನ್ನು ಒದರೆಘಳಿಗೆ ಬಿಡದ ರೂಪ ಇನ್ನು ವಿನಯ ಪಾಪಗಳನ್ನು ನಯವಾಗಿ ಹರಣ ಮಾಡುವವನು ಶಿವ. ಪಾಪಕರ್ಮಗಳು ನಾಶವಾದಮೇಲೆ ಶ್ರೀಹರಿಯ ಇರುವಿಕೆಯ ಜ್ಞಾನ ಬರುವುದು. ಮನಸ್ಸು ಶುದ್ಧವಾದಲ್ಲಿ ಆತ್ಮಸಾಕ್ಷಿ ಬರುವುದು. ಆಗ ನಮ್ಮಲ್ಲಿ ಶ್ರೀ ಹರಿಯ ಕರುಣೆಯ ಸಂಪತ್ತು ಏನೆಂಬುದು ಸ್ವಲ್ಪ ಅರ್ಥವಾಗುವುದು. ಇದೆ ಭಕ್ತಿರಸ ವಿನಯ ಕರುಣಾರಸ ಈ ಮೂರು ಸಂಖ್ಯೆಗಳು ಸತ್ವ ರಜಸ್ಸು ತಾಮಸ ಸೃಷ್ಟಿ ಸ್ಥಿತಿ ಲಯ ಬ್ರಹ್ಮ ವಿಷ್ಣು ಮಹೇಶ್ವರ ಈ ತತ್ವಗಳಿಂದ ಕೂಡಿದ ಬಿಲ್ವಪತ್ರೆಯನ್ನು ಮಹೇಶ್ವರನಿಗೆ ಅರ್ಪಿಸಿದಲ್ಲಿ ವಾಯುದ್ವಾರ ಸರ್ವೋತ್ತಮನಾದ ಪುರುಷೋತ್ತಮನಿಗೆ ಸಮರ್ಪಿತವಾಗುವದು.
ವಿಷ್ಣು ಸಹಸ್ರನಾಮದಲ್ಲಿ ಬಂದ (ಶಂಖ ಭೃನ್ನಂದಕೀ ಚಕ್ರೀ. ಶಾಜ್ಗ೯ಧನ್ವಾ ಗದಾಧರ:/ರಥಾಂಗಪಾಣಿರಕ್ಷೋಭ್ಯ:ಸರ್ವಪ್ರಹರಣಾಯುಧ://
“ಸರ್ವಪ್ರಹರಣಾಯುಧ ಓಂ ನಮ ಇತಿ”ಈ ಪಂಚಭೂತಗಳಿಂದ ಸೃಷ್ಟಿಸಿದ ಬ್ರಹ್ಮಾಂಡವನ್ನು ಅದರೊಳಗಿದ್ದ ಈ ಸಾಧನ ಶರೀರದ ಭಾರವನ್ನು ಹೊತ್ತಿರುವ ಸೂತ್ರಧಾರನೆನಿಸಿದ ಪರಮಾತ್ಮನ ಕೈಯಲ್ಲಿ ಚಕ್ರದಂತೆ ಇರುವದು.ಐದು ತತ್ವಗಳ ಜನಕ ಎನಿಸಿದ ಪಾಂಚಜನ್ಯ ಎಂಬ ಶಂಖ, ಶರೀರದ ಭಾರ ಧರಿಸಿರುವನು ಎಂಬ ವಿದ್ಯಾಮಯವಾದ ಜ್ಞಾನತತ್ವದ ಅಕ್ಷರಗಳ ನಂದಕೀ ಎಂಬ ಖಡ್ಗ, ಮನಸ್ತತ್ತ್ವಾತ್ಮಕವಾದ “ಸುದರ್ಶನ” ಎಂಬ ಚಕ್ರ ಮತ್ತು ಯಾರ ಮನಸ್ಸಿನಲ್ಲಿ ಯಾವ ಗುಣರಸವಿದೆಯೋ ಆ ಗುಣರಸದ ಧನಸ್ಸನ್ನು ಪ್ರಕಟಗೊಳಿಸುವನು. ಬುದ್ಧಿತತ್ತ್ವಾತ್ಮಕವಾದ ಕೌಮೋದಕಿ ಎಂಬ ಗದಾ ಈ ಆಯುಧಗಳನ್ನು ಧರಿಸಿದ ಮೇಲೆ ಅವನಿಗೆ ಕ್ಷೋಭೆಎನ್ನುವದು ಇಲ್ಲ ಮಾನವರಿಗೆ ಕ್ಷೋಭೆ ಕೊಡುವವನು ಅವನೆ ಪರಿಹಾರ ಮಾಡುವವನು ಅವನೆ.

ಭಗವಂತನ ಸತ್ಯ ಸಂಕಲ್ಪವೆ ಮಾನವನ ಬದುಕಿಗೆ ಒಂದು ಶಸ್ತ್ರ. ಅವನ ಶಾಸ್ತ್ರ ತತ್ವಗಳು ಸಾಧನಕೆ ಆಯುಧಗಳು ಎಂದು ತಿಳಿಸಲು ಸರ್ವಪ್ರಹರಣಾಯುಧ ಎಂದು ಹೇಳಿದ್ದಾರೆ. ಪ್ರಣವ ಮಂತ್ರವಾದ ಓಂ ನಮ ಇತಿ ಇದು ಭಕ್ತಿ ಕರುಣೆಯ ಸಂಬಂಧದ ಸೂತ್ರ. ಮಹಾಭಾರತ ಗ್ರಂಥದಲ್ಲಿ ಇವುಗಳ ಸಂಕೇತವನ್ನು ನೀಡಲಾಗಿದೆ. ಶ್ರೀ ಕೃಷ್ಣನು ಶಂಖ ಊದಲು ಕೌರವರಾದ ದುರ್ಯೋಧನಾದಿಗಳಿಗೆ ಕ್ರೋಧ ಭಯ ಮತ್ತು ಭೀಷ್ಮ ದ್ರೋಣ ಕೃಪಾಚಾರ್ಯರ ಮೇಲೆ ಅಪನಂಬಿಕೆ ಉದ್ಭವ ಆದವು.ಭೀಷ್ಮಾದಿಗಳಿಗೆ ಕೃಷ್ಣನಲ್ಲಿ ಅಚಲವಾದ ವಿಶ್ವಾಸ ಇರುವದರಿಂದ ಅವರಲ್ಲಿ ಸತ್ಯ ಎಂಬ ವಾದವು ಎದ್ದು ನಿಂತಿತು. ಅವರ ಅಂತ್ಯಕಾಲದಲ್ಲಿ ಕೃಷ್ಣನ ದರ್ಶನ ಪಾಂಡವರ ಸಮ್ಮುಖದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಶಬ್ದ ಸಹಿತ ರಚನೆ ಮಾಡಿ ಶುದ್ಧ ಸಂಕಲ್ಪದಿಂದ ಫಲ ಶ್ರುತಿ ಸಹಿತ ತಿಳಿಸಿ ಮುಕ್ತಿ ಹೊಂದಿದರು. ಇದು ಕಾರುಣ್ಯದ ಭಕ್ತಿರಸ. ಪರಮಾತ್ಮನ ಶಂಖ ನಾದದಲ್ಲಿ ನಂದಕೀ ಎಂಬ ಖಡ್ಗದಿಂದ ಬಂದ ಗೀತಾಕ್ಷರಗಳ ಜ್ಞಾನೋದಯವಾಗಿ ಅರ್ಜುನಾದಿ ಪಾಂಡವರು ಧರ್ಮಯುದ್ಧ ಮಾಡಿದರು.
ಚಕ್ರದಿಂದ ಮನಸ್ಸು ಶುದ್ಧ ವಾಗಿ ಕೃಷ್ಣನ ಧನಸ್ಸಿನಿಂದ ಸಂಶಯವೆಲ್ಲ ನಿವಾರಣೆಯಾಗಿ ಸರ್ವವೂ ಪರಮಾತ್ಮನ ಕರುಣೆಯ ಮಾಯೆಯಿಂದ ಸಾಧ್ಯ ಕೃಷ್ಣಂ ವಂದೇ ಜಗದ್ಗುರುಮ್ ಎಂದು ಪರಮಾತ್ಮನ ಗುಣರಹಸ್ಯವನ್ನರಿತು ಆನಂದದಿಂದ ಸ್ವರ್ಗದ ಮಾರ್ಗವನ್ನು ಕಂಡರು. ದುರ್ಯೋಧನ ಮತ್ತು ಅರ್ಜುನ ಕೃಷ್ಣನ ದರ್ಶನ ಮಾಡಲು ಹೋದಾಗ ಅರ್ಜುನ ಕೇಳಿದ್ದು ಕೃಷ್ಣ ನೀನು ಬೇಕೆಂದು ಕೇಳಿದನು.ದುರ್ಯೋಧನನು ನಿನ್ನ ಅಕ್ಷೋಹಿಣಿ ಸೈನ್ಯ ಬೇಕೆಂದು ಕೇಳಿದನು. ಇದು ಕೂಡ ಶಾಙ್ಗ೯ಧನಸ್ಸಿನ ಧನಸ್ಸಿನ ಪ್ರಭಾವ.ವಿಶ್ವಕುಟುಂಬಿಯನ್ನು ಮರೆತು ದುರ್ಯೋಧನನು ಅಜ್ಞಾನದ ಅಂಧಕಾರದಲ್ಲಿ ಅಸತ್ಯವಾದ ಕಠಿಣ ನುಡಿಗಳನ್ನು ಮೋಸ ಮುಂತಾದ ದುರ್ಮಾರ್ಗದದಾರಿಯಲ್ಲಿ ಉನ್ಮತ್ತನಾಗಿ ದಾನವ ಶ್ರೇಷ್ಠನೆನಿಸಿದ ಕಲಿ ಎಂದೆನಿಸಿದನು ಪ್ರಧಾನವಾದ ಮನಸ್ಸು ಎಂಬ ಇಂದ್ರಿಯವು ಕಾಣುವುದಿಲ್ಲ.
ಧಾತಾ ಎಂದರೆ ಸತ್ಯವೆಂಬ ಭಕ್ತಿ ವಿಷ್ಣು ಸಹಸ್ರನಾಮದಲ್ಲಿ (ಅನಾದಿ ನಿಧನೋ ಧಾತಾ ವಿಧಾತಾ ಧಾತುರುತ್ತಮ:) ಅನಾದಿಕಾಲದಿಂದ ಶಾಶ್ವತವಾಗಿ ಸರ್ವವನ್ನು ತನ್ನೊಳಗೆ ಧರಿಸಿಕೊಂಡಿರುವ ಪರಮಾತ್ಮನಿಗೆ “ನಿಧನ”ಎಂದೂ ಹೆಸರುಂಟು. ಆತ್ಮವು ತನ್ನ ಜಡ ದೇಹವನ್ನು ಬಿಟ್ಟು ಅಪ್ರಾಕೃತಶರೀರದಲ್ಲಿ ಲೀನವಾಗುತ್ತದೆ. ಇದು ಧಾತಾ ಎಂಬ ಸತ್ಯದಿಂದ ಸೃಷ್ಟಿ ಆದದ್ದು. ಕರ್ಮಗಳನ್ನು ಅವುಗಳ ಫಲಗಳನ್ನೂ ಉಂಟು ಮಾಡುವ ಕರುಣಾಮಯವಾದ ಉನ್ನತವಾದ ಒಂದು ಶಕ್ತಿ ಇದೆ ಎಂದಾಯಿತು. ಪೃಥ್ವಿ ಮುಂತಾದ ಧಾತುಗಳಿಂದ ಉತ್ಕೃಷ್ಟವಾದ “ಚಿತ್”ಎಂಬ ಧಾತು ಇವನಾಗಿರುವದರಿಂದ ಧಾತುರುತ್ತಮನೆಂದು ನಾಮದಲ್ಲಿ ಬರುವದು. ಎಲ್ಲದಕ್ಕೂ ಅವನೇ ಕಾರಣವೆಂದಮೇಲೆ ಜ್ಞಾನಸಂಪತ್ತಿನಲ್ಲಿ ತಿಳಿಸಿದ ಭಕ್ತಿ ರಸದಲ್ಲಿ ಚಿಂತನೆ ಮಾಡಿದರೆ ನಿಷ್ಕಾಮ ಕರ್ಮ ಎನಿಸಿ ಮನಸ್ಸು ಪ್ರಫುಲ್ಲ ಪರಿಸರವು ಶಾಂತಿ ಸಮಾಧಾನದಿಂದ ತುಂಬಿರುವದು.
ಈ ಆಯುಧಗಳ ಸಂಕೇತವೆಲ್ಲವೂ ನಾವು ಮಾಡುವ ನಿತ್ಯ ನೈಮಿತ್ತಿಕ ಕರ್ಮಗಳ ಸಂಕೇತ. ಮಹಾಭಾರತದಲ್ಲಿ ನಡೆದ ಮಾನಸಿಕ ದೈಹಿಕ ಮಾತಿನಿಂದ ಆಗುವ ಸುಖ ದುಖಃ ಎರಡೂ ಕರ್ಮಗಳು ಈಗಲೂ ನಿತ್ಯ ನಡೆಯುತ್ತಲೇ ಇವೆ. ಇದು ಎಲ್ಲರಿಗೂ ತಿಳಿದ ವಿಷಯ. ಗ್ರಂಥಗಳನ್ನು ಸೂಕ್ಷ್ಮ ಮತಿಯಾದ ಸಾಂಶರು, ದಾಸರು, ಗುರುಗಳು ಎನಿಸಿದ ಭಕ್ತರು ಪರಮಾತ್ಮನ ರೂಪ ಗುಣ ಮಹಿಮೆಯನ್ನು ತಾವು ಮೊದಲು ಭಕ್ತಿ ರಸದಲ್ಲಿ ಮೀಯುತ್ತ ಪರಮಾತ್ಮನ ಕರುಣೆಯನ್ನು ಕಂಡರು. ಅದನ್ನೆ ಕಥಾ, ಕಾವ್ಯ ಕೀರ್ತನೆಯ ರೂಪಗಳಲ್ಲಿ ರಚಿಸಿದ್ದಾರೆ. ಇವು ಲೋಕ ಕಲ್ಯಾಣಕ್ಕಾಗಿ ಮಾನವರಿಗೆ ಒಂದು ಜ್ಞಾನ ಕಲ್ಪನೆಗಾಗಿ ಆದ ರಚನೆಗಳು.ನಾವು ನುಡಿಯುವ ಶಬ್ದಗಳಲ್ಲಿ ಮಾಡುವ ಕರ್ಮಗಳಲ್ಲಿ ಅಳವಡಿಸಿಕೊಂಡು ಬದುಕನ್ನು ಸುಖಮಯವನ್ನಾಗಿ ಮಾಡಿಕೊಳ್ಳಲು ಸಹಾಯ ಮಾಡಿದ್ದಾರೆ.ಅದರ ಫಲಶ್ರುತಿಗಳನ್ನು ತಿಳಿಸಿದ್ದಾರೆ.
ಆ ಆನಂದವನ್ನು ತಾವೂ ಅನುಭವಿಸುತ್ತಾ ಮೋಕ್ಷಾನಂದವನ್ನು ಹೊಂದಿದ್ದಾರೆ.ಇನ್ನೊಂದು ಮುಖ್ಯ ವಿಷಯ ಏನೆಂದರೆ ಒಂದೇ ಅಲ್ಲ ಒಂದರಿಂದ ಎಲ್ಲಾ ಎಂಬ ತತ್ವವನ್ನು ಪರಮಾತ್ಮನು ಅವರಿಂದ ಜಗತ್ತಿಗೆ ತಿಳಿಸಿದ್ದಾನೆ. ದೈವೀಪ್ರಕೃತಿಯ ಜೊತೆಗೆ ಅಸುರೀ ಪ್ರಕೃತಿಯು ಇರುವುದು ಸಹಜ. ಈ ದ್ವಂದ್ವ ಸ್ವಭಾವದ ಗುಣಗಳನ್ನು ತಿಳಿಸುವುದೇ ಪರಮಾತ್ಮನ ಕರುಣೆ. ಅದಕ್ಕೋಸ್ಕರ ಮಾನವರಿಗೆ ಭಕ್ತಿ ಎಂಬ ಆಯುಧವನ್ನು ಕೊಟ್ಟಿರುವನು. ಆ ಆಯುಧದಿಂದ ನಾವು ಅಕ್ಷರಗಳನ್ನು ಬರೆಯುವುದು ಓದುವುದು ಮನನ ಮಾಡುವುದು ಶ್ರವಣ ಮಾಡುವುದು ಹಾಗೂ ಕ್ರಿಯೆಗಳಲ್ಲಿ ತರುವುದೇ ಶುದ್ಧವಾದ ಭಕ್ತಿ.
ಇದು ಸಾಹಿತ್ಯವಾಗಿ ವಿದ್ಯೆಯಾಗಿ ಪರಿಣಮಿಸಿ ಜೀವನ ರಥ ಸಾಗಿಸಲು ಬೇಕಾಗುವ ಸಾಧನಗಳು ಒಳ್ಳೆಯ ಮಾರ್ಗದಲ್ಲಿ ಬಂದು ನಮ್ಮ ಕೈಯಲ್ಲಿ ಸೇರುವವು. ಅಲ್ಲಿ ಕಷ್ಟ ತೊಂದರೆ ಬರುವುದು ಸಹಜ. ಅವುಗಳು ಪರಮಾತ್ಮನು ಧರಿಸಿದ ಶಾಙ್ಗ೯ಪಾಣಿಯಿಂದ ಪರಿಹಾರವಾಗಿ ಶಂಖದಿಂದ ಮನಸ್ಸು ಉಲ್ಲಾಸ ಹೊಂದಿ, ನಂದಕೀ ಖಡ್ಗದಿಂದ ಬುದ್ಧಿ ವಿದ್ಯಾ ಎನಿಸಿದ ಅಕ್ಷರಗಳಲ್ಲಿ ಜ್ಜಾನ ಕಾಣಿಸಿ, ಗದೆಯಿಂದ ಬುದ್ಧಿ ಮತಿ ಉದಯಿಸಿ ಚಕ್ರದಿಂದ ಚಿತ್ ಶುದ್ಧಿಯಾಗಿ ಭವಸಾಗರದಲ್ಲಿ ಬರುವ ದುಷ್ಟ ಶಕ್ತಿಗಳನ್ನು ಕಳೆದು ಸಾತ್ವಿಕ ಪ್ರಕೃತಿಯಲ್ಲಿ ಜನನವಾಗುವುದು. ಇದು ಭಕ್ತಿ ರಸದಲ್ಲಿ ಸಿಗುವ ಪರಮಾತ್ಮನ ಕರುಣಾರಸ. ಇವೆರಡು ಅನ್ಯೋನ್ಯತೆಯ ಆತ್ಮ ಪರಮಾತ್ಮನ ಸಂಹಿತೆಯ ರೂಪ.
ಪುರಂದರದಾಸರು ಪರಮಾತ್ಮನನ್ನು ಭವಸಾಗರ ದಾಟಿಸುವ ಅಂಬಿಗ ಎಂದು ತಮ್ಮ ಕೀರ್ತನೆಯಲ್ಲಿ (ಹೊಳೆಯ ಭರವ ನೋಡಂಬಿಗಾ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗೋದು ಅಂಬಿಗ
ಅದನಿವಾರಿಸಿ ದಾಟಸು ಅಂಬಿಗ
ಅಂಬಿಗ ನಾ ನಿನ್ನ ನಂಬಿದೆ
ಜಗದಂಬರಮಣ ನಿನ್ನ ನಂಬಿದೆ) ಸುಂದರವಾದ ಕೃತಿ. ಈ ಅಕ್ಷರಗಳು ಸಜ್ಜನರ ಜೀವನ ರಥ ಸಾಗಿಸಲು ಅನ್ಯೋನ್ಯವಾದ ಸಂಬಂಧದ ಸ್ವರೂಪ ತಿಳಸಲಿ ಎಂದು ಪರಮಾತ್ಮನಲ್ಲಿ ನಮ್ಮ ವಿಶ್ವಾಸದ ಪ್ರಾರ್ಥನೆ.
“ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ”
ಶ್ರೀನಿವಾಸನೆ ಶ್ರೀಹರಿ ಭಕ್ತ ಪೋಷಕನೆ
ಜ್ಞಾನಿಕುಲಗಳಿಗೆ ಅಭಯ ದಾಯಕನೆ
ಅರಿಯದ ರೂಪ ಧರಿಸಿ ಪ್ರಲ್ಹಾದಗೊಲಿದೆ
ಹಸುಳೆ ಧೃವನಿಗೆ ಭಕ್ತಿ ಕೊಟ್ಟು ರಕ್ಷಿಸಿದೆ
ನಿನ್ನ ಕರುಣೆ ಎಂತುಟೋ ನಾನರಿಯೆ
ಶ್ರೀಕಾಂತನೆ ಜ್ಞಾನ ಸಂಪದ ನೀಡಿ ಸಲಹೋ
ಬಡವ ಸುದಾಮ ಧಾನ್ಯ ಕೊ ಡೆ ಸಂಪದ ನೀಡಿದೆ
ಚೋರ ಕರ್ಮವ ಮಾಡಿದವಗೆ ಸ್ವರೂಪ ತೋರಿದೆ
ಮಾತರಿಶ್ವಾಂತರ್ಗತ ಶ್ರೀಹರಿ ನಾರಾಯಣ
ಮುಕ್ತಿ ಮಾರ್ಗ ತೋರಿ ಸಲಹೆನ್ನ ಬಾದರಾಯಣ
ಅಕ್ಷರ ಬ್ರಹ್ಮದಲಿ ನಡೆಯಲಿ ನನ್ನ ಪಯಣ
- ಸಂಧ್ಯಾ ಟಿ
