ಕ್ಷಮಿಸಿ : ಪಾರ್ವತಿ ಜಗದೀಶ್

ತಪ್ಪು ಮಾಡಿದವನು ಕ್ಷಮೆ ಕೇಳಿದ ಮೇಲೆ ತಾಳ್ಮೆ ಕಲಿಯಬೇಕು. ಕ್ಷಮಿಸಿದವನು ತನ್ನ ನೋವು ಕಡಿಮೆಯಾಗುವವರೆಗೆ ಸಮಯ ತೆಗೆದುಕೊಳ್ಳಬಹುದು. ಇಲ್ಲಿ ಇಬ್ಬರಿಗೂ ತಮ್ಮ ತಮ್ಮ ಹೊಣೆಗಾರಿಕೆ ಇದೆ. ಲೇಖಕರಾದ ಪಾರ್ವತಿ ಜಗದೀಶ್ ಅವರು ಲೇಖನವನ್ನು ತಪ್ಪದೆ ಮುಂದೆ ಓದಿ…

ಕೆಲವು ತಪ್ಪುಗಳಿಗೆ  “ಸಾರಿ…” ಎಂಬ ಒಂದು ಪದ ಸಾಕು ಎಂದುಕೊಳ್ಳುತ್ತೇವೆ. ಕೆಲವು ಕ್ಷಮೆಗಳಿಗೆ “ಪರವಾಗಿಲ್ಲ…” ಎನ್ನುವುದೇ ಅಂತ್ಯ ಎಂದುಕೊಳ್ಳುತ್ತೇವೆ. ಆದರೆ ನಿಜವಾಗಿಯೂ ಎಲ್ಲವೂ ಅಲ್ಲಿಗೇ ಮುಗಿಯುತ್ತದೆಯೇ?. ಒಮ್ಮೆ ಒಬ್ಬ ವ್ಯಕ್ತಿ ಕೋಪದಲ್ಲಿ ತನ್ನ ಆಪ್ತರ ಮನಸ್ಸಿಗೆ ನೋವುಂಟುಮಾಡಿದ. ನಂತರ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ. ಆ ವ್ಯಕ್ತಿಯೂ ಕ್ಷಮಿಸಿದ.

ಮಾತುಗಳು ಮತ್ತೆ ನಡೆಯ ತೊಡಗಿದವು. ನಗುವೂ ಮರಳಿತು. ಹೊರಗಿನಿಂದ ನೋಡಿದವರಿಗೆ ಎಲ್ಲವೂ ಮೊದಲಿನಂತೆಯೇ ಕಾಣಿಸಿತು. ಆದರೆ ಒಳಗೊಂದು ಬದಲಾವಣೆ ಆಗಿತ್ತು…
ಹಿಂದೆ ಯಾವ ಮಾತು ನಿರಾಳತೆಯನ್ನು ಕೊಡುತ್ತಿತ್ತೋ, ಈಗ ಅದೇ ಮಾತು ಒಂದು ಎಚ್ಚರಿಕೆಯನ್ನು ಹುಟ್ಟಿಸುತ್ತಿತ್ತು. ಹಿಂದೆ ಇದ್ದ ವಿಶ್ವಾಸದ ಜಾಗದಲ್ಲಿ ಈಗ ಒಂದು ಸಣ್ಣ ಸಂದೇಹ ಕುಳಿತಿತ್ತು.

ಕ್ಷಮೆ ಸಿಕ್ಕಿತ್ತು.  ಆದರೆ ಭದ್ರತೆ ಇನ್ನೂ ಮರಳಿರಲಿಲ್ಲ. ಇಲ್ಲಿಯೇ ನಾವು ಹೆಚ್ಚಾಗಿ ಮಾಡುವ ತಪ್ಪು ಏನೆಂದರೆ ಕ್ಷಮೆ ಕೇಳುವುದನ್ನೇ ತಪ್ಪು ಸರಿಪಡಿಸಿದಂತೆ ಭಾವಿಸುವುದು. ಕ್ಷಮೆ ಕೇಳುವುದು ಅಗತ್ಯ. ಆದರೆ ಅದು ಪ್ರಾರಂಭ ಮಾತ್ರ. ಯಾರದೊ ಒಬ್ಬರ ಕಾಲಿಗೆ ಗಾಯ ಮಾಡಿದರೆ,“ನನಗೆ ತುಂಬಾ ಬೇಸರವಾಗಿದೆ” ಎಂದ ಮಾತ್ರಕ್ಕೆ ಅವರ ನೋವು ಕಡಿಮೆಯಾಗುವುದಿಲ್ಲ. ಗಾಯಕ್ಕೆ ಔಷಧಿ ಬೇಕು. ಆಮೇಲೆ ಆರಲು ಸಮಯ ಬೇಕು. ಮನಸ್ಸಿನ ಗಾಯಗಳಿಗೂ ಇದೇ ನಿಯಮ. ನಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಬಹುದು. ಆದರೆ ಅದರ ಪರಿಣಾಮವನ್ನು ಎದುರಿಸುತ್ತಿರುವ ವ್ಯಕ್ತಿಗೆ, ಆ ನೋವಿನಿಂದ ಹೊರಬರಲು ತನ್ನದೇ ಆದ ಸಮಯ ಬೇಕಾಗುತ್ತದೆ.

ಕೆಲವೊಮ್ಮೆ ನಾವು ಹೀಗೆ ಕೇಳುತ್ತೇವೆ. “ಇನ್ನೂ ಅದನ್ನೇ ನೆನಪಿಟ್ಟುಕೊಂಡಿದ್ದೀಯಾ?” ಅದೇ ಹಠ ಮುಂದುವರೆಸುತ್ತಿದ್ದೀಯ? ಮರೆತು ಮುಂದೆ ಸಾಗೋದಲ್ವ? ಆ ಪ್ರಶ್ನೆಯ ಹಿಂದೆ ನಮ್ಮ ಆತುರವಿರುತ್ತದೆ. ಆದರೆ ಎದುರಿನವನ ಮೌನದ ಹಿಂದೆ ಅವನಿಗೆ ಇನ್ನೂ ಉಳಿದಿರುವ ನೋವಿರಬಹುದು.

ಕ್ಷಮಿಸುವುದು ಎಂದರೆ ನಡೆದದ್ದೇ ಆಗಿಲ್ಲ ಎಂದು ನಟಿಸುವುದಲ್ಲ. ನೋವನ್ನು ಮರೆಮಾಚಿ ಮತ್ತೆ ಮತ್ತೆ ನಗುವುದೂ ಅಲ್ಲ. ಕೆಲವೊಮ್ಮೆ ಕ್ಷಮೆ ಎಂದರೆ…
“ನೀನು ನನ್ನನ್ನು ನೋಯಿಸಿದ್ದೀಯ ಎಂಬ ಸತ್ಯವನ್ನು ನಾನು ನಿರಾಕರಿಸುವುದಿಲ್ಲ. ಆದರೆ ಆ ನೋವಿನ ಕಾರಣಕ್ಕೆ ನನ್ನ ಬದುಕನ್ನೇ ನಿಲ್ಲಿಸುವುದಿಲ್ಲ.”

ಅಷ್ಟೇ….

ಆದರೆ ತಪ್ಪು ಮಾಡಿದವನಿಗೂ ಒಂದು ಹೊಣೆ ಇದೆ. ಅವನು ಕೇವಲ “ನನ್ನನ್ನು ಕ್ಷಮಿಸು” ಎಂದು ಹೇಳಿ ಮುಂದೆ ಸಾಗಿ ಬಿಡುವಂತಿಲ್ಲ. ಅವನು ಕೇಳಬೇಕು. “ನಾನು ಮಾಡಿದುದರಿಂದ ನಿನಗೆ ಏನು ಉಳಿದುಹೋಯಿತು?” ಆಮೇಲೆ ಸಾಧ್ಯವಾದಷ್ಟು ಅದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಯಾಕೆಂದರೆ ನಿಜವಾದ ಪಶ್ಚಾತ್ತಾಪ ಮಾತಿನಲ್ಲಿ ಮಾತ್ರ ಕಾಣಿಸುವುದಿಲ್ಲ.
ಬದಲಾದ ವರ್ತನೆಯಲ್ಲಿ ಕಾಣಿಸುತ್ತದೆ.

ಒಡೆದ ವಿಶ್ವಾಸಕ್ಕೆ ಮತ್ತೆ ಮಾತು ಕೊಡುವುದು ಸುಲಭ. ಆದರೆ ಆ ಮಾತನ್ನು ಉಳಿಸಿಕೊಳ್ಳಲು ದಿನಗಳು ಬೇಕಾಗುತ್ತವೆ. ಒಮ್ಮೆ ಭಯ ಹುಟ್ಟಿಸಿದ ಮನಸ್ಸಿಗೆಮತ್ತೆ ಭದ್ರತೆಯ ಭಾವನೆ ಬರಲು ಸಮಯ ಬೇಕಾಗುತ್ತದೆ. ಆದ್ದರಿಂದಲೇ ಕ್ಷಮೆ ಕ್ಷಣದ ನಿರ್ಧಾರವಾಗಬಹುದು. ಆದರೆ ಗುಣಮುಖವಾಗುವುದು ಒಂದು ಪಯಣ. ತಪ್ಪು ಮಾಡಿದವನು ಕ್ಷಮೆ ಕೇಳಿದ ಮೇಲೆ ತಾಳ್ಮೆ ಕಲಿಯಬೇಕು. ಕ್ಷಮಿಸಿದವನು ತನ್ನ ನೋವು ಕಡಿಮೆಯಾಗುವವರೆಗೆ ಸಮಯ ತೆಗೆದುಕೊಳ್ಳಬಹುದು. ಇಲ್ಲಿ ಇಬ್ಬರಿಗೂ ತಮ್ಮ ತಮ್ಮ ಹೊಣೆಗಾರಿಕೆ ಇದೆ.

ಒಬ್ಬನು “ನಾನು ಕ್ಷಮೆ ಕೇಳಿದ್ದೇನೆ, ಇನ್ನು ಮುಗಿಸು” ಎನ್ನಬಾರದು. ಇನ್ನೊಬ್ಬನು ಕ್ಷಮೆ ಎಂಬ ಹೆಸರಿನಲ್ಲಿ ತನ್ನ ನೋವನ್ನು ಒತ್ತಿ ಹಿಡಿದು ಒಳಗೊಳಗೇ ಸಾಯಬಾರದು. ಕೆಲವು ಸಂಬಂಧಗಳು ಕ್ಷಮೆಯ ನಂತರ ಇನ್ನಷ್ಟು ಗಟ್ಟಿಯಾಗುತ್ತವೆ. ಆದರೆ ಅದಕ್ಕೆ ಕ್ಷಮೆ ಮಾತ್ರ ಸಾಲದು. ಅರ್ಥಮಾಡಿಕೊಳ್ಳುವಿಕೆ ಬೇಕು. ಬದಲಾವಣೆ ಬೇಕು. ತಾಳ್ಮೆ ಬೇಕು. ಮತ್ತೆ ವಿಶ್ವಾಸ ಮೂಡುವವರೆಗೆ ಕಾಯುವ ಪ್ರೀತಿ ಬೇಕು. ಯಾಕೆಂದರೆ ಕ್ಷಮೆ ಎನ್ನುವುದು ಗಾಯದ ಮೇಲೆ ಹಾಕುವ ಮೊದಲ ಔಷಧಿ ಮಾತ್ರ. ಗುಣಮುಖವಾಗುವುದು ಇನ್ನೂ ಬಾಕಿಯಿರುತ್ತದೆ.ಮತ್ತೂ ಕೆಲವೊಮ್ಮೆ…

“ಕ್ಷಮಿಸಿದ್ದೇನೆ” ಎನ್ನುವುದು

“ನೋವಾಗಲೇ ಇಲ್ಲ” ಎನ್ನುವ ಅರ್ಥವಲ್ಲ.

ಅದು ಕೇವಲ…

“ನೋವಾಯಿತು. ಆದರೂ ಆ ನೋವಿಗಿಂತ ದೊಡ್ಡವನಾಗಿ ಬದುಕಲು ಪ್ರಯತ್ನಿಸುತ್ತಿದ್ದೇನೆ” ಎನ್ನುವ ಮನಸ್ಸಿನ ಮಾತು. ಕ್ಷಮೆ ಸಂಬಂಧವನ್ನು ಉಳಿಸಬಹುದು…ಆದರೆ ಗಾಯವನ್ನು ಗುಣಪಡಿಸುವುದು ಮಾತಲ್ಲ… ಕಾಲ, ಕಾಳಜಿ ಮತ್ತು ಬದಲಾವಣೆ.

ಇಷ್ಟೇ ಹೇಳಬೇಕಿತ್ತು ಮುಂದಿನದು ಕ್ಷಮೆ ಕೇಳುವವರಿಗೆ, ಕ್ಷಮಿಸುವವರಿಗೆ ಬಿಟ್ಟಿದ್ದು..
ಧನ್ಯವಾದಗಳು.


  • ಪಾರ್ವತಿ ಜಗದೀಶ್ – ಹೋಟೆಲ್ ಉದ್ಯಮಿ, ಲೇಖಕರು, ಹಾವೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading