ಕನ್ನಡದ ವಿಶಿಷ್ಟವಾದ ಕವನ ಸಂಕಲನ

ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾವಿಯವರು ಕನ್ನಡದ ಸೃಜನಾತ್ಮಕ ಸಾಹಿತ್ಯದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಸಾಹಿತಿ. ಅವರ ಹೊಸ ಕೃತಿ “ಚೋಕಾ ಸಂಕಲನ ಕಾವ್ಯಧಾರೆ” ಕನ್ನಡದ ಸಾಹಿತ್ಯದಲ್ಲಿ ಚೋಕಾ ಪ್ರಕಾರದ ಮೊದಲ ಸಾಹಿತ್ಯದ ಕೃತಿ. ಬಿಡಿ ಭಾಗದಲ್ಲಿ ಬಂದಿರಬಹುದು. ಒಂದು ಕೃತಿಯಾಗಿ ಇದು ಮೊದಲು. ಈ ಕೃತಿಯ ಕುರಿತು ಲೇಖಕರಾದ  ಬಸವರಾಜ ಹೊನಗೌಡರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾವಿಯವರು ಜಗತ್ತಿನ ಸಾಹಿತ್ಯ ಪ್ರಕಾರಗಳನ್ನು ಕನ್ನಡಕ್ಕೆ ಅಳವಡಿಸುವ ಮೂಲಕ ಬೇರೆಯವರಿಗೆ ಮಾರ್ಗದರ್ಶಿ ಆದವರು.

ಸುಮಾರು 80 ಪುಟಗಳಿಂದ ಕೂಡಿದ ಚೋಕಾ ಕಾವ್ಯಧಾರೆಗೆ ಮುನ್ನುಡಿಯನ್ನು ಹರಿನರಸಿಂಹ ಉಪಾಧ್ಯಾಯ ಬರೆದರೆ, ಬೆನ್ನುಡಿಯನ್ನು ಡಾ. ಸಿದ್ಧರಾಮ ಹೊನ್ಕಲರವರು ಬರೆದಿದ್ದಾರೆ. ಚೋಕಾ ಸಾಹಿತ್ಯ ಪ್ರಕಾರ ಮೂಲ ಜಪಾನದ್ದು. ಕವನದಲ್ಲಿ ಒಂಬತ್ತು ಸಾಲುಗಳು ಇದ್ದು ಪ್ರತಿ ಸಾಲಿನಲ್ಲಿ ಇಷ್ಟೇ ಅಕ್ಷರಗಳಿರಬೇಕೆಂಬ ನಿಯಮವಿದೆ. ಅಂದರೆ 1,3,5,7 ನೇ ಸಾಲಿನಲ್ಲಿ ಐದು ಅಕ್ಷರಗಳು, 2,4,6,8,9 ನೇ ಸಾಲಗಳಲ್ಲಿ ಏಳು ಅಕ್ಷರಗಳು ಇರಬೇಕೆಂಬ ನಿಯಮವಿದೆ. ಒಟ್ಟು ಒಂದು ಪದ್ಯದಲ್ಲಿ 55 ಅಕ್ಷರಗಳಿರುತ್ತವೆ. ಇಂತಹ ಚೋಕಾ ಪ್ರಕಾರದಲ್ಲಿ ಮಲ್ಲಿಕಾರ್ಜುನ ಆಲಮೇಲರವರು ಒಂದ ಸಂಕಲನವನ್ನೇ ಹೊರತಂದಿದ್ದು ಅವರ ಸ್ವಂತಿಕೆಗೆ ಹಿಡಿದ ಕೈಗನ್ನಡಿಯಂತಿದೆ.

ಒಂದನೆಯ ಪದ್ಯವಾದ “ಗುರುಚರಣ” ದಲ್ಲಿ

ಮುನಿದರೇನು
ದೇವಗಣ ಗುರುವು
ಕಾಯುವವನು
ಗುರುವೇ ಮುನಿದರೆ
ನರಮಾನವ
ನಿನ್ನಾರು ಕಾಯುವರು
ಅನುದಿನ ಪೂಜಿಸು
ನೀನೇ ಶ್ರೇಷ್ಠನಾಗುವೆ.

ಹರ ಮುನಿದರೆ ಗುರು ಕಾಯುವವನು, ಗುರು ಮುನಿದರೆ ನರ ಮನುಷ್ಯನನ್ನು ಕಾಯುವರಾರು? ಅನುದಿನ ಗುರುವಿನ ಗುಲಾಮನಾಗು ಎಂಬ ಅರ್ಥದಲ್ಲಿ ಪದ್ಯ ಮೂಡಿಬಂದಿದೆ.

ಎಂಟನೆಯ ಪದ್ಯ “ಅಸ್ತ್ರ” ದಲ್ಲಿ

ಮಾನವೀಯತೆ
ಮಣ್ಣಲ್ಲಿ ಮಣ್ಣಾದಾಗ
ಕರುಣೆಯಂಬ
ಕಡಲು ಬತ್ತಿದಾಗ
ಅಧರ್ಮಗಳು
ಅಟ್ಟಹಾಸಗೈದಾಗ
ಅಂತಿಮವಾಗಿ
ಸದ್ಧರ್ಮ ಸ್ಥಾಪನೆಗೆ
ಧರ್ಮಯುದ್ಧವೆ ಅಸ್ತ್ರ.

