ಉಮರನ ಒಸಗೆ (ಪದ್ಯ – ೧೦)

ಹಿಂದಿನ ಪದ್ಯದಲ್ಲಿ ಉಮರನು ತನ್ನ ಪ್ರೇಮಿಯನ್ನು ಊರ ಗಡಿಯಾಚೆಗೆ ಏಕಾಂತಕ್ಕೆ ಕರೆದೊಯ್ದದ್ದನ್ನು ಕಂಡಿದ್ದೇವೆ. ಈ ಪದ್ಯದಲ್ಲಿ ತನ್ನ ಮನದಾಳದ ಮಾತನ್ನು ಪ್ರಿಯತಮೆಯ ಬಳಿ ಹೇಳಿಕೊಳ್ಳುತ್ತಿದ್ದಾನೆ; ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ !
ಕಾಡಾದೊಡೇನದುವೆ ಸಗ್ಗಸುಖವೆನಗೆ.

ಊರ ಗಡಿಯಾಚೆಯಲ್ಲಿ ಹುಲುಸಾದ ಹಸಿರು ತುಂಬಿದ ಹೊಲ ಮತ್ತು ಓಯಸಿಸ್ ಎಡೆಯಲ್ಲಿ, ಒಂದು ಮರದಡಿಯಲ್ಲಿ ಒಂದು ಒಳ್ಳೆಯ ಕಾವ್ಯವಿರಲು (ನಲ್ಗಾವ್ಯ ), ತಿನ್ನಲು ರೊಟ್ಟಿಯೊಂದು, ಮತ್ತು ಇನ್ನೊಂದು ಕುಡಿಕೆಯಲ್ಲಿ ಸ್ವಲ್ಪ ಮಧು, ಮತ್ತೆ ಕಪಟವರಿಯದ ಸುಂದರ ಬಾಲೆಯಾದ ನೀನು ನನ್ನ ಬಳಿ ಕುಳಿತು ಹಾಡಲು, ಆಹಾ! ಅದು ಕಾಡೇ ಆದರೂ ಸ್ವರ್ಗವು ನನಗೆ, ಅಲ್ಲಿ ಯಾರಾದರೂ ಏನಾದರೂ ಅವಹೇಳನ ಮಾಡಿ ಹಿಂಸೆ ಕೊಟ್ಟರೂ ಅದು ಸ್ವರ್ಗ ಸುಖವು ನನಗೆ.

ಜೀವನದ ಕ್ಷಣ ಕ್ಷಣವನ್ನೂ ಮಧುರವಾಗಿ ಸವಿಯುವ ಮನೋಭಾವ. ಕಾವ್ಯವೊಂದು ಒಳ್ಳೆಯದಾಗಿದ್ದರೆ, ಉತ್ತಮವಾಗಿದ್ದರೆ ಅದೇ ನಮ್ಮ ಚಿತ್ತಕ್ಕೆ ಆನಂದದ ಅಮಲೇರಿಸುತ್ತದೆ. ಅದರ ಜೊತೆಗೆ ಒಂದು ರೊಟ್ಟಿ ಇದ್ದು ಹೊಟ್ಟೆಯ ಚಿಂತೆಯನ್ನು ಮರೆಸಿದರೆ, ಸ್ವಲ್ಪ ಮಧು (ಹೆಂಡ, ಕಳ್ಳು )ಇದ್ದರೆ ಅದು ಕಾವ್ಯಾನುಭೂತಿಯ ಮತ್ತನ್ನು ಮತ್ತಷ್ಟು ಏರಿಸಲು ಸಾಲದೇ?.

ಹೀಗಿರುವಾಗ ಜೊತೆಗೆ ಒಂದು ಸುಂದರ ಮುಗ್ಧ ಹೆಣ್ಣು ಬಳಿಯಿದ್ದರೆ, ಅವಳ ಸೌಂದರ್ಯದ ಸಾನಿಧ್ಯವು ಮೊದಲೇ ಏರಿದ ಅಮಲನ್ನು ಮತ್ತಷ್ಟು ಏರಿಸುತ್ತದೆ. ಅಷ್ಟೇ ಸಾಲದೆಂಬಂತೆ, ಆ ಹೆಣ್ಣು ಬಳಿ ಕುಳಿತು ಸುಶ್ರಾವ್ಯವಾಗಿ ಹಾಡಿದರೆ, ಅದು ಆನಂದವನ್ನು ಹೊಂದಿರುವ ಮನಕ್ಕೆ ಅತ್ಯಾನಂದದಾಯಕವಾದುದು. ಅಂತಹ ಆನಂದದ ಸ್ಥಿತಿಯು ಇರುವಾಗ ಅದು ಕಾಡೇ ಆದರೂ, ಸ್ವರ್ಗವು.

ಕಾಡು ಎಂಬ ಪದಕ್ಕೆ ಹಿಂಸೆ, ಅವಹೇಳನ ಎಂಬ ಅರ್ಥಗಳೂ ಇವೆ. ಊರಾಚೆಯ ಸುಂದರ ತಾಣದಲ್ಲಿ ರೊಟ್ಟಿಯೊಂದಿಗೆ ಮಧುವಿನ ಆಸ್ವಾದನೆ ಮಾಡುತ್ತಾ, ಉತ್ತಮ ಕಾವ್ಯದ ರಸಾಸ್ವಾದನೆ ಮಾಡುತ್ತಿರಲು, ಪ್ರಿಯತಮೆಯು ಬಳಿಯಲು ಕುಳಿತು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ಪ್ರಪಂಚದ ಯಾವುದೇ ಅವಹೇಳನ ಅಥವಾ ಹಿಂಸೆಯಾದರೂ, ಅದು ಸ್ವರ್ಗಸುಖವೇ ಸರಿ ಎಂಬ ಭಾವವನ್ನೂ ಈ ಪದ್ಯ ಹೊಮ್ಮಿಸುತ್ತದೆ.

ಈಗ ನಿಮಗೆಲ್ಲೋ ” ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ” ಮಾತು ನೆನಪಿಗೆ ಬರುತ್ತಿದೆಯೇ? ಬಂದರೆ ನೀವು ಸರಿ. ಅದೇ ಭಾವದ ಮುಂದಿನ ಉತ್ಕಟ ಸ್ಥಿತಿಯ ಸುಂದರ ಚಿತ್ರಣ ಈ ಪದ್ಯದಲ್ಲಿದೆ. ಜೀವನದಲ್ಲಿ ಸುಂದರ ಕ್ಷಣಗಳನ್ನು ಸೃಷ್ಟಿಸಿ ಕೊಂಡು ಆನಂದಿಸುವುದು, ಅನುಭವಿಸುವುದೇ ಸ್ವರ್ಗವಲ್ಲವೇ?.

ಈ ಆನಂದವು ಹೃದಯಕ್ಕೆ ಸೇರಿದ್ದು. ಮಧುವಿನ, ಅಂದರೆ ಭಗವಂತನ ಉಪಾಸನೆಯ ಈ ಆನಂದವು, ಎಲ್ಲ ಪ್ರಾಪಂಚಿಕ ಕೋಟಲೆಗಳ ಮಧ್ಯೆಯೂ ಸುಖ ನೀಡುತ್ತದೆ ಎಂದು ಕವಿಯು ಬುದ್ಧಿಗೆ (ಪ್ರೇಯಸಿ) ಮಾಡಿದ ಭಾವ ಪ್ರೇರಣೆಯನ್ನು

ಈ ಪದ್ಯದಲ್ಲಿ ಕಾಣಬಹುದು.

ಮುಂದುವರೆಯುವುದು…

ಹಿಂದಿನ ಸಂಚಿಕೆಗಳು :


  • ರವೀಂದ್ರ ಕುಮಾರ್ ಎಲ್ವೀ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading