“ಆಚಾರವೇ ಸ್ವರ್ಗ, ಅನಾಚಾರವೇ ನರಕ” ಆಚಾರ ಎಂದರೆ ಕೇವಲ ಸ್ನಾನ ಮಾಡುವುದು, ಒಳ್ಳೆಯ ಬಟ್ಟೆ ತೊಡುವುದು, ಹಣೆಯ ಮೇಲೆ ವಿಭೂತಿ-ತಿಲಕ ಇಟ್ಟುಕೊಳ್ಳುವುದು ಅಲ್ಲ. ಶರಣರ ಪ್ರಕಾರ ಆಚಾರ ಎಂದರೆ ಕಾಯಕದಲ್ಲಿ ಶುದ್ಧತೆ. ಲೇಖಕರಾದ ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ನಮ್ಮ ಹಿರಿಯರು ಹೇಳುತ್ತಿದ್ದರು – ಸತ್ತ ಮೇಲೆ ಸ್ವರ್ಗ ಸಿಗುತ್ತದೆಯೋ, ನರಕ ಸಿಗುತ್ತದೆಯೋ ಎಂದು. ಆದರೆ ೧೨ನೇ ಶತಮಾನದ ಶರಣರಾದ ಬಸವಣ್ಣನವರು, ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣರು ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು.
ಅವರ ಪ್ರಕಾರ ಸ್ವರ್ಗ-ನರಕ ಎಂಬುದು ಸತ್ತ ನಂತರ ಎಲ್ಲೋ ಆಕಾಶದಲ್ಲಿ ಇರುವುದಲ್ಲ. ಅದು ಇಲ್ಲೇ ಇದೆ. ನಮ್ಮ ನಡೆ-ನುಡಿಯಲ್ಲೇ ಇದೆ. ನಾವು ಹೇಗೆ ಬದುಕುತ್ತೇವೋ, ಹೇಗೆ ಮಾತನಾಡುತ್ತೇವೆಯೋ ಅದೇ ಸ್ವರ್ಗ, ಅದೇ ನರಕ.

“ಆಚಾರವೇ ಸ್ವರ್ಗ, ಅನಾಚಾರವೇ ನರಕ” ಆಚಾರ ಎಂದರೆ ಕೇವಲ ಸ್ನಾನ ಮಾಡುವುದು, ಒಳ್ಳೆಯ ಬಟ್ಟೆ ತೊಡುವುದು, ಹಣೆಯ ಮೇಲೆ ವಿಭೂತಿ-ತಿಲಕ ಇಟ್ಟುಕೊಳ್ಳುವುದು ಅಲ್ಲ. ಶರಣರ ಪ್ರಕಾರ ಆಚಾರ ಎಂದರೆ ಕಾಯಕದಲ್ಲಿ ಶುದ್ಧತೆ. ಮಾಡುವ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡುವುದು, ಸುಳ್ಳು ಹೇಳದಿರುವುದು, ಇನ್ನೊಬ್ಬರ ಮನಸ್ಸು ನೋಯಿಸದಂತೆ ಮಾತನಾಡುವುದು, ಅನ್ಯರ ಏಳಿಗೆ ಕುರಿತು ಹೊಟ್ಟೆಕಿಚ್ಚು, ದ್ವೇಷ ಪಡದಿರುವುದು, ಅಹಂಕಾರದ ನಡೆ ತೋರದಿರುವುದು, ತನಗಿದ್ದುದರಲ್ಲಿ ಇನ್ನೊಬ್ಬರಿಗೆ ಹಂಚಿ ತಿನ್ನುವುದು. ಇದನ್ನೇ ಆಚಾರವೆಂದು ಬಸವಣ್ಣನವರು ಸ್ಪಷ್ಟವಾಗಿ ಹೇಳಿದ್ದಾರೆ.
ಅನಾಚಾರ ಎಂದರೆ ಕೇವಲ ಮಾಂಸ ತಿನ್ನುವುದು, ಮದ್ಯ ಕುಡಿಯುವುದು ಮಾತ್ರ ಅಲ್ಲ. ಶರಣರ ಪ್ರಕಾರ ಅನಾಚಾರ ಎಂದರೆ ಇನ್ನೊಬ್ಬರ ಹಣಕ್ಕೆ ಆಸೆ ಪಡುವುದು, ಅಧಿಕಾರಕ್ಕಾಗಿ ಸುಳ್ಳು ಹೇಳುವುದು, ಬಡವರನ್ನು ಶೋಷಣೆ ಮಾಡುವುದು, ಜಾತಿ-ಕುಲ ಎಂದು ಮನುಷ್ಯ ಮನುಷ್ಯರಲ್ಲಿ ಭೇದ ತೋರುವುದು, ಹೊರಗೆ ಸಜ್ಜನನಂತೆ ನಟಿಸಿ ಒಳಗೆ ಸ್ವಾರ್ಥಿಯಾಗಿರುವುದು. ಇದುವೇ ಅನಾಚಾರ.
ಅಲ್ಲಮಪ್ರಭುಗಳು ಅನಾಚಾರಿಗಳ ಕುರಿತು ತಮ್ಮ ವಚನದಲ್ಲಿ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ:
“ಹೊರಗೆ ನೋಡಲು ಬೆಳ್ಳಗೆ, ಒಳಗೆ ನೋಡಲು ಕರಿಯಗೆ, ಇದು ಎಂತೋ ಗುಹೇಶ್ವರಾ?”
ಅಂದರೆ ಹೊರಗೆ ಬಿಳಿ ಬಟ್ಟೆ ಹಾಕಿ ಶುದ್ಧನಂತೆ ಕಾಣುತ್ತಾನೆ, ಆದರೆ ಮನಸ್ಸು ಕಪ್ಪಾಗಿದೆ. ಇಂಥವನು ಎಷ್ಟೇ ಪೂಜೆ ಮಾಡಿದರೂ ಅದು ಅನಾಚಾರವೇ. ಇಂದಿನ ಕೆಲವು ರಾಜಕಾರಣಿಗಳೂ ಅಷ್ಟೇ.
ಶರಣರ ಜೀವನವೇ ಇದಕ್ಕೆ ಉದಾಹರಣೆ.
೧. ಬಸವಣ್ಣನವರು: ಕಲ್ಯಾಣದ ಭಂಡಾರದಲ್ಲಿ ಮಂತ್ರಿಯಾಗಿದ್ದರು. ಕೈಯಲ್ಲಿ ಅಪಾರ ಸಂಪತ್ತು ಇತ್ತು. ಆದರೂ ಒಂದೂ ಕಾಸು ಮುಟ್ಟಲಿಲ್ಲ. ಬಡವರಿಗೆ ದಾಸೋಹ ಮಾಡಿದರು. ಅವರ ಆಚಾರವೇ ಅವರನ್ನು ಮಹಾತ್ಮರನ್ನಾಗಿಸಿತು.
೨. ಅಕ್ಕಮಹಾದೇವಿಯವರು: ರಾಜಮನೆತನದ ಸೊಸೆಯಾಗಿದ್ದರೂ ಅರಮನೆಯನ್ನು ಬಿಟ್ಟು ಬಂದರು. ಬಟ್ಟೆ, ಒಡವೆ ಎಲ್ಲವನ್ನೂ ತ್ಯಜಿಸಿ “ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ” ಎಂದು ನಿಷ್ಠೆಯಿಂದ ಬದುಕಿದರು. ಅವರು ಆಚಾರವನ್ನು ಬಿಡಲಿಲ್ಲ. ಆ ಮಹಾತಾಯಿಗೆ ಅದೇ ಸ್ವರ್ಗವಾಯಿತು.
೩. ಹಡಪದ ಅಪ್ಪಣ್ಣನವರು: ಬಸವಣ್ಣನವರ ಕಾಲು ತೊಳೆದು, ಕ್ಷೌರಿಕ ಕಾಯಕ ಮಾಡುತ್ತಿದ್ದರು. ಕೆಲವರು ಸಮಾಜದಲ್ಲಿ ಅದನ್ನು ಕೀಳು ಕೆಲಸ ಎಂದುಕೊಳ್ಳುತ್ತಿದ್ದರು. ಆದರೆ ಅಪ್ಪಣ್ಣನಿಗೆ ಅದೇ ಕೈಲಾಸ. ಏಕೆಂದರೆ ಕಾಯಕದಲ್ಲಿ ಅನಾಚಾರವಿಲ್ಲವೆಂಬುದನ್ನು ಅವರು ತೋರಿಸಿಕೊಟ್ಟರು.
೪. ಮಡಿವಾಳ ಮಾಚಿದೇವರು: ಬಟ್ಟೆ ಒಗೆಯುವವರು. ಅವರ ಜೀವನವೇ ಒಂದು ವಚನ. ಹೊರಗಿನ ಮೈಲಿಗೆಯನ್ನು ತೊಳೆದಂತೆ, ಒಳಗಿನ ಮೈಲಿಗೆಯನ್ನು ತೊಳೆಯಬೇಕು ಎಂದು ತೋರಿಸಿಕೊಟ್ಟರು. ಶರಣರು ಜಾತಿಯಿಂದ ದೊಡ್ಡವರಾಗಲಿಲ್ಲ, ಆಚಾರದಿಂದ ದೊಡ್ಡವರಾದರು.
ಚೆನ್ನಬಸವಣ್ಣನವರು ಹೇಳುತ್ತಾರೆ – ಒಳ್ಳೆಯ ಆಚಾರವಿದ್ದರೆ ನೀನು ಇರುವಲ್ಲೇ ಸ್ವರ್ಗ. ಒಬ್ಬ ಮನುಷ್ಯ ತನ್ನ ಹೆಂಡತಿ-ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡು, ನೆರೆಹೊರೆಯವರಿಗೆ ಸಹಾಯ ಮಾಡಿ, ಸತ್ಯದಿಂದ ದುಡಿದು ಬದುಕಿದರೆ, ಅವನ ಮನೆ ಸ್ವರ್ಗಕ್ಕಿಂತ ಮಿಗಿಲು.
ಇನ್ನೊಬ್ಬ ಮನುಷ್ಯ ಹಣ ಇದ್ದರೂ ದಿನಾ ಜಗಳ, ಅನುಮಾನ, ದ್ವೇಷದ ವಾತಾವರಣದಲ್ಲಿ ಬದುಕಿದರೆ, ಅವನ ಮನೆ ನರಕವಲ್ಲದೆ ಮತ್ತೇನು?
ಅದಕ್ಕೆ ಶರಣರು ಹೇಳಿದರು – ಸತ್ತಾಗ ಸ್ವರ್ಗ ಸುಖ, ನರಕ ದುಃಖ ಅನುಭವಿಸುವುದು ನಿಜವಾದ ಸ್ವರ್ಗ-ನರಕವಲ್ಲ. ನಮ್ಮ ಒಳ್ಳೆಯ ವಿಚಾರ, ಆಚಾರಗಳ ನಡೆತೆಯೇ ಸ್ವರ್ಗ. ದ್ವೇಷ, ಅಸೂಯೆ, ಅಹಂಕಾರದ ಭಾವನೆಗಳ ನಡೆತೆಯೇ ನರಕ.
ಆತ್ಮೀಯರೇ, ಇಂದು ನಾವು ಬಹಳ ಮುಂದುವರಿದಿದ್ದೇವೆ. ಮೊಬೈಲ್ ಇದೆ, ಹಣ ಇದೆ, ವಿದ್ಯೆ ಇದೆ. ಆದರೆ ಮನಸ್ಸಿಗೆ ಶಾಂತಿ ಇಲ್ಲ. ಕಾರಣ ಆಚಾರ ಕಡಿಮೆಯಾಗಿದೆ, ಅನಾಚಾರ ಹೆಚ್ಚಾಗಿದೆ.
ನಮ್ಮಲ್ಲಿರುವ ಹಣದ ದಾಹ ನಮ್ಮನ್ನು ಸುಳ್ಳು ಹೇಳುವಂತೆ ಪ್ರೇರೇಪಿಸುತ್ತದೆ. ನಮ್ಮ ಸ್ವಾರ್ಥಕ್ಕಾಗಿ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಮುಖವಾಡ ಹಾಕಿಕೊಂಡು ಒಳ್ಳೆಯವರಂತೆ ಕಾಣುತ್ತೇವೆ, ಅದೇ ಮನೆಯಲ್ಲಿ ಬೇರೆ ರೀತಿ ಇರುತ್ತೇವೆ. ಇದನ್ನೇ ಶರಣರು “ಅನಾಚಾರ” ಎಂದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬುದು ಕೇವಲ ಒಂದು ವಚನವಲ್ಲ. ಅದು ಬದುಕುವ ದಾರಿ.
ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗ ನಮ್ಮನ್ನು ನಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ಅದೇನೆಂದರೆ – “ಇಂದು ನಾನು ಆಚಾರದಿಂದ ಬದುಕುತ್ತೇನೆಯೋ, ಅಥವಾ ಅನಾಚಾರದಿಂದ ಬದುಕುತ್ತೇನೆಯೋ?”
ಆಚಾರದಿಂದ ಬದುಕಿದ ದಿನವೇ ಸ್ವರ್ಗ. ಅನಾಚಾರದಿಂದ ಬದುಕಿದ ದಿನವೇ ನರಕ.
೧೨ನೇ ಶತಮಾನದ ಬಸವಾದಿ ಶರಣರ ಆಶಯವೂ ಅದೇ ಆಗಿತ್ತು – ಮನುಷ್ಯನನ್ನು ದೇವರನ್ನಾಗಿ ಮಾಡುವುದು, ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡುವುದು. ಆತ್ಮೀಯರೇ, ಅದಕ್ಕೆ ಶರಣರು ಹೇಳುತ್ತಾರೆ,
“ಆಚಾರವೇ ಪ್ರಾಣ, ಆಚಾರವೇ ಸ್ವರ್ಗ. ಆಚಾರ ತಪ್ಪಿದರೆ ಮನುಷ್ಯನಲ್ಲ” ಆಚಾರ ತಪ್ಪಿದ ನಡೆ ನರಕದಂತೆ. ಇದುವೇ ಬಸವಾದಿ ಶರಣರ ಶರಣ ಚಿಂತನೆಯಾಗಿದೆ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು , ಬೀದರ.