ಭೂಮಿಯ ಮೇಲೆ ಮಾನವೀಯತೆ, ಕರುಣೆಗಳು ಬತ್ತಿದಾಗ ಧರ್ಮಯುದ್ಧ ಅನಿವಾರ್ಯ ಆಗುತ್ತದೆ ಎಂಬ ನಿಲವು ಕವಿಯದ್ದು.

20 ನೇ ಕವನ “ವಾಸ್ತವದಿ ಬದುಕಿ” ಎಂಬ ಕವನದಲ್ಲಿ,

ನಿನ್ನ ನೆನೆದು
ನಾಳೆಗಳ ಕುರಿತು
ಕೊರಗದಿರಿ
ನಾಳೆಗಳ ನೆನೆದು
ಇಂದಿನ ಸುಖ
ವ್ಯರ್ಥ ಮಾಡಬೇಡಿರಿ
ನಿನ್ನೆ ಭೂತವು
ನಾಳೆಯ ಭವಿಷ್ಯವು
ವಾಸ್ತವದಿ ಬದುಕಿ.

ನಿನ್ನೆ ನಾಳೆಗಳ ಬಿಟ್ಟು ಇಂದು ಬದುಕಿ ಎಂಬ ಸಂದೇಶ ಇದರಲ್ಲಿದೆ. ನಿನ್ನೆ ಮುಗಿದು ಹೋಗಿದೆ, ನಾಳೆಯ ಬಗ್ಗೆ ಗೊತ್ತಿಲ್ಲ, ಅವುಗಳ ಬಗ್ಗೆ ಚಿಂತಿಸುತ್ತಾ ಇಂದಿನ ಸುಖ ಬಲಿಕೊಡಬೇಡಿ ಎಂದು ಕವಿ ಚೆನ್ನಾಗಿ ಕಿವಿ ಮಾತು ಹೇಳಿದ್ದಾರೆ.

47 ನೇ ಪದ್ಯ “ಮರಳು ಜಗ” ದಲ್ಲಿ,
ಹೇ ಭಗವಂತ
ಏನಿದು ನಿನ್ನಾಟವು
ದುರಳರನ್ನು
ಅಟ್ಟಕ್ಕೆ ಏರಿಸಿದೆ
ಸುಜನರನ್ನು
ಪಾತಾಳಕ್ಕೆ ತಳ್ಳಿದೆ
ನಿನ್ನಂತರಂಗ
ಬಲ್ಲವರಾರಿಹರು
ಈ ಮರುಳು ಜಗದಿ.

ಇಂದಿನ ಜಗತ್ತಿನಲ್ಲಿ ಕೆಟ್ಟವರಿಗೆ ಸುಖಕೊಟ್ಟು ಒಳ್ಳೆಯವರಿಗೆ ದುಃಖ ಕೊಟ್ಟ ಬಗ್ಗೆ ಕವಿಗೆ ದೇವರ ಬಳಿ ತಕರಾರು ಇದೆ. ಇದಕ್ಕೆ ಮರುಳು ಜಗ ಎಂದು ಕರೆಯುತ್ತಾನೆ.

134 ನೇ ಪದ್ಯವಾದ “ಯುದ್ದೋನ್ಮಾದ” ದಲ್ಲಿ

ಯುದ್ದೋನ್ಮಾದವೇ
ನೀನು ಎಷ್ಟೊಂದು ಕ್ರೂರಿ
ನಿನಗೆಲ್ಲಿದೆ
ಪ್ರೀತಿ ಪ್ರೇಮ, ಮಮತೆ
ಅನುಬಂಧವೇ
ಅರಿಯದ ನಿರ್ಗುಣಿ
ನಿನ್ನ ದಾಹಕ್ಕೆ
ಇಡಿ ವಿಶ್ವವೇ ಇಂದು
ನಲುಗಿ ಹೋಗುತ್ತಿದೆ.

ಇಂದಿನ ಪ್ರಸ್ತುತ ಜಗತ್ತಿನ ಯುದ್ಧಗಳಿಂದ ಎಷ್ಟೋ ಮುಗ್ಧ ಜನರ ಮಾರಣಹೋಮ ನಡಿಯುತ್ತಿದೆ. ಪ್ರೀತಿ, ಪ್ರೇಮ, ಮಮತೆ, ಕರುಣೆಗಳು ಬತ್ತಿ ಹೋಗಿರುವ ಬಗ್ಗೆ ಕವಿಗೆ ಕಾಳಜಿಯಿದೆ.
ಚೋಕಾ ಸಂಕಲನದಲ್ಲಿ ಒಟ್ಟು 204 ಕವನಗಳಿವೆ. ಎಲ್ಲವೂ ಅರ್ಥಗರ್ಭಿತವಾಗಿವೆ. ಓದುಗರನ್ನು ಯೋಚಿಸುವಂತೆ ಮಾಡುತ್ತವೆ. ಕನ್ನಡದಲ್ಲಿ “ಚೋಕಾ” ಸಾಹಿತ್ಯ ಪ್ರಕಾರ ಡಾ.ಮಲ್ಲಿಕಾರ್ಜುನ ಆಲಮೇಲ ಇವರಿಂದ ಇನ್ನಷ್ಟು ಬೆಳೆಯಲಿ.


  • ಬಸವರಾಜ ಹೊನಗೌಡರ – ಚಿಕ್ಕೋಡಿ ಜಿ, ಬೆಳಗಾವಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading