ಉಮರನ ಒಸಗೆ (ಪದ್ಯ – ೧೧)

ಯಾವುದೇ ಕಷ್ಟ, ನಷ್ಟ ಅಥವಾ ಅಸಹಾಯಕತೆಯ ಪರಿಸ್ಥಿತಿಯಲ್ಲಿ ಒಳಗೊಳಗೇ ಬೇಸರ ಮಾಡಿಕೊಳ್ಳುತ್ತಾ, ಆತಂಕದಿಂದ ಕಾಲ ಕಳೆಯುವುದನ್ನು “ಕೊರಗಾಟ” ಅಥವಾ ಕೊರಗುವುದು ಎನ್ನಲಾಗುತ್ತದೆ. ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಜಗದ ಕೊರಗಾಟಕ್ಕೆ ತೂಕವನು ಕಟ್ಟದಿರು:
ಆಗಿಹುದನಾಗಲಿಹುದನು ಲೆಕ್ಕಿಸದಿರು;
ಒಂದೆರಡು ದಿನ ತಂಗಿದಿಲ್ಲಿ ಸವಿ ಮಧುರಸವ;
ಸಿರಿಯಿನೇo? ನಿನ್ನನನುಸರಿಸದೊಂದಣುವುo.

ಜಗದ ಕೊರಗಾಟಕ್ಕೆ ತೂಕವನು ಕಟ್ಟದಿರು:

ಕೊರಗಾಟ = ಮನಸ್ಸಿನಲ್ಲಿಯೇ ದುಃಖ ಪಡುವುದು, ತೀವ್ರವಾಗಿ ವ್ಯಥೆ ಪಡುವುದು, ಚಿಂತಿಸುವುದು ಅಥವಾ ಹಲುಬುಕುಟ್ಟುವಿಕೆ. ಯಾವುದೇ ಕಷ್ಟ, ನಷ್ಟ ಅಥವಾ ಅಸಹಾಯಕತೆಯ ಪರಿಸ್ಥಿತಿಯಲ್ಲಿ ಒಳಗೊಳಗೇ ಬೇಸರ ಮಾಡಿಕೊಳ್ಳುತ್ತಾ, ಆತಂಕದಿಂದ ಕಾಲ ಕಳೆಯುವುದನ್ನು “ಕೊರಗಾಟ” ಅಥವಾ ಕೊರಗುವುದು ಎನ್ನಲಾಗುತ್ತದೆ.

ತೂಕ = ಭಾರ
ಕಟ್ಟದಿರು = ಸೇರಿಸದಿರು, ಬಿಗಿಯದಿರು, ಹೆಚ್ಚಿಸದಿರು

ಈ ಜಗತ್ತಿನ ಕೊರಗಾಟಕ್ಕೆ ಭಾರವನ್ನು ಸೇರಿಸದಿರು

“ಆಗಿಹುದನಾಗಲಿಹುದನು ಲೆಕ್ಕಿಸದಿರು.”

ಆಗಿಹುದನು + ಆಗಲಿಹುದನು (ಆಗಲು + ಇಹುದನು )

ಆಗಿಹುದು = ಆಗಿರುವುದು, ನಡೆದಿರುವುದು, ಘಟಿಸಿ ಹೋಗಿರುವುದು

ಆಗಲಿಹುದು = ಆಗುವುದು, ನಡೆಯುವುದು, ಘಟಿಸಲಿರುವುದು.

ಲೆಕ್ಕಿಸದಿರು = ಗಣನೆಗೆ ತೆಗೆದುಕೊಳ್ಳದಿರು, ಪರಿಗಣಿಸದಿರು, ಉದಾಸೀನ ಮಾಡು, ತಿರಸ್ಕರಿಸು, ನಿರ್ಲಕ್ಷಿಸು

ಹಿಂದೆ ಆಗಿ ಹೋಗಿರುವುದನ್ನೂ ಮುಂದೆ ಆಗಲಿರುವುದನ್ನೂ ಪರಿಗಣಿಸದಿರು,

ಒಂದೆರಡು ದಿನ ತಂಗಿದಿಲ್ಲಿ ಸವಿ ಮಧು ರಸವ

ತಂಗಿದಿಲ್ಲಿ = ತಂಗಿದ + ಇಲ್ಲಿ
ತಂಗಿದ = ಉಳಿದುಕೊಂಡ, ವಾಸ ಮಾಡಿದ, ಆಶ್ರಯ ಪಡೆದ

ಒಂದೆರಡು ದಿನ ವಾಸ ಮಾಡಿದ ಇಲ್ಲಿ ಮಧುರಸವನ್ನು ಸೇವಿಸಿ ಅದರ ಸವಿಯನ್ನು ಅನುಭವಿಸು.

“ಸಿರಿಯಿನೇo? ನಿನ್ನನನು ಸರಿಸದೊಂದಣುವುo”

ಸಿರಿಯಿನ್ + ಏಮ್
ನಿನ್ನನು + ಅನುಸರಿಸದ + ಒಂದು + ಅಣುವುo

ಸಿರಿಯಿನ್ = ಸಿರಿಯಿಂದ
ಸಿರಿ = ಸಂಪತ್ತು, ಧನ, ಐಶ್ವರ್ಯ
ಏಮ್ = ಏನು
ಅನುಸರಿಸು = ಹಿoಬಾಲಿಸು, ಆಜ್ಞೆಯಂತೆ ನಡೆ, ಹೇಳಿದಂತೆ ನಡೆದು ಕೊಳ್ಳು
ಅಣು =

ಹಣದಿಂದ ಆಗುವುದೇನು?
ನಿನ್ನನ್ನು ಹಿಂಬಾಲಿಸದ ಅತ್ಯಂತ ಸೂಕ್ಷ್ಮವಾದ ವಸ್ತು ಅದು

ತಾತ್ಪರ್ಯ :

ಈ ಜಗತ್ತು ತನ್ನೆಲ್ಲ ಜೀವರ ನಾನಾ ಕಷ್ಟ, ನಷ್ಟ, ದುಃಖ, ವ್ಯಥೆ, ಚಿಂತೆಯ ಭಾರದಲ್ಲಿ ಒಳಗೊಳಗೇ ಬೇಸರಿಸುತ್ತ ಆತಂಕದಲ್ಲಿ ಕೊರಗುತ್ತಿದೆ. ಜಗದ ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಅದರ ದುಃಖದ ಭಾರವನ್ನು ಹೆಚ್ಚಿಸುವುದು ಬೇಡ.

ಹಿಂದೆ ಆಗಿರುವುದನ್ನು ಬದಲಾಯಿಸಲಾಗದು, ಮುಂದೆ ಆಗುವುದನ್ನೂ ತಡೆಯಲಾಗದು. ಆದ್ದರಿಂದ ಹಿಂದೆ ನಡೆದಿರುವುದನ್ನು ಮತ್ತು ಮುಂದೆ ನಡೆಯಲಿರುವುದನ್ನು ನಿರ್ಲಕ್ಷಿಸಿ ಉದಾಸೀನತೆಯಿಂದ ಸಾಕ್ಷೀ ಭಾವದಿಂದ ನೋಡುವುದು ಉತ್ತಮ.

ಎಷ್ಟಾದರೂ ನಾವು ಈ ಜಗತ್ತಿಗೆ ಬಂದಿರುವುದು ಒಂದೆರಡು ದಿನ ಇದ್ದು ಹೋಗಲಿಕ್ಕೆ, ಹೀಗಿರುವಾಗ ಇಲ್ಲಿರುವಾಗ ಮಧುರಸವನ್ನು ಸೇವಿಸಿ ಅದರ ಸವಿಯನ್ನು ಆನಂದಿಸಬೇಕು. ಕವಿ ಉಮರನು ಬಳಸಿದ ಪ್ರತಿಮೆಗಳಂತೆ ಮಧು ಅಥವಾ ಮದ್ಯವೆಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ. ಇಲ್ಲಿರುವಷ್ಟು ಕಾಲ ನಾವು ಭಗವಂತನನ್ನು ಆರಾಧಿಸಿ ಆನಂದ ಪಡಬೇಕು ಎಂಬ ಸೂಚ್ಯಾರ್ಥವಿಲ್ಲಿದೆ.

ಈ ಜಗತ್ತಿನ ಸರಿ ಸುಮಾರು ಎಲ್ಲಾ ಕಷ್ಟ ನಷ್ಟಗಳಿಗೆ, ಸುಖ – ದುಃಖಗಳಿಗೆ, ಚಿಂತೆ – ವ್ಯಥೆಗಳಿಗೆ ಜೀವಿಗಳು ಧನಕ್ಕೆ, ಧನ ಸಂಪಾದನೆಗೆ ಕೊಟ್ಟ ಮಹತ್ವವೇ ಕಾರಣ. ಧನ, ಸಂಪತ್ತು ಐಶ್ವರ್ಯವು ನಮ್ಮನ್ನು ಹಿoಬಾಲಿಸಿ ಬರುವುದಿಲ್ಲವಾದ್ದರಿಂದ ಅದು ಅತೀ ಸಣ್ಣ ವಸ್ತು. ಅದಕ್ಕೆ ಮಹತ್ವ ಕೊಡದೇ ಇಹಕ್ಕೂ ಪರಕ್ಕೂ ದಾರಿಯಾಗುವ ಭಗವಂತನ ಆರಾಧನೆಯೇ ಜೀವಿಗಳಿಗೆ ಪರಮಾಧಾರ ಎಂಬ ಭಾವ.

ಮುಂದುವರೆಯುವುದು…

ಹಿಂದಿನ ಸಂಚಿಕೆಗಳು :


  • ರವೀಂದ್ರ ಕುಮಾರ್ ಎಲ್ವೀ – ಮೈಸೂರು.

Leave a Reply

Home
Search
Menu
Recent
About
×