ಹೊರಗ ಹೋದರೆ ಜೋಪಾನೆ ತಂಗೆವ್ವ, ಹಸಿ ಮಾಂಸಕ್ಕ ರಣಹದ್ದುಗಳ ಕಾಟ ಹೆಚ್ಚವ್ವ…ಕವಿ, ಪ್ರಾಂಶುಪಾಲರು, ಪ್ರೊ.ಅಶೋಕ ಕುಮಾರ ಎಸ್ ಅವರ ರಚನೆಯ ಕವಿತೆಯನ್ನು ಪೂರ್ತಿಯಾಗಿ ಓದಿ…
ಬ್ಯಾಸರ ಯಾಕೆ ತಂಗೆವ್ವ
ನೀನಲ್ಲ ತಂಗಿ ಬಾಡಿದ ಹೂವ್ವ
ಮನಸು ನೊಂದರೆ ಕಣ್ಣೀರು ತಂಗೆವ್ವ.
ಹೊಸ್ತಿಲು ದಾಟಬ್ಯಾಡೆ ತಂಗೆವ್ವ
ಹೊರಗ ಹೋದರೆ ಜೋಪಾನೆ ತಂಗೆವ್ವ
ಹಸಿ ಮಾಂಸಕ್ಕ ರಣಹದ್ದುಗಳ ಕಾಟ ಹೆಚ್ಚವ್ವ.
ಮೈ ಮನಸು ಶುದ್ಧಿರಲಿ ತಂಗೆವ್ವ
ಕಾಲು ಜಾರಿದರೆ ನೆಲನೆ ಗತಿ ತಂಗೆವ್ವ
ಚಂಚಲ ಮನಸೆಂದು ಜಾರದಿರಲೇ ಹಡದವ್ವ.
ಮೋಸದ ಜಾಲಕ ಬಿಳಬ್ಯಾಡ ತಂಗೆವ್ವ
ಹುಸಿ ಪ್ರೀತಿಯ ಬಾವಿ ಬಲು ಗುಮ್ಮ ತಂಗೆವ್ವ
ಆಳ ಅರಿಯದೆ ಬಿದ್ದು ಒದ್ದಾಡುವುದ್ಯಾಕ ತಂಗೆವ್ವ.
ಶೀಲ ಹ್ವಾದರ ಸಿಗೊದಲ್ಲ ತಂಗೆವ್ವ
ಜಗದಾಗ ಶೀಲಕ್ಕಿಂತ ಮಿಗಿಲೇನಿಲ್ಲ ತಂಗೆವ್ವ
ಶೀಲ ಹೋಗಿ ಶೂಲ ತಂದುಕೊಳ್ಳಬೇಡ ತಂಗೆವ್ವ.
ಬಾಯಿ ಜೊಲ್ಲು ಸುರುಸ್ತಾವೆ ತಂಗೆವ್ವ
ತಲೆಮ್ಯಾಲಿನ ಸೆರಗ ಸರಸಬ್ಯಾಡೆ ತಂಗೆವ್ವ
ನೆಲ ನೋಡಿ ನಡೆಯೋದು ಮರಿಬ್ಯಾಡ ತಂಗೆವ್ವ.
ಎಚ್ಚರ ತಪ್ಪಬ್ಯಾಡ ತಂಗೆವ್ವ
ಎಚ್ಚರ ತಪ್ಪಿದವರು ಹುಚ್ಚರಾಗ್ಯಾರವ್ವ
ಎಚ್ಚರಿದ್ದು ಬಾಳ್ವೆ ಮಾಡಬೇಕು ತಂಗೆವ್ವ.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
