ಹೃದಯದಲಿ ಇದೇನಿದು (ಭಾಗ -೧)

ಶಶಾಂಕ್ ಮತ್ತು ಶಾರ್ವರಿ ಮದುವೆಯಾಗಿ 14 ವರ್ಷಗಳಾಗಿದ್ದರೂ ಹಾಗೂ ಎರಡು ಮಕ್ಕಳಾಗಿದ್ದರೂ ಸಹ ದಂಪತಿಗಳ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಸಿ.ಸಿ ನಂಬರ್ 130/ 22 ಕೇಸ್ ಕೋರ್ಟ್ ನಲ್ಲಿ ಬಂದಾಗ ತೀರ್ಪು ಯಾರ ಕಡೆಗೆ ವಾಲಿತು, ಪೊಲೀಸ್ ಅಧಿಕಾರಿ ಸಿದ್ದೇಶ್ ಸಿದ್ದನಮಠ ಅವರು ನೈಜ್ಯ ಘಟನೆ ಆಧಾರಿತ ಕಾದಂಬರಿಯನ್ನು ಆಕೃತಿಕನ್ನಡದಲ್ಲಿ ಸಂಚಿಕೆಯ ರೂಪದಲ್ಲಿ ಹೊರತರುತ್ತಿದ್ದಾರೆ, ತಪ್ಪದೆ ಓದಿ…

ಅದಾಗಲೇ ಕೋರ್ಟ್ ಕಲಾಪ ಆರಂಭವಾಗಿತ್ತು. ಕೋರ್ಟ್ ಒಳಗೆ ಎಂದಿನಂತೆ ಜನ ಕಿಕ್ಕಿರಿದು ತುಂಬಿದ್ದರು ನ್ಯಾಯಪೀಠದ.ಮುಂದೆ ಎದುರು ಬದುರಾಗಿ ಸಾಲಾಗಿ ವಕೀಲರು ಕುಳಿತ್ತಿದ್ದರು. ಪೂರ್ವ ದಿಕ್ಕಿನಿಂದ ಸೂರ್ಯನು ತನ್ನ ಕಿರಣಗಳನ್ನು ಕಿಟಕಿಯ ಮೂಲಕ ಕೋರ್ಟ್ ಹಾಲ್ ಗೆ ಪಸರಿಸಿದ್ದನು. ಕೋರ್ಟ್ ಕಲಾಪಗಳನ್ನು ನಿಂತು ನೋಡುತ್ತಿವೆಯೋ ಎನ್ನುವಂತೆ ಹಾಲ್ ನಲ್ಲಿನ ಮೇಲ್ಚಾವಣಿಯಲ್ಲಿದ್ದ ಫ್ಯಾನ್ ಗಳು ತಿರುಗುತ್ತಿದ್ದವು. ಫ್ಯಾನ್ ಗಳು ತಣ್ಣನೆಯ ಗಾಳಿಯನ್ನು ಹೊರಸುಸೂತ್ತಿದ್ದ ಕಾರಣ ಕುಳಿತಿದ್ದವರಿಗೆಲ್ಲಾ ತಂಪಿನ ಅನುಭವವಾಗುತ್ತಿತ್ತು. ಜಡ್ಜ ಸಾಹೇಬರ ಹಿಂದಿದ್ದ ಫೋಟೋದಲ್ಲಿದ್ದ ಗಾಂಧೀಜಿ ಮಾತ್ರ ವಿಚಾರಣೆಗಳನ್ನು ಕಣ್ ಮಿಟುಕಿಸದೇ ತದೇಕಚಿತ್ತದಿಂದ ನೋಡುತ್ತಿದ್ದರು.

ಶಿರಸ್ತೇದಾರರು ಎದ್ದು ಒಂದೊಂದೇ ಫೈಲ್ಗಳನ್ನು ಕೈಲಿಡಿದು ಮೇಲೆ ಬರೆದಿದ್ದ ಕೇಸ್ ನಂಬರ್ ಗಳನ್ನು ಓದಿ ಕೂಗಿ ಕೂಗಿ ಹೇಳುತ್ತಿದ್ದನು. ಹೀಗೆ 10 ಕೇಸ್ ಗಳನ್ನು ಕೂಗಿದ ನಂತರ
“ಸಿ.ಸಿ ನಂಬರ್ 130/ 22 ಶಶಾಂಕ್ ಮತ್ತು ಶಾರ್ವರಿ. ಚಂದ್ರಶೇಖರ್ ವಕೀಲರು ಎಂದು ಕೂಗಿದರು.

ಕೂಗುತ್ತಿದ್ದಂತೆ ಜಡ್ಜ್ ಮುಂದೆ ಬಂದು ಕೈ ಮುಗಿದು ತಲೆಬಾಗಿ ನಿಂತ ಶಶಾಂಕ್ .ಇನ್ನೊಂದು ಕಡೆ ಶಾರ್ವರಿ ಕೂಡ ಕೈ ಮುಗಿದು ನಿಂತಿದ್ದಳು. ಇವರಿಬ್ಬರನ್ನು ನೋಡಿದ ಜಡ್ಜ್ ಸಾಹೇಬರು. “ಸ್ವಲ್ಪ ಹೊತ್ತು ಕುಳಿತಿರಿ, ಮತ್ತೆ ಕರೀತೀನಿ” ಎಂದರು. ಇಬ್ಬರೂ ನಮಸ್ಕರಿಸಿ ಹಿಂಬದಿಯಲ್ಲಿ ಹಾಕಿದ್ದ ಆಸನಗಳ ಮೇಲೆ ಬಂದು ಶಶಾಂಕ್ ಒಂದು ಕಡೆ ಶಾರ್ವರಿ ಒಂದು ಕಡೆ ಆಸೀನರಾದರು. ಸುಮಾರು ಒಂದೂವರೆ ಗಂಟೆಗಳ ಕಾಲ ಎಲ್ಲಾ ಪ್ರಕರಣಗಳನ್ನು ಶಿರಸ್ತೇದಾರ ಕೂಗುತ್ತಿದ್ದಂತೆ ಅರ್ಜಿದಾರರು ಹಾಗೂ ಎದುರು ಪಾರ್ಟಿಯವರು ವಾದ ಮಾಡಲು ತಮ್ಮ ತಮ್ಮ ವಕೀಲರ ಮೂಲಕ ತಮ್ಮ ಹಾಜರಾತಿಯನ್ನು ಜಡ್ಜ್ ಸಾಹೇಬರ ಮುಂದೆ ಖಚಿತಪಡಿಸಿದ ನಂತರ ವಿಚಾರಣೆ ಪ್ರಾರಂಭವಾಗುತ್ತಿತ್ತು. ಅಂತೆಯೇ ಶಿರಸ್ತೇದಾರರು ಎಂದಿನಂತೆ “ಸಿ.ಸಿ ನಂಬರ್ 130/ 22 ಶಶಾಂಕ್ ವಿರುದ್ಧ ಶಾರ್ವರಿ” ಮತ್ತು ಚಂದ್ರಶೇಖರ್ ಅಡ್ವೊಕೇಟ್, ಶಶಾಂಕ್ ಪರ ಕೆ ಬಿ ಆರ್. ಅಡ್ವೊಕೇಟ್. ಎಂದು ಕೂಗುತ್ತಿದ್ದಂತೆ ಶಶಾಂಕ್ ಕಟಕಟೆ ಹತ್ತಿ ಪೀಠದಲ್ಲಿ ಕುಳಿತಿದ್ದ ಜಡ್ಜ್ ಗೆ ನಮಸ್ಕರಿಸಿ ವಿಧೇಯನಾಗಿ ನಿಂತಿದ್ದ.ಹಾಗೆಯೇ ಶಾರ್ವರಿ ಕೂಡ ಇನ್ನೊಂದು ಕಟ ಕಟೆಯಲ್ಲಿ ನಿಂತಿದ್ದಳು.

ಶಿರಸ್ತೇದಾರನು ಜಡ್ಜ್ ಗೆ ಕೈ ಮುಗಿದು ತನ್ನ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾನೆ. ಶಿರಸ್ತೇದಾರ್… ಕಟಕಟೆಯಲ್ಲಿ ನಿಂತಿದ್ದ ಶಶಾಂಕನಿಗೆ ಅಲ್ಲಿ ಬರೆದಿರುವುದನ್ನು ಓದಿ ಹೇಳಿ ಎಂದು ಸೂಚಿಸಿದ. ತಕ್ಷಣ ಶಶಾಂಕನು.

“ನಾನು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನು ಅಲ್ಲದೆ ಬೇರೇನೂ ಹೇಳುವುದಿಲ್ಲ ನಾನು ಹೇಳುವುದೆಲ್ಲಾ ಸತ್ಯ..”

ಅಡ್ವೊಕೇಟ್ ಚಂದ್ರಶೇಖರ್ ಅವರು ಶಾರ್ವರಿ ಪರ ತಮ್ಮ ವಾದವನ್ನು ಮಂಡಿಸುತ್ತಾ…

” ಮಹಾಸ್ವಾಮಿಗಳೇ, ನನ್ನ ಕಕ್ಷಿದಾರರಾದ ಶಾರ್ವರಿ ಯವರು ತಮ್ಮ ಗಂಡ ಶಶಾಂಕ್ ಅವರಿಂದ ವಿಚ್ಛೇದನ ಕೋರಿ ಈ ಅರ್ಜಿ ಸಲ್ಲಿಸಿದ್ದಾರೆ. ಮದುವೆಯಾಗಿ 14 ವರ್ಷಗಳಾಗಿದ್ದರೂ ಹಾಗೂ ಎರಡು ಮಕ್ಕಳಾಗಿದ್ದರೂ ಸಹ ದಂಪತಿಗಳ ನಡುವೆ ಯಾವುದೇ ಹೊಂದಾಣಿಕೆ ಇಲ್ಲ ಗಂಡನಿಂದ ಶಾರ್ವರಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಕರ್ತವ್ಯದ ಮೇಲೆ ಹೊರಗೆ ಹೋಗಿ ತಿಂಗಳುಗಟ್ಟಲೆ ಮನೆಗೆ ಬಾರದೆ ಹೆಂಡತಿ ಮಕ್ಕಳನ್ನು ನೋಡಿಕೊಳ್ಳದೆ, ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡದೆ ಅವಳ ಆಸೆ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳದೆ ಇರುವುದರಿಂದ ನನ್ನ ಕಕ್ಷಿದಾರರಿಗೆ ತುಂಬಾ ಮಾನಸಿಕ ಯಾತನೆಯಾಗಿ ನೆಮ್ಮದಿ ಇಲ್ಲದಂತಾಗಿದೆ.ಆದ್ದರಿಂದ ಕಾನೂನಾತ್ಮಕವಾಗಿ ಬೇರೆಯಾಗುವುದೇ ಸೂಕ್ತ ಎಂದು ನಿರ್ಧರಿಸಿದ್ದಾರೆ.
ಆದುದರಿಂದ ನನ್ನ ಕಕ್ಷಿದಾರರ ವಿಚ್ಛೇದನಕ್ಕೆ ಅರ್ಜಿಯನ್ನು ಮಂಜೂರು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.”

ಅಡ್ವೊಕೇಟ್ ಕೆ.ಬಿ ಆರ್ ಶಶಾಂಕ್ ಪರ ವಕೀಲರ ವಾದ.‌‌‌ ಶಾಂತತೆಯಲ್ಲಿ ಎದ್ದುನಿಂತ ವಕೀಲರು” ಮಹಾಸ್ವಾಮಿಗಳೇ ನನ್ನ ವಿದ್ವಾಂಸ ಸ್ನೇಹಿತರು ಹೇಳಿದ ಮಾತನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ನನ್ನ ಕಕ್ಷಿದಾರ ಶಶಾಂಕ್ ತನ್ನ ಹೆಂಡತಿ ಶಾರ್ವರಿ ಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಸಣ್ಣ ಪುಟ್ಟ ಮನಸ್ತಾಪಗಳು, ವೈಚಾರಿಕ ಭಿನ್ನಾಭಿಪ್ರಾಯಗಳು ಪ್ರತಿಯೊಂದು ಸಂಸಾರದಲ್ಲಿ ಇರುತ್ತದೆ. ಆದರೆ ಅದನ್ನ ಮಾನಸಿಕ ಕಿರುಕುಳ ಎಂದು ಕರೆದು ಸಂಸಾರ ಮುರಿಯಲು ಹೊರಟಿರುವುದು ಸರಿಯಲ್ಲ. ಶಶಾಂಕ್ ಅವರಿಗೆ ಈ ಮದುವೆ ಬಂಧವನ್ನು ಉಳಿಸಿಕೊಳ್ಳಲು ಸಂಪೂರ್ಣ ಇಷ್ಟವಿದೆ. ಆದರೆ ವಿಚ್ಛೇದನಕ್ಕೆ ಸಿದ್ದರಿಲ್ಲ. ಮೇಲಾಗಿ ನನ್ನ ಕಕ್ಷಿದಾರರು ಕಂಪನಿಯೊಂದರಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಇರುವುದರಿಂದ ಕರ್ತವ್ಯದ ಮೇಲೆ ಬೇರೆ ಬೇರೆ ಸ್ಥಳಗಳಿಗೆ ಹೋಗಲೇಬೇಕಾಗುತ್ತದೆ. ಕುಟುಂಬವನ್ನು ಸಾಕಲು ನೆರವಾಗುತ್ತದೆ ಕುಟುಂಬದ ದೃಷ್ಟಿಯಿಂದಲೇ ನನ್ನ ಕಕ್ಷಿದಾರರು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕೆಲಸವನ್ನು ಮಾಡುತ್ತಿದ್ದಾರೆ.”

ಅಡ್ವೊಕೇಟ್ ಚಂದ್ರಶೇಖರ್

” ಮಹಾಸ್ವಾಮಿಗಳೇ; ಪ್ರೀತಿ ಎಂಬುದು ಕೇವಲ ಮಾತಿನಲ್ಲಿ ಇರಬಾರದು. ನಡವಳಿಕೆಯಲ್ಲಿ ಇರಬೇಕು. ಸಣ್ಣ ವಿಷಯಗಳಿಗೂ ಗಂಡ ಮತ್ತು ಅವರ ಕುಟುಂಬದವರು ಶಾರ್ವರಿಯನ್ನು ಕೀಳಾಗಿ ಕಾಣುತ್ತಾರೆ. ಮೇಲಾಗಿ ನನ್ನ ಕಕ್ಷಿದಾರರು ತುಂಬು ಯೌವ್ವನದ ಅವಸ್ಥೆಯಲ್ಲಿದ್ದು ಅವರಿಗೆ ತಮ್ಮದೇ ಆದ ಪ್ರಕೃತಿದತ್ತ ದೈಹಿಕ ಆಸೆ ಆಕಾಂಕ್ಷಿಗಳಿರುತ್ತವೆ. ಅದನ್ನು ಈಡೇರಿಸಬೇಕಾಗಿರುವುದು ಗಂಡನಾದವನ ಕರ್ತವ್ಯ ಮತ್ತು ಧರ್ಮ ಕೂಡ ಹೌದು. ಹಾಗಾದರೆ ತಿಂಗಳಗಟ್ಟಲೆ ಕರ್ತವ್ಯವೆಂದು ಗಂಡ ಹೊರಗೆ ಹೋದಾಗ ಹೆಂಡತಿಯಾದವಳು ತನ್ನ ಬಯಕೆಯನ್ನು ಕಡ್ಡಾಯವಾಗಿ ನಿಯಂತ್ರಿಸಿ ಇನ್ನು ನನ್ನ ಗಂಡನಿಂದ ನಾನು ಯಾವ ಸುಖವನ್ನು ಪಡೆಯಲಾರೆನೆಂದು ತೀರ್ಮಾನಿಸಿ ವಿಚ್ಛೇಧನದ ನಿರ್ಧಾರ ಮಾಡಿರುತ್ತಾರೆ. ಪ್ರೀತಿ ಪ್ರೇಮವಿಲ್ಲದ ಜಾಗದಲ್ಲಿ ಒತ್ತಾಯವಾಗಿ ಜೊತೆಯಲ್ಲಿರಿ ಎಂದು ಹೇಳುವುದು ಹೆಂಡತಿಯ ವ್ಯಕ್ತಿತ್ವಕ್ಕೆ ಮಾಡುವ ಅನ್ಯಾಯ‌ ಜೀವಮಾನವಿಡಿ ನರಕದಲ್ಲಿ ಬೇಯಲು ಯಾರಿಗೂ ಇಷ್ಟವಿರುವುದಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ನಿರ್ಧಾರ ಮಾಡಿಬಿಟ್ಟಿದ್ದಾರೆ ಅವರಿಗೆ ಈ ಮದುವೆ ಮುಂದುವರಿಸಲು ಆಸಕ್ತಿ ಇಲ್ಲ.”

ಅಡ್ವೊಕೇಟ್ ಕೆ.ಬಿ.ಆರ್

” ಗೌರವಾನ್ವಿತ ಮಹಾಸ್ವಾಮಿಗಳೇ, ಈ ವಿಚ್ಛೇದನ ಎನ್ನುವುದು ಕೊನೆಯ ಆಯ್ಕೆ ಆಗಬೇಕೆ ವಿನಃ ಮೊದಲ ನಿರ್ಧಾರವಾಗಬಾರದು. ಇಂದಿನ ದಾವಂತದ ಜೀವನದಲ್ಲಿ ಸಣ್ಣ ಕೋಪ ಅಹಂ ಅಥವಾ ಮೂರನೇ ವ್ಯಕ್ತಿಗಳ ಪ್ರಚೋದನೆಯಿಂದಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮದುವೆ ಎನ್ನುವುದು ಕೇವಲ ಇಬ್ಬರೂ ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ ಎರಡು ಕುಟುಂಬಗಳ ನಡುವಿನ ಬಂದ. ಶಶಾಂಕ್ ಅವರು ತಮ್ಮ ತಪ್ಪೇನಾದರೂ ಇದ್ದರೆ ತಿದ್ದಿಕೊಳ್ಳಲು ಸಿದ್ದರಿದ್ದಾರೆ ಹೆಂಡತಿಯನ್ನು ಗೌರವದಿಂದ ನೋಡಿಕೊಳ್ಳಲು ಬದ್ಧರು. ಇದರಿಂದ ಕೋಪದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಕೋರ್ಟ್ ತಕ್ಷಣಕ್ಕೆ ವಿಚ್ಛೇದನ ನೀಡಬಾರದು. ಮೇಲಾಗಿ ಈ ದಂಪತಿಗಳ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ‘ಪೃಥ್ವಿ’ ಮತ್ತು ‘ಪ್ರೀತಮ್’ಎಂಬ ಎರಡು ಮುದ್ದಾದ ಗಂಡು ಮಕ್ಕಳಿರುವುದರಿಂದ ಆ ಮಕ್ಕಳು ಈಗಾಗಲೇ ಪ್ರಾಥಮಿಕ ಹಂತದಲ್ಲಿ ಓದುತ್ತಿರುವುದರಿಂದ ನೀವು ನೀಡುವ ಈ ತೀರ್ಪು ಮಕ್ಕಳ ಜೀವನದ ಮೇಲೆ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗೂ ವಿಚ್ಛೇದನವನ್ನು ನೀಡಿದರೆ ಮಕ್ಕಳು ತಾಯಿ ಮತ್ತು ತಂದೆಯ ಪ್ರೀತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಮಾನ್ಯ ಘನ ನ್ಯಾಯಾಲಯವು ವಿಚ್ಛೇದನ ನೀಡಬಾರದೆಂದು ಪ್ರಾರ್ಥಿಸುತ್ತೇನೆ. that’s all your honour ” ಎಂದು ವಾದ ಮುಗಿಸುತ್ತಾರೆ.

ಅಡ್ವೊಕೇಟ್ ಚಂದ್ರಶೇಖರ್

ಕೋರ್ಟ್ ಸಮಯವನ್ನು ವ್ಯರ್ಥ ಮಾಡುವುದು ಬೇಡ ಮಹಾಸ್ವಾಮಿಗಳೇ, ಶಾರ್ವರಿಯವರು ಈಗಾಗಲೇ ಮನಸ್ಸು ಮಾಡಿದ್ದಾರೆ, ಮನಸ್ಸು ಮುರಿದು ಹೋದ ಮೇಲೆ ಮತ್ತೆ ಒಂದಾಗಲು ಸಾಧ್ಯವಿಲ್ಲ. ಗಂಡನಿಗೆ ಇಷ್ಟವಿದೆ ಎಂದ ತಕ್ಷಣ ಹೆಂಡತಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.

ಅಡ್ವೊಕೇಟ್ ಕೆ.ಬಿ.ಆರ್ 

ಮಹಾಸ್ವಾಮಿಗಳೇ ಹಿಂದೂವಿವಾಹ ಕಾಯ್ದೆಯ ಮೂಲ ಉದ್ದೇಶವೇ ಸಂಸಾರವನ್ನು ಜೋಡಿಸುವುದೇ ಹೊರತು ಮುರಿಯುವುದಲ್ಲ. ಶಾರ್ವರಿ ಅವರು ಯಾವುದೇ ಬಲವಾದ ಆಧಾರ ಅಥವಾ ಸಾಕ್ಷಿ ಇಲ್ಲದೆ ಕೇವಲ ಸಾಮಾನ್ಯ ಮನಸ್ತಾಪಗಳನ್ನು ದೊಡ್ಡದು ಮಾಡಿ ತೋರಿಸುತ್ತಿದ್ದಾರೆ. ಕಾನೂನು ನೀಡುತ್ತಿರುವ ಅವಕಾಶಗಳನ್ನು ಬಳಸಿ ಈ ದಂಪತಿಗಳಿಗೆ ಒಮ್ಮೆ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಅಲ್ಲಿ ಶಾರ್ವರಿಯವರು ತಮ್ಮ ಅಹಂ ಪಕ್ಕಕ್ಕಿಟ್ಟು ಮಾತನಾಡಿದರೆ ಈ ಸಂಸಾರ ಉಳಿಯುವ ಎಲ್ಲಾ ಸಾಧ್ಯತೆಗಳು ಇದೆ. ನನ್ನ ಪಕ್ಷಿದಾರರು ತನ್ನ ಹೆಂಡತಿಗೆ ಇನ್ನೊಂದು ಅವಕಾಶ ನೀಡಲು ಕೇಳುತ್ತಿದ್ದಾರೆ.

ನ್ಯಾಯಾಧೀಶರ ಮಾತು

ಎರಡು ಕಡೆಯ ವಾದ ವಿವಾದಗಳನ್ನು ಆಲಿಸಿದ ಘನ ನ್ಯಾಯಾಧೀಶರು ಶಾರ್ವರಿಯ ಕಡೆ ನೋಡಿ” ಏನಮ್ಮಾ ಸುಂದರ ಸಂಸಾರವನ್ನು ಹಾಗೂ ಜೀವನವನ್ನು ಹಾಳು ಮಾಡಿಕೊಳ್ಳಬೇಡ ಒಮ್ಮೆ ಯೋಚಿಸಿ ನಿರ್ಧರಿಸಮ್ಮಾ.”

ಶಾರ್ವರಿ : ಕಣ್ಣೀರು ಹಾಕುತ್ತಾ, ಸ್ವಾಮಿ ನೀವು ವಿಚ್ಛೇದನ ಕೊಡದೆ ಹೋದರೆ ನಾನು ಇಲ್ಲೇ ವಿಷ ಕುಡಿದು ಸಾಯುತ್ತೇನೆ. ಇಂಥವರೊಂದಿಗೆ ಜೀವನ ಸಾಗಿಸುವುದಕ್ಕಿಂತ ವಿಷ ಕುಡಿಯುವುದು ಮೇಲು.

ನ್ಯಾಯಾಧೀಶರು:
“ಆತ್ಮಹತ್ಯೆ ಮಾಡಿಕೊಳ್ಳುವುದು ಸಹ ಕಾನೂನು ರೀತಿ ಅಪರಾಧ ಕಣಮ್ಮಾ”

ನ್ಯಾಯಾಧೀಶರ ತೀರ್ಪು :
ಕಾನೂನಿನ ಪ್ರಕಾರ ಮತ್ತು ಕುಟುಂಬದ ಹಿತ ದೃಷ್ಟಿಯಿಂದ ಮದುವೆಯನ್ನು ಉಳಿಸಲು ಕೊನೆಯ ಹಂತದವರೆಗೆ ಪ್ರಯತ್ನಿಸುವುದು ಕೋರ್ಟಿನ ಕರ್ತವ್ಯ. ಆದ್ದರಿಂದ ತಕ್ಷಣವೇ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಕೌನ್ಸಿಲಿಂಗ್ ಗೆ ರವಾನಿಸಲಾಗುತ್ತಿದೆ. ಇಬ್ಬರು ಆರು ತಿಂಗಳ ಕಾಲ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಬೇಕು.

ತದನಂತರ ವರದಿಯನ್ನು ಆಧರಿಸಿ ಮುಂದಿನ ವಿಚಾರಣೆ ನಡೆಸಲಾಗುವುದು. ಕೋರ್ಟ್ ಮುಂದಿನ ದಿನಾಂಕಕ್ಕೆ ಮುಂದೂಡಲ್ಪಟ್ಟಿದೆ.
ನ್ಯಾಯಾಧೀಶರು ಪೀಠದಿಂದ ಎದ್ದು ಹೊರ ನಡೆದರು.

ಮುಂದುವರೆಯುವುದು….


  • ಸಿದ್ದೇಶ್ ಸಿದ್ದನಮಠ – ಪೊಲೀಸ್ ಅಧಿಕಾರಿಗಳು,ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading